ಬಿಜೆಪಿ ಪಕ್ಷದಿಂದ ಎಸ್ ಟಿ ಸೋಮಶೇಖರ್, ಶಿವರಾಂ ಹೆಬ್ಬಾರ್ ಉಚ್ಚಾಟನೆ: ಬಿ ವೈ ವಿಜಯೇಂದ್ರ ಫಸ್ಟ್ ರಿಯಾಕ್ಷನ್
ಬೆಂಗಳೂರು, ಮೇ 27: ಶಾಸಕ್ ಶಿವರಾಮ್ ಹೆಬ್ಬಾರ್ ಹಾಗೂ ಎಸ್ಟಿ ಸೋಮಶೇಖರ್ಗೆ ಬಿಜೆಪಿ ಹೈಕಮಾಂಡ್ ಶಾಕ್ ನೀಡಿದೆ. ಇಬ್ಬರನ್ನೂ ಪಕ್ಷ ವಿರೋಧಿ ಚಟುವಟಿಕೆ ಆರೋಪದ ಮೇಲೆ ಆರು ವರ್ಷಗಳ ಕಾಲ ಉಚ್ಚಾಟನೆ ಮಾಡಿ ಆದೇಶ ಹೊರಡಿಸಿದ್ದು, ಈ ಕುರಿತು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಬಿಜೆಪಿ ಶಾಸಕರಾದ ಬಿ ವೈ ವಿಜಯೇಂದ್ರ ಅವರು ಪ್ರತಿಕ್ರಿಯಿಸಿದ್ದಾರೆ.
ಈ ಕುರಿತು ಬಿಜೆಪಿ ಕಚೇರಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ ವೈ ವಿಜಯೇಂದ್ರ ಅವರು ಮಾತನಾಡಿ, ಪಕ್ಷ ವಿರೋಧಿ ಚಟುವಟಿಕೆ ಮತ್ತು ಪಕ್ಷಕ್ಕೆ ಮುಜುಗರ ಆಗುವ ರೀತಿಯಲ್ಲಿ ನಡೆದುಕೊಂಡ ಬಿಜೆಪಿ ಶಾಸಕರಾದ ಎಸ್.ಟಿ.ಸೋಮಶೇಖರ್ ಮತ್ತು ಶಿವರಾಮ ಹೆಬ್ಬಾರ್ ಅವರ ಉಚ್ಚಾಟನೆಯ ಕ್ರಮ ಸ್ವಾಗತಾರ್ಹ ಎಂದು ಳಿಸಿದ್ದಾರೆ.

ಶಿಸ್ತು ಕ್ರಮ ಕೈಗೊಳ್ಳುವಂತೆ ರಾಜ್ಯ ಘಟಕ ಕೋರಿತ್ತು. ಬಿಜೆಪಿ ಕೇಂದ್ರ ಶಿಸ್ತು ಸಮಿತಿಯು ಶಾಸಕರಾದ ಎಸ್.ಟಿ.ಸೋಮಶೇಖರ್ ಮತ್ತು ಶಿವರಾಮ ಹೆಬ್ಬಾರ್ ಅವರನ್ನು ಉಚ್ಚಾಟನೆ ಮಾಡಿದೆ ಎಂದು ವಿವರಿಸಿದರು. ಎಸ್.ಟಿ.ಸೋಮಶೇಖರ್ ಮತ್ತು ಶಿವರಾಮ ಹೆಬ್ಬಾರ್ ಅವರು ಏನು ಪಕ್ಷವಿರೋಧಿ ಚಟುವಟಿಕೆ ಮಾಡಿದ್ದಾರೆಂದು ಅವರಿಬ್ಬರಿಗೂ ಹಾಗೂ ಕೇಂದ್ರ ನಾಯಕತ್ವಕ್ಕೆ ಗೊತ್ತಿದೆ. ಇದರ ಕುರಿತು ಡಿ.ಕೆ.ಶಿವಕುಮಾರ್ ಅವರು ಇಷ್ಟೊಂದು ನೋವು ಅಥವಾ ಬೇಸರ ಪಟ್ಟುಕೊಳ್ಳುವ ಅಗತ್ಯವಿಲ್ಲ, ಇದು ಪಕ್ಷದ ತೀರ್ಮಾನ ಎಂದು ತಿಳಿಸಿದರು.
ಬಿಜೆಪಿ ಸರಕಾರ ಬಂದ ನಂತರ ಅವರಿಬ್ಬರಿಗೂ ಉತ್ತಮ ಅವಕಾಶ ಲಭಿಸಿತ್ತು. ಆದರೆ, ಸರಕಾರ ಇಲ್ಲದಾದಾಗ, ವಿಪಕ್ಷದಲ್ಲಿದ್ದಾಗ ಅವರಿಗೆ ಸ್ವಲ್ಪ ಸಮಸ್ಯೆ ಆಗಿದೆ ಎಂದು ಕಾಣುತ್ತದೆ. ಅವರಿಬ್ಬರ ಕುರಿತು ರಾಜ್ಯ ಕೋರ್ ಕಮಿಟಿ ಸಭೆಯಲ್ಲೂ ಚರ್ಚೆ ಆಗಿತ್ತು. ಅವರಿಗೆ ನೋಟಿಸ್ ಕೊಡಲಾಗಿತ್ತು. ಅವರು ಕೊಟ್ಟ ಉತ್ತರದ ಕುರಿತು ಮಾಹಿತಿ ಇಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ ವೈ ವಿಜಯೇಂದ್ರ ಅವರು ಹೇಳಿದರು.
ಕದ್ದುಮುಚ್ಚಿ ರಾಜಕಾರಣ ಮಾಡದಿರಿ: ಛಲವಾದಿ ನಾರಾಯಣಸ್ವಾಮಿ
ಶಾಸಕರಾದ ಎಸ್.ಟಿ.ಸೋಮಶೇಖರ್ ಮತ್ತು ಶಿವರಾಮ ಹೆಬ್ಬಾರ್ ಅವರಿಗೆ ನಮ್ಮ ಜೊತೆ ಇರಲು ಇಷ್ಟವಿರಲಿಲ್ಲ; ಅವರು ರಾಜೀನಾಮೆ ಕೊಟ್ಟು ಹೋಗಬೇಕಿತ್ತು ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ತಿಳಿಸಿದ್ದಾರೆ. ಸದಸ್ಯತ್ವಕ್ಕೆ ಚ್ಯುತಿ ಬರದ ರೀತಿಯಲ್ಲಿ ನಮ್ಮ ಮುಖಂಡರು ಅವರನ್ನು ಹೊರಕ್ಕೆ ಕಳುಹಿಸಿದ್ದಾರೆ. ನಾನು ಅವರ ಉಚ್ಚಾಟನೆಯನ್ನು ಸ್ವಾಗತಿಸುತ್ತೇನೆ ಎಂದು ಹೇಳಿದರು. ಅವರ ಉಚ್ಚಾಟನೆಯು ಕೇಂದ್ರ ತೆಗೆದುಕೊಂಡ ನಿರ್ಧಾರ. ಅವರಿಬ್ಬರಿಗೂ ಖುಷಿ ಆಗಿರಬಹುದೆಂದು ನನಗೆ ಅನಿಸುತ್ತದೆ ಎಂದು ನುಡಿದರು.
ಇವರಿಬ್ಬರೂ ಹಗಲು- ರಾತ್ರಿ ಬೇರೆ ಪಕ್ಷದ ಮುಖಂಡರನ್ನು ಭೇಟಿ ಮಾಡುತ್ತಿದ್ದರು. ಈಗ ಬೇರೆಯವರು ಭೇಟಿ ಮಾಡುತ್ತಿದ್ದರೆ ಅವರನ್ನು ತಡೆಯಲು ಸಾಧ್ಯವಿಲ್ಲ. ನಮ್ಮ ಪಕ್ಷದಲ್ಲಿ ಶಿಸ್ತಿಗೆ ಒಳಪಟ್ಟು ಕೆಲಸ ಮಾಡುವವರಿಗೆ ಅವಕಾಶ ಇದೆ ಎಂದು ಪ್ರಶ್ನೆಗೆ ಉತ್ತರಿಸಿದರು. ಕದ್ದುಮುಚ್ಚಿ ರಾಜಕಾರಣ ಮಾಡುವುದನ್ನು ನಾನು ಒಪ್ಪುವುದಿಲ್ಲ. ಈಗ ಭಿನ್ನರ ಸಭೆ ನಡೆಯುತ್ತಿಲ್ಲ; ಇದ್ದಿದ್ದು ಇದೆರಡೇ. ಈಗ ಭಿನ್ನ ಚಟುವಟಿಕೆಗೆ ತೆರೆ ಎಳೆಯಲಾಗಿದೆ ಎಂದು ತಿಳಿಸಿದರು.












Click it and Unblock the Notifications