ಹೆಚ್​ಡಿ ಕುಮಾರಸ್ವಾಮಿ ವಿರುದ್ಧ ಎಫ್​ಐಆರ್ ದಾಖಲು

ಬೆಂಗಳೂರು, ನವೆಂಬರ್​ 05: ಸಂಡೂರು ಗಣಿ ಹಗರಣ ಪ್ರಕರಣದ ತನಿಖೆ ವಿಚಾರವಾಗಿ ಕಳೆದ ಕೆಲವು ದಿನಗಳ ಹಿಂದೆ ಎಡಿಜಿಪಿ ಚಂದ್ರೇಶಖರ್​ ಮತ್ತು ಕೇಂದ್ರ ಸಚಿವ ಹೆಚ್​ಡಿ ಕುಮಾರಸ್ವಾಮಿ ನಡುವೆ ಮುಸುಕಿನ ಗುದ್ದಾಟ ನಡೆದಿತ್ತು.ಇದೀಗ ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರ ಸಚಿವರಾದ ಹೆಚ್‌ ಡಿ ಕುಮಾರಸ್ವಾಮಿ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ.

ಎಡಿಜಿಪಿ ಚಂದ್ರಶೇಖರ್ ಅವರು ನೀಡಿದ ದೂರಿನ ಆಧಾರದ ಮೇಲೆ ಕೇಂದ್ರ ಸಚಿವ ಹೆಚ್​ಡಿ ಕುಮಾರಸ್ವಾಮಿ ಅವರ ವಿರುದ್ಧ ಸಂಜಯನಗರ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್ ದಾಖಲಾಗಿದೆ. ಬಿಎನ್​ಎಸ್​ ಅಂಡರ್ ಸೆಕ್ಷನ್ 224ರ ಅಡಿಯಲ್ಲಿ ಪೊಲಿಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪ್ರಕರಣದಲ್ಲಿ ಹೆಚ್​ಡಿ ಕುಮಾರಸ್ವಾಮಿ ಆರೋಪಿ ನಂಬರ್​ 1 ಆಗಿದ್ದಾರೆ. ಜೆಡಿಎಸ್​ ಯುವ ಘಟಕ ರಾಜ್ಯಾಧ್ಯಕ್ಷ ನಿಖಿಲ್​ ಕುಮಾರಸ್ವಾಮಿ ಆರೋಪಿ ನಂಬರ್​ 2 ಆಗಿದ್ದಾರೆ. ಜೆಡಿಎಸ್​ ಮುಖಂಡ ಸುರೇಶ್ ಬಾಬು ಆರೋಪಿ ನಂಬರ್​ 3 ಆಗಿದ್ದಾರೆ.

FIR Filed against Union Minister HD Kumaraswamy

ದೂರಿನಲ್ಲಿರುವಂತೆ ಆರೋಪಿಗಳು ದುರುದ್ದೇಶ ಪೂರಿತವಾಗಿ ಆರೋಪ ಮಾಡಿದ್ದು, ತೊಂದರೆ ಕೊಡುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಐಪಿಎಸ್ ಅಧಿಕಾರಿ ಚಂದ್ರಶೇಖರ್ ಅವರು ದೂರಿನಲ್ಲಿ ಆರೋಪಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರ ಸಚಿವ ಹೆಚ್ ​ಡಿ ಕುಮಾರಸ್ವಾಮಿ ಸೇರಿದಂತೆ ಮೂವರ ವಿರುದ್ಧ 42ನೇ ಎಸಿಎಂಎಂ ನ್ಯಾಯಾಲಯದ ಆದೇಶದಂತೆ ಎಫ್​ಐಆರ್​ ದಾಖಲಾಗಿದೆ.

ಐಪಿಎಸ್ ಅಧಿಕಾರಿ ಎಫ್ಐಆರ್ ಬಗ್ಗೆ ಹೆಚ್‌ ಡಿ ಕುಮಾರಸ್ವಾಮಿ ಕಿಡಿ

ಐಪಿಎಸ್ ಅಧಿಕಾರಿಯೊಬ್ಬರ ದೂರಿನ ಮೇರೆಗೆ ನನ್ನ ವಿರುದ್ಧ ಪೊಲೀಸರು ದಾಖಲು ಮಾಡಿರುವ ಎಫ್ಐಆರ್ ಹಾಸ್ಯಾಸ್ಪದ, ದುರುದ್ದೇಶಪೂರಿತ ಎಂದು ಕೇಂದ್ರ ಸಚಿವರ ಹೆಚ್.ಡಿ.ಕುಮಾರಸ್ವಾಮಿ ಅವರು ಆಕ್ರೋಶ ವ್ಯಕ್ತಪಡಿಸಿದರು.

ಉಪ ಚುನಾವಣೆಯ ಎನ್ ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರ ಪರವಾಗಿ ಅಕ್ಕೂರು ಹೊಸಹಳ್ಳಿ ಗ್ರಾಮದಲ್ಲಿ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು; ಉಪ ಚುನಾವಣೆ ಸಮಯದಲ್ಲಿ ರಾಜ್ಯ ಕಾಂಗ್ರೆಸ್ ಸರಕಾರ ಭಾರೀ ಉಮೇದಿನಿಂದ ನಮ್ಮ ವಿರುದ್ಧ ದ್ವೇಷ ಸಾಧನೆ ಮಾಡುತ್ತಿದೆ. ಇದಕ್ಕೆ ನ್ಯಾಯಾಲಯದ ಮೂಲಕವೇ ಉತ್ತರ ಕೊಡುತ್ತೇನೆ ಎಂದರು.

ಎಫ್ ಐಆರ್ ಪ್ರತಿಯನ್ನು ಓದಿದೆ. ಅದರಲ್ಲಿರುವ ದೂರಿನ ಸಾರಾಂಶವನ್ನೂ ಓದಿದೆ. ಅದು ಸಂಪೂರ್ಣ ಹಾಸ್ಯಾಸ್ಪದ ಹಾಗೂ ದುರದ್ದೇಶಪೂರಿತ ಎನ್ನುವುದು ನನಗೆ ಅರ್ಥವಾಯಿತು. ಅಲ್ಲಿ ದೂರುದಾರರೇ ಹೇಳಿಕೊಂಡಿದ್ದಾರೆ, ಕುಮಾರಸ್ವಾಮಿ ಅವರು ಮಾಧ್ಯಮಗೋಷ್ಠಿ ಮಾಡಿ ನನ್ನ ವಿರುದ್ಧ ಆರೋಪ ಮಾಡಿದರು. ಅದಕ್ಕೆ ಕ್ರಮ ಕೈಗೊಳ್ಳಿ ಎಂದು ಕೇಳಿದ್ದಾರೆ. ನಾನು ಅವರ ಬಗ್ಗೆ ತಪ್ಪು ಮಾಹಿತಿ ನೀಡಿದೇನೆ ಎಂದು ಹೇಳಿಕೊಂಡಿದ್ದಾರೆ? ಬೇಕಾದರೆ ನನ್ನ ಮಾಧ್ಯಮಗೋಷ್ಠಿಯ ವಿಡಿಯೋ ನೋಡಿಕೊಳ್ಳಲಿ ಎಂದು ಕೇಂದ್ರ ಸಚಿವರು ಹೇಳಿದರು.

ನಾನು ಪ್ರೆಸ್ ಮೀಟ್ ಮಾಡಿದೆ ಎಂದು ಎಫ್ಐಆರ್ ಮಾಡಿಸಿದ್ದಾರೆ. ಹೇಳಿಕೆ ನೀಡಿದರು ಎಂದು ಚನ್ನಪಟ್ಟಣದ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರ ಮೇಲೆಯೂ ಎಫ್ಐಆರ್ ಮಾಡಿಸಿದ್ದಾರೆ. ಮುಖ್ಯ ಕಾರ್ಯದರ್ಶಿಗೆ ದೂರು ಕೊಟ್ಟರು ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸುರೇಶ್ ಬಾಬು ಅವರ ಮೇಲೆಯೂ ಎಫ್ಐಆರ್ ಮಾಡಿಸಿದ್ದಾರೆ. ಹಾಗಾದರೆ, ಯಾರೂ ಯಾರ ವಿರುದ್ಧವೂ ಮಾತನಾಡಬಾರದು, ದೂರು ನೀಡಬಾರದು ಎಂದು ಕಾನೂನಿನಲ್ಲಿ ಇದೆಯೇ? ನಮ್ಮ ಬಾಯಿ ಮುಚ್ಚಿಸಲು ಇವರಿಂದ ಸಾಧ್ಯವಿಲ್ಲ ಎಂದು ಕೇಂದ್ರ ಸಚಿವ ಹೆಚ್‌ ಡಿ ಕುಮಾರಸ್ವಾಮಿ ಅವರು ಕಿಡಿಕಾರಿದರು.

ಇದೊಂದು ಷಡ್ಯಂತ್ರ ಹಾಗೂ ಕುತಂತ್ರದ ಭಾಗ. ಯಾವಾಗ ಚನ್ನಪಟ್ಟಣದಲ್ಲಿ ಇವರ ಮೋಸ ಕುತಂತ್ರ ನಡೆಯಲ್ಲ ಎಂದು ಗೊತ್ತಾಯಿತೋ ಹೊಸ ಕುತಂತ್ರಕ್ಕೆ ಮುಂದಾಗಿದ್ದಾರೆ. ನಮಗೆ ಬಾಬಾ ಸಾಹೇಬ ಅಂಬೇಡ್ಕರ್ ಅವರ ಸಂವಿಧಾನ ಕಾನೂನಿನ ಮೇಲೆ ಗೌರವ ಇದೆ. ನನ್ನ ಚನ್ನಪಟ್ಟಣದ ಜನರ ಮೇಲೆ ವಿಶ್ವಾಸ ಇದೆ. ಹೀಗಿರುವಾಗ ಇಂತಹ ನೂರು ಎಫ್ ಐಆರ್ ಗಳು ದಾಖಲಾದರೂ ನಾವು ಧೃತಿಗೆಡಲ್ಲ ಎಂದು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+