ಸಿಎಂ ಹೆಸರಲ್ಲಿ ನಕಲಿ ಟ್ವಿಟ್ಟರ್ ಖಾತೆ ತೆರೆದಿದ್ದ ಟೆಕ್ಕಿ ಬಂಧನ
ಬೆಂಗಳೂರು, ಜೂನ್ 30 : ಕರ್ನಾಟಕದ ಮುಖ್ಯಮಂತ್ರಿ ಹೆಸರಿನಲ್ಲಿ ನಕಲಿ ಟ್ವಿಟ್ಟರ್ ಖಾತೆ ಸೃಷ್ಟಿಸಿ, ಸಿದ್ದರಾಮಯ್ಯನವರ ಸೋಗಿನಲ್ಲಿ ಟ್ವೀಟ್ ಮಾಡುತ್ತಿದ್ದ ಸಾಫ್ಟ್ ವೇರ್ ಇಂಜಿಯರ್ ನನ್ನು ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.
ಮಂಡ್ಯ ಮೂಲದ ಸಾಫ್ಟ್ ವೇರ್ ಇಂಜಿನಿಯರ್ ಮಧುಸೂದನ ಎಂಬಾತ, ಸಿದ್ದರಾಮಯ್ಯನವರ ಹೆಸರಿನಲ್ಲಿ ನಕಲಿ ಟ್ವಿಟ್ಟರ್ ಖಾತೆ ಸೃಷ್ಟಿಸಿ ಅನಗತ್ಯ ಗೊಂದಲ ಸೃಷ್ಟಿಸುತ್ತಿದ್ದ.
ಈ ಕುರಿತು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರು, ಅಪರಿಚಿತ ವ್ಯಕ್ತಿಯೊಬ್ಬರು ಮುಖ್ಯಮಂತ್ರಿಗಳ ನಕಲಿ ಟ್ವಿಟ್ಟರ್ ಅಕೌಂಟ್ ಸೃಷ್ಟಿಸಿದ್ದಾರೆ ಎಂದು 2016ರ ಡಿಸೆಂಬರ್ 29ರಂದೇ ಸಿಐಡಿಯ ಸೈಬರ್ ಕ್ರೈಂ ಪೊಲೀಸರಿಗೆ ದೂರು ಸಲ್ಲಿಸಿದ್ದರು.

ತನಿಖೆ ನಡೆಸಿ ಮಧುಸೂದನ ಎಂಬಾತನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ, ತಾನು ಮುಖ್ಯಮಂತ್ರಿ ಹೆಸರಲ್ಲಿ ಟ್ವಿಟ್ಟರ್ ಖಾತೆ ತೆರೆದಿದ್ದಾಗಿ ಒಪ್ಪಿಕೊಂಡಿದ್ದಾನೆ. ಆ ಟ್ವಿಟ್ಟರ್ ಖಾತೆಯನ್ನು ಈಗ ನಿಷ್ಕ್ರಿಯಗೊಳಿಸಲಾಗಿದೆ.
ಸಿ.ಐ.ಡಿ.ಯ ಉನ್ನತಾಧಿಕಾರಿಗಳ ಮಾರ್ಗದರ್ಶನದಲ್ಲಿ ಸೈಬರ್ ಕ್ರೈಂ ಪೊಲೀಸ್ ಠಾಣೆಯ ಪೊಲೀಸ್ ಉಪಾಧೀಕ್ಷಕರಾದ ಎಂ.ಡಿ.ಶರತ್‌ರವರ ನೇತೃತ್ವದಲ್ಲಿ ಸಿಬ್ಬಂದಿಯವರಾದ ಕೃಷ್ಣೋಜಿರಾವ್, ಎಸ್.ಕೆ.ಶಿವಕುಮಾರ್, ಜಿ. ಮುನಿರತ್ನಂ, ವಿ.ಶ್ರೀನಾಥರೆಡ್ಡಿ ಮತ್ತು ವಿನೋದ್‌ಕುಮಾರ್ ರವರನ್ನು ಒಳಗೊಂಡ ತಂಡ ಆರೋಪಿಯನ್ನು ಪತ್ತೆ ಮಾಡಿ ಬಂಧಿಸಿದ್ದಾರೆ.












Click it and Unblock the Notifications