ಅನಧಿಕೃತ ಶಾಲೆಗಳು ಬಂದ್; ಶಿಕ್ಷಣ ಇಲಾಖೆ ಖಡಕ್ ಸೂಚನೆಗಳು
ಬೆಂಗಳೂರು, ಆಗಸ್ಟ್ 11; ಕರ್ನಾಟಕದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಅನಧಿಕೃತವಾಗಿ ನಡೆಸುತ್ತಿರುವ ಶಾಲೆಗಳ ವಿರುದ್ಧ ಕ್ರಮಕ್ಕೆ ಮುಂದಾಗಿದೆ. ಮಾರ್ಗಸೂಚಿ ಪ್ರಕಾರ ನೋಂದಣಿ ಮಾಡಿಕೊಳ್ಳದ ಶಾಲೆಗಳನ್ನು ಬಂದ್ ಮಾಡುವ ಎಚ್ಚರಿಕೆಯನ್ನು ನೀಡಿದೆ. ಶಾಲಾ ಶಿಕ್ಷಣ ಇಲಾಖೆ ಆಯುಕ್ತರು ಈ ಕುರಿತು ಮಾರ್ಗಸೂಚಿಯನ್ನು ಪ್ರಕಟಿಸಿದ್ದಾರೆ. ಇದು 2022-23ನೇ ಸಾಲಿನಲ್ಲಿರಾಜ್ಯದಲ್ಲಿ ಅನಧಿಕೃತವಾಗಿ ನಡೆಸುತ್ತಿರುವಂತಹ ಶಾಲೆಗಳ ವಿರುದ್ಧ ಕ್ರಮವಹಿಸುವ ಕುರಿತು ಎಂಬ ವಿಷಯವನ್ನು ಒಳಗೊಂಡಿದೆ.
ರಾಜ್ಯದಲ್ಲಿನ ಕೆಲವು ಖಾಸಗಿ ಶಾಲಾ ಆಡಳಿತ ಮಂಡಳಿಗಳು ಕರ್ನಾಟಕ ಶಿಕ್ಷಣ ಕಾಯಿದೆ-1983 ಸೆಕ್ಷನ್-30, 31ರ ಪ್ರಕಾರ ಇಲಾಖಾ ವತಿಯಿಂದ ಯಾವುದೇ ನೋಂದಣಿಯನ್ನು ಪಡೆಯದೆ ಅನಧಿಕೃತವಾಗಿ ಶಾಲೆಗಳನ್ನು ನಡೆಸುತ್ತಿರುವುದಕ್ಕೆ ಸಂಬಂಧಪಟ್ಟಂತೆ ನಿಮ್ಮ ಜಿಲ್ಲೆಯಲ್ಲಿ ನೋಂದಣಿಯನ್ನು ಪಡೆಯದೆ ಅನಧಿಕೃತವಾಗಿ ಶಾಲೆ ನಡೆಸುತ್ತಿರುವುದು, ನೋಂದಣಿ ಇಲ್ಲದೆ ಉನ್ನತೀಕರಿಸಿದ ತರಗತಿಗಳನ್ನು ನಡೆಸುತ್ತಿರುವುದು, ಅನಧಿಕೃತ ಪಠ್ಯಕ್ರಮ ಮತ್ತು ಅನಧಿಕೃತ ಪಠ್ಯಪುಸ್ತಕ ಬೋಧಿಸುತ್ತಿರುವುದು, ಕೇಂದ್ರ ಪಠ್ಯಕ್ರಮಕ್ಕೆ ಸಂಯೋಜಿಸಿದ ನಂತರವೂ ರಾಜ್ಯ ಪಠ್ಯಕ್ರಮದ ಶಾಲೆ ನಡೆಸುತ್ತಿರುವುದು ಅತ್ಯಂತ ಆಕ್ಷೇಪಾರ್ಹ/ ನಿಯಮಬಾಹಿರವಾಗಿರುತ್ತದೆ ಎಂದು ಹೇಳಿದೆ.

ಸಮಯ ನೀಡಲಾಗಿತ್ತು; ಇಂತಹ ಶಾಲಾ ಆಡಳಿತ ಮಂಡಳಿಗಳಿಗೆ 45 ಕಾಲಾವಕಾಶವನ್ನು ನೀಡಿ 2023-24ನೇ ಶೈಕ್ಷಣಿಕ ಸಾಲಿನ ದಾಖಲಾತಿ ಪ್ರಾರಂಭಾವಾಗುವ ಮುನ್ನವೇ ತಕ್ಷಣ ನಿಯಮಾನುಸಾರ ಕ್ರಮವಹಿಸುವಂತೆಯೂ ಹಾಗೂ ನಂತರದಲ್ಲಿ ಮುಂದುವರೆಸಿದ್ದಲ್ಲಿ ಅಂತಹ ಶಾಲೆಗಳಿಗೆ ಪೋಷಕರು ಮಕ್ಕಳನ್ನು ದಾಖಲಿಸದಂತೆ ಸಾರ್ವಜನಿಕವಾಗಿ ಪ್ರಕಟಣೆಯನ್ನು ನೀಡುವ ಕುರಿತು ಕ್ರಮವಹಿಸಿ ಎಸ್.ಎ.ಟಿ.ಎಸ್ ನಲ್ಲಿ ಇಂದೀಕರಿಸುವುದನ್ನು ನಿರ್ಬಂಧಿಸಿ ಜಿಲ್ಲಾ ಮಾಹಿತಿಯನ್ನು ಕ್ರೋಢೀಕರಿಸಿ ನೋಂದಣಿ/ ರದ್ದತಿ ಪ್ರಾಧಿಕಾರಿಯಾಗಿರುವ ಉಪನಿರ್ದೇಶಕರು (ಆಡಳಿತ) ಎಲ್ಲಾ ದಾಖಲೆಗಳೊಂದಿಗೆ ಆಯುಕ್ತಾಲಯಕ್ಕೆ ವರದಿ ಸಲ್ಲಿಸುವಂತೆ ಸೂಚಿಸಲಾಗಿತ್ತು.
ರಾಜ್ಯದಲ್ಲಿನ ಅನಧಿಕೃತ ಶಾಲೆಗಳಿಗೆ ಸಂಬಂಧಪಟ್ಟಂತೆ ದಿನಪತ್ರಿಕೆಯಲ್ಲಿ ರಾಜ್ಯದಲ್ಲಿ 1300 ಅನಧಿಕೃತ ಶಾಲೆಗಳಿದ್ದರೂ ಇಲಾಖೆಯು ಕ್ರಮವಹಿಸಿರುವುದಿಲ್ಲವೆಂದು ವರದಿ ಪ್ರಕಟವಾಗಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳ ಆಪ್ತ ಕಾರ್ಯದರ್ಶಿಗಳು ಅನುಪಾಲನಾ ವರದಿಯನ್ನು ಸಲ್ಲಿಸುವಂತೆ ಸೂಚಿಸಿದ್ದಾರೆ. ಈ ಕುರಿತಂತೆ ರಾಜ್ಯದಲ್ಲಿನ ಅನಧಿಕೃತ ಶಾಲೆಗಳ ಬಗ್ಗೆ ಜಿಲ್ಲೆಗಳಲ್ಲಿ ಪರಿಶೀಲಿಸಿದ ಸಂದರ್ಭದಲ್ಲಿ ಉಪನಿರ್ದೇಶಕರುಗಳಿಂದ ಈ ಕಛೇರಿಗೆ ಕೇವಲ 16 ಜಿಲ್ಲೆಗಳು ಮಾತ್ರ ಮಾಹಿತಿ ನೀಡಿದ್ದು ಉಳಿದವರು ಯಾವುದೇ ಮಾಹಿತಿ ನೀಡಿರುವುದಿಲ್ಲ.
ಮಾಹಿತಿ ನೀಡಿರುವವರೂ ಸಹ ನಿಖರವಾದ ಮಾಹಿತಿ ಸಲ್ಲಿಕೆಯಾಗಿರುವುದಿಲ್ಲ. ಖಾಸಗಿ ಶಾಲಾ ನೋಂದಣಿ/ ಮಾನ್ಯತೆ ಪ್ರಾಧಿಕಾರಿಗಳಾದ ನೀವುಗಳು ಮಕ್ಕಳ ಶೈಕ್ಷಣಿಕ ಭವಿಷ್ಯದ ಬಗ್ಗೆ ನಿರ್ಲಕ್ಷತೆ ತೋರುತ್ತಿರುವುದು ಇಂತಹ ಶಾಲೆಗಳ ವಿರುದ್ಧ ಕ್ರಮಕೈಗೊಳ್ಳದಿರುವುದು, ಪತ್ರಿಕಾ ಪ್ರಕಟಣೆ ನೀಡದಿರುವುದು ಇಲಾಖೆಗೆ ಮುಜುಗರ ತಂದಿದೆ. ತಕ್ಷಣ ವೈಯಕ್ತಿಕವಾಗಿ ಗಮನಹರಿಸಿ ಕ್ರಮಕೈಗೊಳ್ಳಲು ಸೂಚನೆ ನೀಡಲಾಗಿದೆ.
ಯಾವ-ಯಾವ ಕ್ರಮಗಳು
* ಶಾಲಾ ನೋಂದಣಿ/ ಅನುಮತಿ ಪಡೆಯದೇ ನಡೆಯುತ್ತಿರುವ ಶಾಲೆಗಳನ್ನು ನಿಯಮಾನುಸಾರ ಮುಚ್ಚುವುದು. ಕರ್ನಾಟಕ ಶಿಕ್ಷಣ ಕಾಯಿದೆ-1983 ಸೆಕ್ಷನ್-30 ಮತ್ತು 31ರಂತೆ ನೋಂದಣಿ ಅನುಮತಿಯನ್ನು ಪಡೆಯದೆ ಶಾಲೆಯನ್ನು ನಡೆಸುತ್ತಿದ್ದಲ್ಲಿ ಅಂತಹ ಶಾಲೆಗಳನ್ನು 14-8-202ರೊಳಗಾಗಿ ನಿಯಮಾನುಸಾರ ಮುಚ್ಚಿಸಿ ಪತ್ರಿಕಾ ಪ್ರಕಟಣೆಯನ್ನು ಸಾರ್ವಜನಿಕವಾಗಿ/ ಪೋಷಕರಿಗೆ ತಿಳಿಯುವ ರೀತಿಯಲ್ಲಿ ಕಛೇರಿಯ ಸೂಚನಾ ಎಂಬುದಾಗಿ ಫಲಕದಲ್ಲಿ ಪಕಟಿಸತಕ್ಕದ್ದು.
ತದನಂತರ ನಿಮ್ಮ ಜಿಲ್ಲಾ ವ್ಯಾಪ್ತಿಯಲ್ಲಿ ಯಾವುದೇ ನೋಂದಣಿ ಪಡೆಯದೆ ನಡೆಯುತ್ತಿರುವ ಶಾಲೆಗಳು ಯಾವುದು ಇರುವುದಿಲ್ಲವೆಂದು ದೃಢೀಕರಣ ನೀಡತಕ್ಕದ್ದು. ತದನಂತರ ಸಾರ್ವಜನಿಕರಿಂದ ನಿಮ್ಮ ಜಿಲ್ಲಾ ವ್ಯಾಪ್ತಿಯಲ್ಲಿ ನೋಂದಣಿ ಪಡೆಯದೆ ಅನಧಿಕೃತವಾಗಿ ಶಾಲೆಗಳು ನಡೆಯುತ್ತಿವೆ ಎಂದು ದೂರು ಬಂದಲ್ಲಿ ನಿಮ್ಮನ್ನೇ ನೇರ ಹೊಣೆಗಾರರನ್ನಾಗಿ ಮಾಡಲಾಗುವುದು.
* ನೋಂದಣಿ ಇಲ್ಲದೇ ಅನಧಿಕೃತವಾಗಿ ಉನ್ನತೀಕರಿಸಿದ ತರಗತಿಗಳನ್ನು ನಡೆಸುತ್ತಿರುವ ಶಾಲೆಗಳು. ಕರ್ನಾಟಕಶಿಕ್ಷಣ ಕಾಯಿದೆ-1983 ಉನ್ನತೀಕರಿಸಿದ ತರಗತಿಗಳನ್ನು ಪ್ರಾರಂಭಿಸಲು ಸೆಕ್ಷನ್-32 ರಲ್ಲಿ ಸಕ್ಷಮ ಪ್ರಾಧಿಕಾರದಿಂದ ಅನುಮತಿಯನ್ನು ಪಡೆಯದೆ ಅನಧಿಕೃತವಾಗಿ ಉನ್ನತೀಕರಿಸಿದ ತರಗತಿಗಳನ್ನು ನಡೆಸುತ್ತಿದ್ದಲ್ಲಿ ಅಂತಹ ಶಾಲೆಗಳ ಉನ್ನತೀಕರಿಸಿದ ತರಗತಿಗಳಿಗೆ 14-8-2023 ರೊಳಗಾಗಿ ನಿಯಮಾನುಸಾರ ಮುಚ್ಚಿಸಿ ಪತ್ರಿಕಾ ಪ್ರಕಟಣೆಯನ್ನು ನೀಡಿ ಅನಧಿಕೃತ ತರಗತಿ ಎಂಬುದಾಗಿ ಸಾರ್ವಜನಿಕವಾಗಿ/ ಪೋಷಕರಿಗೆ ತಿಳಿಯುವ ರೀತಿಯಲ್ಲಿ ಕಛೇರಿಯ ಸೂಚನಾ ಫಲಕದಲ್ಲಿ ಪ್ರಕಟಿಸತಕ್ಕದ್ದು.
ತದನಂತರ ನಿಮ್ಮ ಜಿಲ್ಲಾ ವ್ಯಾಪ್ತಿಯಲ್ಲಿ ಯಾವುದೇ ನೋಂದಣಿ ಪಡೆಯದೆ ಉನ್ನತೀಕರಿಸಿದ ತರಗತಿಗಳು ನಡೆಯುತ್ತಿರುವ ಶಾಲೆಗಳು ಯಾವುದು ಇರುವುದಿಲ್ಲವೆಂದು ದೃಢೀಕರಣ ನೀಡತಕ್ಕದ್ದು. ತದನಂತರ ಸಾರ್ವಜನಿಕರಿಂದ ನಿಮ್ಮ ಜಿಲ್ಲಾ ವ್ಯಾಪ್ತಿಯಲ್ಲಿ ನೋಂದಣಿ ಪಡೆಯದೆ ಅನಧಿಕೃತವಾಗಿ ಉನ್ನತೀಕರಿಸಿದ ತರಗತಿಗಳಿರುವ ಶಾಲೆಗಳು ನಡೆಯುತ್ತಿವೆ ಎಂದು ದೂರು ಬಂದಲ್ಲಿ ನಿಮ್ಮನ್ನೇ ನೇರ ಹೊಣೆಗಾರರನ್ನಾಗಿ ಮಾಡಲಾಗುವುದು.
* ರಾಜ್ಯ ಪಠ್ಯಕ್ರಮದಲ್ಲಿ ಬೋಧಿಸಲು ಅನುಮತಿ ಪಡೆದು ಅನಧಿಕೃತವಾಗಿ ಕೇಂದ್ರ ಪಠ್ಯಕ್ರಮದಲ್ಲಿ ಬೋಧಿಸುತ್ತಿರುವ ಶಾಲೆಗಳು. ರಾಜ್ಯ ಪಠ್ಯಕ್ರಮದಲ್ಲಿ ಅನುಮತಿಯನ್ನು ಪಡೆದು ಕೇಂದ್ರ ಪಠ್ಯಕ್ರಮಕ್ಕೆ ನಿರಾಕ್ಷೇಪಣಾ ಪತ್ರ ಮತ್ತು ಅಪೀಲಿಯೇಷನ್ ಪಡೆಯದೆ ನಡೆಸುತ್ತಿದ್ದಲ್ಲಿ ಅಂತಹ ಶಾಲೆಗಳು ನಿಯಮಾನುಸಾರ ಸಂಯೋಜನೆ ಪಡೆಯುವವರೆಗೂ ಕಡ್ಡಾಯವಾಗಿ ರಾಜ್ಯ ಪಠ್ಯಕ್ರಮವನ್ನೇ ಬೋಧಿಸುವಂತೆ ಶಾಲೆಗಳಿಗೆ ನೋಟಿಸ್ ನೀಡಿ ಹಾಗೂ ರಾಜ್ಯ ಪಠ್ಯಕ್ರಮವನ್ನೇ ಬೋದಿಸುತ್ತಿರುವ ಬಗ್ಗೆ ಖಚಿತಪಡಿಸಿಕೊಂಡು ದಿನಾಂಕ 14-8-2023 ರೊಳಗೆ ವರದಿ ಪ್ರಕಟಿಸುವುದು.
* ನೋಂದಣಿ ಪಡೆದ ಮಾಧ್ಯಮದಲ್ಲಿ ಬೋಧಿಸದೇ ಅನಧಿಕೃತವಾಗಿ ಬೇರೆ ಮಾಧ್ಯಮದಲ್ಲಿ ಬೋಧಿಸುತ್ತಿರುವ ಶಾಲೆಗಳು. ರಾಜ್ಯ ಪಠ್ಯಕ್ರಮಕ್ಕೆ ನೋಂದಣಿ ಅನುಮತಿ ಪಡೆಯುವಂತಹ ಸಂದರ್ಭದಲ್ಲಿ ಅನುಮತಿ ಪಡೆದಿರುವಂತಹ ಮಾಧ್ಯಮವನ್ನು ಹೊರತುಪಡಿಸಿ ಬೇರೆ ಬೇರೆ ಮಾಧ್ಯಮದಲ್ಲಿ ನಡೆಸುತ್ತಿರುವಂತಹ ಶಾಲೆಗಳಿಗೆ ನಿಯಮಾನುಸಾರ ನೋಟಿಸ್ ಜಾರಿ ಮಾಡಿ ಶಾಲೆಗೆ ಅನುಮತಿ ಪಡೆದಿರುವ ಮಾಧ್ಯಮದಲ್ಲಿಯೇ ಬೋಧನೆ ಮಾಡುವುದನ್ನು ಖಚಿತಪಡಿಸಿಕೊಂಡು ದಿನಾಂಕ 14-8-2023ರೊಳಗೆ ವರದಿ ಪ್ರಕಟಿಸುವುದು.
* ಅನಧಿಕೃತವಾಗಿ ಹೆಚ್ಚುವರಿ ವಿಭಾಗಗಳನ್ನು ಹೊಂದಿರುವಂತಹ ಶಾಲೆಗಳ ಕುರಿತು. ಕರ್ನಾಟಕಶಿಕ್ಷಣ ಕಾಯಿದೆ-1983 ಸೆಕ್ಷನ್-30 ಮತ್ತು 31ರ ಪುಕಾರ ನೋಂದಣಿ ಅನುಮತಿ ಪಡೆಯುವಂತಹ ಸಂದರ್ಭದಲ್ಲಿ ಅನುಮತಿ ಪಡೆದು ನಡೆಸುತ್ತಿರುವಂತಹ ವಿಭಾಗವನ್ನು ಹೊರತುಪಡಿಸಿ ಆಡಳಿತ ಮಂಡಳಿಯು ತಂತಾನೇ ಮಕ್ಕಳನ್ನು ದಾಖಲು ಮಾಡಿಕೊಂಡು ವಿಭಾಗಗಳನ್ನು ಹೆಚ್ಚಿಸಿಕೊಂಡಿರುವಂತಹ ಶಾಲೆಗಳ ಮಾಹಿತಿಯನ್ನು ಕ್ರೋಢೀಕರಿಸಿಕೊಳ್ಳತಕ್ಕದ್ದು ಮತ್ತು ಇಂತಹ ಪ್ರಕರಣಗಳ ಕುರಿತಂತೆ ತೆಗದುಕೊಳ್ಳಬಹುದಾದ ಕ್ರಮದ ಕುರಿತು ಪ್ರತ್ಯೇಕವಾಗಿ ಸುತ್ತೋಲೆ ಹೊರಡಿಸಲಾಗುವುದು.
* ಇಲಾಖೆಯ ಪೂರ್ವಾನುಮತಿ ಇಲ್ಲದೇ ಸ್ಥಳಾಂತರ ಅಥವಾ ಹಸ್ತಾಂತರಗೊಂಡ ಶಾಲೆಗಳು. ಶಾಲೆಯನ್ನು ಪ್ರಾರಂಭಿಸಲು ನೋಂದಣಿ ಅನುಮತಿ ಪಡೆದ ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಇಲಾಖಾ ಪೂರ್ವಾನುಮತಿ ಇಲ್ಲದೆ ಸ್ಥಳಾಂತರಿಸಿದ್ದಲ್ಲಿ ಅಥವಾ ಒಂದು ಆಡಳಿತ ಮಂಡಳಿಯಿಂದ ಮತ್ತೊಂದು ಆಡಳಿತ ಮಂಡಳಿಗೆ ಹಸ್ತಾಂತರಿಸಿ (ಅನುದಾನರಹಿತ/ ಅನುದಾನಿತ ಶಾಲೆಯು ನಡೆಯುತ್ತಿದ್ದಲ್ಲಿ ಅಂತಹ ಶಾಲೆಗಳಿಗೆ ಕೂಡಲೇ ನೋಟಿಸ್ ಜಾರಿ ಮಾಡಿ ಕರ್ನಾಟಕ ಶಿಕ್ಷಣ ಕಾಯಿದೆ ಸೆಕ್ಷನ್ 41(5)ರಡಿ ನಿಯಮ-2006ರಂತೆ ಆಡಳಿತ ಮಂಡಳಿಯು ಸ್ಥಳಾಂತರ/ ಹಸ್ತಾಂತರಕ್ಕೆ ಪ್ರಸ್ತಾವನೆಯನ್ನು ಪಡೆದು ನಿಯಮಾನುಸಾರ ಪರಿಶೀಲಿಸಿ ಇಲಾಖಾ ಅನುಮತಿಗಾಗಿ ಈ ಕಛೇರಿಗೆ ಕೂಡಲೇ ಸಲ್ಲಿಸಲು ಕ್ರಮವಹಿಸತಕ್ಕದ್ದು. ಒಂದು ವೇಳೆ ಶಾಲಾ ಆಡಳಿತ ಮಂಡಳಿಯು ಯಾವುದೇ ಪ್ರಸ್ತಾವನೆಯನ್ನು ಸಲ್ಲಿಸದೆ ನಡೆಸುತ್ತಿದ್ದಲ್ಲಿ ಅಂತಹ ಶಾಲೆಗಳ ವಿರುದ್ಧ ನಿಯಮಾನುಸಾರ ಕ್ರಮವಹಿಸಿ ದಿನಾಂಕ 14-8-2023 ರೊಳಗೆ ವರದಿ ಪ್ರಕಟಿಸುವುದು.
* ಕೇಂದ್ರ ಪಠ್ಯಕ್ರಮಕ್ಕೆ ಸಂಯೋಜನೆ ಹೊಂದಿದ ನಂತರ ಅದೇ ಕಟ್ಟಡದಲ್ಲಿ ಅನಧಿಕೃತವಾಗಿ ರಾಜ್ಯ ಪಠ್ಯಕ್ರಮ ಮುಂದುವರೆಸುತ್ತಿರುವುದು. ಕರ್ನಾಟಕ ಶಿಕ್ಷಣ ಕಾಯಿದೆ ಸೆಕ್ಷನ್-30,31 ರಡಿಯಲ್ಲಿ ರಾಜ್ಯ ಪಠ್ಯಕ್ರಮಕ್ಕೆ ನೋಂದಣಿ ಅನುಮತಿಯನ್ನು ಪಡೆದ ನಂತರ ಕೇಂದ್ರ ಪಠ್ಯಕ್ರಮ ಸಂಯೋಜನೆಗೆ ಅಫಿಲಿಯೇಷನ್ ಪಡೆದ ನಂತರ ರಾಜ್ಯ ಪಠ್ಯಕ್ರಮವು ತಂತಾನೇ ರದ್ದಾಗುತ್ತದೆ ಮತ್ತು ಸಿ. ಬಿ. ಎಸ್. ಇ ಬೈಲಾ ಪ್ರಕಾರ ಅವಕಾಶವಿರುವುದಿಲ್ಲ. ಒಂದು ವೇಳೆ ಪ್ರತ್ಯೇಕ (Dual Application) ಶಾಲಾ ಕಟ್ಟಡ, ಮೂಲಭೂತ ಸೌರ್ಕಯಗಳು ಹೊಂದಿದ್ದಲ್ಲಿ ಅಂತಹ ಶಾಲಾ ಆಡಳಿತ ಮಂಡಳಿಗಳು ಹೊಸದಾಗಿ ಅರ್ಜಿ ಸಲ್ಲಿಸಿ ಅನುಮತಿಯನ್ನು ಪಡೆಯುವಂತೆ ಸೂಚಿಸಿ ನಿಯಮಾನುಸಾರ ನೋಟಿಸ್ ಜಾರಿ ಮಾಡಿ ಅನಧಿಕೃತವಾಗಿ ರಾಜ್ಯ ಪಠ್ಯಕ್ರಮ ಬೋದಿಸುತ್ತಿರುವಂತಹ ತರಗತಿಗಳನ್ನು ದಿನಾಂಕ 14-08-2023 ರೊಳಗಾಗಿ ನಿಯಮಾನುಸಾರ ಮುಚ್ಚಿಸಲು ಕ್ರಮವಹಿಸತಕ್ಕದ್ದು.
* ರಾಜ್ಯ ಪಠ್ಯಕ್ರಮದಲ್ಲಿ ಅನುಮತಿ ಪಡೆದು ಇತರೆ ಪಠ್ಯಪುಸ್ತಕಗಳನ್ನು ಅಳವಡಿಸಿಕೊಂಡಿರುವುದು. ಖಾಸಗಿ ಶಾಲೆಯನ್ನು ಪ್ರಾರಂಭಿಸಲು ನೋಂದಣಿ ಅನುಮತಿ ಪಡೆದ ಸಂದರ್ಭದಲ್ಲಿ ನಿಗಧಿಪಡಿಸಿರುವಂತಹ ಪಠ್ಯ ಪುಸ್ತಕಗಳನ್ನು ಅಳವಡಿಸಿಕೊಳ್ಳದೆ ಬೋಧಿಸುತ್ತಿರುವ ಬಳಸುವಂತೆ ಶಾಲಾ ಆಡಳಿತ ಮಂಡಳಿಗೆ ಸೂಚಿಸಿ, ದಿನಾಂಕ 14-8-2023ರೊಳಗೆ ರಾಜ್ಯ ಪಠ್ಯಪುಸ್ತಕಗಳನ್ನೇ ಕಡ್ಡಾಯವಾಗಿ ವರದಿ ಪ್ರಕಟಿಸುವುದು.
ಈ ಕೂಡಲೇ ಜಿಲ್ಲಾ ಉಪನಿರ್ದೇಶಕರುಗಳು ತಮ್ಮ ಜಿಲ್ಲೆಯಲ್ಲಿ ಇರುವಂತಹ ಅನಧಿಕೃತ ಶಾಲೆಗಳನ್ನು ಗುರುತಿಸಿ ನಿಯಮಾನುಸಾರ ಕ್ರಮವಹಿಸತಕ್ಕದ್ದು, ಈ ಬಗ್ಗೆ ಯಾವುದೇ ರೀತಿಯಲ್ಲಿ ಉದಾಸೀನತೆ ಹಾಗೂ ನಿರ್ಲಕ್ಷ್ಯತೆ ವಹಿಸದೆ ನಿಯಮಾನುಸಾರ ತಮ್ಮ ಜಿಲ್ಲಾ ವ್ಯಾಪ್ತಿಯಲ್ಲಿ ಎಷ್ಟು ಅನಧಿಕೃತ ಶಾಲೆಗಳ ಬಗ್ಗೆ ಕ್ರಮವಹಿಸಿರುವ ಹಾಗೂ ತದನಂತರ ನಿಮ್ಮ ಜಿಲ್ಲಾ ವ್ಯಾಪ್ತಿಯಲ್ಲಿ ಯಾವುದೇ ಅನಧಿಕೃತ ಶಾಲೆ ಇರುವುದಿಲ್ಲವೆಂಬ ಬಗ್ಗೆ, ರಾಜ್ಯ ಹಾಗೂ ಸ್ಥಳೀಯ ಪತ್ರಿಕೆಯಲ್ಲಿ ಪ್ರಕಟಿಸಿ ಸದರಿ ಪತ್ರಿಕಾ ಪ್ರಕಟಣೆ ಮತ್ತು ಅನುಪಾಲನಾ ವರದಿಯನ್ನು ದೃಡೀಕರಿಸಿ ದಿನಾಂಕ 16/08/2023ರೊಳಗೆ ಸಲ್ಲಿಸತಕ್ಕದ್ದು ಎಂದು ಸೂಚನೆ ನೀಡಲಾಗಿದೆ.












Click it and Unblock the Notifications