Film City ಮೈಸೂರಿಗೆ ಗುಡ್‌ನ್ಯೂಸ್; ಫಿಲ್ಮ್ ಸಿಟಿ ನಿರ್ಮಾಣದ ಬಿಗ್ ಅಪ್ಡೇಟ್ಸ್
ಕನ್ನಡ ಚಿತ್ರರಂಗದ ಬಹುದಿನಗಳ ಕನಸು ಇದೀಗ ನನಸಾಗುತ್ತಿದೆ. ಕನ್ನಡ ಚಿತ್ರರಂಗಕ್ಕೆ ಫಿಲ್ಮ್ ಸಿಟಿ ಬೇಕು ಎನ್ನುವುದು ದಶಕಗಳ ಕನಸು. ಮೈಸೂರಿನಲ್ಲಿ ಫಿಲ್ಮ್ ಸಿಟಿ ಪ್ರಾರಂಭವಾಗಲಿದೆ ಎಂದು ಹೇಳಲಾಗಿತ್ತಾದರೂ, ಅದು ಕಾರ್ಯರೂಪಕ್ಕೆ ಬಂದಿರಲಿಲ್ಲ. ಇದೀಗ ಕನ್ನಡ ಚಿತ್ರರಂಗದ ಚಿತ್ರೀರಕಣ ಉದ್ದೇಶದಿಂದ ನಿರ್ಮಾಣವಾಗುತ್ತಿರುವ ಫಿಲ್ಮ್ ಸಿಟಿಯ ಜಾಗಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವೇ ಮಧ್ಯಪ್ರವೇಶಿಸಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರಿಗಳಿಗೆ ಮಹತ್ವದ ಸೂಚನೆ ನೀಡಿದ್ದಾರೆ.
ಹಿಂದಿ ಹಾಗೂ ತೆಲುಗು ಚಿತ್ರರಂಗಗಳಿಗೆ ಇರುವ ಮಾದರಿಯಲ್ಲೇ ಕನ್ನಡ ಚಿತ್ರರಂಗಕ್ಕೂ ಫಿಲ್ಮ್ ಸಿಟಿ ನಿರ್ಮಾಣವಾಗಬೇಕು ಎನ್ನುವುದು ಕನ್ನಡ ಚಿತ್ರರಂಗದ ಬಹುದಿನಗಳ ಕನಸು.ಆದರೆ, ಈ ವಿಷಯ ಚರ್ಚೆಯ ಮುನ್ನೆಲೆಗೆ ಬಂದಷ್ಟು ಮತ್ತೆ ಹಿನ್ನಡೆ ಅನುಭವಿಸಿದ್ದೇ ಹೆಚ್ಚು. ಇದೀಗ ಫಿಲ್ಮ್ ಸಿಟಿಗೆ ಜಾಗ ನಿಗದಿಯಾಗಿದೆ. ಫಿಲ್ಮ್ ಸಿಟಿ ನಿರ್ಮಾಣಕ್ಕಾಗಿ ಮೈಸೂರು ಜಿಲ್ಲೆಯ ನಂಜನಗೂಡು ತಾಲ್ಲೂಕಿನ ಇಮ್ಮಾವು ಗ್ರಾಮದಲ್ಲಿ ಫಿಲ್ಮ್ ಸಿಟಿಗಾಗಿ 110 ಎಕರೆಯನ್ನು ಮೀಸಲಿರಿಸಲಾಗಿದೆ. ಉದ್ದೇಶಿತ ಯೋಜನೆಯ ಅನುಷ್ಠಾನಕ್ಕಾಗಿ ಅವಶ್ಯವಿರುವ ಭೂಮಿಯನ್ನು ಕರ್ನಾಟಕ ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿ ಮಂಡಳಿಯಿಂದ ವಾರ್ತಾ ಇಲಾಖೆಗೆ ವರ್ಗಾಯಿಸುವಂತೆ ನಿರ್ದೇಶನ ನೀಡಿದ್ದಾರೆ. ಅಲ್ಲದೇ ಇದೇ ಸಂದರ್ಭದಲ್ಲಿ ಫಿಲ್ಮ್ ಸಿಟಿ ನಿರ್ಮಾಣದ ಎರಡನೇ ಹಂತದ ಯೋಜನೆಗೆ ಸಂಬಂಧಿಸಿದಂತೆ 50 ಎಕರೆ ಜಾಗ ಗುರುತಿಸುವಂತೆಯೂ ಅಧಿಕಾರಿಗಳಿಗೆ ಸಿ.ಎಂ ನಿರ್ದೇಶನ ನೀಡಿದರು.

ಫಿಲ್ಮ್ ಸಿಟಿ ನಿರ್ಮಾಣದ ಪ್ರಗತಿ ಹಾಗೂ ಮುಂದಿನ ಹಂತದ ಅಭಿವೃದ್ಧಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಸದಸ್ಯರು,ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧಿಕಾರಿಗಳು, ನಟ ಹಾಗೂ ನಟಿಯರೊಂದಿಗೆ ಸಭೆ ನಡೆಸಿದರು. ಈ ಸಂದರ್ಭದಲ್ಲಿ ಫಿಲ್ಮ್ ಸಿಟಿ ನಿರ್ಮಾಣದ ರೂಪುರೇಷಗಳ ಬಗ್ಗೆ ಸುದೀರ್ಘ ಚರ್ಚೆ ನಡೆದಿದೆ.
ಏನಿದು ಫಿಲ್ಮ್ ಸಿಟಿ ಯೋಜನೆ ?
ಕನ್ನಡ ಚಿತ್ರಗಳ ಚಿತ್ರೀಕರಣವನ್ನು ಅದ್ಧೂರಿ ಸೆಟ್‌ಗಳನ್ನು ನಿರ್ಮಾಣ ಮಾಡುವುದು ಹಾಗೂ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವುದು ಸೇರಿದಂತೆ ಹಲವು ಪ್ರಮುಖ ಅಂಶಗಳು ಉದ್ದೇಶಿತ ಕರ್ನಾಟಕ ಫಿಲ್ಮ್ ಸಿಟಿ ನಿರ್ಮಾಣ ಯೋಜನೆಯಲ್ಲಿ ಇವೆ. ಇನ್ನು ಕರ್ನಾಟಕದಲ್ಲಿ ಯೋಜನೆ ಫಿಲ್ಮ್ ಸಿಟಿಯಾಗಿದೆ. ಇನ್ನು ಕರ್ನಾಟಕದಲ್ಲಿ 2015-16ನೇ ಸಾಲಿನಲ್ಲೇ ಫಿಲ್ಮ್ ಸಿಟಿ ನಿರ್ಮಾಣದ ಬಗ್ಗೆ ಪ್ರಸ್ತಾವನೆ ಮಾಡಲಾಗಿತ್ತು. ಕರ್ನಾಟಕದಲ್ಲಿ ಚಲನಚಿತ್ರ ಪ್ರವಾಸೋದ್ಯಮವನ್ನು ಸೃಷ್ಟಿಸುವುದು ಹಾಗೂ ಉದ್ಯೋಗಾವಕಾಶ ಹೆಚ್ಚಳ ಮಾಡುವುದು ಸಹ ಈ ಯೋಜನೆಯ ಉದ್ದೇಶಗಳಲ್ಲಿ ಪ್ರಮುಖವಾಗಿವೆ. ಫಿಲ್ಮ್ ಸಿಟಿಯಲ್ಲಿ ಚಿತ್ರಮಂದಿರ, ಸ್ಟುಡಿಯೋ, ಮಲ್ಟಿಪ್ಲೆಕ್ಸ್, ಥೀಮ್ ಪಾರ್ಕ್ ಹಾಗೂ ಹೋಟೆಲ್‌ಗಳ ನಿರ್ಮಾಣ ಆಗಲಿದೆ. ಈ ಯೋಜನೆಯನ್ನು ಸಾರ್ವಜನಿಕ-ಖಾಸಗಿ ಸಹಭಾಗಿತ್ವ (ಪಿಪಿಪಿ) ಮಾದರಿಯಲ್ಲಿ ಅಭಿವೃದ್ಧಿಪಡಿಸಲಾಗುತ್ತಿದ್ದು, ಮೊದಲು 110 ಎಕರೆ ಇದಕ್ಕಾಗಿ ಮೀಸಲಿರಿಸಲಾಗಿತ್ತು. ಇದೀಗ ಹೆಚ್ಚುವರಿಯಾಗಿ 50 ಎಕರೆಯನ್ನು ನೀಡಲು ನಿರ್ಧರಿಸಲಾಗಿದೆ.

ಸ್ಥಳ ನಿಗದಿ ಗೊಂದಲದಿಂದ ಹಿನ್ನಡೆ
ಫಿಲ್ಮ್ ಸಿಟಿ ನಿರ್ಮಾಣವಾಗಬೇಕು ಎನ್ನುವುದು ಕನ್ನಡ ಚಿತ್ರರಂಗದ ಹಲವು ದಶಕಗಳ ಕನಸು. ಫಿಲ್ಮ್ ಸಿಟಿ ನಿರ್ಮಾಣ ಮಾಡುವುದಕ್ಕೆ ಸರ್ಕಾರವೇ ಮುಂದೆ ಬಂದಿದ್ದರೂ, ಅದರ ಜಾಗದ ಗೊಂದಲ ಮುಂದುವರಿದಿತ್ತು. ಮೊದಲು ಮೈಸೂರಿನಲ್ಲಿ ಫಿಲ್ಮ್ ಸಿಟಿ ನಿರ್ಮಾಣ ಆಗಲಿದೆ ಎನ್ನುವ ಸಂದರ್ಭದಲ್ಲಿಯೇ ಪರ - ವಿರೋಧ ಚರ್ಚೆಗಳು ನಡೆದಿದ್ದವು. ಚಿತ್ರನಗರಿಯನ್ನು ಬೆಂಗಳೂರಿನಲ್ಲಿ, ಮೈಸೂರಿನಲ್ಲಿ ಇಲ್ಲವೇ ರಾಮನಗರದಲ್ಲಿ ನಿರ್ಮಾಣ ಮಾಡಬೇಕು ಎನ್ನುವ ವಿಚಾರ ಗೊಂದಲದ ಗೂಡಾಗಿತ್ತು. ಈಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದ ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ ಹಾಗೂ ನಿರ್ಮಾಪಕ ರಾಜೇಂದ್ರ ಸಿಂಗ್ ಬಾಬು ಅವರು ಶೀಘ್ರ ಫಿಲ್ಮ್ ಸಿಟಿ ನಿರ್ಮಾಣಕ್ಕೆ ಅನುವು ಮಾಡಿಕೊಂಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ್ದರು. ಅದರ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಭೆ ಕರೆದು ಮಹತ್ವದ ನಿರ್ಣಯ ತೆಗೆದುಕೊಂಡಿದ್ದಾರೆ.












Click it and Unblock the Notifications