ಕುಮಾರಸ್ವಾಮಿ ಆರೋಗ್ಯ ಈಗ ಹೇಗಿದೆ: ಅಪೋಲೋ ಆಸ್ಪತ್ರೆಯ ಹೆಲ್ತ್ ಬುಲೆಟಿನ್ ಬಿಡುಗಡೆ
ಬೆಂಗಳೂರು, ಆಗಸ್ಟ್ 30: ಏಕಾಏಕಿ ಆರೋಗ್ಯದಲ್ಲಿ ಕೊಂಚ ಏರುಪೇರಾಗಿದ್ದರಿಂದ ನಗರದ ಜಯನಗರದಲ್ಲಿರುವ ಅಪೋಲೋ ಆಸ್ಪತ್ರೆಗೆ ದಾಖಲಾಗಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರ ಆರೋಗ್ಯದ ವಿಚಾರದಲ್ಲಿ ಆಸ್ಪತ್ರೆ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದೆ.
ಅಪೋಲೋ ಆಸ್ಪತ್ರೆ ಕಡೆಯಿಂದ ಅಧಿಕೃತ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಲಾಗಿದ್ದು ಯಾರು ಆತಂಕ ಗೊಳ್ಳುವ ಅವಶ್ಯಕತೆ ಇಲ್ಲ ಎನ್ನುವ ಸ್ಪಷ್ಟ ಚಿತ್ರಣ ಇದರಿಂದ ಸಿಕ್ಕಿದೆ. ಆಸ್ಪತ್ರೆ ಬಿಡುಗಡೆ ಮಾಡಿರುವ ಪ್ರಕಟಣೆ ಪ್ರಕಾರ ತಡರಾತ್ರಿ 3.10ರ ಹೊತ್ತಿಗೆ ಕೊಂಚ ಆರೋಗ್ಯದಲ್ಲಿ ವ್ಯತ್ಯಯ ಕಂಡು ಬಂದಿದ್ದರಿಂದ ತಕ್ಷಣ ಅವರನ್ನು ಆಸ್ಪತ್ರೆ ದಾಖಲು ಮಾಡಲಾಗಿದೆ.

ವೀಕ್ನೆಸ್ ಮತ್ತು ಸುಸ್ತಾಗಿ ಕುಮಾರಸ್ವಾಮಿ ಬಳಲುತ್ತಿದ್ದರು. ಈಗ ಚಿಕಿತ್ಸೆ ಕೊಡಲಾಗಿದ್ದು, ಚಿಕಿತ್ಸೆಗೆ ಸಕಾರಾತ್ಮಕ ವಾಗಿ ಸ್ಪಂದಿಸುತ್ತಿದ್ದಾರೆ. ಈಗ ಅವರ ಆರೋಗ್ಯ ಸ್ಥಿತಿ ಚೇತರಿಕೆ ಕಂಡಿದೆ ಎಂದು ಅವರನ್ನು ನೋಡಿಕೊಳ್ಳುತ್ತಿರುವ ವೈದ್ಯರಾದ ಡಾ. ಪಿ. ಸತೀಶ್ ಚಂದ್ರ ಮಾಧ್ಯಮ ಪ್ರಕಟಣೆಯ ಮೂಲಕ ಹೇಳಿದ್ದಾರೆ.
ಎಚ್.ಡಿ.ಕುಮಾರಸ್ವಾಮಿ ಅವರು ಇತ್ತೀಚೆಗಷ್ಟೇ ಕುಟುಂಬ ಸಮೇತ ವಿದೇಶಿ ಪ್ರವಾಸದಲ್ಲಿ ಇದ್ದರು. ಪತ್ನಿ, ಮಗ, ಸೊಸೆ ಹಾಗೇ ಕುಟುಂಬದ ಜೊತೆಗೆ ವಿದೇಶಿ ಪ್ರವಾಸದಲ್ಲಿದ್ದ ಕುಟುಂಬದ ಪೋಟೋ ಕೂಡ ಸಖತ್ ವೈರಲ್ ಆಗಿತ್ತು.
ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿರುವ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರು ಶೀಘ್ರ ಗುಣಮುಖರಾಗಲಿ ಎಂದು ಹಾರೈಸುತ್ತೇನೆ. @hd_kumaraswamy
— Siddaramaiah (@siddaramaiah) August 30, 2023
ಕುಮಾರಸ್ವಾಮಿ ಅವರ ಆರೋಗ್ಯ ಏರುಪೇರಾದ ನಂತರ ಅವರ ಅಪಾರ ಬೆಂಬಲಿಗರ ಮತ್ತು ಜೆಡಿಎಸ್ ಕಾರ್ಯಕರ್ತರ ಆತಂಕಕ್ಕೆ ಇದು ಕಾರಣವಾಗಿತ್ತು. ಈಗ, ಹೆಲ್ತ್ ಬುಲೆಟಿನ್ ಬಿಡುಗಡೆಯಾದ ನಂತರ ಎಲ್ಲರೂ ನಿರಾಳರಾಗುವಂತೆ ಮಾಡಿದೆ.
ಮಾಜಿ ಮುಖ್ಯಮಂತ್ರಿಗಳ ಆರೋಗ್ಯದ ಅಪ್ಡೇಟ್ಸ್ ಅನ್ನು ನೀಡುತ್ತಿರುತ್ತೇವೆ, ಅವರು ಆದಷ್ಟು ಬೇಗ ಸುಧಾರಿಸಿಕೊಳ್ಲಲಿ ಎಂದು ನಾವೆಲ್ಲರೂ ಪ್ರಾರ್ಥಿಸಿಕೊಳ್ಳುತ್ತಿದ್ದೇವೆ ಎಂದು ಅಪೋಲೋ ಆಸ್ಪತ್ರೆಯ ಉಪಾಧ್ಯಕ್ಷರಾದ ಡಾ. ಗೋವಿಂದಯ್ಯ ಯತೀಶ್ ಹೇಳಿದ್ದಾರೆ.
ವಿಧಾನಸಭೆ ಚುನಾವಣೆಯ ಸೋಲಿನ ಬಳಿಕ ರಾಜ್ಯ ರಾಜಕಾರಣದಲ್ಲಿ ಸಕ್ರಿಯವಾಗಿ, ವಿರೋಧ ಪಕ್ಷದ ನಾಯಕರಂತೆ ಸರ್ಕಾರದ ವಿರುದ್ಧ ನಿರಂತರ ವಾಗ್ದಾಳಿಯನ್ನು ಕುಮಾರಸ್ವಾಮಿ ಮಾಡುತ್ತಿದ್ದರು. ಅವರ ಆರೋಗ್ಯದ ಬಗ್ಗೆ ಅಂತೆಕಂತೆ ಸುದ್ದಿಗಳು ಹರಿದಾಡುತ್ತಿದ್ದವು.












Click it and Unblock the Notifications