ಯಡಿಯೂರಪ್ಪ ಆಸ್ತಿ ಮುಟ್ಟುಗೋಲಿಗೆ ಪ್ರಕ್ರಿಯೆ ಆರಂಭ
ಬೆಂಗಳೂರು, ಸೆ 27: ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಸಂಕಷ್ಟ ಎದುರಾಗಿದೆ. ಜಿಂದಾಲ್ ಕಂಪೆನಿಂದ ಲಂಚ ಪಡೆದ ಆರೋಪದಡಿಯಲಿ ಅವರ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ಜಾರಿ ನಿರ್ದೇಶನಾಲಯ (enforcement directorate) ಪ್ರಕ್ರಿಯೆ ಆರಂಭಿಸಿದೆ.
ತನ್ನ ಅಧಿಕಾರದ ಅವಧಿಯಲ್ಲಿ ಗಣಿ ಕಂಪೆನಿಗಳಿಗೆ ಅನುಕೂಲ ಮಾಡಿಕೊಡಲು ಜಿಂದಾಲ್ ಕಂಪೆನಿಯಿಂದ ನಲವತ್ತು ಕೋಟಿ ಲಂಚ ಪಡೆದಿದ್ದರು ಎನ್ನುವ ಆರೋಪದ ಮೇಲೆ ಸರ್ವೋಚ್ಚ ನ್ಯಾಯಾಲಯ ಸಿಬಿಐಗೆ ತನಿಖೆ ನಡೆಸುವಂತೆ ಆದೇಶಿಸಿತ್ತು.
ಈ ಸಂಬಂಧ ಕೋರ್ಟಿಗೆ ಒದಗಿಸಿದ ಎಲ್ಲಾ ದಾಖಲೆಗಳನ್ನು ತನಗೆ ಹಸ್ತಾಂತರಿಸುವಂತೆ ಜಾರಿ ನಿರ್ದೇಶನಾಲಯ ಸಿಬಿಐಗೆ ಕೇಳಿ ಕೊಂಡಿದೆ. ಸಿಬಿಐನಿಂದ ದಾಖಲೆ ತಲುಪಿದ ತಕ್ಷಣ ಮುಟ್ಟುಗೋಲು ಪ್ರಕ್ರಿಯೆ ಆರಂಭಗೊಳ್ಳಲಿದೆ.
ಸರ್ವೋಚ್ಚ ನ್ಯಾಯಾಲದ ಆದೇಶದಂತೆ ತನಿಖೆ ನಡೆಸಿದ್ದ ಸಿಬಿಐ, ಜಿಂದಾಲ್ ಒಡೆತನದ ಸೌತ್ ವೆಸ್ಟ್ ಮೈನಿಂಗ್ ಕಂಪೆನಿಯಿಂದ 40 ಕೋಟಿ ಲಂಚ ಪಡೆದಿರುವುದು ಸಾಬೀತಾಗಿದೆ ಎಂದು ನ್ಯಾಯಾಲಯಕ್ಕೆ ವರದಿ ಒಪ್ಪಿಸಿ ಬಿಎಸ್ವೈ ವಿರುದ್ದ ಆರೋಪಪಟ್ಟಿ ಸಲ್ಲಿಸಿತ್ತು.
ಯಡಿಯೂರಪ್ಪ ಅವರ ಜೊತೆ ಅವರ ಪುತ್ರರಾದ ರಾಘವೇಂದ್ರ, ವಿಜಯೇಂದ್ರ, ಅಳಿಯ ಸೋಹನ್ ಕುಮಾರ್ ಸೇರಿದಂತೆ ಹದಿಮೂರು ಜನರ ವಿರುದ್ದ ಸಿಬಿಐ ಆರೋಪ ಪಟ್ಟಿಸಲ್ಲಿಸಿತ್ತು.
ಗಣಿ ಮತ್ತು ಭೂಧಣಿಗಳ ಮೇಲೆ ಜಾರಿ ನಿರ್ದೇಶನಾಲಯದ ಕಣ್ಣು. ಪ್ರಮುಖ ಮುಟ್ಟುಗೋಲು ಪ್ರಕರಣಗಳು.. ಸ್ಲೈಡಿನಲ್ಲಿ

ಅಕ್ರಮ ಹಣ
ಅಕ್ರಮ ಹಣ ಚಲಾವಣೆ ನಿರ್ಬಂಧ ಕಾಯ್ದೆಯಡಿ ಮಾಜಿ ಸಚಿವ ಜನಾರ್ದನ ರೆಡ್ಡಿಗೆ ಸೇರಿರುವ ಸುಮಾರು 880 ಕೋಟಿ ರೂ ಆಸ್ತಿಯನ್ನು ಜಾರಿ ನಿರ್ದೇಶನಾಲಯ ಮುಟ್ಟುಗೋಲು ಹಾಕಿಕೊಂಡಿತ್ತು. ಅಕ್ರಮ ಆಸ್ತಿ ಗಳಿಕೆ, ಮನಿ ಲಾಂಡ್ರಿಂಗ್, ಅದಿರು ಸುಂಕ ವಂಚನೆ ಇತರೆ ಆರೋಪಗಳ ಮೇಲೆ ಗಾಲಿ ರೆಡ್ಡಿ ಹಾಗೂ ಕುಟುಂಬದ ಮೇಲೆ ಜಾರಿ ನಿರ್ದೇಶನಾಲಯ ಪ್ರಕರಣ ದಾಖಲಿಸಿಕೊಂಡಿತ್ತು.

ಓಬಾಳಾಪುರಂ
ಅಕ್ರಮ ಗಣಿಗಾರಿಕೆ ಆರೋಪದ ಅಡಿ ಜೈಲು ಸೇರಿರುವ ಮಾಜಿ ಸಚಿವ ಜನಾರ್ದನ ರೆಡ್ಡಿಗೆ ಸೇರಿದ 650 ಕೋಟಿ ಮೌಲ್ಯದ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ಜಾರಿ ನಿರ್ದೇಶನಾಲು ಸಿದ್ದತೆ ಪ್ರಾರಂಭಿಸಿದೆ. ಜನಾರ್ದನ ರೆಡ್ಡಿ ಪತ್ನಿ ಮಾಲೀಕತ್ವದ ಅಸೋಸಿಯೇಟ್ ಮೈನಿಂಗ್ ಕಂಪನಿ ಕರ್ನಾಟಕದಲ್ಲಿ ಅಕ್ರಮ ಗಣಿಗಾರಿಕೆ ಮೂಲಕ ಸಂಪಾದಿಸಿದ ಸುಮಾರು 650 ಕೋಟಿ ರೂ.ಮೌಲ್ಯದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲು ಸಿದ್ಧತೆ ಪ್ರಾರಂಭಸಿದೆ.

ಕಟ್ಟಾ ಸುಬ್ರಮಣ್ಯ ನಾಯ್ಡು
ಕೆಐಎಡಿಬಿ ಭೂ ಹಗರಣಕ್ಕೆ ಸಂಬಂಧಿಸಿದಂತೆ ಲೋಕಾ ಯುಕ್ತ ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿರುವ ದೋಷಾರೋಪ ಪಟ್ಟಿ ಆಧರಿಸಿ ಜಾರಿ ನಿರ್ದೇಶನಾಲಯ (ಇಡಿ) ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಸೇರಿದಂತೆ 22 ಜನರಿಗೆ ಸಂಬಂಧಿಸಿದ 150 ಕೋಟಿ ರೂ. ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿತ್ತು.

ಜಗನ್
ಅಕ್ರಮ ಆಸ್ತಿ ಗಳಿಕೆ ಆರೋಪ ಹೊತ್ತಿರುವ ವೈಎಸ್ಸಾರ್ ಪಕ್ಷದ ಅಧ್ಯಕ್ಷ ಜಗನ್ ಮೋಹನ್ ರೆಡ್ಡಿ ಅವರಿಗೆ ಸೇರಿದ ಮಾಧ್ಯಮ ಸಂಸ್ಥೆಗಳ ಆಸ್ತಿ ಪಾಸ್ತಿ ಮುಟ್ಟುಗೋಲು ಪ್ರಕ್ರಿಯೆಯನ್ನು ಆರಂಭಿಸಿದೆ. ಜಗನ್ ಅವರ ಒಡೆತನದ ಸಾಕ್ಷಿ ಸಂಸ್ಥೆಗೆ ಸೇರಿದ 34.66 ಕೋಟಿ ರು ಗಳನ್ನು ಇಡಿ ವಶಪಡಿಸಿಕೊಂಡಿದೆ. ಜುಬುಲಿ ಹಿಲ್ಸ್ ನಲ್ಲಿರುವ ಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್ ನಲ್ಲಿದ್ದ ಠೇವಣಿಯನ್ನೂ ಇಡಿ ವಶಕ್ಕೆ ತೆಗೆದುಕೊಂಡಿದೆ.

ವೈಎಸ್ಆರ್ ಕಾಂಗ್ರೆಸ್
ಅಕ್ರಮ ಆಸ್ತಿ ಸಂಪಾದನೆ ಮೇಲೆ ಚಂಚಲಗೂಡ ಜೈಲು ಸೇರಿರುವ ವೈಎಸ್‌ಆರ್ ಕಾಂಗ್ರೆಸ್ ಸಂಸದ ಜಗನ್‌ಮೋಹನ್ ರೆಡ್ಡಿ ಮತ್ತು ಅವರ ಆಪ್ತರಿಗೆ ಸೇರಿದ ಸುಮಾರು 51 ಕೊಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲು ಜಾರಿ ನಿರ್ದೇಶನಾಲಯ (ED) ಆದೇಶ ನೀಡಿತ್ತು.












Click it and Unblock the Notifications