ನೀತಿ ಸಂಹಿತೆ : ನಟರ ಚಲನಚಿತ್ರ ಪ್ರದರ್ಶನಕ್ಕೆ ಸ್ಪಷ್ಟನೆ
Recommended Video

ಬೆಂಗಳೂರು, ಮಾರ್ಚ್ 21 : ಚುನಾವಣೆಯಲ್ಲಿ ಸ್ಪರ್ಧಿಸುವ ನಟರ ಚಲನಚಿತ್ರ ಪ್ರದರ್ಶನಕ್ಕೆ ದೂರದರ್ಶನದಲ್ಲಿ ಮಾತ್ರ ನಿರ್ಬಂಧವಿದೆ ಎಂದು ಮಂಡ್ಯ ಜಿಲ್ಲಾಡಳಿತ ಸ್ಪಷ್ಟಪಡಿಸಿದೆ. ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವ ಕಾರಣ ಈ ಸ್ಪಷ್ಟನೆ ನೀಡಲಾಗಿದೆ.
ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿದೆ. ಏಪ್ರಿಲ್ 18ರಂದು ಮತದಾನ ನಡೆಯಲಿದ್ದು, ಮೇ 23ರಂದು ಚುನಾವಣಾ ಫಲತಾಂಶ ಪ್ರಕಟವಾಗಲಿದೆ.
ಚುನಾವಣೆಯಲ್ಲಿ ನಟರು ಸ್ಪರ್ಧಿಸುತ್ತಿರುವುದರಿಂದ ಅವರು ನಟಿಸಿರುವ ಚಲನಚಿತ್ರಗಳು ಪ್ರದರ್ಶನವಾಗುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬಂದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಸ್ಪಷ್ಟೀಕರಣ ನೀಡಿದ್ದಾರೆ.

ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಖಾಸಗಿ ಚಾನಲ್‍ಗಳಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸುವ ನಟರ ವಾಣಿಜ್ಯ ಜಾಹಿರಾತು, ಚಲನಚಿತ್ರಗಳ ಪ್ರದರ್ಶನ ಹಾಗೂ ಸಿನಿಮಾ ಮಂದಿರಗಳಲ್ಲಿ ಚಲನಚಿತ್ರಗಳನ್ನು ಪ್ರದರ್ಶಿಸಲು ಯಾವುದೇ ನಿರ್ಬಂಧ ಇರುವುದಿಲ್ಲ ಎಂದು ಹೇಳಿದ್ದಾರೆ.
ಆದರೆ, ಲೋಕಸಭೆ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಸರ್ಕಾರಿ ಸ್ವಾಮ್ಯದ ದೂರದರ್ಶನ ಚಾನೆಲ್‍ನಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸುವ ನಟರ ಚಲನಚಿತ್ರಗಳನ್ನು (ವಾಣಿಜ್ಯ ಜಾಹಿರಾತು ಹೊರತುಪಡಿಸಿ) ಪ್ರದರ್ಶಿಸಲು ನಿರ್ಬಂಧವಿರುತ್ತದೆ ಎಂದು ತಿಳಿಸಿದ್ದಾರೆ.
ಆಯೋಗದ ಸ್ಪಷ್ಟನೆ : ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ಅವರು ಈ ಕುರಿತು ಮಾಹಿತಿ ನೀಡಿದ್ದು, 'ಸುಮಲತಾ ಅಂಬರೀಶ್ ಜೊತೆ ಕಾಣಿಸಿಕೊಂಡ ಕಾರಣಕ್ಕೆ ದರ್ಶನ್ ಮತ್ತು ಯಶ್ ನಟಿಸಿರುವ ಚಲನಚಿತ್ರಗಳ ಪ್ರಸಾರಕ್ಕೆ ನಿರ್ಬಂಧ ಹೇರುವುದಿಲ್ಲ' ಎಂದು ಹೇಳಿದ್ದಾರೆ.












Click it and Unblock the Notifications