ಮಾನವೀಯತೆ ಮೆರೆಯಬೇಕಾದ ಸಮಯದಲ್ಲಿ 'ಹಗಲು ದರೋಡೆ'ಗೆ ಇಳಿದ ವಿಮಾನಯಾನ ಸಂಸ್ಥೆಗಳು
ಹಬ್ಬ, ಹರಿ ದಿನಗಳ ಸಮಯದಲ್ಲಿ ಅಥವಾ ದೀರ್ಘ ವಾರಾಂತ್ಯದ ರಜೆಗಳು ಬಂದಾಗ ಸಾರಿಗೆ ಸಂಸ್ಥೆಗಳು 'ಹಗಲು ದರೋಡೆ'ಗೆ ಇಳಿಯುವುದು ಸಾಮಾನ್ಯ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯೂ ಸೇರಿದಂತೆ, ಖಾಸಗಿ ಬಸ್ಸುಗಳು ಪ್ರಯಾಣದ ದರವನ್ನು ಗೊತ್ತು ಗುರಿಯಿಲ್ಲದೇ ಹೆಚ್ಚಿಸುವ ಪರಿಪಾಠವನ್ನು ಹಲವು ವರ್ಷಗಳಿಂದ ಜನ ಅನುಭವಿಸಿಕೊಂಡು ಬಂದಿದ್ದಾರೆ. ಆರ್‌ಟಿಓ ನಿಯಮಗಳ ಸ್ಪಷ್ಟ ಉಲ್ಲಂಘನೆಯಾದ ಇದು ಈಗಲೂ ಮುಂದುವರಿದಿದೆ.
ಇಂತಹದ್ದೇ ಸನ್ನಿವೇಶವನ್ನು ಈಗ ವಿಮಾನಯಾನ ಸಂಸ್ಥೆಗಳು ತಮ್ಮ ಲಾಭಕ್ಕೆ ಬಳಸಿಕೊಳ್ಳಲು ಮುಂದಾಗಿವೆ. ಸೀಸನ್ ಅಲ್ಲದ ಈ ಸಮಯದಲ್ಲಿ ಕರ್ನಾಟಕದ ಯಾವುದೇ ಪ್ರವಾಹ ಜರ್ಜರಿತ ಪ್ರದೇಶಕ್ಕೆ ತಲುಪಲು ಇರುವ ವಿಮಾನಗಳ ಟಿಕೆಟ್ ದರ ಹೌಹಾರುವಂತೆ ಮಾಡಿದೆ.
ಕುಂಭದ್ರೋಣ ಮಳೆ ಮತ್ತು ಪ್ರವಾಹದಿಂದ ತತ್ತರಿಸಿ ಹೋಗಿರುವ ದಕ್ಷಿಣ ಕನ್ನಡ ಜಿಲ್ಲೆಗೆ ತಲುಪಲು ಇರುವ ಎಲ್ಲಾ ಕೊಂಡಿಗಳು ಬಹುತೇಕ ಕಳಚಿ ಹೋಗಿವೆ. ಮಂಗಳೂರು ತಲುಪಲು ಸದ್ಯಕ್ಕಿರುವ ಒಂದೇ ಒಂದು ದಾರಿಯೆಂದರೆ ವಿಮಾನಯಾನ.

ಶಿರಾಡಿ, ಚಾರ್ಮಾಡಿ, ಸಂಪಾಜೆ ಘಾಟ್ ಮೂಲಕ ಸಂಚಾರಕ್ಕೆ ಜಿಲ್ಲಾಡಳಿತ ನಿಷೇಧ ಹೇರಿರುವುದರಿಂದ, ಶಿವಮೊಗ್ಗ, ತೀರ್ಥಹಳ್ಳಿ, ಉಡುಪಿ (ಹುಲಿಕಲ್/ ಬಾಳೆಬರೆ ಘಾಟ್) ಮೂಲಕ ಸುತ್ತಿಬಳಸಿ ಮಂಗಳೂರಿಗೆ ಹೋಗಬೇಕಾಗಿದೆ. ರೈಲು ಸಂಚಾರವನ್ನು ಆಗಸ್ಟ್ ಹನ್ನೆರಡರವರೆಗೆ ತಡೆಹಿಡಿಯಲಾಗಿದೆ.
ಪರಿಸ್ಥಿತಿ ಹೇಗೆ ಇರುತ್ತದೆ ಎನ್ನುವುದು ನಮ್ಮ ಕೈಯಲ್ಲಿ ಇರುವುದಿಲ್ಲ ಎನ್ನುವುದನ್ನು ಅರಿಯದ ವಿಮಾನಯಾನ ಸಂಸ್ಥೆಗಳು, ಊಹೆಗೂ ನಿಲುಕದಂತೆ ಪ್ರಯಾಣ ದರವನ್ನು ಹೆಚ್ಚಿಸಿವೆ. ಇದೇ ದುರ್ಬುದ್ದಿಯನ್ನು ಕಳೆದ ವರ್ಷದ ಮಳೆಗಾಲದ ವೇಳೆಯೂ ಏರ್ವೇಸ್ ಪ್ರದರ್ಶಿಸಿದ್ದವು.
ಸಾಮಾನ್ಯವಾಗಿ ಬೆಂಗಳೂರಿನಿಂದ ಮಂಗಳೂರಿಗೆ ಎರಡರಿಂದ ನಾಲ್ಕು ಸಾವಿರದೊಳಗೆ (ಒನ್ ವೇ, ಇಕಾನಮಿ ಕ್ಲಾಸ್) ಇರುವ ಪ್ರಯಾಣದ ದರವನ್ನು ಆರರಿಂದ ಎಂಟು ಪಟ್ಟು ಹೆಚ್ಚಿಸಲಾಗಿದೆ. ಹನ್ನೊಂದರಿಂದ, ಹದಿನಾರು ಸಾವಿರದವರೆಗೆ ಟಿಕೆಟ್ ದರವನ್ನು ಹೆಚ್ಚಿಸಲಾಗಿದೆ. ಆದರೂ, ಹೌಸ್ ಫುಲ್ ಆಗಿ ಎಲ್ಲಾ ವಿಮಾನಗಳು ಹಾರುತ್ತಿವೆ ಎಂದರೆ, ಪ್ರಯಾಣಿಕ ಅದ್ಯಾವ ತುರ್ತು ಕೆಲಸಕ್ಕೆ ಹೋಗಲೇ ಬೇಕಾದ ಅನಿವಾರ್ಯತೆಯಲ್ಲಿದ್ದಾನೆ ಎನ್ನುವುದರ ಅರಿವು ಏರ್ವೇಸ್ ಗಳಿಗೆ ಇದ್ದಂತಿಲ್ಲ.
ಬೆಂಗಳೂರಿನಿಂದ ಮಂಗಳೂರಿಗೆ ಒಟ್ಟು ಒಂಬತ್ತು ವಿಮಾನಗಳು ನಿರ್ವಹಣೆ ಮಾಡುತ್ತಿವೆ. ಎಲ್ಲಾ ಸೀಟುಗಳು ಬುಕ್ ಆಗಿವೆ. ನೈಸರ್ಗಿಕ ವಿಕೋಪದ ಇಂತಹ ಸಮಯದಲ್ಲಿ ಸಾಮಾನ್ಯರ ಕೈಗೆಟಕುವ ದರವನ್ನು ನಿಗದಿ ಪಡಿಸುವುದು ಹಾಗಿರಲಿ, ಎಂದಿನ ದರವನ್ನು ಮುಂದುವರಿಸದೇ ಇರುವುದು, ವಿಮಾನಯಾನ ಸಂಸ್ಥೆಗಳು 'ಮನಿ ಮೆಂಟಾಲಿಟಿ' ಜಗಜ್ಜಾಹೀರಾಗಿದೆ.
'ಇಂತಹ ಸಂದರ್ಭಗಳಲ್ಲಿ ಏರ್ವೇಸ್ ಗಳು ದರವನ್ನು ಹೆಚ್ಚಿಸಿರುವುದು ತಪ್ಪು. ಈ ಬಗ್ಗೆ ಕೇಂದ್ರ ವಿಮಾನಯಾನ ಸಚಿವರಿಗೆ ಪತ್ರ ಬರೆಲಾಗಿದೆ' ಎಂದು ದಕ್ಷಿಣಕನ್ನಡದ ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ. ಬರೀ ಪತ್ರ ಬರೆದು ಸುಮ್ಮನಾಗದೇ, ಒತ್ತಡವನ್ನೂ ಕೇಂದ್ರ ಸಚಿವರಿಗೆ ಹೇರಿ, ಏರ್ವೇಸ್ ಗಳಿಗೆ ಮೂಗುದಾರ ಹಾಕುವ ಕೆಲಸವನ್ನು ಸಂಸದರು ಮಾಡಲಿ.












Click it and Unblock the Notifications