ಉಪ ಲೋಕಾಯುಕ್ತ-2 ಹುದ್ದೆ ಭರ್ತಿ; ಸರ್ಕಾರಕ್ಕೆ ನೋಟಿಸ್
ಕರ್ನಾಟಕ ಹೈಕೋರ್ಟ್ ಉಪ ಲೋಕಾಯುಕ್ತ-2 ಹುದ್ದೆ ಭರ್ತಿ ವಿಚಾರದಲ್ಲಿ ಕರ್ನಾಟಕ ಹೈಕೋರ್ಟ್‌ಗೆ ನೋಟಿಸ್ ಜಾರಿಗೊಳಿಸಿದೆ.
ಬೆಂಗಳೂರು, ಫೆಬ್ರವರಿ 24; ರಾಜ್ಯದಲ್ಲಿ ಕಳೆದ 8 ತಿಂಗಳಿಂದ ಎರಡನೇ ಉಪ ಲೋಕಾಯುಕ್ತ ಹುದ್ದೆ ಖಾಲಿ ಇದ್ದರೂ ಸರ್ಕಾರ ಅದನ್ನು ಭರ್ತಿ ಮಾಡುವುದಕ್ಕೆ ಯಾವುದೇ ಕ್ರಮ ಕೈಗೊಂಡಿಲ್ಲ. ಈ ಬಗ್ಗೆ ಹಲವು ಸಂಘಟನೆಗಳು ಮನವಿ ಸಲ್ಲಿಸಿದ್ದರೂ ಸಹ ಸರ್ಕಾರ ಸದ್ಯ ಚುನಾವಣೆಯ ಗುಂಗಿನಲ್ಲಿರುವುದರಿಂದ ಆತ್ತ ಚಿತ್ತ ಹರಿಸಿಲ್ಲ.
ಈಗ ಉಪ ಲೋಕಾಯುಕ್ತ ಹುದ್ದೆ-2 ಭರ್ತಿ ವಿಚಾರ ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿದೆ. ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್ ಉಪ ಲೋಕಾಯುಕ್ತ-2 ಹುದ್ದೆಯನ್ನು ಭರ್ತಿ ಮಾಡುವ ವಿಚಾರ ಸಂಬಂಧ ಕರ್ನಾಟಕ ಸರ್ಕಾರಕ್ಕೆ ನೋಟಿಸ್ ನೀಡಿದೆ.

ಸಮಾಜ ಪರಿವರ್ತನಾ ಸಮುದಾಯದ ಸಂಸ್ಥಾಪಕ ಎಸ್. ಆರ್. ಹಿರೇಮಠ, ಎರಡನೇ ಉಪ ಲೋಕಾಯುಕ್ತ ಹುದ್ದೆ ಭರ್ತಿ ಮಾಡಲು ಕರ್ನಾಟಕ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಕೋರಿ ಹೈಕೋರ್ಟ್ ಮೊರೆ ಹೋಗಿದ್ದಾರೆ. ಈ ಸಾರ್ವಜನಿಕ ಹಿತಾಸಕ್ತಿ ಅರ್ಜಿಯು ಮುಖ್ಯ ನ್ಯಾಯಮೂರ್ತಿ ಪಿ. ಬಿ. ವರಳೆ ನೇತೃತ್ವದ ವಿಭಾಗೀಯ ಪೀಠದ ಮುಂದೆ ವಿಚಾರಣೆಗೆ ಬಂದಿತ್ತು.
ಅರ್ಜಿ ಕುರಿತು ಕೆಲ ಕಾಲ ವಾದ ಆಲಿಸಿದ ನಂತರ ನ್ಯಾಯಪೀಠ, ಪ್ರತಿವಾದಿಯಾಗಿರುವ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ನೋಟಿಸ್ ನೀಡಿತು. ಅರ್ಜಿಗೆ ಉತ್ತರಿಸುವಂತೆ ನಿರ್ದೇಶಿಸಿ ವಿಚಾರಣೆ ಮುಂದೂಡಿತು. ಎರಡನೇ ಉಪ ಲೋಕಾಯುಕ್ತ ಹುದ್ದೆಯನ್ನು ಭರ್ತಿ ಮಾಡಲು ಕೂಡಲೇ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.
8 ತಿಂಗಳಿಂದ ಹುದ್ದೆ ಖಾಲಿ: ಅರ್ಜಿದಾರರ ಪರ ವಕೀಲರು, ನ್ಯಾ. ಬಿ. ಎಸ್. ಪಾಟೀಲ್ ಅವರು ಎರಡನೇ ಉಪ ಲೋಕಾಯುಕ್ತರಾಗಿ 2019ರ ನವೆಂಬರ್ 20ರಂದು ನೇಮಕಗೊಂಡಿದ್ದರು. ನಂತರ ಅವರೇ 2022ರ ಜೂನ್14ರಂದು ಲೋಕಾಯುಕ್ತರಾಗಿ ನೇಮಕಗೊಂಡರು. ಅಂದಿನಿಂದ ಎರಡನೇ ಉಪ ಲೋಕಾಯುಕ್ತರ ಹುದ್ದೆ ಖಾಲಿಯಿದ್ದು, ಈವರೆಗೂ ನೇಮಕ ಮಾಡಿಲ್ಲ ಎಂದು ನ್ಯಾಯಪೀಠಕ್ಕೆ ವಿವರಿಸಿದರು.

ಅಲ್ಲದೇ, ಕರ್ನಾಟಕ ಲೋಕಾಯುಕ್ತ ಕಾಯ್ದೆ-1984ರ ಪ್ರಕಾರ ಎರಡನೇ ಉಪ ಲೋಕಾಯುಕ್ತ ಹುದ್ದೆಯನ್ನು ಭರ್ತಿ ಮಾಡುವುದು ಕಡ್ಡಾಯವಾಗಿದೆ. ಈ ಹುದ್ದೆ ಖಾಲಿ ಉಳಿದಿರುವುದರಿಂದ ಲೋಕಾಯುಕ್ತದಲ್ಲಿ ಇತ್ಯರ್ಥಕ್ಕೆ ಬಾಕಿಯಿರುವ ಪ್ರಕರಣಗಳ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ.
2022ರ ಡಿಸೆಂಬರ್ ಅಂತ್ಯಕ್ಕೆ ಕರ್ನಾಟಕ ಲೋಕಾಯುಕ್ತದಲ್ಲಿ ಒಟ್ಟು 11,442 ಪ್ರಕರಣಗಳು ಇತ್ಯರ್ಥಕ್ಕೆ ಬಾಕಿ ಉಳಿದಿದ್ದವು. ಅದರಲ್ಲಿ ಎರಡನೇ ಉಪ ಲೋಕಾಯುಕ್ತರ ಮುಂದೆಯೇ ಒಟ್ಟ 4,232 ಪ್ರಕರಣಗಳು ವಿಲೇವಾರಿ ಬಾಕಿಯಿದೆ. ಆದ್ದರಿಂದ ಕೂಡಲೇ ಎರಡನೇ ಉಪ ಲೋಕಾಯುಕ್ತ ಹುದ್ದೆಯನ್ನು ಭರ್ತಿ ಮಾಡಲು ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.












Click it and Unblock the Notifications