ಗಡಿ ಪ್ರದೇಶದ ಅಭಿವೃದ್ಧಿಗೆ ಪ್ರತ್ಯೇಕ ಸಚಿವಾಲಯ ಸ್ಥಾಪಿಸಿ, ಮಂತ್ರಿಗಳನ್ನು ನೇಮಿಸಿ: ಎಚ್.ಕೆ ಪಾಟೀಲ್ ಆಗ್ರಹ
ಬೆಳಗಾವಿ,ಡಿಸೆಂಬರ್ 23: ಗಡಿ ಭಾಗದ ಜನರ ಕಲ್ಯಾಣಕ್ಕಾಗಿ, ಅಲ್ಲಿನ ಜನರು, ಗಡಿಯ ಕಾಳಜಿಗಾಗಿ, ಗಡಿ ಭಾಗದ ಕೆಲಸಗಳಿಗಾಗಿ ರಾಜ್ಯ ಸರ್ಕಾರ ಪ್ರತ್ಯೇಕ ಸಚಿವ ಸ್ಥಾನವನ್ನು ಸೃಷ್ಟಿಸಿ, ಮಂತ್ರಿಗಳನ್ನು ನೇಮಿಸಬೇಕು ಎಂದು ಶಾಸಕ ಎಚ್.ಕೆ ಪಾಟೀಲ್ ಅವರು ಮನವಿ ಮಾಡಿದರು.
ವಿಧಾನಸಭೆಯಲ್ಲಿ ಗಡಿ ಪ್ರದೇಶದ ಅಭಿವೃದ್ಧಿ ಪ್ರಾಧಿಕಾರದ ತಿದ್ದುಪಡಿ ವಿಧೇಯಕದ ಬಗ್ಗೆ ನಡೆದ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಗಡಿ ಪ್ರದೇಶದಲ್ಲಿರುವ ಗ್ರಾಮಗಳು, ಪಟ್ಟಣಗಳ ಅಭಿವೃದ್ಧಿಗಾಗಿ ಹೆಚ್ಚಿನ ಅನುದಾನ ಬಿಡುಗಡೆ ಮಾಡಿ. ಇಲ್ಲದಿದ್ದರೆ ಬೇರೆ ರಾಜ್ಯದವರು ನಾವು ಅಭಿವೃದ್ಧಿ ಮಾಡ್ತೀವಿ ಎಂದು ಬರುತ್ತಾರೆ. ಆಗ ಸರ್ಕಾರಕ್ಕೆ ಮುಜುಗರ ಉಂಟಾಗುತ್ತದೆ. ಈ ಮುಜುಗರವನ್ನು ತಪ್ಪಿಸಲು ಗಡಿ ಪ್ರದೇಶದ ಗ್ರಾಮ, ಪಟ್ಟಣಗಳ ಅಭಿವೃದ್ಧಿಗೆ 50 ಕೋಟಿ ರೂ. ಅನುದಾನ ನೀಡಿ, ನಿಮ್ಮವರೇ ಗಡಿ ಅಭಿವೃದ್ಧಿ ಪ್ರಾಧಿಕಾರಕ್ಕೆ ನಿಮ್ಮವರೇ ಚೇರ್‌ಮನ್ ಇರ್ತಾರೆ ಅವರಿಗೂ ಅಧಿಕಾರ ಕೊಡಿ ಎಂದು ಹೇಳಿದರು.
ಗಡಿ ಭಾಗದ ಜನರ ಕಲ್ಯಾಣಕ್ಕಾಗಿ, ಅಲ್ಲಿನ ಜನರು, ಗಡಿಯ ಕಾಳಜಿಗಾಗಿ, ಗಡಿ ಭಾಗದ ಕೆಲಸಗಳಿಗಾಗಿ ರಾಜ್ಯ ಸರ್ಕಾರ ಪ್ರತ್ಯೇಕ ಸಚಿವ ಸ್ಥಾನವನ್ನು ಸೃಷ್ಟಿಸಿ, ಮಂತ್ರಿಗಳನ್ನು ನೇಮಿಸಬೇಕು. ಇಲ್ಲದಿದ್ದರೆ ರಾಜ್ಯಕ್ಕೆ ಬಹಳಷ್ಟು ತೊಂದರೆಗಳು ಆಗುತ್ತವೆ. ಅವರು ಹೇಳಿದ್ದಾರೆ, ನಾವ್ಯಾಕ್ ಮಾಡ್ಬೇಕು ಎಂದು ಪ್ರತಿಷ್ಠೆಗೆ ತಗೊಂಡುಬಿಡ್ತೀರಿ. ಇದರಿಂದ ರಾಜ್ಯಕ್ಕೆ ಸಮಸ್ಯೆ ಆಗುತ್ತದೆ. ಕಾನೂನು ಸಚಿವರು ಈ ಕೆಲಸವನ್ನು ಗಮನಹರಿಸಿ ಮಾಡಬೇಕು ಎಂದು ಕಾನೂನು ಸಚಿವ ಜೆಸಿ ಮಾಧುಸ್ವಾಮಿ ಅವರಿಗೆ ಮನವಿ ಮಾಡಿದರು. ಅದಲ್ಲದೇ ತಿದ್ದುಪಡಿ ಮಸೂದೆಗೆ ಸಹಮತ ವ್ಯಕ್ತಪಡಿಸಿದರು.

ಚಾಪೆ ಕೆಳಗೆ ನುಸುಳುವವರಿಗೆ ಕ್ರಮ ಕೈಗೊಳ್ಳಿ
ಇನ್ನು, 2022ನೇ ಕರ್ನಾಟಕ ಭೂ ಕಂದಾಯ 2ನೇ ತಿದ್ದುಪಡಿ ವಿಧೇಯಕದ ಚರ್ಚೆಯ ವೇಳೆ ಮಾತನಾಡಿದ ಅವರು, ಸರ್ಕಾರ ತಂದಿರುವ ತಿದ್ದುಪಡಿ ವಿಧೇಯಕವನ್ನು ನಾನು ಸ್ವಾಗತಿಸುತ್ತೇನೆ. ಆದರೆ, ನಾವು ಭೂ ಪರಿವರ್ತನೆಗೆ ಅರ್ಜಿ ಕೊಟ್ಟಾಗ ಯಾವುದೋ ಒಂದು ದಾಖಲೆ ಇಲ್ಲ ಎಂದು ಅರ್ಜಿಯನ್ನು ತಿರಸ್ಕರಿಸುತ್ತಾರೆ ಅಥವಾ ವಾಪಸ್ ಕಳಿಸಿಬಿಡ್ತಾರೆ. ಇದು ಅನವಶ್ಯಕ ಪ್ರಕ್ರಿಯೆ. ನಮ್ಮ ದಾಖಲೆ ಅವರ ಹತ್ತಿರವೇ ಇರುತ್ತದೆ ಅಥವಾ ನಾವು ಅರ್ಜಿ ಕೊಟ್ಟ ದಾಖಲೆ ಪತ್ರಗಳಲ್ಲಿಯೇ ಇರುತ್ತದೆ ಎಂದರು.
ಹೀಗಿದ್ದರೂ ಇನ್ನೊಂದು ದಾಖಲೆ ಬೇಕು ಅಂತಾ ಮತ್ತೊಂದು ದಾಖಲೆಯನ್ನು ಸೃಷ್ಟಿಸುತ್ತಾರೆ. ಇಂತಹದ್ದನ್ನು ನಿರ್ಬಂಧಿಸುವುದಕ್ಕೆ ಈ ಕಾನೂನಿನಲ್ಲಿ ಏನು ಕ್ರಮ ಕೈಗೊಂಡಿದೀರಿ. ನಿಮ್ಮ ಉದ್ದೇಶ ಸ್ಪಷ್ಟವಾಗಿದೆ. ಆದರೆ, ಚಾಪೆ ಕೆಳಗೆ ನುಸುಳುವವರಿಗೆ ಏನು ಕ್ರಮ ಕೈಗೊಳ್ತೀರಿ. ನಿಮ್ಮ ಉದ್ದೇಶ ಈಡೇರಲು 5 ರಿಂದ 10 ವರ್ಷ ಬೇಕಾಗುತ್ತದೆ. ಅದಕ್ಕಾಗಿ ಆಡಳಿತಾತ್ಮಕ ಬದಲಾವಣೆ ಆಗಬೇಕು, ಅಧಿಕಾರಿಗಳ ಮಾನಸಿಕತೆಯು ಬದಲಾಗಬೇಕು. ಅದಕ್ಕಾಗಿ ಸದನದಿಂದ ಸ್ಪಷ್ಟ ಸಂದೇಶ ನೀಡಿ ಎಂದು ಹೇಳಿದರು.

ಸುವರ್ಣಸೌಧದಲ್ಲಿ ಎಸಿ ಆಫ್ ಮಾಡಿಸಿ
ಸುವರ್ಣ ಸೌಧದಲ್ಲಿನ ಎಸಿಯನ್ನು ಆಫ್ ಮಾಡಿಸುವ ಅಗತ್ಯ ಇದೆ. ಇದರಿಂದಲೂ ಕೋವಿಡ್ ಬರಬಹುದೆಂಬ ಚರ್ಚೆ ಇದೆ ಎಂದು ಶಾಸಕ ಎಚ್‌ಕೆ ಪಾಟೀಲ್ ಹೇಳಿದರು.
ಕೊರೊನಾ ವಿಚಾರವಾಗಿ ನಡೆದ ಚರ್ಚೆಯ ವೇಳೆ ಮಾತನಾಡಿದ ಅವರು, ಕೋವಿಡ್ ವೇಳೆ ಬೆಂಗಳೂರಿನಲ್ಲಿ ವಿಧಾನಸಭಾ ಅಧಿವೇಶನ ನಡೆದಾಗ ನಾವು 26 ಜನ ಅಲ್ಲಿಂದಲೇ ನೇರವಾಗಿ ಆಸ್ಪತ್ರೆಗೆ ದಾಖಲಾಗಿದ್ದೇವು. ಅದು ನಿಮಗೂ ಗೊತ್ತಿದೆ. ಅದರ ಕಾರಣ ಚರ್ಚೆ ಮಾಡುವಾಗ ಎಸಿಯಿಂದ ಆ ರೀತಿ ಆಗಿದೆ ಎಂದು ಒಂದಿಷ್ಟು ಚರ್ಚೆ ಆಗಿತ್ತು. ಆದ್ದರಿಂದ ಇಲ್ಲಿ ಕನಿಷ್ಠ ಎಸಿಯನ್ನಾದರೂ ಆಫ್ ಮಾಡಿಸ್ತೀರಾ ನೋಡಿ, ಈ ವಿಚಾರವನ್ನು ತಾಂತ್ರಿಕ ತಜ್ಞರ ಜೊತೆ ಚರ್ಚೆ ಮಾಡಿ ನಿರ್ಧಾರ ತೆಗೆದುಕೊಳ್ಳಿ. ನನಗೆ ತಜ್ಞರು ಮಾಹಿತಿ ನೀಡಿರುವ ಪ್ರಕಾರ ಎಸಿ ಆಫ್ ಮಾಡಿಸಬೇಕಾದ ಅಗತ್ಯ ಇದೆ ಎಂದು ಹೇಳಿದರು.












Click it and Unblock the Notifications