Eedina pre-poll Survey: ವಿಧಾನಸಭೆ ಫಲಿತಾಂಶ ನಿಖರವಾಗಿ ಕೊಟ್ಟ 'ಈದಿನ' ಸಮೀಕ್ಷೆ ಲೋಕಸಭಾ ಚುನಾವಣೆಯಲ್ಲಿ ಜೈ ಎಂದಿದ್ದು ಯಾರಿಗೆ?
ಬೆಂಗಳೂರು, ಏಪ್ರಿಲ್. 17: ಕಳೆದ ವರ್ಷ ವಿಧಾನಸಭಾ ಚುನಾವಣೆ ಕಂಡ ರಾಜ್ಯ ಈ ವರ್ಷ ಲೋಕಸಭಾ ಚುನಾವಣೆಗೆ ಸಿದ್ಧವಾಗುತ್ತಿದೆ. ವಿಧಾನಸಭಾ ಚುನಾವಣೆಯಲ್ಲಿ ಹೀನಾಯ ಸೋಲು ಕಂಡಿರುವ ಬಿಜೆಪಿ ಇರುವ ಲೋಕಸಭಾ ಸ್ಥಾನಗಳ ಜೊತೆಗೆ ಕಾಂಗ್ರೆಸ್‌ನ ಒಂದೇ ಒಂದು ಸ್ಥಾನವನ್ನು ಕಿತ್ತುಕೊಳ್ಳಲು ಸರ್ವ ತಂತ್ರಗಳನ್ನು ಅನುಸರಿಸುತ್ತಿದೆ. ಇದೇ ವೇಳೆ ಕಾಂಗ್ರೆಸ್ ಕೂಡ ತನ್ನ ಗ್ಯಾರಂಟಿ ಕಾರ್ಡ್ ಹಿಡಿದು ಭರ್ಜರಿ ಪ್ರಚಾರ ನಡೆಸುತ್ತಿದೆ.
ಲೋಕಸಭಾ ಚುನಾವಣಾ ಫಲಿತಾಂಶಗಳ ಬಗ್ಗೆ ಈಗಾಗಲೇ ಹಲವು ಸಮೀಕ್ಷೆಗಳು ಬಿಡುಗಡೆಯಾಗಿವೆ. ಆದರೆ, ಕಳೆದ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ನಿಖರವಾಗಿ ಫಲಿತಾಂಶವನ್ನು ಅಂದಾಜು ಮಾಡಿದ್ದು ಲೋಕ್ ಪೋಲ್ ಮತ್ತು ಕನ್ನಡದ ಈದಿನ ಮೆಗಾ ಸರ್ವೆ. ಈ ಎರಡು ಸಂಸ್ಥೆಗಳು ಕೂಡ ಲೋಕಸಭಾ ಚುನಾವಣಾ ಸಮೀಕ್ಷೆ ನಡೆಸಿವೆ. ಈಗಾಗಲೇ ಲೋಕ್ ಪೋಲ್ (Lok Poll) ಗ್ರೌಂಡ್ ರಿಪೋರ್ಟ್ ಕಾಂಗ್ರೆಸ್ 12 ರಿಂದ 14 ಸ್ಥಾನಗಳನ್ನು ಗೆಲ್ಲಲಿದೆ. ಬಿಜೆಪಿ 10 ರಿಂದ 12, ಜೆಡಿಎಸ್ ಒಂದು ಅಥವಾ ಎರಡು ಸ್ಥಾನ ಗೆಲ್ಲಬಹುದು ಎಂದಿದೆ.

ಲೋಕಸಭಾ ಚುನಾವಣೆ: ಈದಿನ ಸಮೀಕ್ಷೆ
ಕಳೆದ ವಿಧಾನಸಭಾ ಚುನಾವಣೆಯಲ್ಲಿ ವೈಜ್ಞಾನಿಕವಾಗಿ ಸಮೀಕ್ಷೆ ನಡೆಸಿ ಫಲಿತಾಂಶ ನೀಡಿದ್ದ ಈದಿನ.ಕಾಂ ಫಲಿತಾಂಶಗಳು ಅತ್ಯಂತ ನಿಖರವಾಗಿದ್ದವು. ಇದೇ ಕಾರಣಕ್ಕೆ ಈದಿನ ಸಮೀಕ್ಷೆ ಮೇಲೆ ರಾಜಕೀಯ ಪಕ್ಷಗಳು ಮತ್ತು ಇತರ ಮಾಧ್ಯಮಗಳ ಒಂದು ಕಣ್ಣಿತ್ತು. ಲೋಕಸಭಾ ಚುನಾವಣೆಯ ಸಮೀಕ್ಷೆ ನಡೆಸಿರುವ ಈದಿನ ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚಿನ ಕ್ಷೇತ್ರಗಳು ಸಿಗಲಿವೆ ಎಂದು ಅಂದಾಜಿಸಿದೆ.
ಇಂದೇ ಚುನಾವಣೆ ನಡೆದರೆ ಯಾರಿಗೆ ಎಷ್ಟು ಸ್ಥಾನ ಎಂದು ಲೆಕ್ಕಾ ಹಾಕಲಾಗಿದ್ದು, ಇದರ ಪ್ರಕಾರ ರಾಜ್ಯದ 28 ಲೋಕಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ 13 ರಿಂದ 18 ಸ್ಥಾನಗಳನ್ನು ಪಡೆಯಲಿದೆ ಎಂದು ಭವಿಷ್ಯ ನುಡಿದಿದೆ. 25 ಹಾಲಿ ಸಂಸದರನ್ನು ಹೊಂದಿರುವ ಬಿಜೆಪಿ ತನ್ನ ಮೈತ್ರಿ ಪಕ್ಷ ಜೆಡಿಎಸ್ ಜೊತೆಗೆ ಸೇರಿ 10 ರಿಂದ 13 ಸ್ಥಾನಗಳನ್ನು ಪಡೆಯಲಿದೆ.
ರಾಜ್ಯದಲ್ಲಿ ಬಿಜೆಪಿ- ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡು ಸೀಟು ಹಂಚಿಕೊಂಡಿದೆ. 25 ಕ್ಷೇತ್ರಗಳಲ್ಲಿ ಬಿಜೆಪಿ ಮತ್ತು ಉಳಿದ ಮೂರು ಸ್ಥಾನಗಳಲ್ಲಿ ಜೆಡಿಎಸ್ ಸ್ಪರ್ಧಿಸುತ್ತಿದೆ. ಆದರೆ, ಬೆಂಗಳೂರು ಗ್ರಾಮಾಂತರದಲ್ಲಿ ಡಿಕೆ ಸುರೇಶ್ ವಿರುದ್ಧ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರ ಅಳಿಯ ಡಾ. ಎನ್‌ಸಿ ಮಂಜುನಾಥ್ ಸ್ಪರ್ಧಿಸುತ್ತಿದ್ದಾರೆ. ಹಾಗಾಗಿ ಜೆಡಿಎಸ್‌ಗೆ ನಾಲ್ಕು ಸ್ಥಾನ ಎನ್ನಬಹುದು.

ಇನ್ನು, ಈದಿನ.ಕಾಂ ಹಲವು ಪ್ರಮುಖ ಪ್ರಶ್ನೆಗಳನ್ನು ಮತರಾರರ ಮುಂದಿರಿಸಿದೆ. "ನಿಮ್ಮ ಪ್ರಕಾರ ಕಳೆದ 10 ವರ್ಷಗಳಲ್ಲಿ ಭ್ರಷ್ಟಾಚಾರ ಹೆಚ್ಚಾಗಿದೆಯೋ ಅಥವಾ ಕಡಿಮೆಯಾಗಿದೆಯೋ..? ಹೆಚ್ಚಾಗಿದ್ದರೆ ಯಾರು ಕಾರಣ..?" ಎಂಬ ಪ್ರಶ್ನೆಯಿಟ್ಟಿದೆ. ಇದಕ್ಕೆ 36.4% ಮಂದಿ ಭ್ರಷ್ಟಾಚಾರ ಹೆಚ್ಚಾಗಿದೆ ಬಿಜೆಪಿ ಇದಕ್ಕೆ ಕಾರಣ ಎಂದಿದ್ದಾರೆ. 21.45% ಮಂದಿ ಕಾಂಗ್ರೆಸ್ ಕಾರಣ ಎಂದಿದ್ದಾರೆ. 18.08% ರಷ್ಟು ಮತದಾರರು ಎಲ್ಲರನ್ನೂ ದೂಷಿಸಿದ್ದಾರೆ. 11.36% ಭ್ರಷ್ಟಾಚಾರ ಕಡಿಮೆಯಾಗಿದೆ ಎಂದಿದ್ದು, 11.16% ಜನ ನಮಗೆ ಗೊತ್ತಿಲ್ಲ ಎಂದು ಅಭಿಪ್ರಾಯ ದಾಖಲಿಸಿದ್ದಾರೆ.
ಇನ್ನು, ಆಡಳಿತರೂಢ ಕಾಂಗ್ರೆಸ್ ಸರ್ಕಾರ ತನ್ನ ಐದು ಗ್ಯಾರಂಟಿ ಯೋಜನೆಗಳನ್ನೇ ಚುನಾವಣಾ ಪ್ರಚಾರಕ್ಕೆ ಬಳಸಿಕೊಳ್ಳುತ್ತಿದೆ. ಹೀಗಾಗಿ ಈದಿನ.ಕಾಂ "ಕರ್ನಾಟಕ ಸರ್ಕಾರ 5 ಗ್ಯಾರಂಟಿಗಳನ್ನು ಜಾರಿಗೊಳಿಸಿದೆ. ಈ ಗ್ಯಾರಂಟಿ ಯೋಜನೆಗಳನ್ನು ಬೆಂಬಲಿಸಿ ನೀವು ಕಾಂಗ್ರೆಸ್‌ಗೆ ಓಟು ಹಾಕುತ್ತೀರಾ..?" ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ 52.28% ಮತದಾರರು ಹೌದು ಎಂದರೆ, 35.26% ಜನ ಇಲ್ಲ ಎಂದಿದ್ದಾರೆ. ಉಳಿದ 12.46% ಮತದಾರರು ಗೊತ್ತಿಲ್ಲ.. ಹೇಳುವುದಿಲ್ಲ ಎಂದು ತಿಳಿಸಿದ್ದಾರೆ ಎಂದು ಸಮೀಕ್ಷೆ ವರದಿ ಮಾಡಿದೆ.












Click it and Unblock the Notifications