ಮನೆಯಿಂದಲೇ ಶತಾಯುಷಿ ಮತದಾನ: ಚುನಾವಣಾ ಆಯೋಗಕ್ಕೆ ಮೆಚ್ಚುಗೆ
ಬೆಂಗಳೂರು, ಏಪ್ರಿಲ್ 30: ಕರ್ನಾಟಕ ರಾಜ್ಯ ಸಾರ್ವತ್ರಿಕ ಚುನಾವಣೆಯ ಮತದಾನ ಮೇ 10ರಂದು ನಡೆಯಲಿದೆ. ಆದರೆ ಅದಕ್ಕು ಮುನ್ನವೇ ಹಿರಿಯ ಜೀವಗಳು ಹಾಗೂ ವಿಕಲಚೇತನರು, ಹಾಸಿಗೆ ಬಿಟ್ಟು ಮೇಲೇಳಲಾಗದವರಿಗೆ ಇದೇ ಮೊದಲ ಬಾರಿಗೆ ಚುನಾವಣೆ ಆಯೋಗ ಮನೆಯಿಂದಲೇ ಗೌಪ್ಯ ಮತದಾನಕ್ಕೆ ಅವಕಾಶ ಮಾಡಿದೆ.
ಮನೆಯಿಂದಲೇ ಈ ಗೌಪ್ಯ ಮತದಾನ ವ್ಯವಸ್ಥೆಯಡಿ 103 ವರ್ಷದ ವೃದ್ಧರೊಬ್ಬರು ಭಾನುವಾರ ಮತದಾನ ಮಾಡಿದ್ದಾರೆ. ಜೊತೆಗೆ ಇಂತದ್ದೊಂದು ಉತ್ತಮ ವ್ಯವಸ್ಥೆ ಜಾರಿಗೆ ತಂದ ಚುನಾವಣಾ ಆಯೋಗ ಕುರಿತು ಮೆಚ್ಚುಗೆ ಮಾತುಗಳನ್ನಾಡಿದ್ದಾರೆ.

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲ್ಲೂಕಿನ ಇಂಗಳಿ ಗ್ರಾಮದ 103 ವರ್ಷ 4 ತಿಂಗಳ ವಯೋವೃದ್ಧ ಮಹದೇವ ಮಹಾಲಿಂಗ ಮಾಳಿ ಅವರು ಇಂದು ತಮ್ಮ ಮನೆಯಿಂದಲೇ ಮತವನ್ನು ಚಲಾಯಿಸಿದರು. ಇವರು ಚಿಕ್ಕೋಡಿ-ಸದಲಗಾ ವಿಧಾನಸಭಾ ಕ್ಷೇತ್ರದ ಅತ್ಯಂತ ಶತಾಯುಷಿ, ಹಿರಿಯ ಮತದಾರರೆನಿಸಿಕೊಂಡಿದ್ದಾರೆ.
ಮನೆಯಿಂದ ಮತದಾನ ಕಾರ್ಯಕ್ಕೆ ಮೆಚ್ಚುಗೆ
ಶತಾಯುಷಿ ಮಹದೇವ ಮಹಾಲಿಂಗ ಅವರು ತಮ್ಮ ಮತದಾನದ ಹಕ್ಕು ಚಲಾಯಿಸುವ ಮೂಲಕ ಎಲ್ಲಾ ಮತದಾರರಿಗೂ ಸ್ಪೂರ್ತಿಯ ಸೆಲೆಯಾಗಿದ್ದಾರೆ. ಈ ವಯಸ್ಸಿನಲ್ಲಿಯೂ ತಮ್ಮ ಕೆಲಸಗಳನ್ನು ಸ್ವತ: ತಾವೇ ಮಾಡಿಕೊಳ್ಳುತ್ತಾರೆ. ಅವರು ಕರ್ನಾಟಕ ವಿಧಾನಸಭೆ ಚುನಾವಣೆ 2023 ಹಾಗೂ ಮತದಾನದ ಪ್ರಾಮುಖ್ಯತೆಯನ್ನು ವಿವರಿಸಿದರು. ಜೊತೆಗೆ ಮೊದಲ ಭಾರಿಗೆ ಭಾರತ ಚುನಾವಣಾ ಆಯೋಗದ ಈ ನೂತನ ಸೇವೆಯನ್ನು ಶ್ಲಾಘಿಸಿದರು. ಜವಾಬ್ದಾರಿಯುತ ಪ್ರಜೆಗಳಾಗಿ ದೇಶದ ಪ್ರತಿ ನಾಗರಿಕರೂ ತಪ್ಪದೇ ಮತವನ್ನು ಚಲಾಯಿಸಬೇಕೆಂದು ಅವರು ಕರೆ ನೀಡಿದರು.
ಸಾರ್ವತ್ರಿಕ ಚುನಾವಣೆ ಕರ್ನಾಟಕ ವಿಧಾನಸಭೆ 2023ರ ಅಂಗವಾಗಿ ಕೇಂದ್ರ ಚುನಾವಣಾ ಆಯೋಗ, ಇದೇ ಮೊದಲ ಬಾರಿಗೆ ಕರ್ನಾಟಕದಲ್ಲಿ ದಿವ್ಯಾಂಗರು ಮತ್ತು 80 ವರ್ಷ ಮೇಲ್ಪಟ್ಟವರಿಗೆ ಮನೆಯಿಂದಲೆ ಮತದಾನ ಮಾಡುವುದಕ್ಕೆ ಅವಕಾಶ ನೀಡಿದೆ. ಬ್ಯಾಲೆಟ್ ಪೇಪರ್ ಮೂಲಕ ಮಾಡುವ ಮತದಾನದ ಪ್ರಕ್ರಿಯೆಯನ್ನು ಏಪ್ರಿಲ್ 29 ರಿಂದ ಪ್ರಾರಂಭಿಸಲಾಗಿದೆ. ಇದು ಮೇ 6 ರಂದು ಕೊನೆಗೊಳ್ಳಲಿದೆ.

ರಾಜ್ಯದಲ್ಲಿ ಶನಿವಾರದಿಂದ ದಿವ್ಯಾಂಗರು ಮತ್ತು 80 ವರ್ಷ ಮೇಲ್ಪಟ್ಟವರಿಗೆ ಮನೆಯಿಂದಲೆ ಮತದಾನ ಮಾಡುತ್ತಿದ್ದಾರೆ.
ಮತದಾನ ದೇಶದ ಪ್ರತಿ ನಾಗರಿಕನ ಸಂವಿಧಾನಿಕ ಹಕ್ಕು ಆಗಿದೆ. ಈ ಹಕ್ಕನ್ನು ಪ್ರತಿಯೊಬ್ಬರು ಚಲಾಯಿಸಬೇಕೆಂಬ ಉದ್ದೇಶದಿಂದ ಈ ವಿಶೇಷ ಅವಕಾಶವನ್ನು ಕಲ್ಪಿಸಲಾಗಿದೆ. ಇದು ಯುವ ಮತದಾರರಿಗೆ ಸ್ಪೂರ್ತಿಯಾಗಿದೆ ಎಂದು ಕರ್ನಾಟಕ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮೇ 10ಕ್ಕೆ ಏಕಕಾಲಕ್ಕೆ 'ನಮ್ಮ ನಡೆ ಮತಗಟ್ಟೆಯ ಕಡೆ'
ಚುನಾವಣೆ ಅಂಗವಾಗಿ ಮೇ 10 ರಂದು ಮತಗಟ್ಟೆಯ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ರಾಜ್ಯದ 58,000 ಕ್ಕೂ ಹೆಚ್ಚಿನ ಮತಗಟ್ಟೆಗಳಲ್ಲಿ 'ನಮ್ಮ ನಡೆ ಮತಗಟ್ಟೆಯ ಕಡೆ' ಕಾರ್ಯಕ್ರಮ ನಡೆಯಲಿದೆ. ಏಕ ಕಾಲದಲ್ಲಿ ಬೃಹತ್ ಆಂದೋಲನ ರೀತಿಯಲ್ಲಿ ಅದು ನಡೆಯಲಿದೆ. ಅದರ ಮಾದರಿ ಕಾರ್ಯಕ್ರಮ ಭಾನುವಾರ ನಡೆಯಿತು. ಮುಖ್ಯಚುನಾವಣಾಧಿಕಾರಿ ಮನೋಜ್ ಕುಮಾರ್ ಮತಗಟ್ಟೆಗೆ ಭೇಟಿ ನೀಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಪ್ರಜಾಪ್ರಭುತ್ವದಲ್ಲಿ ಮತದಾನ ಅತ್ಯಂತ ಪ್ರಮುಖವಾದ ಪ್ರಕ್ರಿಯೆ. ಮತದಾನದಲ್ಲಿ ಪಾಲ್ಗೊಳ್ಳುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ ಮತ್ತು ಸಾಮಾಜಿಕ ಜವಾಬ್ದಾರಿ. ಮತದಾನದ ಪ್ರಾಮುಖ್ಯತೆ ಹಾಗೂ ತಮ್ಮ ಮತಗಟ್ಟೆಗಳ ಮಾಹಿತಿಯನ್ನು ಮತದಾರರಿಗೆ ಮನವರಿಕೆ ಮಾಡಿಕೊಡುವ ಉದ್ದೇಶದಿಂದ ರಾಜ್ಯಾದ್ಯಂತ 'ನಮ್ಮ ನಡೆ ಮತಗಟ್ಟೆಯ ಕಡೆ' ಕಾರ್ಯಕ್ರಮವನ್ನು ರಾಷ್ಟ್ರೀಯ ಹಬ್ಬದ ಮಾದರಿಯಲ್ಲಿ ಆಚರಿಸಲಾಗುವುದು ಎಂದು ಚುನಾವಣೆ ಆಯೋಗ ತಿಳಿಸಿದೆ.












Click it and Unblock the Notifications