ಕರ್ನಾಟಕದ ಮಳೆ ಹಾನಿ, ಬೆಳೆ ಪರಿಹಾರ: ಸಿಎಂ ಬೊಮ್ಮಾಯಿ ಪ್ರತಿಕ್ರಿಯೆ
ಬೆಂಗಳೂರು, ಆಗಸ್ಟ್ 28: ರಾಜ್ಯದಲ್ಲಿ ಮಳೆಯಿಂದ ಸಾಕಷ್ಟು ಆಸ್ತಿ ಪಾಸ್ತಿ ಹಾನಿ ಉಂಟಾಗಿದೆ. ಈ ಸಂಬಂಧ ಸಂತ್ರಸ್ತರಿಗೆ ವಿಳಂಬ ಮಾಡದೆ ತಕ್ಷಣವೇ ಮನೆ ಮತ್ತು ಬೆಳೆ ಹಾನಿಗೆ ಪರಿಹಾರ ವಿತರಿಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರಾಜ್ಯದ ವಿವಿಧ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದರು.
ಕರ್ನಾಟಕದಲ್ಲಿ ಕೆಳೆದ ಮೂರು ದಿನಗಳಲ್ಲಿ ರಾಜ್ಯದಲ್ಲಿ ಸುರಿದ ಭಾರಿ ಮಳೆಯಿಂದ ಹಾನಿಗೊಳಗಾದ ಜಿಲ್ಲೆಗಳ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳೊಂದಿಗೆ ಮುಖ್ಯಮಂತ್ರಿಗಳು ಬೆಂಗಳೂರಿನ ಗೃಹ ಕಚೇರಿ ಕೃಷ್ಣಾದಲ್ಲಿ ವಿಡಿಯೋ ಸಂವಾದ ನಡೆಸಿದರು. ಸಭೆಯಲ್ಲಿ ಚರ್ಚಿಸಿ ಹಲವು ಪರಿಹಾರ ಸೂಚನೆಗಳನ್ನು ಅಧಿಕಾರಿಗಳಿಗೆ ನೀಡಿದರು.
ಕಳೆದ ಎರಡು ಮೂರು ದಿನಗಳಿಂದ ರಾಜ್ಯದಲ್ಲಿ ಮತ್ತೆ ಮುಂಗಾರು ಚುರುಕಾಗಿದೆ. ಇದರಿಂದ ರಾಜ್ಯದ ಮಲೆನಾಡು ಮತ್ತು ಒಳನಾಡು ಜಿಲ್ಲೆಗಳಲ್ಲಿ ನಿರಂತರ ಮಳೆಗೆ ಹಾನಿ ಉಂಟಾಗಿದೆ. ರೈತರು ಕಂಗಾಲಾಗಿದ್ದಾರೆ. ಈ ಸಂಬಂಧ ಕ್ರಮ ಕೈಗೊಳ್ಳಲು ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಸಭೆ ನಡೆಯಿತು.

ಜಿಲ್ಲಾಧಿಕಾರಿಗಳಿಗೆ ಮುಖ್ಯಮಂತ್ರಿಗಳು ಸೂಚನೆ ಏನು?
* ಕೆರೆಗಳು ಒಡೆಯದಂತೆ ಹಾಗೂ ಬಿರುಕು ಬೀಳದಂತೆ ಎಚ್ಚರಿಕೆ ವಹಿಸಬೇಕು. ಸಮೀಕ್ಷೆ ನಡೆಸಿ ಅಗತ್ಯವಿದ್ದೆಡೆ ತಕ್ಷಣವೇ ದುರಸ್ತಿ ಕಾರ್ಯ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿಗಳಿಗೆ ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಸೂಚಿಸಿದರು.
* ದೊಡ್ಡ ಕೆರೆಗಳು ಇರುವಲ್ಲಿ ಜಾಗೃತೆ ವಹಿಸಬೇಕು. ಸಾವು ನೋವು ಸಂಭವಿಸದಂತೆ ನೋಡಿಕೊಳ್ಳಬೇಕು.
* ಮೈಸೂರು ಹೆದ್ದಾರಿಯಲ್ಲಿ ಮಳೆಯಿಂದಾಗಿ ನೀರು ನಿಂತಿರುವುದರಿಂದ ಪರ್ಯಾಯ ಮಾರ್ಗದ ಮೂಲಕ ವಾಹನ ಸಂಚಾರಕ್ಕೆ ವ್ಯವಸ್ಥೆ ಮಾಡಬೇಕು. ಈ ಬಗ್ಗೆ ಈ ಕ್ಷಣದಿಂದ ಕ್ರಮ ಕೈಗೊಳ್ಳಬೇಕು. ಮೈಸೂರು, ರಾಮನಗರ ಹಾಗೂ ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಈ ಬಗ್ಗೆ ನಿರ್ದೇಶನ ನೀಡಲಾಯಿತು.
* ಮಳೆಯಿಂದ ಹಾನಿಗೊಳಗಾಗಿರುವ ರಸ್ತೆ ಮತ್ತು ಸೇತುವೆಗಳನ್ನು ತಕ್ಷಣವೇ ದುರಸ್ತಿಗೊಳಿಸಲು ಕ್ರಮ ಕೈಗೊಳ್ಳಿ. ಅಧಿಕಾರಿಗಳು ಪರಸ್ಪರ ಸಮನ್ವಯ ಮೂಲಕ ಸಂವಹನ ನಡೆಸಿ ತುರ್ತಾಗಿ ಕಾರ್ಯ ನಿರ್ವಹಿಸಬೇಕು.
* ಮಳೆ ಹಾನಿ ಸಂಬಂಧಿಸಿದಂತೆ ಲೋಕೋಪಯೋಗಿ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗಳು ಸಮನ್ವಯದಿಂದ ಕೆಲಸ ಮಾಡಬೇಕು.
* ಸಕಾಲದಲ್ಲಿ ಕಡಿತಗೊಂಡಿರುವ ವಿದ್ಯುತ್ ಸಂಪರ್ಕ ಮರುಸ್ಥಾಪಿಸಲು ಕಟ್ಟುನಿಟ್ಟಿನ ತಾಕೀತು ಮಾಡಿದ ಮುಖ್ಯಮಂತ್ರಿಗಳು.
* ನಿರಂತ ಮಳೆಯಿಂದಾಗಿ ಕಾಳಜಿ ಕೇಂದ್ರಗಳಲ್ಲಿ ಇರುವ ಸಂತ್ರಸ್ತರಿಗೆ ಗುಣಮಟ್ಟದ ಆಹಾರ ನೀಡಬೇಕು. ಸ್ವಂತ ಮನೆ ಬಿಟ್ಟು ಬಂಧುಗಳ ಮನೆಗೆ ತೆರಳಿರುವವರಿಗೆ ಆಹಾರದ ಕಿಟ್‌ಗಳನ್ನು ತಲುಪಿಸುವಂತೆ ಬಸವರಾಜ ಬೊಮ್ಮಾಯಿ ತಿಳಿಸಿದರು.
ಸಭೆಯಲ್ಲಿ ಸಹಕಾರ ಸಚಿವ ಎಸ್.ಟಿ. ಸೋಮಶೇಖರ್, ಉನ್ನತ ಶಿಕ್ಷಣ ಸಚಿವ ಡಾ ಸಿ.ಎನ್. ಅಶ್ವಥ್ ನಾರಾಯಣ್, ಆಹಾರ ಇಲಾಖೆ ಸಚಿವ ಉಮೇಶ್ ಕತ್ತಿ ಸಭೆಯಲ್ಲಿ ಪಾಲ್ಗೊಂಡಿದ್ದರು. ಅವರೆಲ್ಲ ತಮ್ಮ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಉಂಟಾಗಿರುವ ಮಳೆ ಹಾನಿಯ ಕುರಿತು ಸಭೆಯಲ್ಲಿ ವಿವರಿಸಿದರು.
ಈ ವೇಳೆ ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ, ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಮಂಜುನಾಥ ಪ್ರಸಾದ್ ಮತ್ತಿತರರು ಉಪಸ್ಥಿತರಿದ್ದರು.












Click it and Unblock the Notifications