ರಾಜ್ಯ ಬಿಜೆಪಿಯಲ್ಲಿ ಕುಟುಂಬ ರಾಜಕಾರಣಕ್ಕೆ ಬ್ರೇಕ್: ಬಸನಗೌಡ ಪಾಟೀಲ ಯತ್ನಾಳ್
ಬೆಳಗಾವಿ, ಡಿಸೆಂಬರ್ 13: ಒಂದು ಕುಟುಂಬಕ್ಕೆ ಒಂದೇ ಟಿಕೆಟ್ ನೀಡುವ ಮೂಲಕ ರಾಜ್ಯ ಬಿಜೆಪಿಯಲ್ಲಿ ಕುಟುಂಬ ರಾಜಕಾರಣಕ್ಕೆ ಬ್ರೇಕ್ ಬೀಳಲಿದೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಹೇಳಿದ್ದಾರೆ.
ಈ ಕುರಿತು ಬೆಳಗಾವಿಯಲ್ಲಿ ಮಾದ್ಯಮಗಳ ಜೊತೆಗೆ ಮಾತನಾಡಿದ ಅವರು, ಗುಜರಾತ್ ಚುನಾವಣಾ ಫಲಿತಾಂಶ ಬಂದ ನಂತರ ರಾಜ್ಯ ಬಿಜೆಪಿಯಲ್ಲೂ ಗುಜರಾತ್ ಮಾದರಿಯಲ್ಲಿ ಟಿಕೆಟ್ ಹಂಚಿಕೆ ಮಾಡುವ ಚರ್ಚೆ ಜೋರಾಗಿ ನಡೆಯುತ್ತಿದ್ದು, ಹಿರಿಯರಿಗೆ ಗೇಟ್ ಪಾಸ್ ನೀಡುವ ಸಾಧ್ಯತೆ ಹೆಚ್ಚಾಗಿದ್ದು, ಹೊಸ ಮುಖಗಳಿಗೆ ಅವಕಾಶ ಮಾಡಿಕೊಡುವ ಸಾಧ್ಯತೆ ಇದೆ ಎನ್ನಲಾಗಿದೆ. ಈ ಕುರಿತು ಶಾಸಕ ಯತ್ನಾಳ್ ಅವರು ಮಾತನಾಡಿ, ಒಂದೇ ಕುಟುಂಬದಿಂದ ಅಣ್ಣ-ತಮ್ಮ, ಅಪ್ಪ-ಮಗನಿಗೂ ಟಿಕೆಟ್ ಕೂಡ ಸಿಗಲ್ವಂತೆ. ಒಂದೇ ಕುಟುಂಬಕ್ಕೆ ಎರಡು- ಮೂರು ಟಿಕೆಟ್ ಸಿಗುವುದಿಲ್ಲ. ಒಂದೇ ಕುಟುಂಬದಲ್ಲಿ ಬಹಳ ಜನ ಜಾಕೆಟ್ ಹೊಲಿಸಿಕೊಂಡು ಕುಳಿತಿದ್ದಾರೆ ಎಂದು ಹೇಳಿದ್ದಾರೆ.
ಸಚಿವ ಸಂಪುಟ ವಿಸ್ತರಣೆ ವಿಚಾರವಾಗಿ ಮಾತನಾಡಿದ ಅವರು, ಚುನಾವಣೆಗೆ ನಾಲ್ಕು ತಿಂಗಳಿರುವಾಗ ರಾಜ್ಯ ಸಂಪುಟ ವಿಸ್ತರಣೆ ಯಾರಿಗೂ ಬೇಕಾಗಿಲ್ಲ, ಎಲ್ಲಾ ಖಾತೆಯನ್ನೂ ಮುಖ್ಯಮಂತ್ರಿ ಬೊಮ್ಮಾಯಿ ಅವರೇ ಇಟ್ಟುಕೊಳ್ಳಲಿ. ಈಗ ಸಚಿವರಾಗಿ ಏನು ಅಭಿವೃದ್ಧಿ ಮಾಡುತ್ತಾರೆ. ಈಗ ಮಂತ್ರಿಯಾಗಲು ಯಾರಿಗೂ ಆಸಕ್ತಿ ಇಲ್ಲ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಸರ್ಕಾರದ ವಿರುದ್ಧ ಗುಡುಗಿದ್ದಾರೆ.

ಇದೇ ವೇಳೆ ಪಂಚಮಸಾಲಿ 2ಎ ಮೀಸಲಾತಿ ವಿಚಾರವಾಗಿ ಡಿಸೆಂಬರ್ 22ರಂದು ನಮ್ಮ ಸಮುದಾಯದ ಅಂತಿಮ ಹೋರಾಟ ಅಥವಾ ವಿಜಯೋತ್ಸವ ನಡೆಯಲಿದೆ. ಡಿ.19ರ ಗಡುವು ನಾವು ಕೊಟ್ಟಿದ್ದಲ್ಲ. ಸಿಎಂ ಬೊಮ್ಮಾಯಿ ಅವರು ಕೊಟ್ಟಿದ್ದು. ವಿಧಾನಸಭಾ ಚುನಾವಣೆ ಫೆಬ್ರವರಿಯಲ್ಲಿ ಆಗಲಿ, ಮೇ ನಲ್ಲಾಗಲಿ ನೀತಿ ಸಂಹಿತೆ ಜಾರಿಗೂ ಮುನ್ನವೆ ಮೀಸಲಾತಿ ಘೋಷಣೆಯಾಗಲಿ ಎಂದು ಹೇಳಿದರು.

ಸಮೀಕ್ಷೆಯಲ್ಲಿ ಬಿಜೆಪಿ ಹಿನ್ನೆಡೆ ಆಗ್ತಿದೆಯಾ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿ, , ಗುಜರಾತ್ ನಲ್ಲಿ, ಉತ್ತರ ಪ್ರದೇಶದಲ್ಲಿ ಹಾಗೇ ಹೇಳಿದ್ರೂ ಬಿಜೆಪಿ ಬಂತು, ಕರ್ನಾಟಕದಲ್ಲಿ ನರೇಂದ್ರ ಮೋದಿ ಪ್ರವಾಸ ಮಾಡುತ್ತಾರೆ. ಯಡಿಯೂರಪ್ಪ ಅವರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ರಾಷ್ಟ್ರೀಯ ಕಾರ್ಯಕಾರಣಿ ಸದಸ್ಯರನ್ನಾಗಿ ಮಾಡಿದ್ದಾರೆ. ಬಿಜೆಪಿಗೆ ಹಿನ್ನೆಡೆಯಾಗಲ್ಲ ಎಂದರು.












Click it and Unblock the Notifications