First Zika Virus in Karnataka : ಕರ್ನಾಟಕದ ರಾಯಚೂರಿನ 5ವರ್ಷದ ಬಾಲಕಿಗೆ ಝಿಕಾ ವೈರಸ್ ದೃಢ: ಸುಧಾಕರ್
ಬೆಂಗಳೂರು, ಡಿಸೆಂಬರ್ 12: ಕರ್ನಾಟಕದಲ್ಲಿ ಮೊದಲ ಝಿಕಾ ವೈರಸ್ ಪತ್ತೆಯಾಗಿದೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.
ಸೋಮವಾರ ನಗರದ ಆರೋಗ್ಯ ಸೌಧದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ರಾಯಚೂರು ಜಿಲ್ಲೆ ವ್ಯಾಪ್ತಿಯಲ್ಲಿ ಐದು ವರ್ಷ ಮಗುವಿಗೆ ಝಿಕಾ ವೈರಸ್ ಇರುವುದು ಖಚಿತವಾಗಿದೆ. ಇದನ್ನು ಪುಣೆಯ ಪ್ರಯೋಗಾಲಯ ವರದಿ ಬಹಿರಂಗಪಡಿಸಿದೆ ಎಂದರು.
ರಾಜ್ಯ ಸರ್ಕಾರ ಕರ್ನಾಟಕದಲ್ಲಿ ಪತ್ತೆಯಾದ ಮೊದಲ ಝಿಕಾ ವೈರಸ್ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಅಗತ್ಯ ಕಟ್ಟೆಚ್ಚರ ವಹಿಸುತ್ತಿದ್ದು, ಸೂಕ್ತ ಕ್ರಮ ಕೈಗೊಳ್ಳಲಾಗುತ್ತಿದೆ. ಸೋಂಕಿತ ಬಾಲಕಿ ಮೇಲೆ ತೀವ್ರ ನಿಗಾ ವಹಿಸಲಾಗಿದೆ. ಬಾಲಕಿ ಟ್ರಾವೆಲ್ ಹಿಸ್ಟರಿ ಈವರೆಗೂ ಲಭ್ಯವಾಗಿಲ್ಲ.
ಸೋಂಕಿತ ಬಾಲಕಿ ಕಳೆದ 15 ದಿನಗಳಿಂದ ಜ್ವರ, ವಾಂತಿ, ಭೇದಿಯಿಂದ ಬಳಲುತ್ತಿದ್ದಳು. ಈ ಹಿನ್ನೆಲೆಯಲ್ಲಿ ನವೆಂಬರ್ 13ರಂದು ಜ್ವರ ಕಾಣಿಸಿಕೊಂಡಿತ್ತು. ಮೊದಲು ಸಿಂಧನೂರು ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಬಳಿಕ ಡೆಂಘೀ ಜ್ವರ ದೃಢಪಟ್ಟ ಹಿನ್ನೆಲೆ ವಿಜಯನಗರದ ವಿಮ್ಸ್ ಆಸ್ಪತ್ರೆಗೆ ದಾಖಲಿಸಲಾಯಿತು.
ಅಲ್ಲಿ ವೈದ್ಯರು ಬಾಲಕಿಯ ಮೂರು ಮಾದರಿಗಳನ್ನು ಲ್ಯಾಬ್ ಗೆ ಕಳುಹಿಸಲಾಗಿತ್ತು. ಅದರಲ್ಲಿ ಎರಡು ನೆಗೆಟಿವ್ ಮತ್ತು ಒಂದು ಪಾಸಿಟಿವ್ ಬಂದಿದೆ ಎಂದು ಸಚಿವ ಸುಧಾಕರ್ ವಿವರಿಸಿದರು.

ಈ ಹಿಂದೆ ನೆರೆ ರಾಜ್ಯಗಳಾದ ಕೇರಳ, ಮಹಾರಾಷ್ಟ್ರ ಮತ್ತು ಉತ್ತರ ಪ್ರದೇಶದಲ್ಲಿ ಈ ಝಿಕಾ ವೈರಸ್ ಪಾಸಿಟಿವ್ ಪ್ರಕರಣ ಪತ್ತೆಯಾಗಿದ್ದವು. ಅದಾದ ಬಳಿಕ ಒಂದೇ ಒಂದು ಪ್ರಕರಣ ಸಹ ಕರ್ನಾಟಕದಲ್ಲಿ ಪತ್ತೆಯಾಗಿರಲಿಲ್ಲ. ಕರ್ನಾಟಕದ ಇದೇ ಮೊದಲ ಪ್ರಕರಣವಾಗಿದೆ. ಬಾಲಕಿಯ ಗಂಟಲು ಮಾದಿರಯನ್ನು ಡೆಂಗ್ಯೂ ಮತ್ತು ಚಿಕೂನ್‌ಗುನ್ಯಾ ಪರೀಕ್ಷೆಗೆ ಒಳಪಡಿಸಿದಾಗ ಈ ವೈರಸ್ ತಗುಲಿರುವುದು ಕಂಡು ಬಂದಿದೆ.
ರಾಯಚೂರು, ಪಕ್ಕದ ಜಿಲ್ಲೆಯಾದ್ಯಂತ ಕಟ್ಟೆಚ್ಚರ
ಝಿಕಾ ಸೋಂಕಿನ ಬಗ್ಗೆ ಕಟ್ಟೆಚ್ಚರ ವಹಿಸಲಾಗಿದೆ. ಯಾವುದೇ ಆಸ್ಪತ್ರೆಗಳಲ್ಲಿ ಶಂಕಿತ ಪ್ರಕರಣಗಳು ಕಂಡುಬಂದಲ್ಲಿ ಅವರ ಮಾದರಿಯನ್ನು ಝಿಕಾ ವೈರಸ್ ಪರೀಕ್ಷೆಗೆ ಕಳುಹಿಸಲು ರಾಯಚೂರು ಮತ್ತು ನೆರೆಯ ಜಿಲ್ಲೆಗಳ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.
ರಾಜ್ಯದಲ್ಲಿ ಇದುವರೆಗೆ ಝಿಕಾ ವೈರಸ್‌ನ ಯಾವುದೇ ಹೊಸ ಪ್ರಕರಣಗಳು ಕಂಡುಬಂದಿಲ್ಲ. ಜನರು ಯಾವುದೇ ಆತಂಕ ಪಡುವ ಅಗತ್ಯವಿಲ್ಲ. ಈ ಕುರಿತು ಆರೋಗ್ಯ ಇಲಾಖೆ ಪ್ರತ್ಯೇಕ ಮಾರ್ಗಸೂಚಿ ಬಿಡುಗಡೆ ಮಾಡಲಿದೆ ಈಡಿಸ್ ಸೊಳ್ಳೆಯ ಕಚ್ಚುವಿಕೆಯ ಮೂಲಕ ಝಿಕಾ ವೈರಸ್ ಸೋಂಕು ಹರಡುತ್ತದೆ. ಇದು ಡೆಂಗ್ಯೂ ಮತ್ತು ಚಿಕೂನ್‌ಗುನ್ಯಾದಂತಹ ಸೋಂಕುಗಳನ್ನು ಹರಡುತ್ತದೆ ಎಂದು ಅವರು ವಿವರಿಸಿದರು.












Click it and Unblock the Notifications