Basavaraj Bommai Road Show: ಚುನಾವಣಾ ಪ್ರಚಾರ; ಬಸವರಾಜ ಬೊಮ್ಮಾಯಿ ರೋಡ್ ಶೋ ಮಾರ್ಗ, ವಿವರ
ಬೆಂಗಳೂರು, ಏಪ್ರಿಲ್ 22; ಕರ್ನಾಟಕ ವಿಧಾನಸಭೆ ಚುನಾವಣೆಗೆ ನಾಮಪತ್ರ ಸಲ್ಲಿಕೆ ಕಾರ್ಯ, ನಾಮಪತ್ರಗಳ ಪರಿಶೀಲನೆ ಮುಕ್ತಾಯಗೊಂಡಿದೆ. ಮೇ 10ರಂದು ನಡೆಯಲಿರುವ ಚುನಾವಣೆಯ ನಾಮಪತ್ರ ವಾಪಸ್ ಪಡೆಯಲು ಏಪ್ರಿಲ್ 24 ಕೊನೆಯ ದಿನವಾಗಿದೆ. ಚುನಾವಣಾ ಪ್ರಚಾರದ ಕಾವು ಆರಂಭವಾಗಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಏಪ್ರಿಲ್ 23ರ ಭಾನುವಾರದಿಂದಲೇ ಚುನಾವಣಾ ಪ್ರಚಾರ ಕಾರ್ಯಕ್ಕೆ ಧುಮುಕಲಿದ್ದಾರೆ. ರೋಡ್ ಶೋ ಮೂಲಕ ಅವರು ವಿವಿಧ ಜಿಲ್ಲೆಗಳಲ್ಲಿ ಪ್ರಚಾರ ಮಾಡಲಿದ್ದಾರೆ. ಡಬಲ್ ಎಂಜಿನ್ ಸರ್ಕಾರದ ಸಾಧನೆಗಳನ್ನು ಜನರ ಮುಂದೆ ಇಟ್ಟು ಮತ ಕೇಳಲಿದ್ದಾರೆ.

ಬಿಜೆಪಿ ಅಭ್ಯರ್ಥಿಗಳ ಪರವಾಗಿ ರೋಡ್ ಶೋ ನಡೆಸುವ ಮೊದಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಸವೇಶ್ವರರ ಪುತ್ಥಳಿಗೆ ಮಾಲಾರ್ಪಣೆ ಮಾಡಲಿದ್ದಾರೆ. ಭಾನುವಾರ ಒಂದೇ ದಿನ 11 ವಿಧಾನಸಭಾ ಕ್ಷೇತ್ರಗಳಲ್ಲಿ ಬಸವರಾಜ ಬೊಮ್ಮಾಯಿ ರೋಡ್ ಶೋ ನಡೆಸಲಿದ್ದಾರೆ. ಬೆಂಗಳೂರು ನಗರದಿಂದಲೇ ರೋಡ್ ಶೋಗೆ ಚಾಲನೆ ಸಿಗಲಿದೆ.
ಭಾನುವಾರ ಬೆಂಗಳೂರು ನಗರದ ಯಲಹಂಕದಿಂದ ಪ್ರಚಾರ ಆರಂಭಿಸಲಿರುವ ಬಸವರಾಜ ಬೊಮ್ಮಾಯಿ ಚಿಕ್ಕಮಗಳೂರುವರೆಗೆ ಪ್ರಚಾರ ನಡೆಸಲಿದ್ದಾರೆ. ರಾಜ್ಯದ ಬಿಜೆಪಿ ಸರ್ಕಾರದ ಸಾಧನೆಗಳನ್ನು ಜನರಿಗೆ ತಲುಪಿಸಿ ಮತ ಕೇಳಲಿದ್ದಾರೆ. ರೋಡ್ ಶೋ ಮತ್ತು ಸಾರ್ವಜನಿಕ ಸಭೆಗಳ ಮೂಲಕ ಮುಖ್ಯಮಂತ್ರಿಗಳು ಚುನಾವಣಾ ಪ್ರಚಾರ ಕೈಗೊಳ್ಳಲಿದ್ದಾರೆ.

ಯಲಹಂಕ, ದೊಡ್ಡಬಳ್ಳಾಪುರ, ನೆಲಮಂಗಲ, ತುಮಕೂರು ಗ್ರಾಮಾಂತರ, ತುಮಕೂರು ನಗರ, ಗುಬ್ಬಿ , ತಿಪಟೂರು, ಅರಸೀಕೆರೆ, ಕಡೂರು, ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಬಸವರಾಜ ಬೊಮ್ಮಾಯಿ ಭರ್ಜರಿ ರೋಡ್ ಶೋ ನಡೆಸಲಿದ್ದಾರೆ. ಪಕ್ಷದ ವಿವಿಧ ನಾಯಕರು, ಅಭ್ಯರ್ಥಿಗಳು ಅವರ ಜೊತೆ ಇರಲಿದ್ದಾರೆ.
ಮುಖ್ಯಮಂತ್ರಿಗಳ ಕಾರ್ಯಕ್ರಮ; ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭಾನುವಾರ ಬೆಳಗ್ಗೆ 9.45ಕ್ಕೆ ಶ್ರೀ ಬಸವೇಶ್ವರ ವೃತ್ತ, ಬೆಂಗಳೂರು ಇಲ್ಲಿ ಬಸವೇಶ್ವರ ಪ್ರತಿಮೆಗೆ ಮಾಲಾರ್ಪಣೆ ಮಾಡಲಿದ್ದಾರೆ. ಬಳಿಕ ರಸ್ತೆ ಮೂಲಕ ಯಲಹಂಕ ತಲುಪಲಿದ್ದಾರೆ. ಅಲ್ಲಿ ರೋಡ್ ಶೋ ಮತ್ತು ಸಾರ್ವಜನಿಕ ಸಭೆ ನಡೆಯಲಿದೆ.
11 ಗಂಟೆ ಯಲಹಂಕ ರೋಡ್ ಶೋ, 11.30 ದೊಡ್ಡಬಳ್ಳಾಪುರದಲ್ಲಿ ರೋಡ್ ಶೋ ಮತ್ತು ಸಾರ್ವಜನಿಕ ಸಭೆ, 12.30ಕ್ಕೆ ನೆಲಮಂಗಲ ರೋಡ್ ಶೋ ಮತ್ತು ಸಾರ್ವಜನಿಕ ಸಭೆ, 1.30 ದಾಬಸ್‌ಪೇಟೆಯಲ್ಲಿ ರೋಡ್ ಶೋ, 2.15ಕ್ಕೆ ಗೂಳೂರು, ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರಕ್ಕೆ ಆಗಮನ.
ಮಧ್ಯಾಹ್ನ 3ಗಂಟೆಗೆ ತುಮಕೂರು ನಗರ- ರೋಡ್ ಶೋ ಮತ್ತು ಸಾರ್ವಜನಿಕ ಸಭೆ, 4 ಗಂಟೆ ಗುಬ್ಬಿ ರೋಡ್ ಶೋ ಮತ್ತು ಸಾರ್ವಜನಿಕ ಸಭೆ, 5 ಗಂಟೆ ಕೆ. ಬಿ. ಕ್ರಾಸ್ ರೋಡ್ ಶೋ ಮತ್ತು ಸಾರ್ವಜನಿಕ ಸಭೆ, ಸಂಜೆ 6 ಗಂಟೆ ರೋಡ್ ಶೋ ಮತ್ತು ಸಾರ್ವಜನಿಕ ಸಭೆಯಲ್ಲಿ ಬಸವರಾಜ ಬೊಮ್ಮಾಯಿ ಪಾಲ್ಗೊಳ್ಳಲಿದ್ದಾರೆ.
ಸಂಜೆ 7 ಗಂಟೆಗೆ ಅರಸೀಕೆರೆ ರೋಡ್ ಶೋ ಮತ್ತು ಸಾರ್ವಜನಿಕ ಸಭೆ, ಸಂಜೆ 7.45 ಬಾಣಾವರ ರೋಡ್ ಶೋ, ರಾತ್ರಿ 8.15 ಕಡೂರು ರೋಡ್ ಶೋ ಮತ್ತು ಸಾರ್ವಜನಿಕ ಸಭೆ, 9.15 ಚಿಕ್ಕಮಗಳೂರು ರೋಡ್ ಶೋ ಮತ್ತು ಸಾರ್ವಜನಿಕ ಸಭೆಯನ್ನು ಮುಖ್ಯಮಂತ್ರಿಗಳು ನಡೆಸಲಿದ್ದಾರೆ.
ಭಾನುವಾರ ಒಂದೇ ದಿನ ಬಿಡುವಿಲ್ಲದೇ ರೋಡ್ ಶೋ ಮತ್ತು ಸಾರ್ವಜನಿಕ ಸಭೆಗಳನ್ನು ನಡೆಸಲಿರುವ ಬಸವರಾಜ ಬೊಮ್ಮಾಯಿ ರಾತ್ರಿ ಚಿಕ್ಕಮಗಳೂರಿನಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ಸ್ಪಷ್ಟ ಬಹುಮತ ಪಡೆದು ಬಿಜೆಪಿ ಅಧಿಕಾರಕ್ಕೆ ಬರಬೇಕು ಎಂಬುದು ರಾಷ್ಟ್ರೀಯ ನಾಯಕರ ಸೂಚನೆಯಾಗಿದೆ. ಆದ್ದರಿಂದ ರಾಜ್ಯ ನಾಯಕರು ಬಿಡುವಿಲ್ಲದೇ ಪ್ರಚಾರ ಕಾರ್ಯದಲ್ಲಿ ತೊಡಗಿಕೊಳ್ಳಲಿದ್ದಾರೆ. ರಾಷ್ಟ್ರೀಯ ನಾಯಕರು ಸಹ ಪ್ರಚಾರಕ್ಕಾಗಿ ರಾಜ್ಯಕ್ಕೆ ಆಗಮಿಸಲಿದ್ದಾರೆ.












Click it and Unblock the Notifications