ಎಕ್ಸಿಟ್ ಪೋನ್ ನಂಬದ ಕಾಂಗ್ರೆಸ್ ನಾಯಕರು; ಗೆಲ್ಲುವ ಸ್ಥಾನಗಳ ಕುರಿತು ಕೈ ಪಡೆ ನಾಯಕರು ಹೇಳಿದ್ದೇನು?
ಬೆಂಗಳೂರು, ಜೂನ್ 03: ಪಂಚ ಗ್ಯಾರಂಟಿ ಯೋಜನೆಗಳನ್ನ ನೀಡುವ ಮೂಲಕ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಗೆ ಲೋಕಸಭಾ ಚುನಾವಣೆ ಪ್ರತಿಷ್ಠೆಯಾಗಿದ್ದು, ಬರೋಬ್ಬರಿ 20 ಕ್ಷೇತ್ರಗಳನ್ನ ಗೆಲ್ಲುವ ವಿಶ್ವಾಸವನ್ನ ವ್ಯಕ್ತಪಡಿಸಿದ್ದರು. ಆದರೆ ಮತಗಟ್ಟೆ ಸಮೀಕ್ಷೆಗಳು ಕೈ ನಾಯಕರ ಲೆಕ್ಕಾಚಾರವನ್ನ ತಲೆಕೆಳಗೆ ಮಾಡಿದ್ದು, ಹಲವು ಸಮೀಕ್ಷೆಗಳನ್ನ ಸುಳ್ಳು ಎಂದು ಹೇಳಿದ್ದಾರೆ.
ಲೋಕಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ 4 ರಿಂದ 6 ರಷ್ಟೇ ಸ್ಥಾನಗಳನ್ನು ಗೆದ್ದುಕೊಳ್ಳಲಿದೆ ಎಂದು ಮತಗಟ್ಟೆ ಸಮೀಕ್ಷೆಗಳು ಭವಿಷ್ಯ ನುಡಿದಿವೆ. ಮತಗಟ್ಟೆ ಸಮೀಕ್ಷೆ ಕುರಿತು ಭಾನುವಾರ ರಾತ್ರಿ ನಡೆದ ಶಾಸಕಾಂಗ ಸಭೆಯಲ್ಲಿ ಚರ್ಚೆ ನಡೆದಿದ್ದು, ಡಬಲ್ ಡಿಜಿಟ್ ದಾಟುವ ವಿಶ್ವಾಸವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ವ್ಯಕ್ತಪಡಿಸಿದ್ದಾರೆ.

ಭಾನುವಾರ ನಡೆದ ಸಿಎಲ್‌ಪಿ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ನಾವು ನಮ್ಮ ಮತದಾರರನ್ನು ನಂಬುತ್ತೇವೆ. ನಮ್ಮ ಗ್ಯಾರಂಟಿ ಕರ್ನಾಟಕದಲ್ಲಿ 15 ಸ್ಥಾನಗಳನ್ನು ಗೆಲ್ಲಿಸುತ್ತದೆ. ಕರ್ನಾಟಕದಲ್ಲಿ ಕಾಂಗ್ರೆಸ್‌ಗೆ ಕಡಿಮೆ ಸ್ಥಾನಗಳನ್ನು ನೀಡುತ್ತಿರುವ ಈ ಎಕ್ಸಿಟ್ ಪೋಲ್ ಸಂಖ್ಯೆಗಳನ್ನು ನಾವು ಹೇಗೆ ಒಪ್ಪಿಕೊಳ್ಳಲು ಸಾಧ್ಯ ಎಂದು ಪ್ರಶ್ನಿಸಿದ್ದಾರೆ ಎನ್ನಲಾಗಿದೆ.
ಕರ್ನಾಟಕದಲ್ಲಿ 18-20 ಸ್ಥಾನಗಳನ್ನು ಗೆಲ್ಲುತ್ತೇವೆ ಎಂದು ಕಾಂಗ್ರೆಸ್ ನಾಯಕರು ಹೇಳುತ್ತಿದ್ದಾರೆ. ಹಲವಾರು ಕಾಂಗ್ರೆಸ್ ಶಾಸಕರು ತಮ್ಮ ನಾಯಕ ರಾಹುಲ್ ಗಾಂಧಿಯವರ ಭಾವನೆಯನ್ನು ಪ್ರತಿಧ್ವನಿಸಿದರು, ಹಲವು ಕಾಂಗ್ರೆಸ್ ನಾಯಕರು ಎಕ್ಸಿಟ್ ಪೋಲ್ ಸಂಖ್ಯೆಗಳನ್ನು ಸುಳ್ಳು ಎಂದು ತಿಳಿಸಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಮಾತನಾಡಿ, ನಾವು ಹಲವಾರು ಚುನಾವಣೆಗಳನ್ನು ನೋಡಿದ್ದೇವೆ, ನಾವು ನಮ್ಮ ಸಂಖ್ಯೆಯನ್ನು ಪಡೆಯುತ್ತೇವೆ ಮತ್ತು ಎಕ್ಸಿಟ್ ಪೋಲ್‌ಗಳು ಏನು ಬೇಕಾದರೂ ಹೇಳಲಿ" ಎಂದು ಹೇಳಿದ್ದಾರೆ. ಚುನಾವಣಾ ಆಯೋಗವು ಆವರಣಕ್ಕೆ ಪ್ರವೇಶಿಸಲು ಸಾಧ್ಯವಿಲ್ಲ ಎಂದು ಹೇಳಿರುವುದರಿಂದ ಅಂತಿಮ ಅಂಕಿಅಂಶಗಳು ಬರುವವರೆಗೆ ಮತ ಎಣಿಕೆ ಕೇಂದ್ರಗಳ ಸುತ್ತಲೂ ಇರುವಂತೆ ಅವರು ತಮ್ಮ ಪಕ್ಷದವರಿಗೆ ಸೂಚಿಸಿದರು.
14 ಕ್ಷೇತ್ರಗಳಲ್ಲಿ ಗೆಲುವು ಖಚಿತ: ಎಂ ಬಿ ಪಾಟೀಲ್
ಶನಿವಾರ ಪ್ರಕಟಗೊಂಡಿರುವ ಎಕ್ಸಿಟ್ ಪೋಲ್ ನ ಫಲಿತಾಂಶವನ್ನು ನಂಬಲು ಸಾಧ್ಯವಿಲ್ಲ. ನಮ್ಮ ಗ್ಯಾರಂಟಿಗಳು ಎಲ್ಲರನ್ನೂ ವಿಶೇಷವಾಗಿ ಮಹಿಳೆಯರನ್ನು ತಲುಪಿದೆ. ಬೆಂಗಳೂರಿನಲ್ಲಿ 2 ಕ್ಷೇತ್ರಗಳು ಸೇರಿದಂತೆ ರಾಜ್ಯದಲ್ಲಿ ಕನಿಷ್ಠವೆಂದರೂ14, ಗರಿಷ್ಠ 20 ಕ್ಷೇತ್ರಗಳಲ್ಲಿ ನಾವು ಜಯಗಳಿಸುತ್ತೇವೆಂಬ ವಿಶ್ವಾಸವಿದೆ. ಅಂತೆಯೇ ದೇಶದಲ್ಲಿ ನಮ್ಮ 'ಇಂಡಿಯಾ' ಕೂಟ 295 ಸೀಟುಗಳನ್ನು ಗೆಲ್ಲಲಿದೆ. ಈ ಬಾರಿ ಮೋದಿ ಅಲೆ ಎಲ್ಲೂ ಇಲ್ಲ ಎಂದು ಸಚಿವ ಎಂ ಬಿ ಪಾಟೀಲ್ ಹೇಳಿದ್ದಾರೆ.
ಸಚಿವ ಎಚ್ ಕೆ ಪಾಟೀಲ್ ಮಾತನಾಡಿ, ಚುನಾವಣೋತ್ತರ ಭವಿಷ್ಯ ಸುಳ್ಳಾಗುತ್ತದೆ, ಜನರ ನಾಡಿ ಮಿಡಿತಕ್ಕೆ ಜಯ ಆಗುತ್ತದೆ. ಉತ್ತರ ಪ್ರದೇಶದಲ್ಲಿ 40 ಸ್ಥಾನ ತೋರಿಸಿದ್ದಾರೆ. ಕರ್ನಾಟಕದಲ್ಲಿ 3 - 4 ಸ್ಥಾನ ತೋರಿಸಿದ್ದಾರೆ.
ನಾವು ಕರ್ನಾಟಕದಲ್ಲಿ 16 ಸ್ಥಾನ ಗೆಲ್ಲುತ್ತೇವೆ. ಎಕ್ಸಿಟ್ ಫೊಲ್ ಗೆ ಸೋಲಾಗುತ್ತದೆ. ಜನರ ನಾಡಿ ಮಿಡಿತಕ್ಕೆ ಗೆಲುವಾಗುತ್ತದೆ ಎಂದು ಹೇಳಿದರು.
ಹಿರಿಯ ಸಚಿವರ ಜೊತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಭೆ ವಿಚಾರವಾಗಿ ಮಾತನಾಡಿ ಅವರು, ಸಭೆಯಲ್ಲಿ ಹಲವಾರು ವಿಚಾರ ಚರ್ಚೆ ಆಗಿದೆ. ಸಚಿವ ನಾಗೇಂದ್ರ ವಿಚಾರವಾಗಿ ಚರ್ಚೆ ಆಗಿದೆ, ಪಕ್ಷದ ಹಾಗೂ ನಾಯಕರ ನಿರ್ಧಾರ ಕಾದುಕೋಡಬೇಕು, ಸಿಎಂ ಡಿಸಿಎಂ ಹೈಕಮಾಂಡ್ ಸೂಕ್ತವಾದ ನಿರ್ಧಾರ ಕೈಗೊಳ್ಳುತ್ತಾರೆ ಎಂದು ಹೇಳಿದರು.












Click it and Unblock the Notifications