Karnataka International Airport: ಕರ್ನಾಟಕದ 2ನೇ ಹಂತದ 6 ನಗರಗಳ ವಿಮಾನ ಸೇವೆ ಬಲವರ್ಧನೆ! ಸಚಿವರ ಮಹತ್ವದ ಅಪ್ಡೇಟ್

ಬೆಂಗಳೂರು, ಏಪ್ರಿಲ್ 09: ಬೆಂಗಳೂರು ಎರಡನೇ ವಿಮಾನ ನಿಲ್ದಾಣ (Bengaluru Second Airport) ನಿರ್ಮಾಣಕ್ಕೆ ಸ್ಥಳಕ್ಕೆ ಆಯ್ಕೆ ಮಾಡಲಾಗುತ್ತಿದೆ. ಇತ್ತ ಉತ್ತರ ಕರ್ನಾಟಕದ ಎರಡು ಏರ್‌ಪೋರ್ಟ್‌ಗಳನ್ನು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಾಗಿ ಘೋಷಿಸಲು ಕೇಂದ್ರಕ್ಕೆ ಪತ್ರ ಬರೆಯಲಾಗಿದೆ. ಇದರೊಂದಿಗೆ ರಾಜ್ಯದ 06 ನಗರಗಳಿಗೆ ವಿಮಾನಯಾನ ಬಲವರ್ಧನೆ ನೀಡಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಈ ಸಂಬಂಧ ಮಂಗಳವಾರ ಸುಧೀರ್ಘ ಚರ್ಚೆ ನಡೆದಿದೆ ಎಂದು ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ.ಪಾಟೀಲ ಅವರು ಹೇಳಿದರು.

ಸಚಿವ ಎಂ.ಬಿ.ಪಾಟೀಲ ಅವರು ಮಂಗಳವಾರ ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಅವರೊಂದಿಗೆ ವಿವಿಧ ವಿಮಾನಯಾನ ಸಂಸ್ಥೆಗಳ ಪ್ರತಿನಿಧಿಗಳ ಜತೆ ಸಭೆ ನಡೆಸಿದರು. ಕಲಬುರಗಿ ಸೇರಿದಂತೆ ಕರ್ನಾಟಕದಲ್ಲಿ ಎರಡನೇ ಹಂತದ 06 ನಗರಗಳಿಗೆ ವಿಮಾನಯಾನ ಸೇವೆಯನ್ನು ಮತ್ತಷ್ಟು ಬಲಪಡಿಸಲು ರಾಜ್ಯ ಸರ್ಕಾರ ಯೋಜನೆ ರೂಪಿಸಿದೆ ಎಂದರು.

Flight Services of 6 Cities Including Kalaburagi Hubballi Belagavi to Be Enhanced MB Patil

ಆರು ಏರ್‌ಪೋರ್ಟ್ ಯಾವುವು?

ಕಲಬುರಗಿ, ಮೈಸೂರು, ಬೀದರ್, ಹುಬ್ಬಳ್ಳಿ, ಬೆಳಗಾವಿ, ವಿದ್ಯಾನಗರ (ಜಿಂದಾಲ್ ಟೌನ್ ಶಿಪ್) ಮತ್ತು ಉದ್ಘಾಟನೆಗೆ ಸಿದ್ಧವಾಗಿರುವ ವಿಜಯಪುರ ವಿಮಾನ ನಿಲ್ದಾಣಗಳಿಂದ ರಾಜ್ಯ ಸೇರಿದಂತೆ ಇತರ ರಾಜ್ಯಗಳಿಗೆ ವಿಮಾನಯಾನ‌ ಸಂಪರ್ಕ ಹೆಚ್ವಿಸುವ ಕುರಿತು ವಿಸ್ತೃತವಾಗಿ ಚರ್ಚಿಸಲಾಯಿತು.

ಸಭೆಯಲ್ಲಿ ಇಂಡಿಗೋ, ಸ್ಟಾರ್ ಏರ್, ಏರ್ ಇಂಡಿಯಾ, ಆಕಾಶ್, ಅಲೈಯನ್ಸ್ ಏರ್ ವೇಸ್, ಸ್ಪೈಸ್ ಜೆಟ್ ಸೇರಿದಂತೆ ಎಲ್ಲ ಪ್ರಮುಖ ವಿಮಾನ ಯಾನ ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು.

ವಿಮಾನ ಸಂಚಾರಕ್ಕೆ ಕಲ್ಬುರ್ಗಿ ಹೆಚ್ಚು ಲಾಭದಾಯಕ ಮಾರ್ಗವಾಗಿದ್ದರೂ ಅಲ್ಲಿಗೆ ಬೆಂಗಳೂರಿನಿಂದ ವಾರಕ್ಕೆ ಕೇವಲ 03 ದಿನ ಮಾತ್ರ ವಿಮಾನ ಸಂಚಾರ ಇದೆ. ಇದನ್ನು‌‌ ಮತ್ತಷ್ಟು ಹೆಚ್ಚಿಸಬೇಕು. ಕೇವಲ ಬೆಂಗಳೂರು ಮಾತ್ರವಲ್ಲದೆ ರಾಜ್ಯದ ಇತರ‌ ನಗರ ಹಾಗೂ ಅನ್ಯ ರಾಜ್ಯಗಳ ಪ್ರಮುಖ ನಗರಗಳಿಗೂ ಸಂಪರ್ಕ ಕಲ್ಪಿಸಬೇಕು ಎನ್ನುವ ಬೇಡಿಕೆಯನ್ನು ಇಬ್ಬರೂ ಸಚಿವರು ಸಭೆಯಲ್ಲಿ ಮಂಡಿಸಿದರು. ಇದಕ್ಕೆ ವಿಮಾನಯಾನ ಸಂಸ್ಥೆಗಳ ಪ್ರತಿನಿಧಿಗಳು ಸಕಾರಾತ್ಮಕ ವಾಗಿ ಸ್ಪಂದಿಸಿ ಸೂಕ್ತ ಕ್ರಮ ತೆಗೆದುಕೊಳ್ಳುವ ಭರವಸೆ ನೀಡಿದರು.

Flight Services of 6 Cities Including Kalaburagi Hubballi Belagavi to Be Enhanced MB Patil

ಎಂಆರ್ ಓ ಸೇವೆಗೂ ಸಿದ್ಧ: ಸಚಿವ

ವಿಮಾನ ಸಂಚಾರದ ಜತೆಗೆ ಈ ವಿಮಾನ ನಿಲ್ದಾಣಗಳನ್ನು ವಿಮಾನಗಳ ನಿರ್ವಹಣೆ ಮತ್ತು ರಿಪೇರಿ (ಎಂಆರ್ ಓ) ಕೇಂದ್ರಗಳಾಗಿಯೂ ಬಳಸಬಹುದು. ದೊಡ್ಡ ದೊಡ್ಡ ನಗರಗಳಲ್ಲಿ ಈ ಸೇವೆ ದುಬಾರಿ ಕೂಡ ಆಗುತ್ತದೆ. ಹೀಗಾಗಿ ಬೆಳಿಗ್ಗೆ‌ ಇಂತಹ ನಗರಗಳಿಂದ ಪ್ರಯಾಣಿಕರನ್ನು ಹೊತ್ತೊಯ್ದು ರಾತ್ರಿ ನಿಲುಗಡೆಗೆ ವಾಪಸ್ಸಾಗಬಹುದು. ಬೇಕಾದರೆ ನಿಲುಗಡೆ ಶುಲ್ಕದಿಂದ ವಿನಾಯಿತಿ ನೀಡಬಹುದು ಎಂದು ಸಚಿವರು ವಿಮಾನಯಾನ ಸಂಸ್ಥೆಗಳ ಪ್ರತಿನಿಧಿಗಳಿಗೆ ಮನವರಿಕೆ ಮಾಡಿಕೊಟ್ಟರು.

ಕಲಬುರಗಿ ಯಲ್ಲಿ ಈ ವ್ಯವಸ್ಥೆ ಮಾಡಿಕೊಡಲು ತಾವು ಸಿದ್ಧ ಇರುವುದಾಗಿಯೂ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು. ಇದಕ್ಕೆ ವಿಮಾನಯಾನ ಸಂಸ್ಥೆಗಳ ಪ್ರತಿನಿಧಿಗಳು ಸಕಾರಾತ್ಮಕವಾಗಿ ಸ್ಪಂದಿಸಿದರು.

ಮೈಸೂರು, ಕಲಬುರಗಿ, ಬೀದರ್, ವಿದ್ಯಾ ನಗರ ವಿಮಾನ ನಿಲ್ದಾಣಗಳ ಉಪಯೋಗ ಗರಿಷ್ಠ ಮಟ್ಟದಲ್ಲಿ ಆಗುತ್ತಲೇ ಇಲ್ಲ. ಕಲಬುರಗಿ-ಬೆಂಗಳೂರು-ಕಲಬುರಗಿ ಮಾರ್ಗದಲ್ಲಿ ವಾರಕ್ಕೆ ಮೂರು ದಿನ ಮಾತ್ರ ವಿಮಾನ ಓಡಾಡುತ್ತಿದೆ. ಸ್ಟಾರ್ ಮತ್ತು ಅಲೈಯನ್ಸ್ ವಿಮಾನಯಾನ ಸಂಸ್ಥೆಗಳು ಮೂರು ವರ್ಷಗಳಿಂದ ಹಾರಾಟ ನಿಲ್ಲಿಸಿವೆ.

ಕಲಬುರಗಿ ಪ್ರವಾಸೋದ್ಯಮ ಕೇಂದ್ರವಾಗಿದೆ. ಇಲ್ಲಿಂದ ಪುಣೆ, ತಿರುಪತಿ, ಚೆನ್ನೈ, ಮುಂಬೈ ಹೀಗೆ ಹಲವು ಭಾಗಗಳಿಗೆ ವಿಮಾನ ಸಂಚಾರ ಆರಂಭಿಸಿದರೆ ಖಂಡಿತವಾಗಿಯೂ ಲಾಭ ತಂದುಕೊಡಲಿದೆ. ಇಂತಹ ಮಾರ್ಗಗಳಲ್ಲಿ ಸಂಸ್ಥೆಗಳು ಪ್ರಾಯೋಗಿಕ ಸೇವೆ ಕೈಗೊಂಡು ನೋಡಬಹುದು ಎಂದು ಅವರು ನುಡಿದಿದ್ದಾರೆ.

ಪುಣೆಗೆ ವಿಮಾನಸೇವೆ ಆರಂಭಕ್ಕೆ ಬೇಡಿಕೆ

ಮೈಸೂರು ವಿಮಾನ ನಿಲ್ದಾಣದಿಂದ ಕೂಡ ವೈಮಾನಿಕ ಸೇವೆ ಹೆಚ್ಚಾಗಬೇಕು. ಇಲ್ಲಿಂದ ಗೋವಾ, ಕೊಚ್ಚಿನ್, ಹೈದರಾಬಾದ್ ಮುಂತಾದ ನಗರಗಳಿಗೂ ವಿಮಾನಸೇವೆ ಆರಂಭಿಸಬಹುದು. ಬೆಳಗಾವಿಯಿಂದ ಈಗ ವಾರಕ್ಕೆ 44 ವಿಮಾನಗಳು ಓಡಾಡುತ್ತಿವೆ. ಇಲ್ಲಿಂದ ಪುಣೆಗೆ ವಿಮಾನಸೇವೆ ಆರಂಭಿಸಬೇಕೆಂಬ ಬೇಡಿಕೆ ಇದೆ. ಆದರೆ, ಲ್ಯಾಂಡಿಂಗ್ ಸಮಯದ ಅನನುಕೂಲತೆ ಇದೆ. ಇಲ್ಲಿಂದ ಚೆನ್ನೈ, ಕೊಚ್ಚಿ ಮುಂತಾದ ಕಡೆಗಳಿಗೆ ವಿಮಾನ ಸೇವೆಗೆ ಒಳ್ಳೆಯ ಅವಕಾಶವಿದ್ದು, ಕಲಬುರಗಿಗೂ ಸೇವೆ ಆರಂಭಿಸಬಹುದು ಎಂದು ಅವರು ವಿವರಿಸಿದ್ದಾರೆ.

ಜಿಂದಾಲ್ ಟೌನ್-ಶಿಪ್ ನಲ್ಲಿರುವ ವಿಮಾನ ನಿಲ್ದಾಣದಿಂದ ಹೈದರಾಬಾದಿಗೆ ಮಾತ್ರ 2 ವಿಮಾನ ಓಡಾಡುತ್ತಿದೆ. ಇಲ್ಲಿಂದ ಬೆಂಗಳೂರಿಗೂ ವಿಮಾನಯಾನ ಸೇವೆ ಆರಂಭವಾಗಬೇಕು. ಜತೆಗೆ ಜಿಂದಾಲ್ ಟೌನ್‌ಶಿಪ್ ನಲ್ಲಿ ವಿದೇಶೀಯರೂ ಹೆಚ್ಚಾಗಿದ್ದಾರೆ. ಹತ್ತಿರದಲ್ಲೇ ವಿಶ್ವವಿಖ್ಯಾತ ಹಂಪೆ ಇದೆ. ಆದ್ದರಿಂದ ಬೆಂಗಳೂರು-ಜಿಂದಾಲ್-ಗೋವಾ ಈ ಮಾರ್ಗದಲ್ಲಿ ವಿಮಾನ ಓಡಾಡಿದರೆ ಪರಿಣಾಮಕಾರಿಯಾಗುತ್ತದೆ ಎಂದು ಎಂಬಿ ಪಾಟೀಲರು ವಿವರಿಸಿದರು.

ವಿಜಯಪುರ ವಿಮಾನ ನಿಲ್ದಾಣ ಆರಂಭ ಯಾವಾಗ?

ವಿಜಯಪುರ ವಿಮಾನ ನಿಲ್ದಾಣ ಉದ್ಘಾಟನೆಗೆ ಸಜ್ಜಾಗಿದೆ. ಕೇಂದ್ರ ಸರಕಾರದ ಪರಿಸರ ಇಲಾಖೆಯ ಅನುಮತಿ ಬಾಕಿ ಇದೆ. ವಿಮಾನಯಾನ ಸಂಸ್ಥೆಗಳು ಈಗಿನಿಂದಲೇ ತಮ್ಮ ಸೇವೆ ಆರಂಭಿಸಲು ಸಿದ್ಧತೆ ಮಾಡಿಕೊಂಡಿರಬೇಕು. ಈ ವಿಮಾನ ನಿಲ್ದಾಣ ಆರಂಭವಾದರೆ ಮಹಾರಾಷ್ಟ್ರ, ತೆಲಂಗಾಣ, ಉತ್ತರ ಭಾರತದ ಹಲವು ನಗರಗಳಿಗೆ ವಿಮಾನಸೇವೆ ಸುಲಭವಾಗಲಿದೆ ಎಂದು ಅವರು ಸೂಚಿಸಿದ್ದಾರೆ.

ಸಭೆಯಲ್ಲಿ ಮೂಲಸೌಕರ್ಯ ಇಲಾಖೆ ಕಾರ್ಯದರ್ಶಿ ಎನ್ ಮಂಜುಳಾ, ಕೈಗಾರಿಕಾ ಮೂಲಸೌಕರ್ಯ ಅಭಿವೃದ್ಧಿ ನಿಗಮದ ಮುಖ್ಯಸ್ಥೆ ಖುಷ್ಬೂ ಗೋಯೆಲ್, ಸಚಿವರ ತಾಂತ್ರಿಕ ಸಲಹೆಗಾರ ಅರವಿಂದ ಗಲಗಲಿ ಸೇರಿದಂತೆ ಇತರ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

ಬೆಂಗಳೂರು 2ನೇ ವಿಮಾನ ನಿಲ್ದಾಣ: ಎಎಐ ತಂಡ ಆಗಮನ

ಬೆಂಗಳೂರಿನಲ್ಲಿ ಉದ್ದೇಶಿತ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ರಾಜ್ಯ ಸರ್ಕರ ಗುರುತಿಸಿರುವ ಮೂರು ಸ್ಥಳಗಳ ಪೈಕಿ ಕನಕಪುರ ರಸ್ತೆಯಲ್ಲಿರುವ ಎರಡು ತಾಣಗಳ ಪರಿಶೀಲನೆ ಮಾಡಲಾಗಿದೆ. ಈ ಸಂಬಂಧ ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರದ (ಎಎಐ) ಅಧಿಕಾರಿಗಳ ತಂಡ ಬೆಂಗಳೂರಿಗೆ ಆಗಮಿಸಿದೆ. ಅವರು ಮಂಗಳವಾರ ಸಚಿವ ಎಂಬಿ ಪಾಟೀಲ್ ಅವರನ್ನು ಭೇಟಿ ಮಾಡಿದ್ದಾರೆ.

ಈ ಸಂದರ್ಭದಲ್ಲಿ ಸಚಿವರು ಕೂಡ ಉದ್ದೇಶಿತ ವಿಮಾನ ನಿಲ್ದಾಣದ ಅಗತ್ಯ, ಬೆಂಗಳೂರಿನ ನಾಗರಿಕ ಮತ್ತು ಕೈಗಾರಿಕಾ ಅಗತ್ಯ ಇತ್ಯಾದಿಗಳನ್ನು ತಂಡದ ಸದಸ್ಯರಿಗೆ ವಿವರಿಸಿ, ಪ್ರಾತ್ಯಕ್ಷಿಕೆ ಪ್ರದರ್ಶಿಸಿದರು. ಅತ್ಯಂತ ಪಾರದರ್ಶಕವಾಗಿ ಸ್ಥಳ ಗುರುತಿಸುವ ಕೆಲಸ ಆಗಲಿ ಎಂದು ತಂಡಕ್ಕೆ ಸಲಹೆ ನೀಡಿದರು.

ಬುಧವಾರ ನೆಲಮಂಗಲ- ಕುಣಿಗಲ್ ಸ್ಥಳಕ್ಕೆ ಭೇಟಿ

ಉದ್ದೇಶಿತ ಎರಡನೆಯ ವಿಮಾನ ನಿಲ್ದಾಣವನ್ನು ಬೆಂಗಳೂರಿನ ಅಗತ್ಯಗಳನ್ನು ಗಮನದಲ್ಲಿ ಇಟ್ಟುಕೊಂಡು ನಿರ್ಮಿಸಲು ಸರ್ಕಾರ ತೀರ್ಮಾನಿಸಿದೆ. ಒಟ್ಟು ಮೂರು ದಿನ ಇರುವ ಎಎಐ ತಂಡವು ಬುಧವಾರ ನೆಲಮಂಗಳ, ಕುಣಿಗಲ್ ಸ್ಥಳ ಪರಿಶೀಲಿಸಲಿದ್ದಾರೆ. ಇದೆಲ್ಲ ಪ್ರಕ್ರಿಯೆ ಮುಗಿದ ಬಳಿಕ ಪ್ರಾಧಿಕಾರದ ಅಭಿಪ್ರಾಯ ಏನೆಂದು ತಿಳಿದುಕೊಳ್ಳಲಾಗುತ್ತದೆ ಎಂದು ಎಂಬಿ ಫಾಟೀಲ್ ಅರು ಸುದೀರ್ಘ ಸಭೆ ಬಳಿಕ ಮಾಹಿತಿ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+