"ಧರ್ಮಸ್ಥಳ ಕೇಸ್‌ನಲ್ಲಿ ಬಿಜೆಪಿ ದ್ವಿಪಾತ್ರಾಭಿನಯಕ್ಕೆ ಆಸ್ಕರ್ ಕೊಟ್ಟರೂ ಕಡಿಮೆ"
ಧರ್ಮಸ್ಥಳ ಕೇಸ್ ವಿಚಾರವಾಗಿ ಬಿಜೆಪಿ ನಾಯಕರನ್ನು ಕಾಂಗ್ರೆಸ್ ಸಚಿವ ಪ್ರಿಯಾಂಕ್ ಖರ್ಗೆ ತರಾಟೆಗೆ ತೆಗೆದುಕೊಂಡಿದ್ದಾರೆ. 'ಧರ್ಮಸ್ಥಳ ಇಂದು ಇಬ್ಬರು ಸಂಘಪರಿವಾರದ ಮುಖಂಡರ ಪ್ರತಿಷ್ಠೆಯ ಆರ್‌ಎಸ್‌ಎಸ್ vs ಆರ್‌ಎಸ್‌ಎಸ್ ಕಾಳಗದ ಕಣವಾಗಿದೆ ಎಂದು ಟೀಕಿಸಿದ್ದಾರೆ. ಚಿವುಟುವುದೂ ಬಿಜೆಪಿ, ತೊಟ್ಟಿಲು ತೂಗುವುದೂ ಬಿಜೆಪಿ. ಧರ್ಮಸ್ಥಳ ಪ್ರಕರಣದಲ್ಲಿನ ಬಿಜೆಪಿಯ ದ್ವಿಪಾತ್ರಾಭಿನಯಕ್ಕೆ ಆಸ್ಕರ್ ಕೊಟ್ಟರೂ ಕಡಿಮೆಯೇ' ಎಂದು ಪ್ರಿಯಾಂಕ್ ವ್ಯಂಗ್ಯವಾಡಿದ್ದಾರೆ.
'ಧರ್ಮಸ್ಥಳ ಪ್ರಕರಣದಲ್ಲಿ ಬಿಜೆಪಿಯ ಎಂಬ ಎರಡು ತಲೆಯ ಹಾವು ಎರಡು ಕಡೆಯೂ ಹೆಡೆ ಆಡಿಸುತ್ತಿದೆ. ಬಿಜೆಪಿ ಆರೋಪಿಸುತ್ತಿರುವ ವ್ಯಕ್ತಿಗಳೂ ಬಿಜೆಪಿಯವರೇ ಎಂದು ವಾಗ್ದಾಳಿ ನಡೆಸಿದ್ದಾರೆ. ಗಿರೀಶ್ ಮಟ್ಟಣ್ಣನವರ್ ಬಿಜೆಪಿಯ ಸಕ್ರಿಯ ಕಾರ್ಯಕರ್ತ ಹಾಗೂ ಯುವ ಮೋರ್ಚಾದ ಅಧ್ಯಕ್ಷರಾಗಿದ್ದವರು. 2013ರಲ್ಲಿ ಗುರ್ಮಿಟ್ಕಲ್ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿದ್ದವರು' ಎಂದು ನೆನಪಿಸಿದ್ದಾರೆ.

'ಇನ್ನು ಮಹೇಶ್ ಶೆಟ್ಟಿ ತಿಮರೋಡಿ ಬಿಜೆಪಿ ಪಕ್ಷದಲ್ಲೇ ಇದ್ದವರು. ಸಂಘಪರಿವಾರದ ನಾಯಕರು, ಸದಾ ಸಾವರ್ಕರ್, ಗೋಲ್ವಾಲ್ಕರ್ ಫೋಟೋ ಇಟ್ಟುಕೊಂಡಿರುವವರು. ಕೇಸರಿ ಶಾಲು ಹಾಕಿಕೊಂಡಿರುವವರು. ಸಾವರ್ಕರ್ ಅನುಯಾಯಿಯ ಬಗ್ಗೆಯೇ ಬಿಜೆಪಿಗೆ ಅಸಹನೆ ಹೊಂದಿರುವುದು ಪರಮಾಶ್ಚರ್ಯ ಎಂದು ಟೀಕಿಸಿದ್ದಾರೆ. ಇವರೆಲ್ಲ ಸಂಘಪರಿವಾರದ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ಟರ ಬಣದವರಲ್ಲವೇ? ಅವರ ಅಣತಿಯಂತೆಯೇ ಇವರ ಹೋರಾಟ ನಡೆಯುತ್ತಿರುವುದಲ್ಲವೇ? ಬಿಜೆಪಿ ನಾಯಕರು ಉತ್ತರಿಸಬೇಕು' ಎಂದು ಒತ್ತಾಯಿಸಿದ್ದಾರೆ.
ಕಲ್ಲಡ್ಕ ಭಟ್ಟರಿಗೆ ಧರ್ಮಸ್ಥಳ ಬೇಡವಾಯ್ತಾ?
'ಬಿಜೆಪಿಯ "ಧರ್ಮಸ್ಥಳ ಚಲೋ" ವೇದಿಕೆಯಲ್ಲಿ ಕರಾವಳಿಯ ಭಾಗದ ನಾಯಕರು ಮಾತನಾಡದೆ, ವೇದಿಕೆ ಬಿಟ್ಟು ಹೋಗಿದ್ದೇಕೆ? ಕಲ್ಲಡ್ಕ ಪ್ರಭಾಕರ್ ಭಟ್ ಕಾಣಿಸಿಕೊಂಡಿಲ್ಲ ಏಕೆ? ಇದುವರೆಗೂ ಪ್ರಭಾಕರ್ ಭಟ್ ಧರ್ಮಸ್ಥಳದ ಪರವಾಗಿ ಒಂದೇ ಒಂದು ಹೇಳಿಕೆ ನೀಡದಿರುವುದೇಕೆ? ಕಲ್ಲಡ್ಕ ಭಟ್ಟರಿಗೆ "ಧರ್ಮಸ್ಥಳ" ಬೇಡವಾಗಿದೆಯೇ?ಧರ್ಮಸ್ಥಳ ಇಂದು ಇಬ್ಬರು ಸಂಘಪರಿವಾರದ ಮುಖಂಡರ ಪ್ರತಿಷ್ಠೆಯ ಕಾಳಗದ ಕಣವಾಗಿದೆ. ಹೀಗಿರುವಾಗ ಬಿಜೆಪಿಯ ಹೋರಾಟ, ಹಾರಾಟ, ಚೀರಾಟ ಯಾರ ವಿರುದ್ಧ? ಎಂದು ಆತ್ಮಾವಲೋಕನ ಮಾಡಿಕೊಳ್ಳಲಿ' ಎಂದು ಪ್ರಿಯಾಂಕ್ ಸವಾಲು ಹಾಕಿದ್ದಾರೆ.

ರಾಜ್ಯ ಬಿಜೆಪಿ ನಾಯಕರು ಧರ್ಮಸ್ಥಳಕ್ಕೆ ಭೇಟಿ ನೀಡಿ, ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರ ಆಶೀರ್ವಾದ ಪಡೆದರು. ಅಲ್ಲದೆ ಮೃತ ಸೌಜನ್ಯ ಅವರ ಕುಟುಂಬಸ್ಥರನ್ನು ಭೇಟಿಯಾಗಿದ್ದಾರೆ. ಹೆಣ್ಣುಮಗಳು ಸೌಜನ್ಯಳ ಮೇಲೆ ನಡೆದಿರುವ ಭೀಕರ ಅತ್ಯಾಚಾರದ ಪೈಶಾಚಿಕ ಕೃತ್ಯ ಅತ್ಯಂತ ಖಂಡನೀಯ. ಘಟನೆ ನಡೆದು 12 ವರ್ಷಗಳಾದರೂ ಅಟ್ಟಹಾಸ ಮೆರೆದ ದುರುಳರು ಪತ್ತೆಯಾಗದಿರುವುದು ಬಹುದೊಡ್ಡ ವಿಪರ್ಯಾಸ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಹೇಳಿದ್ದಾರೆ.
ಧರ್ಮಸ್ಥಳ ಚಲೋ ವೇದಿಕೆಯಲ್ಲಿಯೂ ಸೌಜನ್ಯ ಸಾವಿಗೆ ನ್ಯಾಯ ಸಿಗಲು ಮರು ತನಿಖೆ ನಡೆಸುವಂತೆ ಸರ್ಕಾರವನ್ನು ಒತ್ತಾಯಿಸಲಾಗಿದೆ. ಈ ನಿಟ್ಟಿನಲ್ಲಿ ಬಿಜೆಪಿ ತನ್ನ ಸಹಾನುಭೂತಿ ಹಾಗೂ ಬೆಂಬಲ ವ್ಯಕ್ತಪಡಿಸಲು ಸೌಜನ್ಯ ಅವರ ಮನೆಗೆ ತೆರಳಿ ಅವರ ತಾಯಿ ಶ್ರೀಮತಿ ಕುಸುಮಾವತಿ ಯವರನ್ನು ಭೇಟಿಯಾಗಿ 'ನಿಮ್ಮೊಂದಿಗೆ ನಾವಿದ್ದೇವೆ' ಎಂಬ ಅಭಯ ನೀಡಿದೆ ಎಂದಿದ್ದಾರೆ.












Click it and Unblock the Notifications