ಕರ್ನಾಟಕದಲ್ಲಿ 15 ಸಾವಿರ ಕೋಟಿ ರೂ ಹೂಡಿಕೆ ಮಾಡಲು ನಿರ್ಧರಿಸಿದ ಪ್ರತಿಷ್ಠಿತ ಸಂಸ್ಥೆ
ಬೆಂಗಳೂರು, ಫೆಬ್ರವರಿ 20: ಉನ್ನತ ಗುಣಮಟ್ಟದ ಸೋಲಾರ್ ಫೋಟೋವೋಲ್ಟಾಯಿಕ್ ಕೋಶಗಳು ಮತ್ತು ಮಾಡ್ಯೂಲ್ ಉತ್ಪಾದನೆಗೆ ಹೆಸರಾಗಿರುವ, ಬೆಂಗಳೂರು ಮೂಲದ ಎಮ್ವಿ ಎನರ್ಜಿ ಕಂಪನಿಯು ತನ್ನ ಉತ್ಪಾದನಾ ಘಟಕ ಆರಂಭಿಸಲು ಹಂತಹಂತವಾಗಿ 15 ಸಾವಿರ ಕೋಟಿ ರೂಪಾಯಿ ಹೂಡಲು ತೀರ್ಮಾನಿಸಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್ ತಿಳಿಸಿದ್ದಾರೆ.
ವಿಧಾನಸೌಧದ ತಮ್ಮ ಕಚೇರಿಯಲ್ಲಿ ಕಂಪನಿಯ ಉನ್ನತ ಮಟ್ಟದ ಪ್ರತಿನಿಧಿಗಳ ಜೊತೆ ಸಭೆ ನಡೆಸಿದ ಅವರು, ಕಂಪನಿಯೊಂದಿಗೆ ಹೂಡಿಕೆ ಸಂಬಂಧ ಇತ್ತೀಚಿಗೆ ನಡೆದ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಒಡಂಬಡಿಕೆ ಮಾಡಿಕೊಂಡಿದ್ದು, ಕಾರ್ಯರೂಪಕ್ಕೆ ಬರುತ್ತಿರುವುದು ಸಂತಸದ ಸಂಗತಿ ಎಂದು ಸಚಿವರು ಹೇಳಿದ್ದಾರೆ.

ಕಂಪನಿಯು ಮೊದಲ ಹಂತದಲ್ಲಿ 5,000 ಕೋಟಿ ರೂಪಾಯಿ ಹೂಡಿಕೆ ಮಾಡಲಿದ್ದು, 5 ಗಿಗಾವ್ಯಾಟ್ ಸಾಮರ್ಥ್ಯದ ಉತ್ಪಾದನೆ ಮಾಡಲಿದೆ. ಒಟ್ಟು ಯೋಜನೆಯಿಂದ 10 ಸಾವಿರ ಉದ್ಯೋಗ ಸೃಷ್ಟಿಯಾಗಲಿದೆ ಎಂದಿದ್ದಾರೆ. ಎಮ್ವಿ ಎನರ್ಜಿ ಕಂಪನಿಯು ಬೆಂಗಳೂರಿನ ಐಟಿಐಆರ್ ವಲಯದಲ್ಲಿ 120 ಎಕರೆ ಜಮೀನನ್ನು ಕೇಳಿದೆ. ಇದನ್ನು ಸಕಾರಾತ್ಮಕವಾಗಿ ಪರಿಶೀಲಿಸಿ, ಒದಗಿಸಲಾಗುವುದು ಎಂದು ಸಚಿವರು ನಿಯೋಗಕ್ಕೆ ಭರವಸೆ ನೀಡಿದ್ದಾರೆ.
ಕಂಪನಿಯು ಸೌರವಿದ್ಯುತ್ ಕ್ಷೇತ್ರದಲ್ಲಿ ಬೇಕಾಗುವ ಅಲ್ಯೂಮಿನಿಯಂ ಫ್ರೇಮ್, ಗಾಜು, ಇಪಿಇ, ಜೆಬಿ, ರಿಬ್ಬನ್ ಮತ್ತು ವೇಫರ್ ಉತ್ಪಾದನೆಗೂ ಹೆಸರಾಗಿದೆ. ಇದರಿಂದ ಪರಿಸರಸ್ನೇಹಿ ಇಂಧನ ಮತ್ತು ಸುಸ್ಥಿರ ಅಭಿವೃದ್ಧಿ ಎರಡನ್ನೂ ಸಾಧಿಸಬಹುದು ಎಂದು ಪಾಟೀಲ ಮಾಹಿತಿ ನೀಡಿದ್ದಾರೆ. ಸಭೆಯಲ್ಲಿ ಎಮ್ವಿ ಎನರ್ಜಿ ಕಂಪನಿ ನಿರ್ದೇಶಕ ಸುಹಾಸ್ ದೊಂಥಿ, ವಾಣಿಜ್ಯ ವಹಿವಾಟು ವಿಭಾಗದ ಮುಖ್ಯಸ್ಥ ಸುಮಂತ್ ದೊಂಥಿ ಸೇರಿದಂತೆ ಇತರರು ಸಭೆಯಲ್ಲಿ ಭಾಗವಹಿಸಿದ್ದರು.

ಇನ್ನು ಇತ್ತೀಚಿಗೆ ಮೂರು ದಿನಗಳ ಕಾಲ ಬೆಂಗಳೂರು ಅರಮನೆ ಮೈದಾನದಲ್ಲಿ ಪ್ರತಿಷ್ಠಿತ ಜಾಗತಿಕ ಹೂಡಿಕೆದಾರರ ಸಮಾವೇಶ ನಡೆದಿದೆ. 5 ಸಾವಿರಕ್ಕೂ ಹೆಚ್ಚು ಉದ್ಯಮ ಪ್ರತಿನಿಧಿಗಳು, ಕೈಗಾರಿಕಾ ಪರಿಣತರು ಮತ್ತು ರಾಜ್ಯ ಹಾಗೂ ಕೇಂದ್ರ ಸರ್ಕಾರ ಮಟ್ಟದ ನೀತಿ ನಿರೂಪಕರು ಸಕ್ರಿಯವಾಗಿ ಪಾಲ್ಗೊಂಡಿದ್ದು, ಬಂಡವಾಳ ಹೂಡಿಕೆಗೆ ಕರ್ನಾಟಕವೇ ಪ್ರಶಸ್ತ ತಾಣ ಎನ್ನುವ ಸಂದೇಶವನ್ನು ಪ್ರತಿಷ್ಠಿತ ಜಾಗತಿಕ ಹೂಡಿಕೆದಾರರ ಸಮಾವೇಶ ಯಶಸ್ವಿಗೊಳಿಸಿದೆ.












Click it and Unblock the Notifications