ಚುನಾವಣಾ ಕಣ : ಗುಲ್ಬರ್ಗದ ಸಂಕ್ಷಿಪ್ತ ಸುದ್ದಿಗಳು
ಗುಲ್ಬರ್ಗ, ಮಾ. 26 : ಗುಲ್ಬರ್ಗದಲ್ಲಿ ಚುನಾವಣಾ ಕಣಾ ರಂಗೇರುತ್ತಿದೆ. ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಕ್ಷೇತ್ರದಿಂದ ಇದುವರೆಗೂ 10 ಅಭ್ಯರ್ಥಿಗಳು ನಾಮಪತ್ರವನ್ನು ಸಲ್ಲಿಸಿದ್ದಾರೆ. ಮಂಗಳವಾರ ಮೂವರು ಅಭ್ಯರ್ಥಿಗಳು ತಮ್ಮ ಉಮೇದುವಾರಿಕೆ ಸಲ್ಲಿಸಿದ್ದು, ಬುಧವಾರ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದೆ.
ಮಂಗಳವಾರ ಬಹುಜನ ಸಮಾಜ ಪಾರ್ಟಿ ಅಭ್ಯರ್ಥಿ ಮಹಾದೇವ ಭೀಮಶಾ, ಪಕ್ಷೇತರ ಅಭ್ಯರ್ಥಿಯಾಗಿ ನರೇಶ ಕುಮಾರ ಕೋಳಿ, ಭಾರತೀಯ ಜನತಾ ಪಕ್ಷದಿಂದ ರೇವಾಸಿಂಗ್ ಲೋಕು ಅವರು ನಾಮಪತ್ರ ಸಲ್ಲಿಸಿದ್ದಾರೆ. ಇದುವರೆಗೆ ಹತ್ತು ಅಭ್ಯರ್ಥಿಗಳು ಕ್ಷೇತ್ರದಲ್ಲಿ ಚುನಾವಣೆಗೆ ಸ್ಪರ್ಧಿಸಲು ನಾಮಪತ್ರ ಸಲ್ಲಿಸಿದ್ದಾರೆ.

ಎಫ್ಐಆರ್ ದಾಖಲು : ಅಫಜಲಪುರ ಪಟ್ಟಣದಲ್ಲಿ ಪೂರ್ವಾನುಮತಿ ಪಡೆಯದೇ ಕಾಂಗ್ರೆಸ್ ಅಭ್ಯರ್ಥಿಯ ವೀಡಿಯೋ ಪ್ರದರ್ಶಿಸಿದ್ದಕ್ಕಾಗಿ ಸ್ಥಳೀಯ ಕೇಬಲ್ ಆಪರೇಟರ್ ವಿರುದ್ಧ ಮಾ.24 ರಂದು ಮಾದರಿ ನೀತಿ ಸಂಹಿತೆ ಉಲ್ಲಂಘನೆಯಡಿ ಎಫ್ಐಆರ್ ದಾಖಲಿಸಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ತಿಳಿಸಿದ್ದಾರೆ. [ಮೋದಿ ಮಾತನ್ನು ಕನ್ನಡದಲ್ಲಿ ಕೇಳಿ]
ನೀತಿ ಸಂಹಿತೆ ಉಲ್ಲಂಘನೆ : ಜಿಲ್ಲೆಯಲ್ಲಿ ಅಬಕಾರಿ ಮತ್ತು ಪೊಲೀಸ್ ಇಲಾಖೆಯಿಂದ ಮಾ.25ವರೆಗೆ ಚುನಾವಣಾ ಮಾದರಿ ನೀತಿ ಸಂಹಿತೆ ಉಲ್ಲಂಘಿಸಿದ ಒಟ್ಟು 48 ಪ್ರಕರಣಗಳನ್ನು ದಾಖಲಿಸಲಾಸಿಕೊಳ್ಳಲಾಗಿದೆ. 645.08 ಲೀ. ಮದ್ಯ, 3.60 ಕೆಜಿ ಗಾಂಜಾ ಮತ್ತು ಎರಡು ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಮಹಾಪೌರ ಮತ್ತು ಉಪ ಮಹಾಪೌರ ಆಯ್ಕೆ : ಲೋಕಸಭೆ ಚುನಾವವಣೆಗಿಂತ ಮೊದಲೇ ಗುಲ್ಬರ್ಗ ಮಹಾನಗರ ಪಾಲಿಕೆಯ ಮಹಾಪೌರರ, ಉಪ ಮಹಾಪೌರರ ಹಾಗೂ ಸ್ಥಾಯಿ ಸಮಿತಿಗಳ ಸದಸ್ಯರನ್ನು ಆಯ್ಕೆ ಮಾಡಲು ಏಪ್ರಿಲ್ 2 ರಂದು ಸಂಜೆ 5 ಗಂಟೆಗೆ ಚುನಾವಣೆ ನಡೆಯಲಿದೆ.
ಸರ್ಕಾರದ ಅಧಿಸೂಚನೆಯಂತೆ ಮಹಾನಗರ ಪಾಲಿಕೆ ಮೇಯರ್ ಸ್ಥಾನವನ್ನು ಹಿಂದುಳಿದ ವರ್ಗ-ಅ (ಮಹಿಳೆ), ಮತ್ತು ಉಪ ಮಹಾಪೌರರ ಸ್ಥಾನವನ್ನು ಸಾಮಾನ್ಯ ವರ್ಗಕ್ಕೆ ಮೀಸಲಿಡಲಾಗಿದೆ. ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳು 2-04-2014ರ ಮಧ್ಯಾಹ್ನ 3 ಗಂಟೆಯೊಳಗೆ ಮಹಾನಗರ ಪಾಲಿಕೆ ಆಯುಕ್ತರಿಗೆ ತಮ್ಮ ನಾಮಪತ್ರಗಳನ್ನು ಸಲ್ಲಿಸಬಹುದಾಗಿದ್ದು, ಸಂಜೆ ಚುನಾವಣೆ ನಡೆಯಲಿದೆ.












Click it and Unblock the Notifications