khata: ಖಾತಾ ಸೌಲಭ್ಯ: ಏನಿದು ಕೆಟಿಸಿಪಿ ಕಾಯ್ದೆಗೆ ತಿದ್ದುಪಡಿ, ಯಾವ ಆಸ್ತಿಗೆ ಅನ್ವಯವಾಗಲಿದೆ ?
ಕರ್ನಾಟಕದಲ್ಲಿ ಖಾತಾ ವಿಚಾರದಲ್ಲಿ ಮಹತ್ವದ ಬೆಳವಣಿಗೆ ಆಗಿದೆ. ರಾಜ್ಯ ಸರ್ಕಾರವು ಈಚೆಗೆ ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ 1961ರ (ktcp) ಪ್ರಕರಣ 17ಕ್ಕೆ 2021ರಲ್ಲಿ ತಿದ್ದುಪಡಿ ಮಾಡಿದೆ. ಈ ತಿದ್ದುಪಡಿ ಕಾಯ್ದೆ ಅನ್ವಯ ಏಕ ನಿವೇಶನಕ್ಕೂ ಯೋಜನಾ ಪ್ರಾಧಿಕಾರದಿಂದ ಅನುಮೋದನೆ ಪಡೆಯುವುದು ಕಡ್ಡಾಯವಾಗಿದೆ. ಈಚೆಗೆ ಈ ಸಂಬಂಧ ಬೆಂಗಳೂರು ವ್ಯಾಪ್ತಿಯಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಸುತ್ತೋಲೆಯೊಂದನ್ನು ಹೊರಡಿಸಿತ್ತು. ಆದರೆ, ಇದು ಬಿಬಿಎಂಪಿಗೆ ಮಾತ್ರವಲ್ಲದೆ. ಇಡೀ ರಾಜ್ಯಕ್ಕೆ ಅನ್ವಯಿಸಲಿದೆ. ಯಾಕೆಂದರೆ ಕರ್ನಾಟಕ ಸರ್ಕಾರವು ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆಗೆ ತಿದ್ದುಪಡಿ ತಂದಿರುವುದರಿಂದ ಇದು ಇಡೀ ರಾಜ್ಯಕ್ಕೆ ಅನ್ವಯವಾಗಲಿದೆ. ಹಾಗಾದರೆ ಸರ್ಕಾರದ ತಿದ್ದುಪಡಿಯಿಂದ ಏನೆಲ್ಲಾ ಆಗಲಿದೆ. ಖಾತಾ ಮಾಡಿಸಿಕೊಳ್ಳಬೇಕಾದರೆ ಏನು ಮಾಡಬೇಕು ಎನ್ನುವ ಡೀಟೆಲ್ಸ್ ಇಲ್ಲಿದೆ.
ರಾಜ್ಯ ಸರ್ಕಾರವು ಆಸ್ತಿ ವಿಚಾರದಲ್ಲಿ ಮಹತ್ವದ ನಿರ್ಧಾರವೊಂದನ್ನು ಈಚೆಗೆ ತೆಗೆದುಕೊಂಡಿದೆ. ಸಕ್ಷಮ ಪ್ರಾಧಿಕಾರ / ಬಿಡಿಎಯಿಂದ ಅನುಮೋದನೆ ಪಡೆದುಕೊಳ್ಳದ ಆಸ್ತಿಗಳಿಗೆ ಖಾತಾ ನೀಡಲು ಆಗುವುದಿಲ್ಲ ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಹೇಳಿದೆ. ಇದು ಎಲ್ಲಾ ಕಡೆಯೂ ಅನ್ವಯವಾಗಲಿದೆ. ಕರ್ನಾಟಕ ನಗರ ಹಾಗೂ ಗ್ರಾಮಾಂತರ ಯೋಜನಾ ಕಾಯ್ದೆ 1961ರ ಪ್ರಕರಣ 17ಕ್ಕೆ ತಿದ್ದುಪಡಿ ತಂದಿರುವುದು ಇದಕ್ಕೆ ಕಾರಣವಾಗಿದೆ. ಈ ಹೊಸ ತಿದ್ದುಪಡಿಯ ಪ್ರಕಾರ ಏಕ ನಿವೇಶನವೂ ಸೇರಿದಂತೆ ಎಲ್ಲಾ ಸ್ವತ್ತುಗಳಿಗೆ ಯೋಜನಾ ಪ್ರಾಧಿಕಾರದಿಂದ ಅನುಮೋದನೆ ಪಡೆದುಕೊಳ್ಳುವುದನ್ನು ಕಡ್ಡಾಯ ಮಾಡಲಾಗಿದೆ. ಹೀಗಾಗಿ ನೀವು ಖಾತಾ ಮಾಡಿಸಿಕೊಳ್ಳುವುದಕ್ಕೆ ಸ್ಥಳೀಯ ಅಭಿವೃದ್ಧಿ ಪ್ರಾಧಿಕಾರದ ಅನುಮೋದನೆ ಪಡೆದುಕೊಳ್ಳುವುದು ಕಡ್ಡಾಯವಾಗಿದೆ. ಇದು ಮುಖ್ಯವಾಗಿ ಬಿಬಿಎಂಪಿ ವ್ಯಾಪ್ತಿಯಲ್ಲಿ ಹೆಚ್ಚು ಅನ್ವಯವಾಗುತ್ತದೆ.

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ)ದಿಂದ ಅನುಮೋದನೆ ಪಡೆದುಕೊಳ್ಳದೆ ಇರುವ ಎ ಅಥವಾ ಬಿ ಖಾತಾ ಹೊಂದಿರುವ ನಿವೇಶನಗಳಿಗೆ ವಿಭಜನೆ ಇಲ್ಲವೇ ಉಪ ವಿಭಾಗವನ್ನು ಬಿಬಿಎಂಪಿ ಮಾಡುವುದಿಲ್ಲ ಎಂದಿದೆ. ಕೃಷಿ ಭೂಮಿಯನ್ನು ಕೃಷಿಯೇತರ ಉದ್ದೇಶಕ್ಕೆ ಬದಲಾಯಿಸಿದ್ದರೆ. ಈ ರೀತಿಯ ಖಾಲಿ ಜಮೀನುಗಳಿಗೆ ಬಿಬಿಎಂಪಿಯಿಂದ ಎ ಅಥವಾ ಬಿ ವಹಿ ಖಾತಾಗಳನ್ನು ಹೊಸದಾಗಿ ದಾಖಲಿಸುವುದಿಲ್ಲ ಎನ್ನಲಾಗಿದೆ.
ಮೂರು ಮಾದರಿ: ಸಾಮಾನ್ಯವಾಗಿ ಆಸ್ತಿಗಳಿಗೆ ಸಿಂಗಲ್ ಲೇಔಟ್ ಅನುಮತಿ, ಲೇಔಟ್ ಪ್ಲಾನ್ ಅನುಮತಿ ಹಾಗೂ ಅಭಿವೃದ್ಧಿ ನಕ್ಷೆ ಅನುಮತಿ ಎನ್ನುವುದನ್ನು ಕೊಡಲಾಗುತ್ತದೆ. ಆ ರೀತಿ ಅನುಮತಿಯನ್ನು ನಿವೇಶನ ಪಡೆದುಕೊಳ್ಳುವ ಸಂದರ್ಭದಲ್ಲಿ ನೀಡಲಾಗುತ್ತದೆ. ನಿವೇಶನದ ಮಾಲೀಕರು ಇದರಲ್ಲಿ ಯಾವುದನ್ನಾದರೂ ಪ್ರಮುಖವಾಗಿ ಪಡೆದುಕೊಂಡಿರಬೇಕಾಗುತ್ತದೆ. ಆಗ ಮಾತ್ರ ಅವರಿಗೆ ಖಾತಾ ಸಿಗುತ್ತದೆ. ಇದಾದ ಮೇಲೆ ಇ ಖಾತಾ ಮಾಡಿಸಿಕೊಳ್ಳಬಹುದಾಗಿದೆ. ಬೆಂಗಳೂರಿನಲ್ಲಿ ಈ ಹಿಂದೆ ಸಿಂಗಲ್ ಲೇಔಟ್ ಮಾಲೀಕರು ಖಾತಾ ಮಾಡಿಸಿಕೊಳ್ಳದೆ ಇದ್ದರೆ ಅಥವಾ ಬಿಡಿಎ ಅಭಿವೃದ್ಧಿ ನಿಯಮಾನುಸಾರ ಲೇಔಟ್ ಅಭಿವೃದ್ಧಿ ಮಾಡದೆ ಇದ್ದರೆ ಈಗ ಕಷ್ಟವಾಗಲಿದೆ.
ನಿವೇಶನಗಳಿಗೆ ಅನುಮೋದನೆಯನ್ನು ಆಯಾ ಸ್ಥಳೀಯ ಪ್ರಾಧಿಕಾರದಿಂದ ಪಡೆದುಕೊಳ್ಳಬೇಕಾಗಿರುತ್ತದೆ. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ನಿವೇಶನ ಅನುಮೋದನೆ ನೀಡಿದರೆ. ಇನ್ನುಳಿದ ಜಿಲ್ಲೆಗಳಲ್ಲಿ ಆಯಾ ಸ್ಥಳೀಯ ಅಭಿವೃದ್ಧಿ ಪ್ರಾಧಿಕಾರಗಳು ಅನುಮೋದನೆ, ನಕ್ಷೆಯನ್ನು ನೀಡುತ್ತವೆ. ಇನ್ನು ಬೆಂಗಳೂರಿನಲ್ಲಿ ಸಕ್ಷಮ ಯೋಜನಾ ಪ್ರಾಧಿಕಾರದ ಅನುಮೋದನೆ ಪಡೆದುಕೊಳ್ಳುವುದರೊಂದಿಗೆ ಸ್ವಾಧೀನಾನುಭವ ಪತ್ರ ಪಡೆದಿರುವ ಏಕ ಘಟಕ ಇಲ್ಲವೇ ಬಹು ಘಟಕಗಳ ಕಟ್ಟಡ ವ್ಯಾಪ್ತಿಯಲ್ಲಿರುವ ಪ್ರತಿ ಘಟಕವನ್ನು ಸಹ ಎ ವಹಿಯಲ್ಲಿ ದಾಖಲು ಮಾಡಿಕೊಂಡು, ಎ- ಖಾತಾ ಕೊಡಲಾಗುತ್ತದೆ.

ಒಂದೊಮ್ಮೆ ಸಕ್ಷಮ ಯೋಜನಾ ಪ್ರಾಧಿಕಾರದಿಂದ ಅನುಮೋದನೆ ಪಡೆದುಕೊಳ್ಳದೆ ಎ ಅಥವಾ ಬಿ ಖಾತಾ ಹೊಂದಿರುವ ಸ್ವತ್ತುಗಳಲ್ಲಿ ನಿರ್ಮಿಸಿರುವ ಏಕ ಅಥವಾ ಬಿ (ವಸತಿ ಸಮುಚ್ಛಯಗಳು)ಘಟಕಗಳು . 2024ರ ಸೆಪ್ಟೆಂಬರ್ 30ರ ಒಳಗೆ ಬೆಸ್ಕಾಂ ಅಥವಾ ಜಲಮಂಡಳಿಯಿಂದ ಸಂಪರ್ಕ ಪಡೆದುಕೊಳ್ಳದೆ ಇದ್ದರೆ ಇಂತಹ ಆಸ್ತಿಗಳಿಗೂ ಬಿ ಖಾತಾ ನೀಡುವುದಾಗಿ ಬಿಬಿಎಂಪಿ ತಿಳಿಸಿದೆ.












Click it and Unblock the Notifications