ಕೆರೆಗಳಿಂದ ಆದಾಯ ಸಂಗ್ರಹಿಸಲು ರಾಜ್ಯ ಸರ್ಕಾರದಿಂದ ಹೊಸ ಪ್ಲ್ಯಾನ್
ರಾಜ್ಯ ಸರ್ಕಾರವು ಕೆರೆಗಳಿಂದ ಆದಾಯ ಸಂಗ್ರಹಿಸಲು ಹೊಸ ಉಪಾಯವೊಂದನ್ನು ಮಾಡಿದೆ. ಈವರೆಗೆ ಜಲಮೂಲವಾಗಿದ್ದ ಕೆರೆಗಳನ್ನು ಆದಾಯದ ಮೂಲವಾಗಿ ಪರಿವರ್ತಿಸಲು ಸಿದ್ದರಾಮಯ್ಯ ಸರ್ಕಾರವು ಹೊಸ ಹೆಜ್ಜೆಯೊಂದನ್ನು ಇಟ್ಟಿದೆ. ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಕೃಷ್ಣಾದಲ್ಲಿ ನಡೆದ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರದ ಸಭೆಯಲ್ಲಿ ಮಾಹಿತಿ ನೀಡಿದ್ದಾರೆ.
ರಾಜ್ಯದಲ್ಲಿರುವ ಎಲ್ಲ ಕೆರೆಗಳಿಂದ ಆದಾಯ ಸಂಗ್ರಹಿಸಲು ಯೋಜನೆ ರೂಪಿಸಿರುವ ಸರ್ಕಾರವು ಕೆರೆಗಳಿಗೆ ಮೀನು ಮರಿಗಳನ್ನು ಬಿಡಲು ಮುಂದಾಗಿದೆ. ಮೀನುಗಾರಿಕಾ ಇಲಾಖೆ ವತಿಯಿಂದ ಎಲ್ಲ ಕೆರೆಗಳಿಗೆ ಮೀನು ಮರಿಗಳನ್ನು ಬಿಡುವ ಕಾರ್ಯ ಮಾಡಿದರೆ, ಆದಾಯ ಗಳಿಸಲು ಸಾಧ್ಯವಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ರಾಜ್ಯದಲ್ಲಿ ಒಟ್ಟು 40,998 ಕೆರೆಗಳಿದ್ದು, ಇವುಗಳ ಪೈಕಿ ಗ್ರಾಮೀಣಾಭಿವೃದ್ಧಿ ಇಲಾಖೆ ವ್ಯಾಪ್ತಿಯಲ್ಲಿ 26,365 ಕೆರೆಗಳು, ಸಣ್ಣ ನೀರಾವರಿಯಲ್ಲಿ 3,247, ಬಿಬಿಎಂಪಿ ವ್ಯಾಪ್ತಿಯಲ್ಲಿ 117 ಕೆರೆಗಳಿವೆ. ರಾಜ್ಯದಲ್ಲಿ 30 ಸಾವಿರ ಕೆರೆಗಳ ಸರ್ವೇ ಕಾರ್ಯವನ್ನು ಕಂದಾಯ ಇಲಾಖೆ ಈಗಾಗಲೇ ಪೂರ್ಣಗೊಳಿಸಿದೆ. ಉಳಿದಿರುವ 10,754 ಕೆರೆಗಳ ಸಮೀಕ್ಷೆ ಕಾರ್ಯವನ್ನು ಆರು ತಿಂಗಳ ಒಳಗಾಗಿ ಪೂರ್ಣಗೊಳಿಸಬೇಕು ಎಂದು ಗಡುವು ನೀಡಿದ್ದಾರೆ.
ಕೆರೆ ಒತ್ತುವರಿ ತೆರವು ಕಾರ್ಯ ಬಾಕಿಯಿರುವ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಲಾಗುವುದು. ಮಳೆಗಾಲದ ಒಳಗಾಗಿ ಕೆರೆ ಒತ್ತುವರಿಯನ್ನು ತೆರವುಗೊಳಿಸಿ, ಕೆರೆಗಳನ್ನು ಅಭಿವೃದ್ಧಿಪಡಿಸಲು ಕ್ರಮ ಕೈಗೊಳ್ಳಬೇಕು. ಕೆರೆಗಳ ಸಂರಕ್ಷಣೆ ಕಾರ್ಯವನ್ನು ನರೇಗಾ ಅಡಿಯಲ್ಲಿ ದೊಡ್ಡ ಪ್ರಮಾಣದಲ್ಲಿ ಕೈಗೆತ್ತಿಕೊಳ್ಳಬೇಕು ಎಂದು ಸೂಚನೆ ನೀಡಿದ್ದಾರೆ.

ಮೀನುಗಾರಿಕಾ ಇಲಾಖೆ ವತಿಯಿಂದ ಎಲ್ಲ ಕೆರೆಗಳಿಗೆ ಮೀನು ಮರಿಗಳನ್ನು ಬಿಡುವ ಕಾರ್ಯ ಮಾಡಿದರೆ ಆದಾಯ ಗಳಿಸಲು ಸಾಧ್ಯವಿದೆ. ನಗರ ಪ್ರದೇಶದ ಕೆರೆಗಳು ಮಾತ್ರವಲ್ಲದೆ, ರಾಜ್ಯದ ಎಲ್ಲ ಕೆರೆಗಳ ಮಾಲಿನ್ಯದ ಮಟ್ಟವನ್ನು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳು ಪರಿಶೀಲಿಸಿ ನಿಯಮಿತವಾಗಿ ವರದಿ ಸಲ್ಲಿಸಬೇಕು ಎಂದು ಸಿಎಂ ಸಿದ್ದರಾಮಯ್ಯ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಭೂ ದಾಖಲೆಗಳ ರಕ್ಷಣೆಗೆ ವಂಚಕರಿಂದ ದುರುಪಯೋಗ ಆಗದಂತೆ ಹಾಗೂ ದಾಖಲೆ ತಿದ್ದಲು ಅವಕಾಶ ಆಗದಂತೆ "ಭೂ ಸುರಕ್ಷಾ" ಪರಿಣಾಮಕಾರಿಯಾಗಿ ಜಾರಿಯಾಗಬೇಕು ಎಂದೂ ಸಿ.ಎಂ ಸೂಚನೆ ನೀಡಿದ್ದಾರೆ. ಕಂದಾಯ ಇಲಾಖೆಯಡಿ ಈಗಾಗಲೇ 8 ಕೋಟಿ ಮೂಲ ದಾಖಲೆಗಳ ಕಂಪ್ಯೂಟರೀಕರಣ ನಡೆದಿದೆ. ಖದೀಮರು ತಿದ್ದಲು ಅವಕಾಶ ಆಗದಂತೆ ದಾಖಲೆಗಳಿಗೆ ಡಿಜಿಟಲ್ ಭದ್ರತೆ ಒದಗಿಸಲಾಗಿದೆ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಸಿಎಂ ಗಮನಕ್ಕೆ ತಂದಿದ್ದಾರೆ.
ಇಲಾಖೆಯಲ್ಲಿ ತಂತ್ರಾಂಶವನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಮೂಲಕ ಕಂದಾಯ ವ್ಯವಸ್ಥೆಯಲ್ಲಿ ಸುಧಾರಣಾ ಕಾರ್ಯ ಕೈಗೊಳ್ಳಲಾಗಿದೆ. ನಕ್ಷಾ ಯೋಜನೆ ಮೂಲಕ ನಗರ ಪ್ರದೇಶದಲ್ಲಿ ಡ್ರೋನ್ ಸರ್ವೆ ಮೂಲಕ ಪ್ರಾಪರ್ಟಿ ಕಾರ್ಡ್ ನೀಡುತ್ತಿದ್ದೇವೆ. 21 ಜಿಲ್ಲೆಗಳಲ್ಲಿ ಡ್ರೋನ್ ಮೂಲಕ ಸರ್ವೇ ಕಾರ್ಯವನ್ನು ಕೈಗೊಳ್ಳಲಾಗಿದೆ. ಉಳಿದ ಜಿಲ್ಲೆಗಳಲ್ಲೂ ಡ್ರೋನ್ ಸರ್ವೆ ಆರಂಭಿಸಿ ಎಂದು ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ.












Click it and Unblock the Notifications