Government Employee; ಪೂರ್ಣ ಪ್ರಮಾಣದ ನಿವೃತ್ತಿ ವೇತನ ಆದೇಶ
ಬೆಂಗಳೂರು, ಮಾರ್ಚ್ 11: ಕರ್ನಾಟಕ ಸರ್ಕಾರ ಪೂರ್ಣ ಪ್ರಮಾಣದ ನಿವೃತ್ತಿ ವೇತನ ಪಡೆಯುವ ಕುರಿತು ಆದೇಶವೊಂದನ್ನು ಹೊರಡಿಸಿದೆ. 6ನೇ ವೇತನ ಆಯೋಗದ ಶಿಫಾರಸುಗಳನ್ನು ಸರ್ಕಾರ ಪರಿಗಣಿಸಿದೆ ಎಂದು ತಿಳಿಸಿದೆ.
ಈ ಕುರಿತು ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ ಜಿ. ಬಿ. ಹೇಮಣ್ಣ ಸರ್ಕಾರದ ಉಪ ಕಾರ್ಯದರ್ಶಿ, ಆರ್ಥಿಕ ಇಲಾಖೆ (ಸೇವೆಗಳು-1) ಆದೇಶವನ್ನು ಹೊರಡಿಸಿದ್ದಾರೆ. ಸರ್ಕಾರದ ಮುಖ್ಯ ಕಾರ್ಯದರ್ಶಿಗಳು/ ಅಪರ ಮುಖ್ಯ ಕಾರ್ಯದರ್ಶಿಗಳು, ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು/ ಕಾರ್ಯದರ್ಶಿಗಳಿಗೆ ಈ ಕುರಿತು ಮಾಹಿತಿ ನೀಡಲಾಗಿದೆ.

ಆದೇಶ ಪೂರ್ಣ ಪ್ರಮಾಣದ ನಿವೃತ್ತಿ ವೇತನ ಪಡೆಯುವ ಉದ್ದೇಶಕ್ಕಾಗಿ ಗರಿಷ್ಠ ಅರ್ಹತಾದಾಯಕ ಸೇವೆಯ ಪ್ರಮಾಣವನ್ನು ಪರಿಷ್ಕರಿಸುವ ಬಗ್ಗೆ ಎಂಬ ವಿಷಯವನ್ನು ಒಳಗೊಂಡಿದೆ.
ಸರ್ಕಾರದ ಆದೇಶ ದಿನಾಂಕ 01/06/2017ರನ್ವಯ ರಚಿಸಲಾಗಿದ್ದ 6ನೇ ರಾಜ್ಯ ವೇತನ ಆಯೋಗವು ದಿನಾಂಕ 31/01/2018ರಂದು ತನ್ನ ವರದಿಯನ್ನು (ಮೊದಲ ಸಂಪುಟ) ಸಲ್ಲಿಸಿದೆ.
ಈ ಕುರಿತಾದ 6ನೇ ರಾಜ್ಯ ವೇತನ ಆಯೋಗದ ಶಿಫಾರಸ್ಸನ್ನು ಸರ್ಕಾರವು ಪರಿಗಣಿಸಿದೆ. ಮತ್ತು ರಾಜ್ಯ ಸರ್ಕಾರಿ ನೌಕರರು ಪೂರ್ಣ ಪ್ರಮಾಣದ ನಿವೃತ್ತಿ ವೇತನ ಪಡೆಯುವಲ್ಲಿನ ಗರಿಷ್ಠ ಅರ್ಹತಾದಾಯಕ ಸೇವೆಯ ಪರಿಷ್ಕರಣೆ ಸಂಬಂಧದ ಶಿಫಾರಸ್ಸನ್ನು ಅಂಗೀಕರಿಸಿ, ಆದೇಶವನ್ನು ಹೊರಡಿಸಲು ಹರ್ಷಿಸುತ್ತದೆ.
ಸರ್ಕಾರಿ ಆದೇಶ ಸಂಖ್ಯೆ ದಿನಾಂಕ 11/01/2019. ರಾಜ್ಯ ಸರ್ಕಾರಿ ನೌಕರರು ಪೂರ್ಣ ಪ್ರಮಾಣದ ನಿವೃತ್ತಿ ವೇತನ ಪಡೆಯುವ ಉದ್ದೇಶಕ್ಕಾಗಿ ಕರ್ನಾಟಕ ನಾಗರೀಕ ಸೇವಾ ನಿಯಮಗಳಲ್ಲಿ ವಿಧಿಸಲಾಗಿರುವ ಗರಿಷ್ಠ 33 ವರ್ಷಗಳ ಅರ್ಹತಾದಾಯಕ ಸೇವೆಯ ಷರತ್ತನ್ನು ಗರಿಷ್ಠ 30 ವರ್ಷಗಳಿಗೆ ಇಳಿಕೆ ಮಾಡಿ ಆದೇಶಿಸಲಾಗಿದೆ.
ಈ ಆದೇಶವು ದಿನಾಂಕ 01/1/2019ರಿಂದ ಜಾರಿಗೆ ಬರತಕ್ಕದ್ದು. ಕರ್ನಾಟಕ ನಾಗರೀಕ ಸೇವಾ ನಿಯಮಗಳಿಗೆ ಅವಶ್ಯಕ ತಿದ್ದುಪಡಿಯನ್ನು ಪ್ರತ್ಯೇಕವಾಗಿ ಹೊರಡಿಸಲಾಗುವುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ವೇತನ ಆಯೋಗದ ಶಿಫಾರಸು: ಕರ್ನಾಟಕ ಸರ್ಕಾರ ಈಗ ಸರ್ಕಾರಿ ನೌಕರರ ಬೇಡಿಕೆಯಂತೆ 7ನೇ ವೇತನ ಆಯೋಗ ರಚನೆ ಮಾಡಿದೆ. ಈ ಆಯೋಗ ಶೀಘ್ರದಲ್ಲಿಯೇ ವರದಿ ನೀಡುವ ನಿರೀಕ್ಷೆ ಇದೆ. ಆದರೆ 6ನೇ ವೇತನ ಆಯೋಗವೇ ಸರ್ಕಾರಿ ನೌಕರರು ಪೂರ್ಣ ಪ್ರಮಾಣದ ನಿವೃತ್ತಿ ವೇತನ ಪಡೆಯುವ ಸಂಬಂಧ ಗರಿಷ್ಠ ಅರ್ಹತಾದಾಯಕ ಕರ್ತವ್ಯ ಅವಧಿಯನ್ನು 33 ವರ್ಷದಿಂದ 30 ವರ್ಷಕ್ಕೆ ಇಳಿಸುವಂತೆ ಶಿಫಾರಸು ಮಾಡಿತ್ತು.
ಸರ್ಕಾರಿ ನೌಕರರು ಕೆ. ಸುಧಾಕರ್ ರಾವ್ ನೇತೃತ್ವದ 7ನೇ ವೇತನ ಆಯೋಗದ ಮುಂದೆ ಹಲವು ಶಿಫಾರಸುಗಳನ್ನು ಸಲ್ಲಿಕೆ ಮಾಡಿದ್ದಾರೆ. ಈ ಶಿಫಾರಸುಗಳಲ್ಲಿ ನಿವೃತ್ತಿ ವೇತನದ ಕುರಿತು ಶಿಫಾರಸುಗಳನ್ನು ಸೇರಿಸಲಾಗಿದೆ.
7ನೇ ವೇತನ ಆಯೋಗ ತನ್ನ ಪ್ರಶ್ನಾವಳಿಯಲ್ಲಿ ಪ್ರಸ್ತುತ 30 ವರ್ಷಗಳ ಅರ್ಹತಾ ಸೇವೆಯನ್ನು ಪೂರ್ಣಗೊಳಿಸಿದ ಸರ್ಕಾರಿ ನೌಕರರಿಗೆ ಮಾತ್ರ ಪೂರ್ಣ ನಿವೃತ್ತಿ ವೇತನ ಸಂದಾಯವಾಗುತ್ತಿದೆ. ನಿವೃತ್ತಿಯ ಉಪದಾನವನ್ನು ಲೆಕ್ಕ ಹಾಕುವಾಗ ಮೂಲ ವೇತನವನ್ನಷ್ಟೇ ಲೆಕ್ಕಕ್ಕೆ ತೆಗೆದುಕೊಳ್ಳಲಾಗುತ್ತದೆ. ಇದರ ಮಾರ್ಪಾಡಿಗೆ ಏನಾದರೂ ಸಲಹೆ ನೀಡುವಿರಾ?. ಈ ಮಾರ್ಪಾಡಿಗೆ ಕಾರಣಗಳನ್ನು ನೀಡುವುದು ಎಂದು ಕೇಳಿತ್ತು.
ಉತ್ತರ ನೀಡುವಾಗ ಸರ್ಕಾರಿ ನೌಕರರುಪೂರ್ಣ ನಿವೃತ್ತಿ ವೇತನವನ್ನು ಪಡೆಯಲು ಪ್ರಸ್ತುತ 30 ವರ್ಷಗಳ ಅರ್ಹತಾ ಅವಧಿಯನ್ನು ನಿಗದಿಮಾಡಿದ್ದು, ಈ ಅವಧಿಯನ್ನು 25 ವರ್ಷಗಳಿಗೆ ನಿಗದಿಪಡಿಸಲು ಹಾಗೂ ಪಿಂಚಣಿ ನೀಡಲು ಹೆಚ್ಚಿನ ಸರಳೀಕೃತ ಸೂತ್ರವನ್ನು ಶಿಫಾರಸು ಮಾಡುವುದು ಅವಶ್ಯಕವೆಂದು ಅಭಿಪ್ರಾಯಪಟ್ಟಿದೆ. ಅದು ನೌಕರರಿಗೆ ಪ್ರಯೋಜನವಾಗುವುದಲ್ಲದೆ, ಕೇಂದ್ರ ವೇತನ ಆಯೋಗ ಶಿಫಾರಸು ಮಾಡಿರುವ ಸೂತ್ರಕ್ಕೆ ಹೋಲಿಕೆಯಾಗಲಿದೆ ಎಂದು ಹೇಳಿದೆ.
ಪೂರ್ಣ ಪ್ರಮಾಣದ ಪಿಂಚಣಿಗಾಗಿ ನೌಕರನು ಸಲ್ಲಿಸಿರುವ 25 ವರ್ಷಗಳ ಅರ್ಹತಾದಾಯಕ ಸೇವಾಧಿಯನ್ನು ಪರಿಗಣಿಸುವುದು ಹಾಗೂ ನಿವೃತ್ತಿ ಸಮಯದ ಕಳೆದ 10 ತಿಂಗಳಲ್ಲಿ ಪಡೆಯುತ್ತಿದ್ದ ಸರಾಸರಿ ಸಂಬಳ ಅಥವಾ ಅಂತಿಮವಾಗಿ ಪಡೆದ ವೇತನದ ಶೇ. 50 ಇದರಲ್ಲಿ ಯಾವುದು ಪ್ರಯೋಜನಕಾರಿಯೋ ಅದನ್ನು ಪಿಂಚಿಣಿ ಎಂದು ಪರಿಗಣಿಸುವುದು ಎಂದು ತಿಳಿಸಿದೆ.
7ನೇ ವೇತನ ಆಯೋಗದ ಅವಧಿ ಮಾರ್ಚ್ 15ರಂದು ಮುಕ್ತಾಯಗೊಳ್ಳಲಿದೆ. ಕರ್ನಾಟಕ ಸರ್ಕಾರ ವೇತನ ಆಯೋಗದ ವರದಿಯನ್ನು ಸ್ವೀಕಾರ ಮಾಡಲಿದೆಯೇ? ಅಥವ ಆಯೋಗದ ಅವಧಿಯನ್ನು ವಿಸ್ತರಣೆ ಮಾಡಲಾಗುತ್ತದೆಯೇ? ಎಂದು ಕಾದು ನೋಡಬೇಕಿದೆ.












Click it and Unblock the Notifications