ಕರ್ನಾಟಕ: ಈ ರೈತರಿಗೆ ಹಗಲು ತ್ರಿ-ಫೇಸ್ ವಿದ್ಯುತ್ ನೀಡಿ: ಖಂಡ್ರೆ
ಬೆಂಗಳೂರು, 12: ಕರ್ನಾಟಕ ರಾಜ್ಯ ಅರಣ್ಯ ಇಲಾಖೆಯು ಕಾಡುಪ್ರಾಣಿ ಮತ್ತು ಮಾನವ ಸಂಘರ್ಷ ತಪ್ಪಿಸಲು ಮುಂದಾಗಿದೆ. ಈ ನಿಟ್ಟಿನಲ್ಲಿ ತಂತ್ರಜ್ಞಾನ ಅಳವಡಿಕೆಗೆ ಸೂಚಿಸಿದ್ದ ಇಲಾಖೆ ಸಚಿವ ಈಶ್ವರ್ ಖಂಡ್ರೆ ಅವರು ಇದೀಗ ರಾತ್ರಿ ವಿದ್ಯುತ್ ಪೂರೈಕೆಗೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದಾರೆ.
ರಾತ್ರಿ ಹೊತ್ತು ಕಾಡಂಚಿನ ರೈತರಿಗೆ ತ್ರೀಫೇಸ್ ವಿದ್ಯುತ್ ನೀಡುತ್ತಿರುವುದರಿಂದ ರೈತರು ಕಾಡು ಪ್ರಾಣಿಗಳ ದಾಳಿಗೆ ತುತ್ತಾಗುವ, ಜೀವ ಹಾನಿ ಸಾಧ್ಯತೆಗಳು ಇರುತ್ತವೆ. ಕೆಲವೊಮ್ಮೆ ಕಾಡು ಪ್ರಾಣಿಗಳ ಜೀವಕ್ಕೂ ಕುತ್ತು ಬರುವ ಸಾಧ್ಯತೆ ಇರುತ್ತದೆ.

ಇದೆಲ್ಲ ಕಾರಣದಿಂದ ಅರಣ್ಯ ಸಚಿವ ಇಲಾಖೆ ಸಚಿವ ಈಶ್ವರ್ ಖಂಡ್ರೆ ಅವರು, ಕಾಡಂಚಿನ ರೈತರಿಗೆ ರಾತ್ರಿಗೆ ಬದಲು ಹಗಲು ಹೊತ್ತಿನಲ್ಲಿ ತ್ರಿ-ಫೇಸ್ ವಿದ್ಯುತ್ ಪೂರೈಕೆ ಮಾಡುವಂತೆ ಮುಖ್ಯಮಂತ್ರಿ ಸಿಎಂ ಸಿದ್ದರಾಮಯ್ಯಗೆ ಪತ್ರದ ಮೂಲಕ ಮನವಿ ಮಾಡಿದ್ದಾರೆ.
ರಾತ್ರಿ ವೇಳೆ ತ್ರೀಫೆಸ್ ವಿದ್ಯುತ್ ನೀಡಿದಾಗ ರೈತರು ಪಂಪ್ ಸೆಟ್ ಆನ್ ಮಾಡಲು, ನೀರು ಹಾಯಿಸಲು ತೆರಳಿದಾಗಿ ಕೆಲವು ಘಟನೆಗಳು ವರದಿ ಆಗಿವೆ. ಈ ಸಂಬಂಧ ಇಂತದ್ದೊಂದು ನಿರ್ಧಾರಕ್ಕೆ ಸಚಿವರು ಬಂದಿದ್ದಾರೆ ಎಂದು ಇಲಾಖೆ ಮೂಲಗಳು ತಿಳಿಸಿವೆ.

ಇಂಧನ ಇಲಾಖೆಗೂ ಮನವಿ
ಇದೇ ವಿಚಾರವಾಗಿ ಇಂಧನ ಇಲಾಖೆಗೂ ಮನವಿ ಮಾಡಿರುವ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರು, ರಾತ್ರಿ ವೇಳೆ ತ್ರೀಫೇಸ್ ವಿದ್ಯುತ್ ಒದಗಿಸದಂತೆ ನಿರ್ದೇಶಿಸಲು ಅವರು ಕೋರಿದ್ದಾರೆ.
ಇತ್ತೀಚೆಗಷ್ಟೇ ಸಭೆಯಲ್ಲಿ ಸಚಿವರು ಕಾಡಂಚಿನ ಪ್ರದೇಶಗಳಲ್ಲಿ ಪ್ರಾಣಿ ಮತ್ತು ಮಾನವನ ಸಂಘರ್ಷ ತಡೆಗೆ ತಂತ್ರಜ್ಞಾನ ಆಧಾರಿತ ಯೋಜನೆ ರೂಪಿಸಬೇಕೆಂದು ಅಧಿಕಾರಿಗಳಿಗೆ ತಿಳಿಸಿದ್ದರು. ಅದರೊಂದಿಗೆ ಕಾಡಿನ ಬಫರ್ ಝೋನ್‌ಗೆ ಆಗಾಗ ಅರಣ್ಯಾಧಿಕಾರಿಗಳು ಭೇಟಿ ನೀಡುವಂತೆ ಸಚಿವರು ನಿರ್ದೇಶಿಸಿದ್ದಾರೆ.
ತಂತ್ರಜ್ಞಾನ ಅಳವಡಿಕೆ ಕ್ರಿಯಾ ಯೋಜನೆ ರೂಪಿಸಬೇಕು. ಇಂತಹ ಯೋಜನೆಗಳ ಅಳವಡಿಕೆ ರಾಜ್ಯ ಸರ್ಕಾರದಲ್ಲಿ ಧನ ಸಹಾಯ ನೀಡುವಲ್ಲಿ ಯಾವುದೇ ಕೊರತೆ ಎದುರಿಸುತ್ತಿಲ್ಲ ಎಂದು ಸಚಿವರು ತಿಳಿಸಿದ್ದಾರೆ.












Click it and Unblock the Notifications