ಭಾರತವು ಆ ವ್ಯಕ್ತಿಯ ಕೊಡುಗೆಯಿಂದ ತಾಂತ್ರಿಕವಾಗಿ ಇಂದು ಇಷ್ಟು ಬಲಿಷ್ಠವಾಗಿದೆ ಡಾ. ಜಿ. ಪರಮೇಶ್ವರ್!
ಭಾರತವು ತಾಂತ್ರಿಕವಾಗಿ ಮತ್ತು ಆರ್ಥಿಕವಾಗಿ ಬಲಿಷ್ಠವಾಗಿರುವುದಕ್ಕೆ ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರ ಕೊಡುಗೆ ಸಾಕಷ್ಟಿದೆ ಎಂದು ಉಪ ಮುಖ್ಯಮಂತ್ರಿ ಹಾಗೂ ಕಂದಾಯ ಸಚಿವ ಡಾ. ಜಿ. ಪರಮೇಶ್ವರ ಅವರು ಹೇಳಿದ್ದಾರೆ. ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹಾಗೂ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರ ಜನ್ಮದಿನದ ಅಂಗವಾಗಿ ಕೆಪಿಸಿಸಿ ವತಿಯಿಂದ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಆಯೋಜಿಸಿದ್ದ 'ಸದ್ಭಾವನಾ ದಿನಾಚರಣೆ' ಕಾರ್ಯಕ್ರಮದಲ್ಲಿ ಅವರು ಪಾಲ್ಗೊಂಡು ಮಾತನಾಡಿದರು.
21ನೇ ಶತಮಾನಕ್ಕೆ ನಾವು ಕಾಲಿಡುತ್ತಿದ್ದೇವೆ. ನಾಡಿನ ಜನತೆ ಸಮಾಧಾನ, ಸಂತೋಷದಿಂದ ಬಾಳಬೇಕು. ಇದೇ ಕನಸನ್ನು ಕಂಡವರು ರಾಜೀವ್ ಗಾಂಧಿಯವರು. ಭಾರತ ಆಧುನಿಕವಾಗಿ ತಂತ್ರಜ್ಞಾನದಲ್ಲಿ ಅಭಿವೃದ್ಧಿ ಹೊಂದಿದೆ. ಹಳ್ಳಿಯಿಂದ ದೆಹಲಿವರೆಗೆ ಇಂಟರ್‌ನೆಟ್ ಸಂಪರ್ಕದಿಂದ ಸುಲಭವಾಗಿ ತಲುಪುತ್ತೇವೆ. ಇದಕ್ಕೆ ಸಂಪೂರ್ಣ ಕಾರಣಕರ್ತರು ರಾಜೀವ್ ಗಾಂಧಿಯವರು. ತಳ ಸಮುದಾಯಗಳಿಗೆ ಅವಕಾಶ, ಮಹಿಳೆಯರಿಗೆ ಸಮಾನತೆ ಕಲ್ಪಿಸಲು ಸಂವಿಧಾನದ 73 ಮತ್ತು 74ನೇ ಕಲಂಗಳಿಗೆ ತಿದ್ದುಪಡಿ ತಂದು ಮೀಸಲಾತಿ ಕಲ್ಪಿಸಿದರು. ದೇಶದಲ್ಲಿ ಬಹುದೊಡ್ಡ ಬದಲಾವಣೆಯಿಂದ ಮಹಿಳೆಯರು ಸ್ಥಳೀಯ ಸಂಸ್ಥೆಗಳಲ್ಲಿ ಪ್ರತಿನಿಧಿಗಳಾಗಿದ್ದಾರೆ ಎಂದರು.

ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರು ರಾಜ್ಯದಲ್ಲಿ ಅನೇಕ ಪ್ರಗತಿಪರ ಕಾರ್ಯಕ್ರಮಗಳನ್ನು ಜಾರಿಗೆ ತಂದರು. ಶೋಷಣೆಗೆ ಒಳಗಾಗುತ್ತಿದ್ದ ರೈತನನ್ನು, ಉಳುವವನೇ ಭೂಮಿಯ ಒಡೆಯನನ್ನಾಗಿ ಮಾಡಿದರು. 1974ರಲ್ಲಿ ಬೆಂಗಳೂರಿನಲ್ಲಿ ಎಲೆಕ್ಟ್ರಾನಿಕ್ ಸಿಟಿ ನಿರ್ಮಿಸಿದರು. ದೇಶದ ಯುವಕರಿಗೆ ಭವಿಷ್ಯ ಕಟ್ಟಿಕೊಡುವ ಕೆಲಸ ಮಾಡಿದರು. ಕರ್ನಾಟಕವನ್ನು ಒಗ್ಗೂಡಿಸಿ ಪ್ರಪಂಚದಲ್ಲೇ ಪ್ರಖ್ಯಾತಿ ಮಾಡಿದರು. ಧ್ವನಿ ಇಲ್ಲದ ಸಮಾಜದ ಕಟ್ಟಕಡೆಯ ವ್ಯಕ್ತಿಗೆ ಶಕ್ತಿ ತುಂಬುವ ಕೆಲಸ ಮಾಡಿದ್ದಾರೆ ಎಂದು ದೇವರಾಜ ಅರಸು ಅವರ ಕೊಡುಗೆಗಳನ್ನು ಸ್ಮರಿಸಿದರು.
ದೇವರಾಜ ಅರಸು ಅವರ ದಾರಿಯಲ್ಲೇ ನಡೆದುಬಂದ ಸಿದ್ದರಾಮಯ್ಯನವರು ತಮ್ಮ ಇಡೀ ಜೀವನದಲ್ಲಿ ಬಡವರಿಗೆ ನ್ಯಾಯ ಒದಗಿಸುವ ಕೆಲಸವನ್ನು ಮಾಡಿದ್ದಾರೆ. ಅನೇಕ ಜನಪರ ಕಾರ್ಯಕ್ರಮಗಳನ್ನು ಜಾರಿಗೊಳಿಸಿದ್ದಾರೆ. ರಾಜ್ಯದಲ್ಲಿ ಅನ್ನಭಾಗ್ಯ ಯೋಜನೆಯನ್ನು ಜಾರಿಗೊಳಿಸುವ ಮೂಲಕ ಬಡವರ ಹಸಿವು ನೀಗಿಸುವ ಕೆಲಸ ಮಾಡಿದ್ದಾರೆ. ರಾಜ್ಯ ರಾಜಕೀಯ ಮತ್ತು ಆಡಳಿತದ ಇತಿಹಾಸದಲ್ಲಿ ಸಿದ್ದರಾಮಯ್ಯ ಅವರ ಹೆಸರು ಶಾಶ್ವತವಾಗಿ ಉಳಿಯಲಿದೆ ಎಂದರು.
ಇನ್ನು ಬಿ.ಕೆ ಹರಿಪ್ರಸಾದ್ ಅವರು 35 ವರ್ಷ ಎಐಸಿಸಿ ಮಟ್ಟದಲ್ಲಿ ಪಕ್ಷ ಸಂಘಟನೆಯ ಕೆಲಸ ಮಾಡಿದ್ದಾರೆ. 30ಕ್ಕೂ ಹೆಚ್ಚು ರಾಜ್ಯಗಳ ಉಸ್ತುವಾರಿ ವಹಿಸಿಕೊಂಡು ಕಾಂಗ್ರೆಸ್ ಪಕ್ಷವನ್ನು ಬಲಪಡಿಸಿದ್ದಾರೆ. ಮುಂಬರುವ ಚುನಾವಣೆ ಹರಿಪ್ರಸಾದ್ ಅವರ ನೇತೃತ್ವದಲ್ಲಿ ನಡೆಯಲಿದ್ದು, ಪಕ್ಷದಲ್ಲಿ ಕೆಲಸ ಮಾಡಿದ ನಿಷ್ಟಾವಂತ ಕಾರ್ಯಕರ್ತರು ಮತ್ತು ಮುಖಂಡರುಗಳಿಗೆ ನ್ಯಾಯ ಒದಗಿಸುವ ಜವಾಬ್ದಾರಿ ನಿಮ್ಮ ಮೇಲಿದೆ ಎಂದು ಇದೇ ಸಂದರ್ಭದಲ್ಲಿ ಉಪ ಮುಖ್ಯಮಂತ್ರಿ ಡಾ. ಜಿ ಪರಮೇಶ್ವರ್ ಅವರು ಹೇಳಿದರು.


Click it and Unblock the Notifications
