ಬಿಜೆಪಿ ಅಭ್ಯರ್ಥಿಗಳ ನಕಲಿ ಪಟ್ಟಿ; ಪೊಲೀಸರ ಮೊರೆ ಹೋದ ಪಕ್ಷ!
ಬೆಂಗಳೂರು, ಏಪ್ರಿಲ್ 04; ಕರ್ನಾಟಕ ವಿಧಾನಸಭೆ ಚುನಾವಣೆ ಮೇ 10ರ ಬುಧವಾರ ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ಮೇ 13ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ. ಆದರೆ ಈ ಬಾರಿಯ ಚುನಾವಣೆಗೆ ಇನ್ನೂ ರಾಜ್ಯದ ಆಡಳಿತ ಪಕ್ಷ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿಲ್ಲ. ಆದರೆ ಸಾಮಾಜಿಕ ಜಾಲತಾಣದಲ್ಲಿ ಪಟ್ಟಿಯೊಂದು ವೈರಲ್ ಆಗಿದೆ.
ಮಂಗಳವಾರ ಕರ್ನಾಟಕದ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಎಂದು ಸಾಮಾಜಿಕ ಜಾಲತಾಣದಲ್ಲಿ ಪಟ್ಟಿಯೊಂದು ಓಡಾಡುತ್ತಿದೆ. ಆದರೆ ಇದು ನಕಲಿ ಪಟ್ಟಿ ಎಂದು ಟ್ವೀಟ್ ಮೂಲಕ ಕರ್ನಾಟಕ ಬಿಜೆಪಿ ಈಗಾಗಲೇ ಸ್ಪಷ್ಟನೆ ನೀಡಿದೆ. ಅಲ್ಲದೇ ಈ ವಿಚಾರವನ್ನು ಪೊಲೀಸ್ ಠಾಣೆಗೆ ಸಹ ತೆಗೆದುಕೊಂಡು ಹೋಗಿದೆ.

ಬೆಂಗಳೂರು ವಕೀಲರ ಸಂಘದ ಅಧ್ಯಕ್ಷರು, ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಮಿತಿ ಸದಸ್ಯ ವಿವೇಕ್ ಸುಬ್ಬಾರೆಡ್ಡಿ ನೇತೃತ್ವದಲ್ಲಿ ಬಿಜೆಪಿ ನಾಯಕರ ನಿಯೋಗ ಮಲ್ಲೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ. ವಿಧಾನಸಭಾ ಚುನಾವಣೆಯ ಬಿಜೆಪಿ ಅಭ್ಯರ್ಥಿಗಳ ಪಟ್ಟಿಯ ಹೆಸರಿನಲ್ಲಿ ನಕಲಿ ಪಟ್ಟಿಯೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿರುವ ಕುರಿತು ದೂರು ಕೊಡಲಾಗಿದೆ.
ಬಿಜೆಪಿ ನಾಯಕರ ನಿಯೋಗದಲ್ಲಿ ಅಶ್ವತ್ ನಾರಾಯಣ್, ಕರುಣಾಕರ್, ಯೋಗೇಂದ್ರ ಹೊಡಾಘಟ್ಟ ಹಾಗೂ ಹಲವು ಮುಖಂಡರು ಉಪಸ್ಥಿತರಿದ್ದರು. ನಕಲಿ ಅಭ್ಯರ್ಥಿಗಳ ಪಟ್ಟಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟವರ ವಿರುದ್ಧ ಸೂಕ್ತ ಕಾನೂನು ಕ್ರಮವನ್ನು ಕೈಗೊಳ್ಳಬೇಕು ಎಂದು ದೂರಿನಲ್ಲಿ ಮನವಿ ಮಾಡಿದೆ. ಈ ಬಾರಿಯ ಚುನಾವಣೆಗೆ ಪಕ್ಷದಿಂದ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿಲ್ಲ ಎಂದು ಪಕ್ಷ ಸಹ ಸ್ಪಷ್ಟಪಡಿಸಿದೆ.

ಬಿಜೆಪಿ ಪಟ್ಟಿ ಯಾವಾಗ?; ಈ ಬಾರಿಯ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ 124, ಜೆಡಿಎಸ್ 93 ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಆದರೆ ಬಿಜೆಪಿ ಪಟ್ಟಿ ಇನ್ನೂ ಅಂತಿಮವಾಗಿಲ್ಲ. ಇಂದು ಸಾಮಾಜಿಕ ಜಾಲತಾಣದಲ್ಲಿ ಪಟ್ಟಿ ವೈರಲ್ ಆದ ಬಳಿಕ ಟ್ವೀಟ್ ಮಾಡಿದ್ದ ಬಿಜೆಪಿ 'ಕಾಂಗ್ರೆಸ್ ಸುಳ್ಳಿನ ಫ್ಯಾಕ್ಟರಿಯಿಂದ ಮತ್ತೊಂದು ಸುಳ್ಳು. ಭಾರತೀಯ ಜನತಾ ಪಾರ್ಟಿಯ ಅಭ್ಯರ್ಥಿ ಆಯ್ಕೆಯ ಪ್ರಕ್ರಿಯೆಯು ಪ್ರಗತಿಯಲ್ಲಿದ್ದು, ಈ ಪಟ್ಟಿಯು 'FAKE' ಆಗಿರುತ್ತದೆ' ಎಂದು ಹೇಳಿದೆ.
ಕರ್ನಾಟಕ ಬಿಜೆಪಿಯ ಪಟ್ಟಿ ವಿಚಾರವನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸುತ್ತಿದೆ. ಟ್ವೀಟ್‌ನಲ್ಲಿ ಕರ್ನಾಟಕ ಬಿಜೆಪಿಯಲ್ಲಿನ ಗುಂಪುಗಾರಿಕೆಯ ಬಗ್ಗೆಯೂ ವಿಚಾರವನ್ನು ಪ್ರಸ್ತಾಪಿಸಿದೆ. ಈ ಮೂಲಕ ಆಡಳಿತ ಪಕ್ಷದ ವಿರುದ್ಧ ಪ್ರತಿಪಕ್ಷ ಟೀಕಾಪ್ರಹಾರ ನಡೆಸಿದೆ.
ಮಂಗಳವಾರ ಕಾಂಗ್ರೆಸ್ ತನ್ನ ಟ್ವೀಟ್‌ನಲ್ಲಿ, "ತಾನೇ ಗುಜರಾತ್ ಮಾದರಿ ಅನುಸರಿಸಿ ಕ್ಷೇತ್ರ ಬದಲಾವಣೆ ಮಾಡೋದು, ತಾನೇ ಲಿಸ್ಟ್ ರಿಲೀಸ್ ಮಾಡೋದು, ಆಮೇಲೆ ಆಕಾಂಕ್ಷಿಗಳ, ಬೆಂಬಲಿಗರ ಪ್ರತಿಭಟನೆ ತಾಳಲಾರದೇ, ತಾನೇ ಅದನ್ನು ಫೇಕ್ ಅಂತ ಕರೆಯೋದು!. ಅಭ್ಯರ್ಥಿಗಳ ಮೊದಲ ಪಟ್ಟಿ ಹಿಂಪಡೆಸಿ "ಸಂತೋಷ" ಪಡುತ್ತಿರೋದು ಯಾರು? ಪಟ್ಟಿ ಹಿಂಪಡೆದಿದ್ದು ಶಿಕಾರಿಪುರದಲ್ಲಿ ವಿಜಯೇಂದ್ರೆ ಹೆಸರು ಬಂದಿದ್ದಕ್ಕಾ?' ಎಂದು ಕೇಳಿತ್ತು.
ಬಿಜೆಪಿ ಪಟ್ಟಿಯ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, "ಕಳೆದೆರೆಡು ದಿನಗಳಿಂದ ಜಿಲ್ಲಾ ಸಮಿತಿಗಳಲ್ಲಿ ತೆಗೆದುಕೊಂಡ ತೀರ್ಮಾನಗಳನ್ನು ಇಂದು ರಾಜ್ಯ ಕೋರ್ ಕಮಿಟಿ ಪರಿಶೀಲಿಸಿ, ಕೇಂದ್ರಕ್ಕೆ ಕಳುಹಿಸಿಕೊಡಲಿದೆ. ಬಹುತೇಕ ಏಪ್ರಿಲ್ 8 ಅಥವಾ 9ರಂದು ಅಧಿಕೃತ ಪಟ್ಟಿ ಬಿಡುಗಡೆಯಾಗಲಿದೆ" ಎಂದು ಹೇಳಿದ್ದಾರೆ.
ರಾಜ್ಯ ವಿಧಾನಸಭಾ ಚುನಾವಣೆಗೆ ಪಕ್ಷದ ಅಭ್ಯರ್ಥಿಗಳನ್ನು ಅಂತಿಮಗೊಳಿಸುವ ಹಿನ್ನಲೆಯಲ್ಲಿ ಮಂಗಳವಾರ ಮಹತ್ವದ ಸಭೆ ನಡೆಯಿತು. ಸಭೆಯಲ್ಲಿ ನಿಕಟಪೂರ್ವ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಸೇರಿದಂತೆ ಇತರ ಪ್ರಮುಖರು ಉಪಸ್ಥಿತರಿದ್ದರು. ಸಭೆಯಲ್ಲಿ ಪಟ್ಟಿಯನ್ನು ಅಂತಿಮಗೊಳಿಸಿ ಕೇಂದ್ರ ಚುನಾವಣಾ ಸಮಿತಿಗೆ ಕಳುಹಿಸಿಕೊಡಲಾಗುತ್ತದೆ.












Click it and Unblock the Notifications