ಸೋಷಿಯಲ್ ಮೀಡಿಯಾ ಮೇಲೆ ಚುನಾವಣಾ ಆಯೋಗ ಹದ್ದಿನ ಕಣ್ಣು
ಬೆಂಗಳೂರು, ಮಾರ್ಚ್ 27: ಕಳೆದ ಬಾರಿ ರಾಜ್ಯ ವಿಧಾನಸಭಾ ಚುನಾವಣೆ ಸಮಯದಲ್ಲಿ ಇಲ್ಲದಿದ್ದ ಸವಾಲೊಂದು ಈ ಬಾರಿ ಚುನಾವಣೆ ಸಮಯದಲ್ಲಿ ಚುನಾವಣಾ ಆಯೋಗದ ಮುಂದಿದೆ. ಅದುವೇ ಸೋಷಿಯಲ್ ಮೀಡಿಯಾ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಹೌದು, ಸಾಮಾಜಿಕ ಜಾಲತಾಣಗಳು ಚುನಾವಣೆ ಸಮಯದಲ್ಲಿ ಮತದಾರರನ್ನು ವೈಯಕ್ತಿಕವಾಗಿ ತಲುಪುವ ಬಹುಮುಖ್ಯ ಸಾಧನ ಎನಿಸಿಕೊಂಡಿವೆ. ಸತ್ಯ ಅಸತ್ಯತೆಯ ಪ್ರಮಾಣವೂ ಇಲ್ಲದ ಕಾರಣ ಮತದಾರನಿಗೆ ಪಕ್ಷ, ಅಭ್ಯರ್ಥಿ ಹಾಗೂ ಚುನಾವಣಾ ಪ್ರಕ್ರಿಯೆಯ ಬಗ್ಗೆ ಸುಳ್ಳು ಮಾಹಿತಿ ತಲುಪುವ ಅಪಾಯ ಇವುಗಳಿಂದ ಇದೆ. ಹಾಗಾಗಿ ಸಾಮಾಜಿಕ ಜಾಲತಾಣದ ನಿಯಂತ್ರಣ ಈ ಬಾರಿ ಚುನಾವಣಾ ಆಯೋಗಕ್ಕೆ ಬಹು ದೊಡ್ಡ ಸವಾಲಾಗಿದೆ.
ಈ ಬಗ್ಗೆ ರಾಜ್ಯ ಚುನಾವಣಾ ಆಯೋಗ ಕೆಲವು ನಿರ್ದಿಷ್ಟ ಕ್ರಮಗಳನ್ನು ಕೈಗೊಂಡಿದೆ. ಈ ಬಗ್ಗೆ ಮಾಹಿತಿ ನೀಡಿದ ಅಪರ ಮುಖ್ಯ ಚುನಾವಣಾಧಿಕಾರಿ-1 ಡಾ. ಕೆ.ಜಿ. ಜಗದೀಶ್ ಅವರು, ಫೇಸ್‌ಬುಕ್, ಟ್ವಿಟ್ಟರ್ ಸೇರಿದಂತೆ ಇತರೆ ಸಾಮಾಜಿಕ ಜಾಲತಾಣದ ಮೇಲೆ ರಾಜ್ಯ ಚುನಾವಣಾ ಆಯೋಗದ 'ಮೀಡಿಯಾ ಮಾನಿಟರಿಂಗ್ ಸೆಲ್' ನಿಗಾ ವಹಿಸಲಿದೆ ಜೊತೆಗೆ ಪೊಲೀಸ್ ಸೈಬರ್ ಘಟಕದ ಸಹಾಯ ಪಡೆಯಲಿದೆ ಎಂದರು.

ಅಭ್ಯರ್ಥಿಯು ನಾಮಪತ್ರ ಸಲ್ಲಿಕೆ ಸಮಯದಲ್ಲಿ ತಮ್ಮ ಸಾಮಾಜಿಕ ಜಾಲತಾಣದ ಮಾಹಿತಿಯನ್ನೂ ನೀಡಲು ಕೋರಲಾಗಿದ್ದು, ಅವರ ಸಾಮಾಜಿಕ ಜಾಲತಾಣ ಖಾತೆಯ ಮೇಲೆ ನಿಗಾ ಇಡಲಾಗುವುದು. ಅಲ್ಲಿ ಪ್ರಕಟವಾಗುವ ಜಾಹೀರಾತು ಅದರ ವೆಚ್ಚವನ್ನು ಅಭ್ಯರ್ಥಿಯ ಖರ್ಚಿನ ಪಟ್ಟಿಗೆ ಸೇರಿಸಲಾಗುವುದು ಎಂದರು.
ಯಾವುದೇ ಪಕ್ಷ ಅಥವಾ ಅಭ್ಯರ್ಥಿಯ ಸಾಮಾಜಿಕ ಜಾಲತಾಣ ಖಾತೆಯ ಮೂಲಕ ಚುನಾವಣಾ ನೀತಿ ಸಂಹಿತೆಗೆ ವ್ಯತಿರಿಕ್ತವಾದ ಚಟುವಟಿಕೆಗಳು ನಡೆದರೆ ಅದರ ವಿರುದ್ಧ ಕ್ರಮ ಜರುಗಿಸುತ್ತೇವೆ ಎಂದು ಅವರು ಮಾಹಿತಿ ನೀಡಿದರು.
ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡಿದ ಅಪರ ಪೊಲೀಸ್ ಮಹಾನಿರ್ದೇಶಕ ಕಮಲ್ ಪಂತ್ ಅವರು, ಪೊಲೀಸ್ ಇಲಾಖೆಯ ಜಿಲ್ಲಾವಾರು ಸೈಬರ್ ಠಾಣೆಯ ಘಟಕಗಳು ಈಗಾಗಲೇ ಸಾಮಾಜಿಕ ಜಾಲತಾಣಗಳ ಮೇಲೆ ಕಟ್ಟುನಿಟ್ಟಿನ ನಿಗಾ ವಹಿಸುತ್ತಿದ್ದಾರೆ. ಇದಲ್ಲದೆ ಕಾನೂನು ಉಲ್ಲಂಘನೆ ಮಾಡಿದವರ ಮೇಲೆ ಐಪಿಸಿ ಹಾಗೂ ಪ್ರಜಾ ಪ್ರತಿನಿಧಿ ಕಾಯ್ದೆಯನ್ವಯ, ಮಾಹಿತಿ ತಂತ್ರಜ್ಞಾನ ಕಾಯ್ದೆಯನ್ವಯ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.












Click it and Unblock the Notifications