
ಕೋಲಾರ ಖೆಡ್ಡಾಗೆ ಬಿದ್ದ ಸಿದ್ದರಾಮಯ್ಯ, ಬಿಜೆಪಿ ಅಭ್ಯರ್ಥಿ ಗೆಲ್ಲಿಸಲು ಕೆಲಸ, ಅವ್ಯಹಾರದ ಬಗ್ಗೆ ಸುಧಾಕರ್ ಸವಾಲ್
ಬೆಂಗಳೂರು, ಜನವರಿ 25: ವಿಪಕ್ಷ ನಾಯಕ ಸಿದ್ದರಾಮಯ್ಯನವರು ತಾವು ಕೋಲಾರದಿಂದ ಸ್ಪರ್ಧಿಸುದಾಗಿ ಹೇಳಿದಾಗಿನಿಂದಲೂ ಅನೇಕ ಚರ್ಚೆಗಳು ಪರ-ವಿರೋಧಗಳು ಕೇಳಿ ಬಂದಿವೆ. ಇದೀಗ ಸಿದ್ದರಾಮಯ್ಯರನ್ನು ಕೋಲಾರಕ್ಕೆ ಕರೆತಂದು ಖೆಡ್ಡಾಕ್ಕೆ ಬೀಳಿಸಲಾಗಿದೆ. ಅವರು ಇಲ್ಲಿ ಗೆಲ್ಲುವುದಿಲ್ಲ ಎಂದು ಭವಿಷ್ಯ ನುಡಿದಿರುವ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅವರು, ಕೊರೊನಾ ಸಂದರ್ಭದಲ್ಲಿ ಯಾವುದೇ ಅಕ್ರಮ ನಡೆದಿಲ್ಲ. ಬೇಕಿದ್ದರೆ ತನಿಖೆ ಮಾಡಿಸಲಿ ಎಂದು ಸಿದ್ದರಾಮಯ್ಯಗೆ ಸವಾಲು ಹಾಕಿದರು.
ಬೆಂಗಳೂರಿನಲ್ಲಿ ಬುಧವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಕಷ್ಟದ ಕ್ಷೇತ್ರವಾಗಿರುವ ಕೋಲಾರದಲ್ಲಿ ಸ್ಥಳೀಯ ಮುಖಂಡರು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಕರೆತಂದು ಖೆಡ್ಡಾಗೆ ಬೀಳಿಸಿದ್ದಾರೆ. ಆದರೆ ಅವರು ಅಂತಿಮವಾಗಿ ಕೋಲಾರದಿಂದ ಸ್ಪರ್ಧಿಸಲದೇ ವರುಣಾ ಕ್ಷೇತ್ರದಿಂದಲೇ ಸ್ಪರ್ಧಿಸಬಹುದು.
ಕೋಲಾರದಲ್ಲಿ ಕಾಂಗ್ರೆಸ್, ಜೆಡಿಎಸ್ ನಾಯಕರು ಮೆಡಿಕಲ್ ಕಾಲೇಜು ತರಲೇ ಇಲ್ಲ. ಮುಂದಿನ ದಿನಗಳಲ್ಲಿ ನಮ್ಮ ಬಿಜೆಪಿ ಸರ್ಕಾರ ಕೋಲಾರದಲ್ಲಿ ಮೆಡಿಕಲ್ ಕಾಲೇಜು ನಿರ್ಮಿಸಲಿದೆ. ಇಲ್ಲಿನವರೇ ಆರೋಗ್ಯ ಸಚಿವರಾದ್ರೂ ಏನೂ ಕೆಲಸ ಮಾಡಲಿಲ್ಲ ಎಂದರು.

ಕೊರೊನಾ ಅವ್ಯವಹಾರ: ಶ್ವೇತ ಪತ್ರ ಹೊರಡಿಸಲು ಸಿದ್ಧ
ಸಿಎಜಿ ವರದಿ ಬಗ್ಗೆ ಮಾತನಾಡಿದ ಸಚಿವರು, 2013-2018 ರ ಅವಧಿಯ ಸಿಎಜಿ ವರದಿಯಲ್ಲಿರುವ ಅಂಶಗಳನ್ನು ಹೇಳಿದ್ದೇನೆ. ಆ ಅವಧಿಯಲ್ಲಿ 35 ಸಾವಿರ ಕೋಟಿ ರೂ. ನಷ್ಟು ಆರ್ಥಿಕ ಅವ್ಯವಹಾರ ಕಂಡುಬಂದಿದೆ ಎಂದು ವರದಿಯಲ್ಲೇ ಹೇಳಲಾಗಿದೆ. ಕೋವಿಡ್ ನಿರ್ವಹಣೆ ಬಗ್ಗೆ ಈ ಹಿಂದೆ ಸದನದಲ್ಲೇ ಉತ್ತರ ನೀಡಲಾಗಿದೆ. ಆದರೆ ಉತ್ತರ ಕೇಳದೆಯೇ ಕಾಂಗ್ರೆಸ್ ನಾಯಕರು ಪಲಾಯನ ಮಾಡಿದ್ದರು.
ಕೋವಿಡ್ ನಿರ್ವಹಣೆಯಲ್ಲಿ ಯಾವುದೇ ಅವ್ಯವಹಾರ ಆಗಿಲ್ಲ. ಇದಕ್ಕೆ ಬೇಕಿದ್ದರೆ ಶ್ವೇತಪತ್ರವನ್ನೂ ಹೊರಡಿಸಲು ತಯಾರಿದ್ದೇವೆ. ಎಸಿಬಿ ರದ್ದು ಮಾಡಲು ಸಹಕರಿಸುವ ಮೂಲಕ ಲೋಕಾಯುಕ್ತಕ್ಕೆ ನಮ್ಮ ಸರ್ಕಾರವೇ ಶಕ್ತಿ ನೀಡಿದೆ ಎಂದು ಅವರು ವಿವರಿಸಿದರು.

ತೆವಲಿಗಾಗಿ ಟೀಕೆ: ತನಿಖೆಗೆ ಸಿದ್ಧ
ರಾಜ್ಯಕ್ಕೆ ಕೊರೋನಾ ಆವರಿಸಿದ್ದ ಕಳೆದ ಮೂರು ವರ್ಷದಲ್ಲಿ ಆರೋಗ್ಯ ಇಲಾಖೆಯಿಂದ ಖರ್ಚು ಮಾಡಿದ ಮೊತ್ತದ ಪ್ರತಿ ಪೈಸೆಯ ಲೆಕ್ಕವನ್ನು ಸಿದ್ದರಾಮಯ್ಯ ಅವರಿಗೆ ನೀಡುತ್ತೇನೆ. ಯಾವುದೇ ತನಿಖೆಯನ್ನು ಅವರು ಮಾಡಿಸಲಿ. ನಾನು ಸಿದ್ಧನಿದ್ದೇನೆ ಎಂದು ಸವಾಲೆಸೆದರು. ಕೋವಿಡ್ ನಿರ್ವಹಣೆಯಲ್ಲಿ ಉತ್ತಮ ರಾಜ್ಯ ಎಂಬ ಪ್ರಶಸ್ತಿಯನ್ನು ಮಾಧ್ಯಮ ಸಂಸ್ಥೆಯೇ ನೀಡಿದೆ. ರಾಜಕೀಯದ ತೆವಲಿಗಾಗಿ ಟೀಕೆ ಮಾಡಿದರೆ ಏನೂ ಮಾಡಲಾಗುವುದಿಲ್ಲ ಎಂದು ತಿರುಗೇಟು ನೀಡಿದರು.

ಬೇಸತ್ತು ಕಾಂಗ್ರೆಸ್‌ಗೆ ರಾಜೀನಾಮೆ
ಪ್ರಧಾನಿ ನರೇಂದ್ರ ಮೋದಿಯವರ ಕುರಿತ ಬಿಬಿಸಿ ಸಾಕ್ಷ್ಯಚಿತ್ರಕ್ಕೆ ಸಂಬಂಧಿಸಿದಂತೆ ಅನಿಲ್ ಆಂಟನಿ ಅವರು ಟ್ವೀಟ್ ಮಾಡಿದ್ದಾರೆ. ಅಷ್ಟಕ್ಕೇ, ರಾಹುಲ್ ಗಾಂಧಿ ಸೇರಿದಂತೆ ಅನೇಕ ನಾಯಕರು ಅವರ ಮೇಲೆ ಒತ್ತಡ ತಂದಿದ್ದಾರೆ. ಒಂದು ಕಡೆ ಫ್ರೀ ಸ್ಪೀಚ್ ಬಗ್ಗೆ ಹೇಳುತ್ತಾರೆ, ಇನ್ನೊಂದು ಕಡೆ ಒತ್ತಡ ತರುತ್ತಾರೆ. ಇದರಿಂದ ಬೇಸತ್ತು ಅವರು ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ್ದಾರೆ ಎಂದರು.

ಸಿದ್ದರಾಮಯ್ಯ ವಿರುದ್ಧ ಈ ಭಾಗದಲ್ಲಿ ಕೆಲಸ
ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಲು ನಾನು ಬೆಂಗಳೂರು ಗ್ರಾಮಾಂತರ, ಕೋಲಾರ ಹಾಗೂ ಚಿಕ್ಕಬಳ್ಳಾಪುರದಲ್ಲಿ ನಾನು ಓಡಾಡುತ್ತೇನೆ. ಸಿದ್ದರಾಮಯ್ಯನವರ ವಿರುದ್ಧ ನಿಲ್ಲುವ ಬಿಜೆಪಿ ಅಭ್ಯರ್ಥಿ ಗೆಲ್ಲಿಸಲು ಶ್ರಮಿಸುತ್ತೇನೆ.
ಸಿದ್ದರಾಮಯ್ಯ ಅವರು ರಾಜಕೀಯಕ್ಕಾಗಿ ಮಾತನಾಡಬಹುದು. ಆದರೆ ನಾನು ಏಕೆ ಕಾಂಗ್ರೆಸ್ ತೊರೆದೆ ಎನ್ನುವುದು ಅವರಿಗೂ ಗೊತ್ತಿದೆ. ಅನೈತಿಕವಾಗಿ ಜೆಡಿಎಸ್ ಜತೆ ಹೊಂದಾಣಿಕೆ ಮಾಡಿಕೊಂಡಿದ್ದರಿಂದ ಬೇಸತ್ತಿದ್ದೆ. ಇದು ಅವರಿಗೂ ಗೊತ್ತಿತ್ತು. ಹಣಕ್ಕಾಗಿ ಅಲ್ಲದೇ ಸಿದ್ಧಾಂತಕ್ಕಾಗಿ ನಾನು ಬಿಜೆಪಿ ಸೇರಿದ್ದೇನೆ ಎಂದು ಸುಧಾಕರ್ ಕಾಂಗ್ರೆಸ್ ತೊರೆದ ವಿಚಾರ ಪ್ರಸ್ತಾಪಿಸಿದರು.
ಸಿದ್ದರಾಮಯ್ಯನವರು ಜೀವನವಿಡೀ ಕಾಂಗ್ರೆಸ್ ನಾಯಕರನ್ನು ಬೈದುಕೊಂಡೇ ಇದ್ದರು. ಜನತಾದಳದಲ್ಲೇ ಇದ್ದು ಸಚಿವರಾಗಿ, ಉಪಮುಖ್ಯಮಂತ್ರಿಯಾಗಿ, ನಂತರ ಬಳಿಕ ಮುಖ್ಯಮಂತ್ರಿಯಾಗಲು ಕಾಂಗ್ರೆಸ್ ಸೇರಿದರು. ಒಂದು ವರ್ಷ ತಾಳ್ಮೆಯಿಂದಿರು ಲೋಕಸಭೆ ಚುನಾವಣೆ ಬಳಿಕ ಕುಮಾರಸ್ವಾಮಿಯವರನ್ನು ಸಿಎಂ ಸ್ಥಾನದಲ್ಲಿ ಒಂದು ದಿನವೂ ಇರಿಸುವುದಿಲ್ಲ ಎಂದು ಸಿದ್ದರಾಮಯ್ಯನವರು ಹೇಳಿದ್ದರು. ನಂತರ ಅವರೇ ಐದು ವರ್ಷವೂ ಮುಖ್ಯಮಂತ್ರಿಗಳು ಎಂದು ಬಿಟ್ಟರು. ಆ ಸಮಯದಲ್ಲಿ ನನ್ನ ರಾಜಕೀಯ ಭವಿಷ್ಯವೇ ಮುಗಿಯುತ್ತಿತ್ತು. ಆದರೂ ಮತ್ತೆ ಸ್ಪರ್ಧಿಸಿ ಜನರ ಆಶೀರ್ವಾದ ಪಡೆದಿರುವೆ ಎಂದು ತಿಳಿಸಿದರು.