ಮತದಾನ ಮಾಡಿ ಸ್ಫೂರ್ತಿಯಾದ ಶತಾಯುಷಿಗೆ ಕರೆ ಮಾಡಿ ಅಭಿನಂದಿಸಿದ ಚುನಾವಣಾಧಿಕಾರಿ ರಾಜೀವ್ ಕುಮಾರ್
ಬೆಂಗಳೂರು, ಮೇ 03: ಚುನಾವಣಾ ಆಯೋಗ ಹೊಸದಾಗಿ ಜಾರಿಗೆ ತಂದ 'ಮನೆಯಿಂದಲೇ ಮತದಾನ' ವ್ಯವಸ್ಥೆಯಡಿ ಮತದಾನ ಮಾಡಿದ್ದ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಸದಲಗಾ ಕ್ಷೇತ್ರ ಶತಾಯುಷಿಯೊಬ್ಬರು ಮತದಾನದ ಮಹತ್ವ ಸಾರಿದ್ದರು. ಈ ಸಂಬಂಧ ಶತಾಯುಷಿಗೆ ಸ್ವತಃ ಭಾರತ ಚುನಾವಣಾ ಆಯೋಗದ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಅವರು ಕರೆ ಮಾಡಿ ಅಭಿನಂದಿಸಿದ್ದಾರೆ.
ಸಾರ್ವತ್ರಿಕ ಚುನಾವಣೆ ಅಂಗವಾಗಿ ಭಾರತ ಚುನಾವಣಾ ಆಯೋಗವು ಇದೇ ಮೊದಲ ಬಾರಿಗೆ ಕರ್ನಾಟಕದಲ್ಲಿ ದಿವ್ಯಾಂಗರು ಮತ್ತು 80 ವರ್ಷ ಮೇಲ್ಪಟ್ಟವರಿಗೆ ಮನೆಯಿಂದಲೇ ಮತದಾನ ಮಾಡುವುದಕ್ಕೆ ಅವಕಾಶ ನೀಡಲಾಗಿದೆ. ಇದು ಮೇ 6 ರವರೆಗೆ ಇರಲಿದೆ.

ಈ ಅವಕಾಶವನ್ನು ಬಳಸಿಕೊಂಡು ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲ್ಲೂಕಿನ ಇಂಗಳಿ ಗ್ರಾಮದ 103 ವರ್ಷ 4 ತಿಂಗಳ ವಯೋವೃದ್ಧ ಮಹದೇವ ಮಹಾಲಿಂಗ ಮಾಳಿ ಅವರು ಸೋಮವಾರ ಮೇ 1ರಂದು ತಮ್ಮ ಮನೆಯಿಂದಲೇ ಮತ ಹಾಕಿದ್ದರು. ಅಲ್ಲದೇ ಎಲ್ಲರು ಮತ ಹಾಕುವಂತೆ ಕರೆ ನೀಡಿದ್ದರಲ್ಲದೇ, ಚುನಾವಣಾ ಆಯೋಗದ ಅಧಿಕಾರಿಗಳ ಕಾರ್ಯ ಶ್ಲಾಘಿಸಿದ್ದರು.
ಶತಾಯುಷಿ ಮಹದೇವ ಅವರು ಮತದಾನ ಮಾಡುವ ಮೂಲಕ ಇತರರಿಗೆ ಮಾದರಿಯಾಗಿರುವುದನ್ನು ಗಮನಿಸಿದ ಭಾರತ ಚುನಾವಣಾ ಆಯೋಗದ ಮುಖ್ಯ ಆಯುಕ್ತರಾದ ರಾಜೀವ್ ಕುಮಾರ್ ಅವರು, ಮಹಾದೇವ ಮಹಾಲಿಂಗ ಮಾಳಿ ಅವರಿಗೆ ಸ್ವತಃ ದೂರವಾಣಿ ಕರೆ ಮಾಡಿ ಅಭಿನಂದನೆ ತಿಳಿಸಿದ್ದಾರೆ. ನಿಮ್ಮ ಈ ಮತದಾನ ಎಲ್ಲರಿಗೂ ಸ್ಪೂರ್ತಿಯಾಗಿದೆ ಎಂದು ಹೇಳಿದ್ದಾರೆ.

ಹಿರಿಯರು ಎಲ್ಲ ಮತದಾರರಿಗೆ ಸ್ಪೂರ್ತಿ
ಪ್ರಜಾಪ್ರಭುತ್ವದ ಹಬ್ಬವಾಗಿರುವ ಮತದಾನ ಪ್ರಕ್ರಿಯೆಯಲ್ಲಿ ಯುವ ಮತದಾರರು ಹಾಗೂ ನಗರದ ಮತದಾರರು ಭಾಗವಹಿಸಲು ಮಹದೇವ ಮಾಳಿ ಅವರು ಸ್ಫೂರ್ತಿಯಾಗಿದ್ದಾರೆ ಎಂದು ಅವರು ಶ್ಲಾಘಿಸಿದರು. ಹಿರಿಯ ನಾಗರಿಕರು ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಂಡು ಭಾರತದ ಬುನಾದಿಯನ್ನು ಗಟ್ಟಿಗೊಳಿಸಿದ್ದೀರಿ ಎಂದರು.
ಮನೆಯಿಂದಲೇ ಮತದಾನ ಮಾಡಿದ ಮಹಾದೇವ ಮಾಳಿ ಅವರು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಯೊಂದು ಮತವೂ ಎಷ್ಟೊಂದು ಅಮೂಲ್ಯ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಭಾರತ ಚುನಾವಣಾ ಆಯೋಗವು ಪ್ರತಿಯೊಬ್ಬರ ಒಳಗೊಳ್ಳುವಿಕೆ ಮತ್ತು ಪಾಲ್ಗೊಳ್ಳುವಿಕೆಯನ್ನು ಖಚಿತಪಡಿಸುವುದಕ್ಕೆ ಬದ್ಧವಾಗಿದೆ ಎಂದರು.
ಮತಗಟ್ಟೆಗೆ ತೆರಳಿ ಮತದಾನ ಮಾಡಲು ಸಾಧ್ಯವಾಗದವರಿಗಾಗಿ ಮನೆಗೆ ಮತಗಟ್ಟೆ ಕೊಂಡೊಯ್ಯವುದಕ್ಕೆ ಬದ್ಧವಾಗಿದೆ.
80 ವರ್ಷ ಮೇಲ್ಪಟ್ಟಿರುವವರು ಹಾಗೂ ಶೇ.40 ರಷ್ಟು ಅಂಗವೈಕಲ್ಯ ಹೊಂದಿರುವ ವಿಕಲಚೇತನರಿಗೆ ಇದೇ ಮೊದಲ ಬಾರಿ ಮನೆಯಿಂದಲೇ ಮತದಾನಕ್ಕೆ ಮಾಡುವ ಅವಕಾಶ ಒದಗಿಸಿದ್ದೇವೆ. ಬೆಳಗಾವಿಯಲ್ಲಿ ಸದ್ಯ ವಿಧಾನಸಭಾ ಚುನಾವಣೆಯಲ್ಲಿ 80 ವರ್ಷ ಮೇಲ್ಪಟ್ಟಿರುವ 7362 ಕ್ಕೂ ಅಧಿಕ ಜನರು ಹಾಗೂ 1708 ವಿಕಲಚೇತನರು ಮನೆಯಿಂದ ಮತದಾನ ಮಾಡಲು ನೋಂದಣಿ ಮಾಡಿಕೊಂಡಿದ್ದಾರೆ ಎಂದರು.
ಏಪ್ರಿಲ್ 29 ರಿಂದ ಆರಂಭಗೊಂಡಿರುವ ಮತದಾನ ಪ್ರಕ್ರಿಯೆಯಲ್ಲಿ ಇದುವರೆಗೆ ಬೆಳಗಾವಿ ಜಿಲ್ಲೆಯಲ್ಲಿ ಒಟ್ಟಾರೆ 6975 ಹಿರಿಯರು ಮತ್ತು 1661 ವಿಕಲಚೇತನರು ಮನೆಯಿಂದಲೇ ತಮ್ಮ ಮತವನ್ನು ಚಲಾಯಿಸಿದ್ದಾರೆ ಎಂದು ರಾಜೀವ್ ಕುಮಾರ್ ವಿವರಿಸಿದರು.
ಆಯೋಗಕ್ಕೆ ಕೃತಜ್ಞತೆ ಸಲ್ಲಿಸಿದ ಶತಾಯುಷಿ
ಸ್ವತಃ ಭಾರತ ಚುನಾವಣಾ ಆಯೋಗದ ಮುಖ್ಯ ಆಯುಕ್ತರೇ ದೂರವಾಣಿ ಕರೆ ಮಾಡಿದಕ್ಕೆ ಪ್ರತಿಯಾಗಿ ಶತಾಯುಷಿ ಮಹದೇವ ಅವರು ಖಷಿಯಿಂದಲೇ ಮಾತನಾಡಿದ್ದಾರೆ. ತಮ್ಮಂತಹ ಹಿರಿಯರಿಗೆ ಇದೇ ಪ್ರಥಮ ಬಾರಿ ಮನೆಯಿಂದಲೇ ಮತದಾನ ಮಾಡುವ ಅವಕಾಶ ಮಾಡಿಕೊಟ್ಟಿದ್ದಕ್ಕೆ ಧನ್ಯವಾದ ತಿಳಿಸಿದರು. ಈ ಹಿಂದೆ ಮನೆಯಿಂದಲೇ ಮತದಾನ ಮಾಡುವ ಅವಕಾಶ ಇಲ್ಲದಿರುವಾಗ ಗಾಲಿಕುರ್ಚಿಯಲ್ಲಿ ಮತಗಟ್ಟಿಗೆ ತೆರಳಿ ಮತದಾನ ಮಾಡಿರುವುದನ್ನು ಮಹದೇವ ಮಹಾಲಿಂಗ ಕಾಳಿ ಅವರು ಸ್ಮರಿಸಿದರು.












Click it and Unblock the Notifications