Breaking: ಕರ್ನಾಟಕದಲ್ಲಿ ಮಳೆ ಕ್ಷೀಣ, ಶುರುವಾದ ಒಣಹವೆ
ಬೆಂಗಳೂರು, ನವೆಂಬರ್ 06: ಉತ್ತರ ಒಳನಾಡು ಸೇರಿದಂತೆ ಕರ್ನಾಟಕ ಎಲ್ಲ ಕಡೆಗಳಲ್ಲಿ ಒಣ ಹವೆ ಮುಂದುವರಿಯುವ ಸಾಧ್ಯತೆ ಇದೆ. ಒಂದೆರಡ ಕಡೆ ಮುಂದಿನ 24 ಗಂಟೆಯಲ್ಲಿ ತುಂತುರು ಮಳೆ ಬರಬಹುದು ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಕರ್ನಾಟಕದ ಬಹುತೇಕ ಕಡೆಗಳಲ್ಲಿ ಮಳೆ ಆರ್ಭಟ ಕಡಿಮೆಯಾಗಿದ್ದು, ತಾಪಮಾನ ನಿಧಾನಗತಿಯಲ್ಲಿ ಹೆಚ್ಚಾಗುತ್ತಿದೆ. ಕರಾವಳಿ ಹಾಗೂ ದಕ್ಷಿಣ ಒಳನಾಡಿನ ಒಂದೆರಡು ಪ್ರದೇಶಗಳಲ್ಲಿ ತುಂತುರು ಮಳೆ ಆಗಲಿದೆ. ಇದರ ಹೊರತಾಗಿ ಉಳಿದೆಲ್ಲ ಜಿಲ್ಲೆಗಳಲ್ಲಿ ನಿತ್ಯ ತಾಪಮಾನ ಏರಿಕೆ ಆಗುತ್ತಿದೆ. ಹಿಂಗಾರು ಮಳೆ ಆರಂಭವಾದ ಬೆನ್ನಲ್ಲೆ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಬೇಸಿಗೆಯ ರೀತಿಯಲ್ಲಿ ವಾತಾವರಣ ಕಂಡು ಕರುತ್ತಿದೆ.
ಉತ್ತರ ಒಳನಾಡು, ಕರಾವಳಿ ಹಾಗೂ ದಕ್ಷಿಣ ಒಳನಾಡಿನ ವಿವಿಧೆಡೆ ಗರಿಷ್ಠ ತಾಪಮಾನ ಪ್ರಮಾಣ 30 ಡಿಗ್ರಿ ಸೆಲ್ಸಿಯಸ್ ದಾಟಿದೆ. ಹಿಂಗಾರು ಮಳೆ ಸುರಿಸುವ ಈಶಾನ್ಯ ಮಾರುತಗಳು ಆರಂಭದಲ್ಲಿ ಅಕ್ಟೋಬರ್ ಅಂತ್ಯಕ್ಕೆ ಚುರುಕಾಗಿದ್ದವು. ಇದರಿಂದ ಹಲವೆಡೆ ಭಾರಿ ಮಳೆ ಆಗಿತ್ತು. ಇದೀಗ ಹಿಂಗಾರು ಮಾರುತಗಳ ಅಬ್ಬರ ತಗ್ಗಿದೆ. ಈಗಾಗಲೇ ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ತಾಪಮಾನ ಏರಿಕೆ ಆಗುತ್ತಿದೆ ಎಂದು ಹವಾಮಾನ ಇಲಾಖೆ ವರದಿ ತಿಳಿಸಿದೆ.

ಕರಾವಳಿ ವ್ಯಾಪ್ತಿಗೆ ಬರುವ ಗೋಕರ್ಣದಲ್ಲಿ ಕಳೆದ 24 ಗಂಟೆಯಲ್ಲಿ 35.4ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ. ಇದು ರಾಜ್ಯದ ಅತ್ಯಂತ ಗರಿಷ್ಠ ತಾಪಮಾನವಾಗಿದೆ. ಹೊನ್ನಾವರ ಮತ್ತು ಕಾರವಾರದಲ್ಲಿ ತಲಾ 34 ಡಿಗ್ರಿ ಸೆಲ್ಸಿಯಸ್, ಕಲಬುರಗಿ, ಮಂಗಳೂರಲ್ಲಿ 33 ಡಿಗ್ರಿ ಸೆಲ್ಸಿಯಸ್, ರಾಯಚೂರು, ಹಂಪಿ, ಗದಗ, ಧಾರವಾಡ, ಬಳ್ಳಾರಿಯಲ್ಲಿ ತಲಾ 31ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ.
ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನಲ್ಲಿ ಮುಂದಿನ ಎರಡು ದಿನ ಮೋಡ ಕವಿದ ಹಾಗೂ ಅಲ್ಲಲ್ಲಿ ತುಂತುರು ಮಳೆ ಬೀಸುವ ಸಾಧ್ಯತೆ ಇದೆ ಎನ್ನಲಾಗಿದೆ. ಈ ಭಾಗದಲ್ಲಿ ಇನ್ನು ಸ್ವಲ್ಪ ಪ್ರಮಾಣದಲ್ಲಿ ಚಳಿ ದಾಖಲಾಗಿದೆ. ಇಷ್ಟು ದಿವಸ ಆರ್ಭಟಿಸಿದ್ದ ಮಳೆಯಿಂದಾಗಿ ಜನ ಜೀವನ ಅಸ್ತವೆಸ್ತವಾಗಿತ್ತು. ಹೆದ್ದಾರಿಗಳು ಸಂಪರ್ಕ ಕಳೆದುಕೊಂಡಿದ್ದವು. ನೆರೆಯಿಂದ ಹಾನಿಗೀಡಾದ ಪ್ರದೇಶಗಳೆಲ್ಲ ಮತ್ತೆ ಸಹಜ ಜೀವನ ನಡೆಸುತ್ತಿದ್ದು, ಸದ್ಯಕ್ಕೆ ಮಳೆಯಿಂದ ಯಾವುದೇ ಭೀತಿ ಇಲ್ಲ ಎಂದು ಹವಾಮಾನ ಇಲಾಖೆ ವರದಿಯಿಂದ ಸ್ಪಷ್ಟವಾಗಿದೆ.












Click it and Unblock the Notifications