ವಿಪಕ್ಷ ನಾಯಕರ ಮೇಲೆ ಎಫ್ಐಆರ್ ಹಾಕಿರುವುದು ಹೇಡಿತನದ ಪರಮಾವಧಿ-ಆರ್.ಅಶೋಕ್
ಬೆಂಗಳೂರು, ಸೆಪ್ಟೆಂಬರ್ 19: ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ಗಣೇಶ ವಿಸರ್ಜನೆ ವೇಳೆ ನಡೆದ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಪಕ್ಷ ನಾಯಕ ಆರ್.ಅಶೋಕ್ ಹಾಗೂ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ವಿರುದ್ಧ ಎಫ್ಐಆರ್ ದಾಖಲಾಗಿದೆ. ಈ ಘಟನೆಗೆ ಸಂಬಂಧಿಸಿದ ವಿಡಿಯೋ, ಫೋಟೋ ಪೋಸ್ಟ್ ಮಾಡುವ ಮೂಲಕ ಪ್ರಚೋದನೆ ನೀಡಿರುವ ಆರೋಪದ ಮೇಲೆ ಎಫ್ಐಆರ್ ದಾಖಲಾಗಿದೆ.
ತಮ್ಮ ವಿರುದ್ಧ ದಾಖಲಾದ ಎಫ್ಐಆರ್ ಬಗ್ಗೆ ವಿಪಕ್ಷ ನಾಯಕ ಆರ್.ಅಶೋಕ್ ಪ್ರತಿಕ್ರಿಯಿಸಿದ್ದು, ಸರ್ಕಾರ ನನ್ನ ಮೇಲೆ ಎಫ್ಐಆರ್ ಹಾಕಿರುವುದು ಹೇಡಿತನದ ಲಕ್ಷಣ ಎಂದು ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ನೇರವಾಗಿ ಕಿಡಿಕಾರಿದ್ದಾರೆ.

ಈ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿರುವ ಆರ್.ಅಶೋಕ್, ಕೈಲಾಗದವನು ಮೈಪರಚಿಕೊಂಡ ಎಂಬಂತೆ ನಾಗಮಂಗಲದಲ್ಲಿ ಗಣೇಶ ವಿಸರ್ಜನೆ ವೇಳೆ ನಡೆದ ಕೋಮುದಳ್ಳುರಿಗೆ ಕಾರಣರಾದ ಮತಾಂಧರನ್ನು ಪತ್ತೆ ಹಚ್ಚಿ ಅವರ ಹೆಡೆಮುರಿ ಕಟ್ಟಬೇಕಾದ ಗೃಹ ಸಚಿವ ಜಿ.ಪರಮೇಶ್ವರ್ ಅವರು ವಿಪಕ್ಷ ನಾಯಕರ ಮೇಲೆ ಎಫ್ಐಆರ್ ಹಾಕಿರುವುದು ಹೇಡಿತನದ ಪರಮಾವಧಿ ಎಂದರು.
ಅಸಮರ್ಥ ಗೃಹ ಸಚಿವ ಪರಮೇಶ್ವರ್ ಅವರೇ, ಕಳೆದ ಬುಧವಾರ ರಾತ್ರಿ ಬೆಂಗಳೂರಿನಿಂದ ಕೇವಲ 130 ಕಿಮೀ ದೂರದಲ್ಲಿರುವ ನಾಗಮಂಗಲದಲ್ಲಿ ರಾಜ್ಯವೇ ಬೆಚ್ಚಿಬೀಳುವಂತಹ ಘಟನೆ ನಡೆದು ಒಂದು ವಾರ ಕಳೆದಿದ್ದರೂ ಈವರೆಗೂ ತಾವು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುವ ಕೆಲಸ ಮಾಡಿಲ್ಲ. ಘಟನಾ ಸ್ಥಳಕ್ಕೆ ಹೋಗಿ ಅಲ್ಲಿ ಆಸ್ತಿ-ಪಾಸ್ತಿ ಕಳೆದುಕೊಂಡು, ಭಯಭೀತರಾಗಿರುವ ಸ್ಥಳೀಯರ ಅಳಲು, ದುಮ್ಮಾನ, ಆತಂಕ, ಆಕ್ರೋಶ ಕೇಳಿದ್ದಿದ್ದರೆ ತಮಗೆ ಪರಿಸ್ಥಿತಿಯ ಗಂಭೀರತೆ ಅರ್ಥವಾಗುತ್ತಿತ್ತು. ಆದರೆ ತಮಗೆ ಕರ್ತವ್ಯ ಪ್ರಜ್ಞೆಯೇ ಇಲ್ಲ.
ನನ್ನ ಮೇಲೆ ಎಫ್ಐಆರ್ ಹಾಕಿ ಏನು ಸಾಧಿಸಲು ಹೊರಟಿದ್ದೀರಿ? ನಾನು ಘಟನಾ ಸ್ಥಳಕ್ಕೆ ಭೇಟಿ ನೀಡಿದಾಗ ಸ್ಥಳೀಯರು, ಪ್ರತ್ಯಕ್ಷದರ್ಶಿಗಳು, ಪತ್ರಕರ್ತರು ವ್ಯಕ್ತಪಡಿಸಿರುವ ಅನುಮಾನವನ್ನು ನನ್ನ ಎಕ್ಸ್ ಖಾತೆ ಪೋಸ್ಟ್ ಮೂಲಕ ಸರ್ಕಾರದ ಗಮನಕ್ಕೆ ತರುವ ಪ್ರಯತ್ನ ಮಾಡಿದ್ದೇನೆಯೇ ಹೊರತು, ಯಾವುದೇ ಸುಳ್ಳು ಮಾಹಿತಿ ಹಂಚಿಕೊಂಡಿಲ್ಲ.

ಇಷ್ಟಕ್ಕೂ ಎಫ್ಐಆರ್ ಹಾಕಿರುವ ಪೊಲೀಸರು ನನ್ನ ಪೋಸ್ಟ್ ನಲ್ಲಿರುವ ಮಾಹಿತಿಯನ್ನ ಪೂರ್ತಿಯಾಗಿ ಓದಿದ್ದಾರೋ ಇಲ್ಲವೋ ಅಥವಾ ಅವರಿಗೆ ಕನ್ನಡ ಸರಿಯಾಗಿ ಬರುತ್ತೋ ಇಲ್ಲವೋ ಅರ್ಥವಾಗುತ್ತಿಲ್ಲ. ನಾನು ಹಂಚಿಕೊಂಡಿರುವ ದೃಶ್ಯಾವಳಿಗಳು ಚಿಕ್ಕಮಗಳೂರಿನಲ್ಲಿ ಮತಾಂಧರು ಪ್ಯಾಲೆಸ್ಟೈನ್ ಧ್ವಜ ಹಿಡಿದು ಮಾಡಿದ ಪುಂಡಾಟಿಕೆ, ದಾವಣಗೆರೆಯಲ್ಲಿ ಕೇಸರಿ ಧ್ವಜ ಹಾರಿಸಿದ ಹಿಂದೂಗಳ ಮೇಲೆ ಮತಾಂಧರು ಹಲ್ಲೆ ಮಾಡಿರುವ ಘಟನೆಗಳದ್ದು. ನನ್ನ ಪೋಸ್ಟ್ ನಲ್ಲಿ ನಾನು ಉಲ್ಲೇಖ ಮಾಡಿರುವುದೂ ಅದನ್ನೇ.
ರಾಜ್ಯದ ಅನೇಕ ಕಡೆಗಳಲ್ಲಿ ಗಣೇಶೋತ್ಸವವನ್ನೇ ಗುರಿಯಾಗಿಟ್ಟುಕೊಂಡು ನಡೆದಿರುವ ಇಂತಹ ಪ್ರಚೋದನಕಾರಿ ಘಟನೆಗಳ ಹಿಂದೆ ಮತೀಯ ಮೂಲಭೂತವಾದಿ ಸಂಘಟನೆಗಳ ಕೈವಾಡ ಇರಬಹುದು ಎಂದು ಜವಾಬ್ದಾರಿಯುತ ಪ್ರತಿಪಕ್ಷ ನಾಯಕನಾಗಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದೇನೆಯೇ ಹೊರತು ನಾನು ಯಾವುದೇ ಸುಳ್ಳು ಮಾಹಿತಿ ಹಂಚಿಕೊಂಡಿಲ್ಲ ಎಂದು ಆರ್. ಆಶೋಕ್ ಸ್ಪಷ್ಟಪಡಿಸಿದರು.
ನಾಗಮಂಗಲದಲ್ಲಿ ಪೆಟ್ರೋಲ್ ಬಾಂಬ್ ಹಾಕಿರುವ ದೃಶ್ಯಗಳು, ಕಲ್ಲು ಎಸೆದಿರುವ ದೃಶ್ಯಗಳು, ವಾಹನ, ಅಂಗಡಿಗಳನ್ನ ಧ್ವಂಸ ಮಾಡಿದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ, ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದರೂ ಇದೊಂದು 'ಸಣ್ಣ' ಘಟನೆ, 'ಆಕಸ್ಮಿಕ' ಘಟನೆ ಎಂದು ಜನರಿಗೆ ಸುಳ್ಳು ಮಾಹಿತಿ ನೀಡಿದ್ದಕ್ಕೆ ಅಸಲಿಗೆ ಗೃಹ ಸಚಿವ ಪರಮೇಶ್ವರ್ ಅವರ ಮೇಲೆ ಮೊದಲು ಎಫ್‌ಐಆರ್ ದಾಖಲಿಸಬೇಕು. ಸಚಿವರಿಗೆ ತಪ್ಪು ಮಾಹಿತಿ ನೀಡಿದ ಪೊಲೀಸರ ಮೇಲೆ ಎಫ್ಐಆರ್ ಹಾಕಬೇಕು ಎಂದು ಹೇಳಿದರು.
ಕೋಮುಗಲಭೆಗಳ್ನು ತಡೆಯಲಾಗದ ನಾಲಾಯಕ್ ಸರ್ಕಾರ, ಮತಾಂಧರ ಹೆಡೆಮುರಿ ಕಟ್ಟಲಾಗದ ನಿಸ್ತೇಜ ಸರ್ಕಾರ ನನ್ನ ಮೇಲೆ ಎಫ್ಐಆರ್ ಹಾಕಿರುವುದು ಹೇಡಿತನದ ಲಕ್ಷಣ. ನಮ್ಮ ದೇಶ, ಧರ್ಮದ ರಕ್ಷಣೆ ವಿಚಾರದಲ್ಲಿ, ಹಿಂದೂಗಳ ರಕ್ಷಣೆ ವಿಚಾರದಲ್ಲಿ, ಹಿಂದೂಗಳ ಹಬ್ಬ, ಉತ್ಸವಗಳ ವಿಚಾರದಲ್ಲಿ ರಾಜಿ ಆಗುವ ಪ್ರಶ್ನೆಯೇ ಇಲ್ಲ. ತುರ್ತು ಪರಿಸ್ಥಿತಿ ಸಂದರ್ಭದಲ್ಲಿ, ರಾಮ ಜನ್ಮಭೂಮಿ ಹೋರಾಟದ ಸಂದರ್ಭದಲ್ಲಿ ದೇಶಕ್ಕಾಗಿ ಧರ್ಮಕ್ಕಾಗಿ ಜೈಲು ವಾಸ ಅನುಭವಿಸಿದವನು ನಾನು. ಇಂತಹ ಒಂದಲ್ಲ ನೂರು ಎಫ್ಐಆರ್ ಹಾಕಿದರೂ ನನ್ನ ದನಿ ಅಡಗಿಸಲು ಸಾಧ್ಯವಿಲ್ಲ. ನಿಮ್ಮ ಗೊಡ್ಡು ಬೆದರಿಕೆಗಳಿಗೆ ಹೆದರುವುದಿಲ್ಲ ಎಂದು ಕಾಂಗ್ರೆಸ್ ಸರ್ಕಾರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
-
'ಗ್ಯಾರಂಟಿ ಸಮಿತಿ' ಸಿಬ್ಬಂದಿ ಮಾಸಿಕ ವೇತನ ಸರ್ಕಾರದ ಮುಖ್ಯ ಕಾರ್ಯದರ್ಶಿಗಿಂತಲೂ ಹೆಚ್ಚು! ವರ್ಷಕ್ಕೆ ಕೋಟಿ ಕೋಟಿ.. -
ಸದನದಲ್ಲಿ ಬಜೆಟ್ ಚರ್ಚೆ: ಸಿಎಂ ಸಿದ್ದರಾಮಯ್ಯ ವಿರುದ್ಧ ಆರೋಪ -
IPL Tickets: ನಾವು ವಿಐಪಿಗಳು; 5 ಫ್ರೀ ಟಿಕೆಟ್ ಕೊಡಲಿ: ಕಾಂಗ್ರೆಸ್ ಶಾಸಕ ವಿಜಯಾನಂದ ಕಾಶಪ್ಪನವರ್ -
ಬೆಂಗಳೂರು ಬಂಗಲೆ ವಿವಾದ: ರಾಜೀವ್ ಚಂದ್ರಶೇಖರ್ ನಾಮಪತ್ರ ಅಂಗೀಕರಿಸಿದ ಚುನಾವಣಾ ಆಯೋಗ -
"5 ತಿಂಗಳಾದ್ರೂ ಸಿಗದ ದಸರಾ ಲೆಕ್ಕ: ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಭ್ರಷ್ಟಾಚಾರದ ಆರೋಪ'' -
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ












Click it and Unblock the Notifications