ಬಜೆಟ್ ಅಧಿವೇಶನದ ವೇಳೆ ಯಡಿಯೂರಪ್ಪರನ್ನು ಸಿದ್ದರಾಮಯ್ಯ ಹೊಗಳಿದ್ದೇಕೆ?
ಬೆಂಗಳೂರು, ಮಾರ್ಚ್ 22: ವಿಧಾನಮಂಡಲದ ಬಜೆಟ್ ಅಧಿವೇಶನದ ವೇಳೆ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಬೊಮ್ಮಾಯಿ ಸಂಪುಟದ ಸಚಿವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಸದನದಲ್ಲಿ ಹಾಜರಾತಿಯ ವಿಚಾರ ಸಿದ್ದರಾಮಯ್ಯನವರ ಸಿಟ್ಟಿಗೆ ಕಾರಣವಾಗಿತ್ತು.
"ಸದನದ ಸದಸ್ಯರು ಮಾತನಾಡುತ್ತಿರಬೇಕಾದರೆ, ಕೆಲವು ಸಚಿವರು ಇಲ್ಲಿ ಹಾಜರಿಲ್ಲ. ಶಾಸಕರ ಪ್ರಶ್ನೆಗೆ ಸಂಬಂಧ ಪಟ್ಟ ಸಚಿವರು ಉತ್ತರ ಕೊಡಬೇಕಲ್ಲವೇ, ಇಷ್ಟು ನಿರ್ಲಕ್ಷ್ಯ ಸರಿಯಲ್ಲ"ಎಂದು ಸಿದ್ದರಾಮಯ್ಯ ಸಿಟ್ಟಾಗಿದ್ದಾರೆ.
"ಸಂಬಂಧಪಟ್ಟ ಇಲಾಖೆಯವರು ಕಾರಣಾಂತರದಿಂದ ಗೈರಾಗಿರಬಹುದು, ಆದರೆ ಸದನದಲ್ಲಿ ಇರುವ ಇತರ ಸಚಿವರು ಶಾಸಕರ ಸಮಸ್ಯೆಗಳನ್ನು ಬರೆದುಕೊಳ್ಳಬೇಕಾಗಿಲ್ಲ. ಯಡಿಯೂರಪ್ಪನವರಿಗೆ ಇರುವ ಜವಾಬ್ದಾರಿ ಬೇರೆಯವರಿಗಿಲ್ಲ"ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
"ಬಜೆಟ್ ಮೇಲೆ ಚರ್ಚೆ ಮಾಡುವುದು ಯಾತಕ್ಕಾಗಿ? 2,65,720 ಕೋಟಿ ರೂಪಾಯಿಯನ್ನು ಸದನದಲ್ಲಿ ಮಂಜೂರು ಮಾಡಿಕೊಡಬೇಕಾಗುತ್ತದೆ. ಬಜೆಟ್ ಸೆಸನ್ ಪ್ರಾಮುಖ್ಯತೆಯನ್ನು ಇವರೆಲ್ಲಾ ಅರಿತುಕೊಳ್ಳುವುದು ಯಾವಾಗ"ಎಂದು ಸಿದ್ದರಾಮಯ್ಯ ಸದನದಲ್ಲಿ ಖಾರವಾಗಿ ಪ್ರಶ್ನಿಸಿದ್ದಾರೆ.

ಯಡಿಯೂರಪ್ಪನವರಿಗೆ ಒಬ್ಬರಿಗೆ ಬಿಟ್ಟರೆ, ಬೇರೆ ಯಾರಿಗೂ ಇಲ್ಲಿ ಜವಾಬ್ದಾರಿಯಿಲ್ಲ
"ಆಯಾಯ ಇಲಾಖೆಗಳಿಗೆ ಸಂಬಂಧಪಟ್ಟಂತೆ ಸದನದಲ್ಲಿ ಬಜೆಟಿನಲ್ಲಿ ಮಂಜೂರು ಮಾಡಿಕೊಡಬೇಕಾಗಿದೆ. ಯಡಿಯೂರಪ್ಪನವರಿಗೆ ಒಬ್ಬರಿಗೆ ಬಿಟ್ಟರೆ, ಬೇರೆ ಯಾರಿಗೂ ಇಲ್ಲಿ ಜವಾಬ್ದಾರಿ ಎನ್ನುವುದು ಇಲ್ಲ. ಯಡಿಯೂರಪ್ಪನವರನ್ನೇ ಮುಂದಿನ ಸಾಲಿನಲ್ಲಿ ಕೂರಿಸುವುದು ಒಳ್ಲೆಯದು. ಅವರು ಸದನದಲ್ಲಿ ಪ್ರತೀದಿನ ಹಾಜರಿರುತ್ತಾರೆ"ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಹೊಗಳಿದ್ದಾರೆ.

ಮಧ್ಯ ಪ್ರವೇಶಿಸಿಸಿದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ
ಸಿದ್ದರಾಮಯ್ಯನವರು ಮೇಲಿನ ಮಾತನ್ನು ಹೇಳಿದಾಗ ಮಧ್ಯ ಪ್ರವೇಶಿಸಿಸಿದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, "ಯಡಿಯೂರಪ್ಪನವರು ಈ ಹಿಂದೆ ಮೊದಲ ಸಾಲಿನಲ್ಲೇ ಕೂರುತ್ತಿದ್ದರು. ಈಗ, ಸೋಮಶೇಖರ್ ಅವರಿಗೆ ಆ ಸ್ಥಾನವನ್ನು ಬಿಟ್ಟು ಕೊಟ್ಟಿದ್ದಾರೆ. ಸಿದ್ದರಾಮಯ್ಯನವರು ಹೇಳುವ ಮಾತಿನಲ್ಲಿ ಅರ್ಥವಿದೆ, ಸದನ ನಡೆಯುತ್ತಿರಬೇಕಾದರೆ, ಅಧಿಕಾರಿಗಳು, ಶಾಸಕರು ಮತ್ತು ಸಚಿವರು ಖಡ್ಡಾಯವಾಗಿ ಹಾಜರಿರಬೇಕು. ಈ ಮಾಸಾಂತ್ಯದವರೆಗೆ ಅಧಿವೇಶನ ನಡೆಯಲಿದೆ"ಎಂದು ಸ್ಪೀಕರ್ ಅವರು ಸಿದ್ದರಾಮಯ್ಯನವರನ್ನು ಸಮರ್ಥಿಸಿಕೊಂಡರು.

ನೀವು ಶ್ಯಾಡೋ ಕ್ಯಾಬಿನೆಟ್ ಎಂದು ಹೇಳುತ್ತೀರಿ, ಆರ್.ಅಶೋಕ್
"ನೀವು ಶ್ಯಾಡೋ ಕ್ಯಾಬಿನೆಟ್ ಎಂದು ಹೇಳುತ್ತೀರಿ, ನೀವು ಇಲ್ಲದಿದ್ದಾಗ ಚರ್ಚೆ ನಡೆಯುವುದಿಲ್ಲ. ಖಾದರ್ ಒಬ್ಬರು ಬಿಟ್ಟರೆ ಕಾಂಗ್ರೆಸ್ಸಿನ ಯಾವ ಸದಸ್ಯರೂ ಸದನದಲ್ಲಿ ಇರಲಿಲ್ಲ. ಯಾರೂ ಇರದಿದ್ದಾಗಲೂ ನಾವು ಸದನದಲ್ಲಿ ಕಾಯ್ದುಕೊಂಡು ಕೂತಿದ್ದೆವು"ಎಂದು ಕಂದಾಯ ಸಚಿವ ಆರ್.ಅಶೋಕ್ ಸ್ಪಷ್ಟನೆ ನೀಡಿದರು. ಅದಕ್ಕೆ ಖಾರವಾಗಿ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಇಲ್ಲಿ ನನ್ನ ಇಲಾಖೆಗೆ ಸಂಬಂಧಪಟ್ಟ ಚರ್ಚೆಗಳು ನಡೆಯುತ್ತಿಲ್ಲ ಎಂದು ತಿರುಗೇಟು ನೀಡಿದರು.

ಏಪ್ರಿಲ್ ಒಂದರಿಂದ ಯಾವುದನ್ನೂ ಜಾರಿಗೆ ತರಲು ಸಾಧ್ಯವಾಗುವುದಿಲ್ಲ
"ನೀರಾವರಿ ಇಲಾಖೆಗೆ ಸಂಬಂಧಪಟ್ಟಂತೆ ಶಾಸಕರೊಬ್ಬರು ಮಾತನಾಡಿದರು, ಅವರು ಹೇಳಿದ ಪಾಯಿಂಟ್ಸ್ ಗಳನ್ನು ಯಾರಾದರೂ ಸದನದಲ್ಲಿ ಇರುವ ಸಚಿವರು ಪಟ್ಟಿ ಮಾಡಿಕೊಂಡಿದ್ದಾರಾ? ಸದನದಲ್ಲಿ ಬಜೆಟಿಗೆ ಅನುಮೋದನೆ ಸಿಗದಿದ್ದರೆ, ಏಪ್ರಿಲ್ ಒಂದರಿಂದ ಯಾವುದನ್ನೂ ಜಾರಿಗೆ ತರಲು ಸಾಧ್ಯವಾಗುವುದಿಲ್ಲ"ಎಂದು ಸಿದ್ದರಾಮಯ್ಯ ಸಚಿವರುಗಳಿಗೆ ನೀತಿಪಾಠವನ್ನು ಮಾಡಿದರು.












Click it and Unblock the Notifications