ಸುಳ್ಳು ಜಾತಿ ಪ್ರಮಾಣ ಪತ್ರ: ಶಾಸಕ ಜಿ. ಮಂಜುನಾಥ್‌ಗೆ ಸಂಕಷ್ಟ
ಬೆಂಗಳೂರು, ಜನವರಿ 18: ಸುಳ್ಳು ಜಾತಿ ಪ್ರಮಾಣ ಪತ್ರ ಸಲ್ಲಿಸಿ 2013ರ ವಿಧಾನಸಭಾ ಚುನಾವಣೆಯಲ್ಲಿ ಮುಳಬಾಗಿಲು (ಪರಿಶಿಷ್ಟ ಜಾತಿಗೆ ಮೀಸಲು) ಕ್ಷೇತ್ರದಿಂದ ಆಯ್ಕೆಯಾಗಿದ್ದ ಹಾಲಿ ಕೋಲಾರದ ಕಾಂಗ್ರೆಸ್ ಶಾಸಕ ಜಿ. ಮಂಜುನಾಥ್‌ಗೆ ಸಂಕಷ್ಟ ಎದುರಾಗಿದೆ.
ಅವರು 11 ವರ್ಷದ ಹಿಂದೆ ಮಾಡಿದ್ದ ತಪ್ಪಿಗಾಗಿ ಇದೀಗ ಬೆಲೆ ತೆರಬೇಕಾಗಿದೆ. ಮಂಜುನಾಥ್ ಆಯ್ಕೆಯಾಗುವ ಮೂಲಕ ಪರಿಶಿಷ್ಟ ಜಾತಿಗಳ ವರ್ಗಕ್ಕೆ ವಂಚಿಸಿದ್ದಾರೆ. ಹಾಗಾಗಿ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಆದರೆ, ಯಾವ ರೀತಿಯ ಕ್ರಮ ಜರುಗಿಸಬೇಕು ಎಂಬ ಕುರಿತು ತೀರ್ಮಾನ ಕೈಗೊಳ್ಳುವ ಅಧಿಕಾರ ಸರ್ಕಾರಕ್ಕೆ ಇದೆ ಎಂದು ಹೇಳಿದೆ.

2021ರ ಅಕ್ಟೋಬರ್ 27ರಂದು ಜಿಲ್ಲಾ ಜಾತಿ ಪರಿಶೀಲನಾ ಸಮಿತಿ ವರದಿಯ ಸಿಂಧುತ್ವವನ್ನು ಪ್ರಶ್ನಿಸಿ ಮಂಜುನಾಥ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ನ್ಯಾಯಪೀಠ ಅರ್ಜಿ ವಜಾಗೊಳಿಸಿ ಆದೇಶಿಸಿದೆ. ಅಲ್ಲದೆ, ಜಿಲ್ಲಾ ಜಾತಿ ಪರಿಶೀಲನಾ ಸಮಿತಿಯ ವರದಿಯಲ್ಲಿ ಹಸ್ತಕ್ಷೇಪ ಮಾಡುವ ಅಗತ್ಯವಿಲ್ಲ ಎಂದು ತಿಳಿಸಿದೆ.
ಏನಿದು ಕೋರ್ಟ್ ಆದೇಶ?: ಅರ್ಜಿದಾರರು ಶಾಸಕರಾಗಿದ್ದೂ, ಸುಳ್ಳು ಜಾತಿ ಪ್ರಮಾಣ ಪತ್ರ ಸಲ್ಲಿಸುವ ಮೂಲಕ ಪರಿಶಿಷ್ಟ ಜಾತಿಗೆ ಮೀಸಲಿಟ್ಟಿದ್ದ ಕ್ಷೇತ್ರವನ್ನು ಕಸಿದುಕೊಂಡಿದ್ದಾರೆ. ಈ ಪ್ರಕ್ರಿಯೆ ಸಂವಿಧಾನಕ್ಕೆ ಎಸಗಿದ ಮೋಸವಾಗಿದೆ ಎಂದು ಪೀಠ ತನ್ನ ಆದೇಶದಲ್ಲಿ ತಿಳಿಸಿದೆ.
ಜಾತಿ ಪರಿಶೀಲನಾ ಸಮಿತಿಯು ಮಂಜುನಾಥ್ ಅವರು ಪರಿಶಿಷ್ಟ ಜಾತಿಗೆ ಸೇರಿದ ಬುಡುಗ ಜಂಗಮ ಜಾತಿಗೆ ಸೇರಿದವರಲ್ಲ. ಹಿಂದುಳಿದ ವರ್ಗಗಳ ಪಟ್ಟಿಯಲ್ಲಿರುವ ಭೈರಾಗಿ ಜಾತಿಗೆ ಸೇರಿದವರು ಎಂದು ವರದಿ ನೀಡಿತ್ತು. ಸ್ವಾತಂತ್ರ್ಯ ಪೂರ್ವದಲ್ಲಿ ಕೋಲಾರದ ಗೆಜಿಟಿಯರ್‌ನಲ್ಲಿ ಬುಡಗ ಜಂಗಮ ಜಾತಿಯನ್ನು ಮಾಲಾನ್ಯಾಸಿ, ಭೈರಾಗಿ ಮುಂತಾದ ಹೆಸರುಗಳಿಂದ ಕರೆಯಲಾಗುತ್ತಿತ್ತು.
ಆದರೆ, ಅರ್ಜಿದಾರ ಮಂಜುನಾಥ್ ಅವರ ಸಂಬಂಧಿಕರು ಇತ್ತೀಚಿನ ದಿನಗಳಲ್ಲಿ ಬುಡಗ ಜಾತಿ ಪ್ರಮಾಣ ಪತ್ರವನ್ನು ಪಡೆದುಕೊಂಡಿಲ್ಲ ಎಂದು ಜಿಲ್ಲಾ ಜಾತಿ ಪರಿಶೀಲನಾ ಸಮಿತಿಯ ತನಿಖೆಯಲ್ಲಿ ತಿಳಿದು ಬಂದಿತ್ತು.
ಪ್ರಕರಣದ ಹಿನ್ನೆಲೆ: ಅರ್ಜಿದಾರ ಮಂಜುನಾಥ್ ಅವರು ಮುಳಬಾಗಿಲು ವಿಧಾನಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ 2013ರ ವಿಧಾನ ಸಭಾ ಚುನಾವಣೆಯಲ್ಲಿ ಆಯ್ಕೆಯಾಗಿದ್ದರು. ಅಲ್ಲದೆ, ಅವರು ಬುಡುಗ ಜಂಗಮ ಜಾತಿಗೆ ಸೇರಿದವರು ಎಂಬುದನ್ನು ಸಾಬೀತುಪಡಿಸಲು ವಿಫಲರಾದ ಹಿನ್ನೆಲೆಯಲ್ಲಿ ಅವರ ಆಯ್ಕೆಯನ್ನು 2018ರ ಏಪ್ರಿಲ್‌ನಲ್ಲಿ ಅಸಿಂಧುಗೊಳಿಸಿ ಹೈಕೋರ್ಟ್ ಆದೇಶಿಸಿತ್ತು.
ಇದನ್ನು ಪ್ರಶ್ನಿಸಿ ಮಂಜುನಾಥ್ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್, ಮಂಜುನಾಥ್ ಅವರ ಜಾತಿ ಪ್ರಮಾಣ ಪತ್ರ ಪರಿಶೀಲನೆಗೆ ಜಿಲ್ಲಾ ಜಾತಿ ಪರಿಶೀಲನಾ ಸಮಿತಿಗೆ ವಹಿಸಿತ್ತು. ಅಲ್ಲದೆ, ವರದಿ ತನ್ನ ವಿರುದ್ಧ ಬಂದಲ್ಲಿ ಹೈಕೋರ್ಟ್‌ನಲ್ಲಿ ಪ್ರಶ್ನಿಸಬಹುದು ಎಂದು ತಿಳಿಸಿತ್ತು.
ಸುಪ್ರೀಂಕೋರ್ಟ್ ಆದೇಶದಂತೆ ವಿಚಾರಣೆ ನಡೆಸಿದ್ದ ಜಿಲ್ಲಾ ಜಾತಿ ಪರಿಶೀಲನಾ ಸಮಿತಿ 2021ರ ಅಕ್ಟೋಬರ್ 27ರಂದು ವರದಿಯನ್ನು ಸಲ್ಲಿಸಿತ್ತು. ಈ ವರದಿಯ ಫಲಿತಾಂಶ ಮಂಜುನಾಥ್‌ಗೆ ವಿರುದ್ಧವಾಗಿತ್ತು. ಆದ ಪರಿಣಾಮ ವರದಿಯನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.
ಅರ್ಜಿದಾರರು ತನ್ನ 30ನೇ ವಯಸ್ಸಿನ ಬಳಿಕ ತಾನು ಬುಡುಗ ಜಂಗಮ ಜಾತಿಗೆ ಸೇರಿದವರು ಎಂದು ವಾದಿಸಿದ್ದರು. ಆದರೆ, ಮಂಜುನಾಥ್ ಅವರು ಶಾಲೆಯ ದಾಖಲೆಗಳನ್ನು ಪರಿಶೀಲಿಸಿದ್ದ ಜಿಲ್ಲಾಧಿಕಾರಿಗಳು ಹಾಗೂ ತಹಶೀಲ್ದಾರ್ ಅರ್ಜಿದಾರರ ವಾದವನ್ನು ತಿರಸ್ಕರಿಸಿದ್ದರು.











Click it and Unblock the Notifications