ಹೈದರಾಬಾದ್–ಹುಬ್ಬಳ್ಳಿ Fly91 ವಿಮಾನದಲ್ಲಿ ದೋಷ: 4 ತಾಸು ಬಳಿಕ ಬೆಂಗಳೂರಲ್ಲಿ ಲ್ಯಾಂಡ್, ಸಂಸ್ಥೆ ಮೇಲೆ ಆಕ್ರೋಶ
ಬೆಂಗಳೂರು: ಏಪ್ರಿಲ್ ಎರಡನೇ ವಾರದಿಂದ ಆರಂಭಿಸಲಾಗಿದ್ದ ಹುಬ್ಬಳ್ಳಿ-ಹೈದರಾಬಾದ್ ಫ್ಲೈ 91 (Fly 91 Flight)ವಿಮಾನ ಸೇವೆಯಲ್ಲಿ ತೊಂದರೆ ಆಗಿದೆ. ತಾಂತ್ರಿಕ ದೋಷ ಕಂಡು ಬಂದ ಹಿನ್ನೆಲೆಯಲ್ಲಿ ಹುಬ್ಬಳ್ಳಿ ಏರ್‌ಪೋರ್ಟ್‌ನಲ್ಲಿ ಲ್ಯಾಂಡ್ ಆಗಬೇಕಿದ್ದ ವಿಮಾನವು ಆಗಸದಲ್ಲೇ ನಾಲ್ಕು ಗಂಟೆ ಹಾರಾಡಿದೆ. ಪ್ರಯಾಣಿಕರು ಆತಂಕಗೊಂಡು ಕಣ್ಣೀರಿಟ್ಟ ವಿಡಿಯೋಗಳು ಹರಿದಾಡುತ್ತಿವೆ. ಬೆಂಗಳೂರಿನಲ್ಲಿ ತುರ್ತು ಲ್ಯಾಂಡ್ ಆದ ಬಳಿಕ ಫ್ಲೈ 91 ವಿಮಾನಯಾನ ಸಂಸ್ಥೆಯ ನಿರ್ಲಕ್ಷ್ಯಕ್ಕೆ ಸಾರ್ವಜನಿಕವಾಗಿ ಆಕ್ರೋಶ ವ್ಯಕ್ತವಾಗುತ್ತಿದೆ.
ಹುಬ್ಬಳ್ಳಿಯಿಂದ ಬೆಂಗಳೂರು ಹಾಗೂ ಹುಬ್ಬಳ್ಳಿಯಿಂದ ಹೈದರಾಬಾದ್ ಫ್ಲೈ 91 ವೈಮಾನಿಕ ಸಂಸ್ಥೆಯ ವಿಮಾನಗಳು ಹಾರಾಟ ನಡೆಸುತ್ತಿವೆ. ಈ ಪೈಕಿ ನೆನ್ನೆ ಭಾನುವಾರ (ಏಪ್ರಿಲ್ 19) ಹೈದರಾಬಾದ್‌ನಿಂದ ಮಧ್ಯಾಹ್ನ 3 ಗಂಟೆಗೆ ಟೇಕ್ ಆಫ್ ಆಗಿದ್ದ ವಿಮಾನವು ಹುಬ್ಬಳ್ಳಿಯಲ್ಲಿ ಸಂಜೆ 4.30ಕ್ಕೆ ಲ್ಯಾಂಡ್ ಆಗಬೇಕಿತ್ತು. ಆದರೆ ಈ ಫ್ಲೈ 91 ವಿಮಾನದಲ್ಲಿ ತಾಂತ್ರಿಕ ತೊಂದರೆ ಆದ ಕಾರಣ ಲ್ಯಾಂಡ್ ಆಗಲಿಲ್ಲ. ಹುಬ್ಬಳ್ಳಿ ಏರ್ ಪೋರ್ಟ್ ಬದಲು ನಾಲ್ಕು ತಾಸು ಆಗಸದಲ್ಲೇ ಹಾರಾಡಿದೆ. ನಂತರ ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶಿಸಿದೆ. ವಿಮಾನವೇನೋ ಸುರಕ್ಷಿತವಾಗಿ ಲ್ಯಾಂಡ್ ಆಯಿತು. ಬಳಿಕ ವಿಮಾನಯಾನ ಸಂಸ್ಥೆ ನಡೆದುಕೊಂಡ ರೀತಿ ಬಗ್ಗೆ ಅಸಮಾಧಾನ ವ್ಯಕ್ತವಾಗಿದೆ.

ಸಮಯ ಪ್ರಜ್ಞೆ ಮೆರೆದ ಪೈಲಟ್, ತಪ್ಪಿದ ಅನಾಹುತ!
ಹುಬ್ಬಳ್ಳಿಯಲ್ಲಿ ಲ್ಯಾಂಡ್ ಆಗದಿರುವುದು ಗೊತ್ತಾಗುತ್ತಿದ್ದಂತೆ ಒಳಗಿದ್ದ ಪ್ರಯಾಣಿಕರು ಕಣ್ಣೀರಿಟ್ಟಿದ್ದಾರೆ. ಇದೇ ನಮ್ಮ ಕೊನೆಯ ವಿಡಿಯೋ ಎಂಬಂತೆ ಅತ್ತು ದೇವರನ್ನು ಸ್ಮರಿಸಿದ್ದಾರೆ. ತಾಂತ್ರಿಕ ದೋಷ ಕಾಣುತ್ತಿದ್ದಂತೆ ಪೈಲಟ್ ವಿಮಾನವನ್ನು ಗಮ್ಯ ಸ್ಥಾನಕ್ಕೆ ಒಯ್ಯದೇ ಗಂಟೆಗಳ ಕಾಲ ಆಗಸದಲ್ಲೇ ಸುತ್ತಾಡಿಸಿದ್ದಾನೆ. ಕೊನೆಗೆ ಬೆಂಗಳೂರು ಏರ್‌ಪೋರ್ಟ್‌ನಲ್ಲಿ ಸುರಕ್ಷಿತವಾಗಿ ಲ್ಯಾಂಡ್ ಮಾಡಿ ಸಮಯ ಪ್ರಜ್ಞೆ ಮೆರೆದಿದ್ದಾನೆ. ಇದರಿಂದ ಸಂಭವನೀಯ ಭಾರೀ ಅನಾಹುತವೊಂದು ತಪ್ಪಿತದಂತಾಗಿದೆ.
ಆದರೆ ಬೆಂಗಳೂರಿನಲ್ಲಿ ಬಂದಿಳಿದ ಪ್ರಯಾಣಿಕರನ್ನು ಫ್ಲೈ 91 ಸಂಸ್ಥೆಯು/ಸಿಬ್ಬಂದಿ ಸರಿಯಾಗಿ ನಡೆಸಿಕೊಳ್ಳುವಲ್ಲಿ ವಿಫಲವಾಗಿದೆ. ಅವರಿಗೆ ತಮ್ಮೂರಿಗೆ ತೆರಳಲು ಅಗತ್ಯ ವ್ಯವಸ್ಥೆ ಮಾಡಿಕೊಟ್ಟಿಲ್ಲ. ಆತಂಕ, ಭಯದಲ್ಲಿದ್ದ ಪ್ರಯಾಣಿಕರಿಗೆ ಧೈರ್ಯ, ಸಾಂತ್ವನ ಹೇಳಲು ಮುಂದಾಗಿಲ್ಲ. ಲ್ಯಾಂಡ್ ಆಗುತ್ತಿದ್ದಂತೆ ನಿಮ್ಮ ನಿಮ್ಮ ಮನೆಗೆ ತೆರಳಿ ಎಂಬಂತೆ ಏನು ಹೇಳದೇ ಬಿಟ್ಟು ಬಿಟ್ಟಿದೆ, ನಿರ್ಲಕ್ಷ್ಯ ವಹಿಸಿದೆ. ಹೆಚ್ಚು ಕಡಿಮೆ ಆಗಿದ್ದರೆ ಯಾರು ಜವಾಬ್ದಾರರು ಎಂಬ ಪ್ರಶ್ನೆ ಸಹ ಉದ್ಭವವಾಗಿದೆ.
ವಿಮಾನದಲ್ಲಿ ದಿಢೀರ್ ತಾಂತ್ರಿಕ ದೋಷ ಹಾಗೂ ನಿಗದಿತ ಸಮಯಕ್ಕೆ ಲ್ಯಾಂಡ್ ಆಗದಿರಲು ಹವಾಮಾನ ವೈಪರೀತ್ಯ ಕಾರಣ ಅಂತಲೂ ಹೇಳಲಾಗುತ್ತಿದೆ. ಈ ಬಗ್ಗೆ ಸೂಕ್ತ ತನಿಖೆ ಬಳಿಕೆ ಮಾಹಿತಿ ಸಿಗಬೇಕಿದೆ. ಈ ಬಗ್ಗೆ ಫ್ಲೈ91 ಸಂಸ್ಥೆ ಮುಖ್ಯಸ್ಥರನ್ನು ಪ್ರಶ್ನಿಸಿದ ಮಾಧ್ಯಮಗಳಿಗೆ ಸರಿಯಾಗಿ ಉತ್ತರ ನೀಡಲಿಲ್ಲ. ತಾಂತ್ರಿಕ ದೋಷ ಕಂಡು ಬಂತು. ನಮ್ಮ ಪೈಲಟ್ ಸುರಕ್ಷಿತವಾಗಿ ಲ್ಯಾಂಡ್ ಮಾಡಿಸಿದ್ದಾರೆ ಎಂದು ಉತ್ತರಿಸಿದ್ದಾರೆ.












Click it and Unblock the Notifications