ಐವರು ಅಧಿಕಾರಿಗಳ ಮನೆ ಬಾಗಿಲು ಬಡಿದ ಲೋಕಾಯುಕ್ತರು
ಬೆಂಗಳೂರು, ಜ.31 : ಶನಿವಾರ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಪೊಲೀಸರು ಭ್ರಷ್ಟ ಸರ್ಕಾರಿ ಅಧಿಕಾರಿಗಳ ವಿರುದ್ಧ ಸಮರ ಸಾರಿದ್ದಾರೆ. ರಾಜ್ಯದ ವಿವಿಧ ಕಡೆ ಒಟ್ಟು ಐವರು ಸರ್ಕಾರಿ ಅಧಿಕಾರಿಗಳ ಮನೆಗಳ ಮೇಲೆ ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲನೆ ಮಾಡುತ್ತಿದ್ದಾರೆ.
ಉತ್ತರ ಕನ್ನಡ, ಹಾವೇರಿ, ಬೀದರ್, ಕಲಬುರಗಿ, ದಾವಣಗೆರೆ ಜಿಲ್ಲೆಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಿರುವ ಲೋಕಾಯುಕ್ತ ಪೊಲೀಸರು ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ. ಬೀದರ್‌ನಲ್ಲಿ ಸರ್ಕಾರಿ ನೌಕರರ ಸಂಘದ ಉಪಾಧ್ಯಕ್ಷರ ಮನೆಯ ಮೇಲೆಯೂ ದಾಳಿ ನಡೆದಿದೆ.

ಹಾವೇರಿ : ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕಚೇರಿ ವ್ಯವಸ್ಥಾಪಕಿ ಶಕುಂತಲಾ ಹಿರೇಮಠ್ ಅವರ ಮನೆ ಮೇಲೆ ದಾಳಿ ನಡೆದಿದೆ. ಲೋಕಾಯುಕ್ತ ಎಸ್‌ಪಿ ನಾಗರಾಜ್ ಅಂಬಲಿ ನೇತೃತ್ವದಲ್ಲಿ ದಾಳಿ ನಡೆಸಲಾಗಿದ್ದು, ಪರಿಶೀಲನೆ ಮುಂದುವರೆದಿದೆ. [ಭ್ರಷ್ಟರಿಗೆ ಶಿಕ್ಷೆ ನೀಡುವ ಅಧಿಕಾರ ಲೋಕಾಯುಕ್ತರಿಗೆ ಬೇಕು]
ಬೀದರ್ : ವಾಣಿಜ್ಯ ತೆರಿಗೆ ಇಲಾಖೆಯ ಎಫ್‌ಡಿಎ ಅಧಿಕಾರಿ ರಾಜೇಂದ್ರ ಗಂಧಗೆ ಅವರ ಮನೆ ಮೇಲೆ ದಾಳಿ ನಡೆದಿದೆ. ಜಿಲ್ಲಾ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷರಾಗಿಯೂ ಇವರು ಕೆಲಸ ಮಾಡುತ್ತಿದ್ದಾರೆ. ರಾಜೇಂದ್ರ ಅವರ ನಾಲ್ಕು ನಿವಾಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಲಾಗಿದೆ.
ಉತ್ತರ ಕನ್ನಡ : ಪ್ರಾಥಮಿಕ ಹಾಗೂ ಸಹಕಾರಿ ಗ್ರಾಮೀಣ ಬ್ಯಾಂಕ್ ವ್ಯವಸ್ಥಾಪಕ ಅರುಣ್ ನಾಯಕ್ ನಿವಾಸ ಮತ್ತು ಕಚೇರಿಯ ಮೇಲೆ ದಾಳಿ ನಡೆದಿದೆ. ಜೋಯಿಡಾದ ಜುಗಲ್‌ಪೇಟೆಯಲ್ಲಿರುವ ನಿವಾಸ ಹಾಗೂ ಕಚೇರಿಯಲ್ಲಿಯೂ ದಾಖಲಾತಿಗಳ ಪರಿಶೀಲನೆ ನಡೆಸಲಾಗುತ್ತಿದೆ.
ಕಲಬುರಗಿ : ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ಶಿವಸಂಗಪ್ಪ ಕುಮಸಿ ಅವರ ಮನೆ ಮತ್ತು ಕಚೇರಿ ಮೇಲೆ ದಾಳಿ ನಡೆದಿದೆ. ಅಫ್ಜಲ್‌ಪುರದ ಚೌಡಾಪುರದಲ್ಲಿರುವ ಅವರ ತೋಟದ ಮನೆ ಮೇಲೆಯೂ ದಾಳಿ ನಡೆಸಲಾಗಿದೆ.
ದಾವಣಗೆರೆ : ಮಹಾನಗರ ಪಾಲಿಕೆ ಇಂಜಿನಿಯರ್ ಪ್ರಕಾಶ್ ಶೆಟ್ಟಿ ಅವರ ಎಂಸಿಸಿ ಬಿ ಬ್ಲಾಕ್‌ನಲ್ಲಿರುವ ಮನೆಯ ಲೋಕಾಯುಕ್ತ ಎಸ್‌ಪಿ ರಾಮಲಿಂಗಾರೆಡ್ಡಿ ನೇತೃತ್ವದ ತಂಡ ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ನಡೆಸುತ್ತಿದೆ.












Click it and Unblock the Notifications