ರೈತರಿಗೆ ನ್ಯಾಯ ಸಿಗಬೇಕಾದರೆ ಬಿಜೆಪಿಗೆ ಸೋಲಿನ ಪಾಠ ಕಲಿಸಿ: ಕೆಪಿಸಿಸಿ
ಬೆಂಗಳೂರು, ನವೆಂಬರ್ 4: ದೇಶದಲ್ಲಿ ಮುಂಬರುವ ಚುನಾವಣೆಗಳಲ್ಲಿ ಭಾರತೀಯ ಜನತಾ ಪಕ್ಷವನ್ನು ಸೋಲಿಸಿದರೆ ಮಾತ್ರ ಅಚ್ಛೇ ದಿನ್ ಕಾಣುವುದಕ್ಕೆ ಸಾಧ್ಯ ಎಂದು ಕೆಪಿಸಿಸಿ ವಕ್ತಾರ ಕೆಂಗಲ್ ಶ್ರೀಪಾದ್ ರೇಣು ಹೇಳಿದ್ದಾರೆ. ಗುರುವಾರ ಬಿಡುಗಡೆ ಮಾಡಿರುವ ಪತ್ರಿಕಾ ಹೇಳಿಕೆಯಲ್ಲಿ ಅವರು ರೈತರ ಬಗ್ಗೆಯೂ ಉಲ್ಲೇಖಿಸಿದ್ದಾರೆ.
ಉಪ ಚುನಾವಣೆಗಳಲ್ಲಿ ಸೋತಿದ್ದಕ್ಕೆ ಬುದ್ದಿ ಕಲಿತುಕೊಂಡ ಬಿಜೆಪಿ ಸರ್ಕಾರವು ಡಿಸೇಲ್ ಮತ್ತು ಪೆಟ್ರೋಲ್ ದರವನ್ನು ಕಡಿತಗೊಳಿಸಿದೆ. ಅದೇ ರೀತಿ ಮುಂಬರುವ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಸೋಲು ಕಂಡಾಗ ಮಾತ್ರ ಕಳೆದೊಂದು ವರ್ಷಗಳಿಂದ ನಿರಂತರವಾಗಿ ಪ್ರತಿಭಟನೆ ನಡೆಸುತ್ತಿರುವ ರೈತರಿಗೆ ನ್ಯಾಯ ಸಿಗಲಿದೆ. ಸೋಲಿನ ನಂತರವೇ ಕೇಂದ್ರ ಸರ್ಕಾರ ರೈತರಿಗೆ ನ್ಯಾಯ ಒದಗಿಸುವ ಕೆಲಸವನ್ನು ಮಾಡಲಿದೆ ಎಂದು ತಿಳಿಸಿದ್ದಾರೆ.
ಉಪಚುನಾವಣೆಯಲ್ಲಿ ಬಿಜೆಪಿ ಸೋತಿದ್ದಕ್ಕೆ ಪೆಟ್ರೋಲ್, ಡೀಸೆಲ್ ದರ ಇಳಿಕೆ
ಇತ್ತೀಚಿನ ಉಪ ಚುನಾವಣೆಗಳಲ್ಲಿ ಬಿಜೆಪಿಗೆ ಬುದ್ದಿ ಕಲಿಸುವ ಮೂಲಕ ಪೆಟ್ರೋಲ್ ಮತ್ತು ಡಿಸೇಲ್ ತೆರಿಗೆಗಳನ್ನು ಕಡಿತಗೊಳಿಸುವಂತೆ ಮಾಡಿರುವ ಮತದಾರರು ಅಭಿನಂದಾರ್ಹರು. ಮತದಾರರ ಶಕ್ತಿ ಏನು ಎನ್ನುವುದನ್ನು ತೋರಿಸುವ ಕಾರ್ಯವನ್ನು ಅನಪು ಮಾಡಿದ್ದಾರೆ. ಏರುಗತಿಯಲ್ಲಿದ್ದ ದರಗಳನ್ನು ಏಕಾಏಕಿ ಇಳಿಸುವಂತೆ ಮಾಡುವಲ್ಲಿ ಸಫಲರಾಗಿದ್ದಾರೆ. ಇಂತಹ ಕಾರ್ಯ ಮಾಡಿರುವ ಮತದಾರರಿಗೆ ಧನ್ಯವಾದಗಳು ಎಂದು ಕೆಪಿಸಿಸಿ ವಕ್ತಾರ ಕೆಂಗಲ್ ಶ್ರೀಪಾದ ರೇಣು ಹೇಳಿದ್ದಾರೆ.

ಅಚ್ಛೇ ದಿನ್ ಬೇಕಾದರೆ ಬಿಜೆಪಿ ಸೋಲಿಸಿ
ದೇಶದ ಜನರು ಅಚ್ಛೇ ದಿನಗಳನ್ನು ಕಾಣಬೇಕಾದಲ್ಲಿ ಬಿಜೆಪಿಯನ್ನು ಸೋಲಿಸುವುದು ಮತದಾರರ ಕರ್ತವ್ಯವಾಗಬೇಕು. ಅಲ್ಲದೆ, ಮುಂಬರುವ ಉತ್ತರ ಪ್ರದೇಶ ಹಾಗೂ ಇನ್ನಿತರ ಚುನಾವಣೆಗಳಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಜನರು ಸೋಲಿಸಬೇಕಾಗಿದೆ. ಆಗ ಮಾತ್ರ ದೇಶಾದ್ಯಂತ ಪೆಟ್ರೋಲ್ ಮತ್ತು ಡಿಸೇಲ್ ಮೇಲಿನ ತೆರಿಗೆಯನ್ನು ಕೇಂದ್ರ ಸರ್ಕಾರ ಗಣನೀಯ ಪ್ರಮಾಣದಲ್ಲಿ ಇಳಿಸುವ ಮನಸ್ಸು ಮಾಡುವ ಅನಿವಾರ್ಯ ಪರಿಸ್ಥಿತಿಗೆ ಸಿಲುಕುತ್ತದೆ ಎಂದು ಕೆಪಿಸಿಸಿ ವಕ್ತಾರರಾದ ಕೆಂಗಲ್ ಶ್ರೀಪಾದ ರೇಣು ತಿಳಿಸಿದ್ದಾರೆ.

ಉಪ ಚುನಾವಣೆಗಳ ಫಲಿತಾಂಶದ ಕೊಡುಗೆ ಎಂದ ಸಿದ್ದರಾಮಯ್ಯ
ಕಳೆದ ಯುಪಿಎ ಸರ್ಕಾರದ ಅವಧಿಯಲ್ಲಿ ಕಚ್ಚಾತೈಲದ ಬೆಲೆ ಬ್ಯಾರಲ್‌ಗೆ 125 ಡಾಲರ್ ಇದ್ದರೂ ಪೆಟ್ರೋಲ್ ಅನ್ನು 65 ರೂಪಾಯಿಗೆ ನೀಡಲಾಗುತ್ತಿತ್ತು. ಆದರೆ ಬಿಜೆಪಿ ಸರ್ಕಾರದಲ್ಲಿ ಕಚ್ಚಾತೈಲ ಬೆಲೆ ಬ್ಯಾರಲ್‌ಗೆ 82 ಡಾಲರ್ ಇದ್ದಾಗ 100 ರೂಪಾಯಿಗೆ ಪೆಟ್ರೋಲ್ ಅನ್ನು ನೀಡುವುದು ದೊಡ್ಡ ಸಾಧನೆಯೇ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. "ಚುನಾವಣೆಗಳಲ್ಲಿ ಮತದಾರರು ಬಿಜೆಪಿಯನ್ನು ಸೋಲಿಸಿದರೆ ಮಾತ್ರ ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆಯಾಗುತ್ತದೆ ಎಂಬ ಪಾಠ ಹೇಳಿಕೊಟ್ಟ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಧನ್ಯವಾದಗಳು. ಇದು ಪ್ರಧಾನಿಗಳು ನೀಡಿದ ದೀಪಾವಳಿ ಕೊಡುಗೆ ಅಲ್ಲ, ದೇಶದಾದ್ಯಂತ ನಡೆದ ಉಪಚುನಾವಣೆಗಳ ಕೊಡುಗೆ," ಎಂದು ಸಿದ್ದರಾಮಯ್ಯ ವ್ಯಾಖ್ಯಾನಿಸಿದ್ದಾರೆ.

ಮೋದಿ ಹೇಳಿಕೊಟ್ಟ ಪಾಠ ಮರೆಯದಿರಿ ಎಂದ ಸಿದ್ದರಾಮಯ್ಯ
ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆಯಾಗಿದೆ. ಇದರ ಜೊತೆಗೆ ಸಾವಿರ ರೂಪಾಯಿಗೆ ತಲುಪಿರುವ ಅಡುಗೆ ಅನಿಲದ ಬೆಲೆ, ಆಹಾರ ಧಾನ್ಯ, ಖಾದ್ಯತೈಲದ ಬೆಲೆ ಇಳಿಕೆಯಾಗಬೇಕಿದೆ. ಹಾಗಾಗಬೇಕಿದ್ದಲ್ಲಿ ಬಿಜೆಪಿಯನ್ನು ಇನ್ನಷ್ಟು ಚುನಾವಣೆಗಳಲ್ಲಿ ಮತದಾರರು ಸೋಲಿಸಬೇಕಿದೆ. ಸದ್ಯ ನಮ್ಮ ರಾಜ್ಯದಲ್ಲಿ ತಾಲೂಕು ಮತ್ತು ಜಿಲ್ಲಾ ಪಂಚಾಯತ್ ಹಾಗೂ ಬೆಂಗಳೂರು ಮಹಾನಗರ ಪಾಲಿಕೆಗೆ ಚುನಾವಣೆ ನಡೆಯಲಿವೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಹೇಳಿಕೊಟ್ಟಿರುವ ಪಾಠವನ್ನು ಮತದಾರರು ನೆನಪಲ್ಲಿಟ್ಟುಕೊಂಡು ಮತದಾನ ಮಾಡಬೇಕು ಎಂದು ಸಿದ್ದರಾಮಯ್ಯ ಸಲಹೆ ನೀಡಿದ್ದಾರೆ.

ರೈತರಿಗೆ ನ್ಯಾಯ ಸಿಗಬೇಕಾದರೆ ಬಿಜೆಪಿ ಸೋಲಿಸಿ
ಮುಂಬರುವ ಚುನಾವಣೆಗಳಲ್ಲಿ ಭಾರತೀಯ ಜನತಾ ಪಕ್ಷವನ್ನು ಸೋಲಿಸುವುದರಿಂದ ಮಾತ್ರ ಬುದ್ದಿ ಕಲಿಸುವುದಕ್ಕೆ ಹಾಗೂ ಅಚ್ಚೇದಿನ್ ಅನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ದೇಶದಲ್ಲಿ ಇತ್ತೀಚೆಗೆ ನಡೆದ ಉಪ ಚುನಾವಣೆಗಳಲ್ಲಿ ಜನರು ಬಿಜೆಪಿಗೆ ವಿರುದ್ದವಾಗಿ ಮತ ಚಲಾಯಿಸಿದ್ದಾರೆ. ಆ ಮೂಲಕ ತಮ್ಮ ಆಕ್ರೋಶವನ್ನು ಹೊರ ಹಾಕಿದ್ದಾರೆ. ಇದರಿಂದಾಗಿ ಏರುಗತಿಯಲ್ಲಿದ್ದ ಪೆಟ್ರೋಲ್ ಮತ್ತು ಡಿಸೇಲ್ ದರಗಳನ್ನು ಬಿಜೆಪಿ ಸರ್ಕಾರ ಇಳಿಸಿದೆ. ಇದೇ ರೀತಿ ಮುಂಬರುವ ಉತ್ತರ ಪ್ರದೇಶ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಿದ್ದಲ್ಲಿ ಹಲವಾರು ದಿನಗಳಿಂದ ಪ್ರತಿಭಟನೆಯನ್ನು ನಡೆಸುತ್ತಿರುವ ದೇಶದ ರೈತರುಗಳಿಗೆ ನ್ಯಾಯ ಸಿಗಲಿದೆ ಎಂದು ಶ್ರೀಪಾದ್ ರೇಣು ಹೇಳಿದ್ದಾರೆ.

ರಾಷ್ಟ್ರ ರಾಜಧಾನಿಯಲ್ಲಿ ರೈತರ ಪ್ರತಿಭಟನೆ
ಕೇಂದ್ರ ಸರ್ಕಾರ ಜಾರಿಗೊಳಿಸಲು ಮುಂದಾಗಿರುವ ವಿವಾದಿತ ರೈತರ ಉತ್ಪಾದನೆ ವ್ಯಾಪಾರ ಮತ್ತು ವಾಣಿಜ್ಯ (ಪ್ರಚಾರ ಮತ್ತು ಸೌಲಭ್ಯ) ಕಾಯ್ದೆ, ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಕಾಯ್ದೆ (ಸಬಲೀಕರಣ ಮತ್ತು ಸಂರಕ್ಷಣೆ) ಒಪ್ಪಂದ ಹಾಗೂ ಅಗತ್ಯ ಸರಕುಗಳ (ತಿದ್ದುಪಡಿ) ಕಾಯ್ದೆಗಳು ರೈತರ ಕಣ್ಣು ಕೆಂಪಾಗಿಸಿವೆ. ಈ ಕಾಯ್ದೆಗಳನ್ನು ರದ್ದುಗೊಳಿಸುವಂತೆ ರೈತರು ನಿರಂತರವಾಗಿ ಹೋರಾಟ, ಪ್ರತಿಭಟನೆ, ಟ್ರ್ಯಾಕ್ಟರ್ ರ್ಯಾಲಿಗಳನ್ನು ನಡೆಸುತ್ತಿದ್ದಾರೆ. ಕೇಂದ್ರ ಸರ್ಕಾರ ಹಾಗೂ ಪ್ರತಿಭಟನಾ ನಿರತ ರೈತ ಸಂಘಟನೆಗಳ ಪ್ರತಿನಿಧಿಗಳ ನಡುವೆ ಈಗಾಗಲೇ 13ಕ್ಕೂ ಹೆಚ್ಚು ಸುತ್ತಿನ ಸಂಧಾನ ಮಾತುಕತೆಗಳನ್ನು ನಡೆಸಲಾಗಿದೆ. ಆದರೆ ಕೇಂದ್ರ ಸರ್ಕಾರ ಮಾತ್ರ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವುದಕ್ಕೆ ಸಾಧ್ಯವಿಲ್ಲ ಎಂಬ ನಿಲುವು ಪ್ರದರ್ಶಿಸುತ್ತಿದೆ. ಕೇಂದ್ರ ಸರ್ಕಾರದ ಮೊಂಡುತನದ ವಿರುದ್ಧ ರೈತರ ಹೋರಾಟವು ತೀವ್ರಗೊಳುತ್ತಿದೆ. ಇದೇ ನವೆಂಬರ್ 26ರಂದು ರೈತರ ಸುದೀರ್ಘ ಪ್ರತಿಭಟನೆ ಒಂದು ವರ್ಷ ಪೂರೈಸಲಿದೆ.