ಹಾಲಿನ ದರ ಏರಿಕೆಗೆ ಮುಂದಾದ ಸರ್ಕಾರಕ್ಕೆ ರೈತರಿಂದ ಸವಾಲ್
ರಾಜ್ಯದಲ್ಲಿ ನಂದಿನ ಹಾಲಿನ ದರ ಹೆಚ್ಚಳ ಮಾಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವೇದಿಕೆಯಲ್ಲೇ ಹೇಳಿದ್ದರು. ಹಾಲಿನ ದರ ಹೆಚ್ಚಿಸಲಾಗುವುದು, ಹೆಚ್ಚುವರಿ ಹಣವನ್ನು ರೈತರಿಗೆ ನೀಡಲಾಗುವುದು ಎಂದೂ ಸಹ ಮಾತನಾಡಿದ್ದರು. ಇದಕ್ಕೆ ರಾಜ್ಯದೆಲ್ಲೆಡೆ ಹಾಲು ಉತ್ಪಾದಕರಿಂದ ವಿರೋಧ ವ್ಯಕ್ತವಾಗಿದೆ.
ಕಳೆದ ಜೂನ್ ತಿಂಗಳಿನಲ್ಲಿ ಹಾಲಿನ ದರವನ್ನು ಎರಡು ರೂಪಾಯಿ ಹೆಚ್ಚಿಸಿ, 50 ಎಂ.ಎಲ್ ಹಾಲು ಹೆಚ್ಚಿಗೆ ನೀಡುವ ನಿರ್ಧಾರವನ್ನು ಸರ್ಕಾರ ಪ್ರಕಟಿಸಿತ್ತು. ಮಳೆಗಾಲದಲ್ಲಿ ಹಾಲಿನ ಉತ್ಪಾದನೆ ಹೆಚ್ಚಾಗಿದ್ದು, ಹೆಚ್ಚುವರಿ ಹಾಲನ್ನು ವ್ಯರ್ಥ ಮಾಡದೆ, ಲಾಭವನ್ನು ರೈತರಿಗೆ ಕೊಡುವುದಾಗಿ ಕೆಎಂಎಫ್ ತಿಳಿಸಿತ್ತು. ಇದೀಗ ಮತ್ತೆ ಹಾಲಿನ ದರ ಏರಿಸಲು ಸರ್ಕಾರ ಚಿಂತನೆ ನಡೆಸಿರುವುದನ್ನು ವಿರೋಧಿಸುತ್ತಿದ್ದಾರೆ.

ರಾಜ್ಯ ಸರ್ಕಾರ ರೈತರ ಹೆಸರು ಹೇಳಿಕೊಂಡೇ ಈಗಾಗಲೇ ಎರಡು ಬಾರಿ ಹಾಲಿನ ದರ ಏರಿಕೆ ಮಾಡಿದೆ. ಆದರೆ ಆ ಹಣವನ್ನು ರೈತರಿಗೆ ಈವರೆಗೂ ಕೊಟ್ಟಿಲ್ಲ ಎಂದು ಹಾಲು ಉತ್ಪಾದಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಒಂದು ವೇಳೆ ಸರ್ಕಾರಕ್ಕೆ ನಿಜವಾಗಿ ನಮ್ಮ ರೈತರ ಮೇಲೆ ಕಾಳಜಿ ಇದ್ರೆ ಬಾಕಿ ಇರುವ ಪ್ರೋತ್ಸಾಹಧನ ಮೊದಲು ಬಿಡುಗಡೆ ಮಾಡಲಿ ಎಂದು ಬೇಡಿಕೆ ಇಟ್ಟಿದ್ದಾರೆ.
ಕೋಲಾರ-ಚಿಕ್ಕಬಳ್ಳಾಪುರ ಹಾಲು ಒಕ್ಕೂಟದಲ್ಲೇ (ಕೋಚಿಮುಲ್) ಹಾಲು ಉತ್ಪಾದಕರಿಗೆ ಕಳೆದ 5 ತಿಂಗಳಿನಿಂದ ಬಾಕಿ ಪ್ರೋತ್ಸಾಹಧನ ನೀಡಿಲ್ಲ ಎಂದು ಹೇಳಲಾಗಿದೆ. ಬರೋಬ್ಬರಿ 75 ಕೋಟಿಯಷ್ಟು ಬಾಕಿ ಇದ್ದು, ಮೊದಲು ಆ ಹಣ ಬಿಡುಗಡೆ ಮಾಡಲಿ ಎಂದು ಸವಾಲು ಹಾಕಿದ್ದಾರೆ.

ಮತ್ತೊಂದೆಡೆ ರಾಜ್ಯ ಸರ್ಕಾರವು ನಂದಿನಿ ಹಾಲಿನ ದರ ಏರಿಸಲು ಹೊರಟಿರುವುದು ಸರಿಯಲ್ಲ. ಈ ನಿರ್ಧಾರದಿಂದ ಹಿಂದೆ ಸರಿಯಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ಸರ್ಕಾರದ ವಿರುದ್ಧ ಬೃಹತ್ ಪ್ರತಿಭಟನೆ ನಡೆಸಲಿದೆ ಎಂದು ಹಾಲು ಪ್ರಕೋಷ್ಟದ ರಾಜ್ಯ ಸಂಚಾಲಕ ರಾಘವೆಂದ್ರ ಶೆಟ್ಟಿ ಅವರು ಎಚ್ಚರಿಕೆ ನೀಡಿದ್ದಾರೆ.
ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಹಾಲಿನ ದರ ಏರಿಕೆ ಮಾಡುವಂತೆ ಸೂಚಿಸಿರುವುದು ಖಂಡನೀಯ. ಈಗಾಗಲೇ ರಾಜ್ಯದ ಜನತೆ ನೀರು, ವಿದ್ಯುತ್, ಮನೆ ಬಾಡಿಗೆ ಸೇರಿದಂತೆ ಅನೇಕ ದರ ಏರಿಕೆಯ ಶಾಕ್‌ನಲ್ಲೇ ಬದುಕು ಸಾಗಿಸುತ್ತಿದ್ದಾರೆ. ಸರ್ಕಾರ ಈಗ ಮತ್ತೆ ನಂದಿನಿ ಹಾಲಿನ ದರ ಏರಿಕೆ ಮಾಡಲು ಹೊರಟಿರುವುದು ಸರಿಯಲ್ಲ. ರಾಜ್ಯ ಸರ್ಕಾರವು ಮೊದಲು ರೈತರ ಹಾಲಿನ ಸಬ್ಸಿಡಿ ಹಣ ಬಿಡುಗಡೆಗೊಳಿಸಲಿ ಎಂದು ಹೇಳಿದ್ದಾರೆ.

ರಾಜ್ಯ ಸರ್ಕಾರ ರೈತರ ಹೆಸರಿನಲ್ಲಿ ಹಾಲಿನ ದರ ಹೆಚ್ಚಳ ಮಾಡಲು ಸೂಚಿಸಿರುವುದು ಸರಿಯಲ್ಲ. ಈಗಾಗಲೇ ರಾಜ್ಯ ಸರ್ಕಾರ ಮತ್ತು ಕೆ.ಎಂ.ಎಫ್ ಹಾಲು ಉತ್ಪಾದಕರಿಗೆ ಸಬ್ಸಿಡಿಯ ಅಂದಾಜು 865 ಕೋಟಿ ರೂಪಾಯಿಗಳನ್ನು ಬಾಕಿ ಉಳಿಸಿಕೊಂಡಿದೆ. ಮೊದಲು ತಾವು ರೈತರಿಗೆ ನೀಡಬೇಕಾದ ಹಾಲಿನ ಸಬ್ಸಿಡಿ ಹಣವನ್ನು ಬಿಡುಗಡೆಗೊಳಿಸಿ, ಜವಾಬ್ದಾರಿಯಿಂದ ನಡೆದುಕೊಳ್ಳಲಿ ಎಂದಿದ್ದಾರೆ.
ಕಾಂಗ್ರೆಸ್ ಪಕ್ಷದವರು ಚುನಾವಣಾ ಪ್ರಣಾಳಿಕೆಯಲ್ಲಿ ನಾವು ಅಧಿಕಾರಕ್ಕೆ ಬಂದರೆ ಹಾಲಿನ ಸಬ್ಸಿಡಿ ಹಣವನ್ನು ಹೆಚ್ಚಿಸುತ್ತೇವೆ ಎಂದು ಭರವಸೆ ನೀಡಿದ್ದರು. ಅದರಂತೆ ಅವರ ಸರ್ಕಾರವೇ ಅಧಿಕಾರಕ್ಕೆ ಬಂದು ಒಂದು ವರ್ಷ ಕಳೆದಿದೆ. ಆದರೂ ಕೊಟ್ಟ ಮಾತಿನಂತೆ ಯಾವುದರಲ್ಲೂ ನಡೆದುಕೊಂಡಿಲ್ಲ. ಸರ್ಕಾರ ಮೊದಲು ಹೇಳಿದಂತೆ ನಡೆದುಕೊಳ್ಳಲಿ. ಸಂಕಷ್ಟದಲ್ಲಿರುವ ರಾಜ್ಯದ ಹೈನುಗಾರರ ಪರ ನಿಲ್ಲಲಿ ಎಂದು ಸಲಹೆ ನೀಡಿದ್ದಾರೆ.












Click it and Unblock the Notifications