ಮುಖ್ಯಕಾರ್ಯದರ್ಶಿ ಶಾಲಿನಿ ರಜನೀಶ್ ಬಗ್ಗೆ ಕೆಟ್ಟ ಪದ ಬಳಕೆ: ಬಿಜೆಪಿ ಎಂಎಲ್‌ಸಿ ಎನ್.ರವಿಕುಮಾರ್ ಮೇಲೆ ಎಫ್‌ಐಆರ್
ಕರ್ನಾಟಕ ಸರ್ಕಾರದ ಮುಖ್ಯಕಾರ್ಯದರ್ಶಿ ಶಾಲಿನಿ ರಜನೀಶ್ ಅವರ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಾರೆ ಎನ್ನುವ ಆರೋಪದ ಮೇಲೆ ವಿಧಾನಪರಿಷತ್ ವಿರೋಧ ಪಕ್ಷದ ಮುಖ್ಯ ಸಚೇತಕ ಎನ್.ರವಿಕುಮಾರ್ ಅವರ ವಿರುದ್ಧ ಬೆಂಗಳೂರಿನ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಗುರುವಾರ ಎಫ್‌ಐಆರ್ ದಾಖಲಾಸಿಕೊಳ್ಳಲಾಗಿದೆ. ಇನ್ನು ಈ ಸಂಬಂಧ ಐಎಎಸ್ ಅಧಿಕಾರಿಗಳ ಸಂಘ ಸಹ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರವನ್ನು ಬರೆದಿದೆ. ಬಿಜೆಪಿ ನಾಯಕನ ಹೇಳಿಕೆಗೆ ಸಾರ್ವಜನಿಕ ವಲಯದಲ್ಲೂ ಟೀಕೆ ವ್ಯಕ್ತವಾಗಿದೆ.
ಬೆಂಗಳೂರಿನ ಜೆ.ಪಿ.ನಗರದ ನಂದಾದೀಪಾ ಮಹಿಳಾ ಸಂಘದ ಅಧ್ಯಕ್ಷೆ ನಗರತ್ನಾ ಎನ್ನುವವರು ನೀಡಿದ ದೂರಿನ ಆಧಾರದ ಮೇಲೆ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ. ಈ ಪ್ರಕರಣದ ಸಂಬಂಧ ಎನ್.ರವಿಕುಮಾರ್ ಅವರಿಗೆ ನೋಟಿಸ್ ಜಾರಿ ವಿಚಾರಣೆ ನಡೆಸಿ, ಈ ಹೇಳಿಕೆ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಹೇಳಿದ್ದಾರೆ. ಕಾಂಗ್ರೆಸ್ ಈ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದೆ.

ಬಿಜೆಪಿಯಿಂದ ಜುಲೈ 1ರಂದು ವಿಧಾನಸೌಧ ಮುಂಭಾಗದಲ್ಲಿ ಮಹಾತ್ಮ ಗಾಂಧಿ ಅವರ ಪ್ರತಿಮೆಯ ಬಳಿ ಪ್ರತಿಭಟನೆ ನಡೆಸಿತ್ತು. ಪ್ರತಿಭಟನೆಯ ವೇಳೆ ರವಿಕುಮಾರ್ ಅವರು ಶಾಲಿನಿ ರಜನೀಶ್ ಅವರ ಬಗ್ಗೆ ಕೆಟ್ಟ ಪದ ಬಳಸಿದ್ದರು. ಈ ರೀತಿ ಮಾತನಾಡುವ ಮೂಲಕ ಮುಖ್ಯಕಾರ್ಯದರ್ಶಿ ಹುದ್ದೆಗೆ ಅಗೌರವ ತರಲಾಗಿದೆ. ಶಾಲಿನಿ ಅವರ ಗೌರವಕ್ಕೆ ಕುಂದುಉಂಟು ಮಾಡಲಾಗಿದ್ದು. ಇಡೀ ಮಹಿಳಾ ಕುಲಕ್ಕೆ ಅಗೌರವ ತೋರಿಸಲಾಗಿದೆ. ರವಿಕುಮಾರ್ ಅವರ ಮಾತು ಲೈಂಗಿಕ ಅರ್ಥ ಬರುವಂತಹ ಮಾತಾಗಿದೆ. ಈ ರೀತಿಯ ಹೇಳಿಕೆಯು ಮುಖ್ಯಕಾರ್ಯದರ್ಶಿಯವರ ಖ್ಯಾತಿಗೆ ಹಾನಿ ತರುತ್ತದೆ ಎಂದು ಹೇಳಲಾಗಿದೆ. ಈ ರೀತಿ ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.
ಬಿಜೆಪಿ ಎಂಎಲ್‌ಸಿ ಎನ್.ರವಿಕುಮಾರ್ ಹೇಳಿದ್ದೇನು ?
ಪ್ರತಿಭಟನೆಯಲ್ಲಿ ಮಾತನಾಡುವಾಗ ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿ ಶಾಲಿನಿ ರಜನೀಶ್ ಅವರು ರಾತ್ರಿಯಿಡೀ ಸರ್ಕಾರಕ್ಕೆ, ಇಡೀ ದಿನ ಮುಖ್ಯಮಂತ್ರಿಗಾಗಿ ಕೆಲಸ ಮಾಡುತ್ತಾರೆ ಎಂದು ರವಿಕುಮಾರ್ ಅವರು ಹೇಳಿದ್ದಾರೆ ಎಂದು ವರದಿ ಆಗಿದೆ. ನಾನು ಆ ರೀತಿ ಹೇಳಿಕೆಯನ್ನೇ ನೀಡಿಲ್ಲ. ಆ ರೀತಿ ಮಾತನಾಡಿದ್ದರೆ ನೇಣುಹಾಕಿಕೊಳ್ಳುತ್ತೇನೆ ಎಂದು ರವಿಕುಮಾರ್ ಅವರು ಹೇಳಿದ್ದಾರೆ. ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಎಫ್‌ಐಆರ್ ದಾಖಲಾಗಿದ್ದು ರವಿ ಕುಮಾರ್ ಅವರ ಬಂಧನವಾಗುವ ಸಾಧ್ಯತೆಯೂ ಇದೆ ಎಂದು ಹೇಳಲಾಗಿದೆ.
ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಕೆ: ಇನ್ನು ಈ ಹೇಳಿಕೆಗೆ ಐಎಎಸ್ ಅಧಿಕಾರಿಗಳ ಸಂಘ ಸಹ ಆಕ್ಷೇಪ ವ್ಯಕ್ತಪಡಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿರುವ ಐಎಎಸ್ ಅಧಿಕಾರಿಗಳು ಈ ಹೇಳಿಕೆಗೆ ಖಂಡನೆ ವ್ಯಕ್ತಪಡಿಸಿದ್ದು. ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.












Click it and Unblock the Notifications