ಉದ್ಯೋಗಿಯೊಬ್ಬರ ಪಿಎಫ್ ಹಣ ವರ್ಗಾವಣೆಗೆ 10 ವರ್ಷ ವಿಳಂಬ: EPFO ಗೆ 50,000 ರೂ ದಂಡ ವಿಧಿಸಿದ ಗ್ರಾಹಕ ನ್ಯಾಯಾಲಯ
ಟೆಕ್ ಮಹೀಂದ್ರಾದಿಂದ ಇನ್ಫೋಸಿಸ್‌ಗೆ ತಮ್ಮ ಪ್ರಾವಿಡೆಂಟ್ ಫಂಡ್ (PF) ವರ್ಗಾವಣೆ ಮಾಡಲು ಬರೋಬ್ಬರಿ 10 ವರ್ಷಗಳ ಕಾಲ ಕಾಯುವಂತೆ ಮಾಡಿದ 'ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ'ಗೆ (EPFO) ಚಂಡೀಗಢನ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗವು 50,000 ರೂಪಾಯಿಗಳ ದಂಡ ವಿಧಿಸಿದೆ. ಪಿಎಫ್ ಖಾತೆಯ ಹಣ ವರ್ಗಾವಣೆ ವಿಳಂಬಕ್ಕೆ ಸಾಫ್ಟ್‌ವೇರ್ ಮತ್ತು ತಾಂತ್ರಿಕ ಸಮಸ್ಯೆಗಳನ್ನು ಯಾವುದೇ ಕಾರಣಕ್ಕೂ ನೆಪವಾಗಿ ನೀಡುವಂತಿಲ್ಲ ಎಂದು ನ್ಯಾಯಾಲಯ ಖಡಕ್ ಎಚ್ಚರಿಕೆ ನೀಡಿದೆ.
ಏನಿದು ಪ್ರಕರಣ?
ಓಮೇಶ್ ಗರ್ಗ್ ಎಂಬುವವರು ಫೆಬ್ರವರಿ 27, 2009 ರವರೆಗೆ ಪುಣೆಯ ಟೆಕ್ ಮಹೀಂದ್ರಾದಲ್ಲಿ ಉದ್ಯೋಗಿಯಾಗಿದ್ದರು. ಅಲ್ಲಿ ಅವರ ಹೆಸರಿನಲ್ಲಿ ಪಿಎಫ್ ಖಾತೆಯನ್ನು ತೆರೆಯಲಾಗಿತ್ತು. ಅಲ್ಲಿಂದ ಕೆಲಸ ಬಿಟ್ಟ ನಂತರ ಸ್ವಲ್ಪ ಸಮಯ ನಿರುದ್ಯೋಗಿಯಾಗಿದ್ದ ಅವರು, ಜುಲೈ 19, 2010 ರಂದು ಇನ್ಫೋಸಿಸ್‌ಗೆ ಸೇರಿಕೊಂಡರು. ಇನ್ಫೋಸಿಸ್ ಎಚ್‌ಆರ್ ವಿಭಾಗವು ಅವರಿಗಾಗಿ ಮತ್ತೊಂದು ಹೊಸ ಪಿಎಫ್ ಖಾತೆಯನ್ನು ತೆರೆಯಿತು. ಇದರಿಂದಾಗಿ ಗರ್ಗ್ ಅವರು EPFO ನಲ್ಲಿ ಏಕಕಾಲದಲ್ಲಿ ಎರಡು ಪಿಎಫ್ ಖಾತೆಗಳನ್ನು ಹೊಂದಿದ್ದರು.

ಹಳೆಯ ಖಾತೆಯ ಹಣವನ್ನು ಹೊಸ ಖಾತೆಗೆ ವರ್ಗಾಯಿಸಲು ಗರ್ಗ್ ಅವರು ತಮ್ಮ ಪ್ರಸ್ತುತ ಉದ್ಯೋಗದಾತರ (ಇನ್ಫೋಸಿಸ್) ಮೂಲಕ ಸೆಪ್ಟೆಂಬರ್ 2010 ರಲ್ಲಿ ಅರ್ಜಿ ಸಲ್ಲಿಸಿದರು. ಆದರೆ, EPFO ನಿಂದ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ನಿರಂತರ ಪ್ರಯತ್ನಗಳ ಹೊರತಾಗಿಯೂ ಯಾವುದೇ ಫಲಿತಾಂಶ ಸಿಗದಿದ್ದಾಗ, ತಮ್ಮ ವರ್ಗಾವಣೆ ಅರ್ಜಿಯ ಸ್ಥಿತಿಯನ್ನು ತಿಳಿಯಲು ಗರ್ಗ್ ಅವರು ಸೆಪ್ಟೆಂಬರ್ 9, 2011 ರಂದು ಆರ್‌ಟಿಐ (RTI) ಮೂಲಕ ಮಾಹಿತಿ ಕೇಳಿದರು.
ಹಣ ವರ್ಗಾವಣೆಗೆ 10 ವರ್ಷಗಳ ವಿಳಂಬ
ನವೆಂಬರ್ 9, 2011 ರಂದು ಗರ್ಗ್ ಅವರ ಆರ್‌ಟಿಐಗೆ ಪ್ರತಿಕ್ರಿಯಿಸಿದ ಇಪಿಎಫ್‌ಒ, ಹಲವು ವರ್ಷಗಳ ಕಾಲ ಕೇವಲ ಪತ್ರ ವ್ಯವಹಾರವನ್ನು ಮಾತ್ರ ಮುಂದುವರೆಸಿತು. ಅಂತಿಮವಾಗಿ, ಏಪ್ರಿಲ್ 16, 2020 ರಂದು, ಅಂದರೆ ಬರೋಬ್ಬರಿ 10 ವರ್ಷಗಳ ಸುದೀರ್ಘ ವಿಳಂಬದ ನಂತರ ಇಪಿಎಫ್‌ಒ ಗರ್ಗ್ ಅವರ ಹೊಸ ಪಿಎಫ್ ಖಾತೆಗೆ 6.21 ಲಕ್ಷ ರೂಪಾಯಿಗಳನ್ನು ವರ್ಗಾಯಿಸಿತು. ಆದರೆ, ಗರ್ಗ್ ಅವರ ಲೆಕ್ಕಾಚಾರದ ಪ್ರಕಾರ, ಅವರಿಗೆ 11.07 ಲಕ್ಷ ರೂಪಾಯಿ ಸಿಗಬೇಕಿತ್ತು. ಇಲ್ಲಿ ಬರೋಬ್ಬರಿ 4 ಲಕ್ಷಕ್ಕೂ ಅಧಿಕ ಮೊತ್ತದ ವ್ಯತ್ಯಾಸವಿದ್ದ ಕಾರಣ, ಗರ್ಗ್ ಅವರು ಮತ್ತೆ ಇಪಿಎಫ್‌ಒ ಅಧಿಕಾರಿಗಳನ್ನು ಸಂಪರ್ಕಿಸಿದರು.
ತಮ್ಮ ಆಕ್ಷೇಪಣೆಗೆ ಇಪಿಎಫ್‌ಒ ನೀಡಿದ ಪ್ರತಿಕ್ರಿಯೆ ಏನೆಂದರೆ, "ಏಪ್ರಿಲ್ 1, 2011 ರಿಂದ ಹಳೆಯ ಖಾತೆಯನ್ನು 'ನಿಷ್ಕ್ರಿಯ' (inoperative) ಎಂದು ವರ್ಗೀಕರಿಸಲಾಗಿದೆ. ಆದ್ದರಿಂದ 2012-13 ರಿಂದ 2015-16 ರವರೆಗಿನ ಬಡ್ಡಿ ಹಣವನ್ನು ಗರ್ಗ್ ಅವರ ಖಾತೆಗೆ ಜಮಾ ಮಾಡಿಲ್ಲ" ಎಂದು ತಿಳಿಸಿತು. ಇಪಿಎಫ್‌ಒನ ಈ ಅನ್ಯಾಯದ ವಿರುದ್ಧ ಬೇಸತ್ತ ಗರ್ಗ್, ಜುಲೈ 2021 ರಲ್ಲಿ ಚಂಡೀಗಢ ಜಿಲ್ಲಾ ಗ್ರಾಹಕ ಆಯೋಗದ ಮೊರೆ ಹೋದರು.
ಗ್ರಾಹಕ ನ್ಯಾಯಾಲಯದ ಆದೇಶವೇನು?
ವಿಚಾರಣೆಯ ಸಮಯದಲ್ಲಿ, "2010-11 ರ ಆರ್ಥಿಕ ವರ್ಷದಲ್ಲಿ ತಾಂತ್ರಿಕ ದೋಷದಿಂದಾಗಿ ಬಡ್ಡಿ ಜಮಾ ಆಗಿರಲಿಲ್ಲ" ಎಂದು ಇಪಿಎಫ್‌ಒ ತನ್ನ ತಪ್ಪನ್ನು ನ್ಯಾಯಾಲಯದ ಮುಂದೆ ಒಪ್ಪಿಕೊಂಡಿತು. ಅಲ್ಲದೆ, ಮರು ಪರಿಶೀಲನೆ ನಡೆಸಿ 3.67 ಲಕ್ಷ ಮತ್ತು 64,841 ರೂಪಾಯಿಗಳನ್ನು ಹೆಚ್ಚುವರಿಯಾಗಿ ವರ್ಗಾಯಿಸಲಾಯಿತು ಎಂದು ತಿಳಿಸಿತು.
ಆದರೆ, ಎಲ್ಲಾ ವಾದಗಳನ್ನು ಆಲಿಸಿದ ನ್ಯಾಯಾಲಯ, "ಪಿಎಫ್ ಮೊತ್ತವನ್ನು ವರ್ಗಾಯಿಸಲು 10 ವರ್ಷಗಳ ಸುದೀರ್ಘ ವಿಳಂಬ ಮಾಡಿರುವುದು ಸ್ಪಷ್ಟವಾಗಿ ಸೇವೆಯಲ್ಲಿನ ನ್ಯೂನತೆಯಾಗಿದೆ. ತಾಂತ್ರಿಕ ಸಮಸ್ಯೆಗಳ ನೆಪವನ್ನು ಒಪ್ಪಲು ಸಾಧ್ಯವಿಲ್ಲ. ಇಂತಹ ವಿಳಂಬವು ಅಕ್ಷಮ್ಯ" ಎಂದು ತೀರ್ಪು ನೀಡಿತು. ಅಲ್ಲದೆ, ಉದ್ಯೋಗಿಗೆ ಉಂಟಾದ ಮಾನಸಿಕ ಕಿರುಕುಳ ಮತ್ತು ಕಾನೂನು ವೆಚ್ಚಗಳಿಗಾಗಿ ಇಪಿಎಫ್‌ಒ 50,000 ರೂಪಾಯಿಗಳನ್ನು 60 ದಿನಗಳ ಒಳಗೆ ಪಾವತಿಸಬೇಕು. ಒಂದು ವೇಳೆ ನಿಗದಿತ ಸಮಯದೊಳಗೆ ಹಣ ಪಾವತಿಸದಿದ್ದರೆ ಶೇ. 9 ರಷ್ಟು ಬಡ್ಡಿಯೊಂದಿಗೆ ದಂಡ ಪಾವತಿಸಬೇಕಾಗುತ್ತದೆ ಎಂದು ಮಹತ್ವದ ಆದೇಶ ಹೊರಡಿಸಿದೆ.
ಸಾಮಾನ್ಯವಾಗಿ ಅನೇಕ ಉದ್ಯೋಗಿಗಳು ಪಿಎಫ್ ವರ್ಗಾವಣೆಯಲ್ಲಿ ವಿಳಂಬವಾದಾಗ ಸುಮ್ಮನಾಗುತ್ತಾರೆ. ಆದರೆ ಈ ಪ್ರಕರಣ, ತಮ್ಮ ಹಕ್ಕಿಗಾಗಿ ಗ್ರಾಹಕ ನ್ಯಾಯಾಲಯದ ಮೊರೆ ಹೋದರೆ ಖಂಡಿತ ನ್ಯಾಯ ಸಿಗುತ್ತದೆ ಎಂಬುದನ್ನು ಸಾಬೀತುಪಡಿಸಿದೆ. ಪಿಎಫ್ ವರ್ಗಾವಣೆ ವಿಳಂಬದಿಂದ ತೊಂದರೆಗೊಳಗಾದ ಲಕ್ಷಾಂತರ ಉದ್ಯೋಗಿಗಳಿಗೆ ಈ ತೀರ್ಪು ಒಂದು ಹೊಸ ಭರವಸೆ ನೀಡಿದೆ.












Click it and Unblock the Notifications