ಮುಷ್ಕರ; ಆಗಸ್ಟ್ 1ರಿಂದ ನ್ಯಾಯಬೆಲೆ ಅಂಗಡಿ ಬಂದ್
ಬೆಂಗಳೂರು, ಜುಲೈ 30: ನ್ಯಾಯಬೆಲೆ ಅಂಗಡಿ ಮಾಲೀಕರ ಸಂಘ ಆಗಸ್ಟ್ 1ರಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸುವುದಾಗಿ ಘೋಷಣೆ ಮಾಡಿದೆ. ಮುಷ್ಕರದ ಅವಧಿಯಲ್ಲಿ ನ್ಯಾಯಬೆಲೆ ಅಂಗಡಿಗಳನ್ನು ಮುಚ್ಚಲಾಗುತ್ತದೆ.
Recommended Video
ಬುಧವಾರ ಬೆಳಗಾವಿಯಲ್ಲಿ ನಡೆದ ನ್ಯಾಯಬೆಲೆ ಅಂಗಡಿಗಳ ಮಾಲೀಕರ ಸಭೆಯಲ್ಲಿ ಮುಷ್ಕರ ನಡೆಸುವ ತೀರ್ಮಾನ ಕೈಗೊಳ್ಳಲಾಗಿದೆ. "ನಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗೆ ಸರ್ಕಾರದಿಂದ ಯಾವುದೇ ಸ್ಪಂದನೆ ಸಿಕ್ಕಿಲ್ಲ. ಆದ್ದರಿಂದ ಮುಷ್ಕರದ ತೀರ್ಮಾನಕ್ಕೆ ಬರಲಾಗಿದೆ" ಎಂದು ಸಂಘದ ರಾಜ್ಯ ಘಟಕದ ಉಪಾಧ್ಯಕ್ಷ ರಾಜಶೇಖರ ತಳವಾರ ಹೇಳಿದ್ದಾರೆ.
ಅಕ್ಕಪಕ್ಕದ ರಾಜ್ಯಗಳಲ್ಲಿ ಪ್ರತಿ ಕ್ವಿಂಟಾಲ್‌ಗೆ 200 ರೂ. ಕಮಿಷನ್ ನೀಡಲಾಗುತ್ತಿದೆ. ಆದರೆ, ನಮ್ಮಲ್ಲಿ 100 ರೂ. ಇದೆ. ಇದನ್ನು ಹೆಚ್ಚಿಸುವಂತೆ ಆಗ್ರಹಿಸಿ ನಾವು ನಡೆಸಿದ ಪ್ರಯತ್ನಗಳು ವಿಫಲವಾಗಿವೆ ಎಂದು ಸಂಘದ ಸದಸ್ಯರು ಆರೋಪಿಸಿದ್ದಾರೆ.
ತಿಂಗಳ ಮೊದಲ ವಾರದಲ್ಲಿ ಪಡಿತರ ಪಡೆಯಲು ಜನರು ನ್ಯಾಯಬೆಲೆ ಅಂಗಡಿಗೆ ಆಗಮಿಸುತ್ತಾರೆ. ಇಂತಹ ಸಮಯದಲ್ಲಿ ಮುಷ್ಕರ ನಡೆಸುವ ತೀರ್ಮಾನವನ್ನು ಅಂಗಡಿ ಮಾಲೀಕರು ಮಾಡಿದ್ದಾರೆ. ಸರ್ಕಾರ ಅಂಗಡಿ ಮಾಲೀಕರ ಬೇಡಿಕೆ ಈಡೇರಿಸಲಿದೆಯೇ? ಕಾದು ನೋಡಬೇಕು.

ಅಂಗಡಿ ಮಾಲೀಕರು ಪರದಾಡುತ್ತಿದ್ದಾರೆ
ಕೋವಿಡ್ ಸೋಂಕಿನ ನಡುವೆಯೂ ನ್ಯಾಯಬೆಲೆ ಅಂಗಡಿ ಮಾಲೀಕರು ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಜನರೊಂದಿಗೆ ಮುಖಾಮುಖಿಯಾಗುತ್ತಿದ್ದೇವೆ. ಹಲವು ಅಂಗಡಿ ಮಾಲೀಕರಿಗೆ ಸೋಂಕು ತಗುಲಿದೆ. ಆದರೂ ಸರ್ಕಾರ ಪಿಪಿಇ ಕಿಟ್ ಒದಗಿಸಿಲ್ಲ ಎಂದು ಅಂಗಡಿ ಮಾಲೀಕರು ಹೇಳಿದ್ದಾರೆ.

ಸರ್ಕಾರದಿಂದ ಸ್ಪಂದನೆ ಸಿಕ್ಕಿಲ್ಲ
ಹಲವು ನ್ಯಾಯಬೆಲೆ ಅಂಗಡಿಗಳ ಮಾಲೀಕರು ಕೇವಲ ಕಾರ್ಡ್ ಹೊಂದಿದ್ದಾರೆ. ಅವರು ಕುಟುಂಬ ನಿರ್ವಹಣೆ, ಅಂಗಡಿ ಬಾಡಿಗೆ, ನೌಕರರಿಗೆ ಸಂಬಳ ನೀಡಲು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಈ ಬಗ್ಗೆ ಸರ್ಕಾರದ ಗಮನ ಸೆಳೆದರೂ ಸ್ಪಂದನೆ ಸಿಕ್ಕಿಲ್ಲ ಎಂದು ದೂರಿದ್ದಾರೆ.

50 ಲಕ್ಷದ ವಿಮೆ ಮಾಡಿಸಬೇಕು
ಅಂಗಡಿ ಮಾಲೀಕರ ಮೇಲೆ ಕುಟುಂಬ ಸದಸ್ಯರು ಅವಲಂಬಿತರಾಗಿದ್ದಾರೆ. ಹೀಗಾಗಿ ಪ್ರತಿ ಮಾಲೀಕರು ಹಾಗೂ ಸಹಾಯಕರ ಹೆಸರಿನಲ್ಲಿ 50 ಲಕ್ಷ ಜೀವವಿಮೆ ಮಾಡಿಸಬೇಕು ಎನ್ನುವ ಬೇಡಿಕೆಯೂ ಹಾಗೆಯೇ ಉಳಿದಿದೆ ಎಂದು ಮಾಲೀಕರು ಹೇಳಿದ್ದಾರೆ.

ನಿಯಮಗಳನ್ನು ಬದಲಾವಣೆ ಮಾಡಿ
ಅಂಗಡಿ ಮಾಲೀಕರಿಗೆ ಕಮೀಷನ್ ಬಿಡುಗಡೆ ಮಾಡುವ ಅಧಿಕಾರವನ್ನು ಆಯಾ ಜಿಲ್ಲೆಯ ನಿರ್ದೇಶಕರಿಗೆ ನೀಡಬೇಕು. ಪ್ರಸ್ತುತ ಜಿಲ್ಲಾಧಿಕಾರಿಗಳಿಗೆ ಆ ಅಧಿಕಾರವಿದೆ. ಅವರು ಕಮೀಷನ್‌ಗೆ ಸಂಬಂಧಿಸಿದ ಕಡತಗಳನ್ನು ಗಮನಿಸಲು ಸಮಯ ಸಾಕಾಗುತ್ತಿಲ್ಲ. ಹೀಗಾಗಿ ನಿಯಮ ಬದಲಾವಣೆ ಮಾಡಬೇಕು ಎಂದು ಅಂಗಡಿ ಮಾಲೀಕರು ಒತ್ತಾಯಿಸಿದರು.












Click it and Unblock the Notifications