ಅಪ್ಪ ಅಣ್ಣ ರೈತರ ಪರ, ಕುಮಾರಸ್ವಾಮಿ ಬಿಜೆಪಿ ಪರ: ನಾಚಿಕೆಯಾಗಬೇಕು
ಬೆಂಗಳೂರು, ಡಿ 10: "ಈ ದೇಶದ ಅನ್ನದಾತರು ನಡೆಸುತ್ತಿರುವ ಪ್ರತಿಭಟನೆಗೆ ನಮ್ಮ ಬೆಂಬಲವಿದೆ, ಈ ಹೋರಾಟವನ್ನು ತಾರ್ಕಿಕ ಅಂತ್ಯ ಕಾಣಿಸುತ್ತೇವೆ" ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.
ನಗರದ ಫ್ರೀಡಂ ಪಾರ್ಕ್ ನಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡುತ್ತಿದ್ದ ಸಿದ್ದರಾಮಯ್ಯ, "ಅಪ್ಪ ಅಣ್ಣ (ದೇವೇಗೌಡ್ರು, ರೇವಣ್ಣ) ರೈತರ ಪರ, ಕುಮಾರಸ್ವಾಮಿ ಮಾತ್ರ ಸರಕಾರದ ಪರ. ಅವರಿಗೆ ನಾಚಿಕೆಯಾಗಬೇಕು"ಎಂದು ವಾಗ್ದಾಳಿ ನಡೆಸಿದರು.
"ಕೃಷಿಭೂಮಿಯನ್ನು ಕೃಷಿ ಚಟುವಟಿಕೆಗಾಗಿಯೇ ಬಳಸಬೇಕು ಎನ್ನುವ ಕಾನೂನು ಇದೆ. ಆದರೆ, ಈಗಿನ ತಿದ್ದುಪಡಿಗೆ ನೀವು ಬೆಂಬಲಿಸುತ್ತಿದ್ದೀರಲ್ಲಾ, ನಿಮಗೆ ಇದು ಸರಿ ಅನಿಸುತ್ತದೆಯೇ"ಎಂದು ಸಿದ್ದರಾಮಯ್ಯ, ಕುಮಾರಸ್ವಾಮಿಯವರನ್ನು ಪ್ರಶ್ನಿಸಿದರು.

"ರೈತರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದ ಯಡಿಯೂರಪ್ಪನವರೇ, ಈ ನೂತನ ಕೃಷಿ ಕಾಯ್ದೆ ನಿಮಗೆ ಸಹ್ಯವಾಗುತ್ತದಾ, ಕೇಂದ್ರದ ತಾಳಕ್ಕೆ ತಕ್ಕಂತೆ ಕುಣಿಯುತ್ತೀರಲ್ವಾ, ನಿಮಗೆ ಸ್ವಾಭಿಮಾನ ಅನ್ನೋದು ಇಲ್ಲವೇ"ಎಂದು ಸಿದ್ದರಾಮಯ್ಯ ಕಿಡಿಕಾರಿದರು.
"ಕೇಂದ್ರ ಗೃಹಸಚಿವ ಅಮಿತ್ ಶಾ ಅವರು ಕಾರ್ಪೋರೇಟ್ ಲಾಬಿಗೆ ಮಣಿದಿದ್ದಾರೆ. ರಾಜ್ಯ ಸರಕಾರಕ್ಕೆ ಪತ್ರವನ್ನು ಬರೆದು ಮಸೂದೆಯನ್ನು ಜಾರಿಗೆ ತರಲು ಅಮಿತ್ ಶಾ ಫರ್ಮಾನು ಹೊರಡಿಸಿದ್ದಾರೆ. ಅದರಂತೆ, ರಾಜ್ಯ ಸರಕಾರ ಕುಣಿಯುತ್ತಿದೆ"ಎಂದು ಸಿದ್ದರಾಮಯ್ಯ ಹೇಳಿದರು.
"ಭೂಸ್ವಾಧೀನ ಮಸೂದೆಯನ್ನು ಮೊದಲು ವಿರೋಧಿಸಿದ್ದು ನಾನು ಮತ್ತು ದೇವೇಗೌಡ್ರು. ಇದಾದ ನಂತರ ಕಾಯ್ದೆಯಲ್ಲಿ ಕೆಲವೊಂದು ಬದಲಾವಣೆಯನ್ನು ಮಾಡಲಾಗಿದೆ. ಹಾಗಾಗಿ, ರೈತರ ಹೋರಾಟಕ್ಕೆ ನಮ್ಮ ಬೆಂಬಲವಿಲ್ಲ"ಎಂದು ಎಚ್.ಡಿ.ಕುಮಾರಸ್ವಾಮಿ ಹೇಳಿದ್ದರು.












Click it and Unblock the Notifications