ಪರಿಷತ್ ಸದಸ್ಯರ ಆಯ್ಕೆಗೆ ನನ್ನ ಪರಿಗಣಿಸುವ ಅಗತ್ಯತೆ ಇಲ್ಲ: ಜಿ.ಪರಮೇಶ್ವರ ಮಹತ್ವದ ಹೇಳಿಕೆ
ಬೆಂಗಳೂರು, ಏಪ್ರಿಲ್ 04: ಕರ್ನಾಟಕದಲ್ಲಿ ಇತ್ತೀಚೆಗೆ ಹನಿಟ್ರ್ಯಾಫ್ ವಿಚಾರ ಸದ್ದು ಮಾಡಿತ್ತು. ಅದರ ಬೆನ್ನಲ್ಲೆ ರಾಯಚೂರು ನಗರ ಶಾಸಕ ಶಿವರಾಜ್ ಪಾಟೀಲ್ ಅವರ ಲೊಕೇಶನ್ ಟ್ರ್ಯಾಕ್ ಮಾಡುತ್ತಿರುವುದಕ್ಕೆ ಸಂಬಂಧಿಸಿದಂತೆ ಆರೋಪ ಮಾಡಿದ್ದಾರೆ. ಈ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಜೊತೆಗೆ ವಲಯ ಐಜಿಪಿ ಹಾಗೂ ಡಿಜಿಪಿ ಅವರಿಂದ ಮಹತ್ವದ ಚರ್ಚೆ ನಡೆಸುವುದಾಗಿ ಗೃಹ ಸಚಿವ ಪರಮೇಶ್ವರ ಅವರು ಹೇಳಿದರು.
ಶುಕ್ರವಾರ ಬೆಂಗಳೂರಿನಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ತಮ್ಮ ಲೊಕೇಶನ್ ಟ್ರ್ಯಾಕ್ ಮಾಡುತ್ತಿದ್ದಾರೆ ಎಂದು ರಾಯಚೂರು ನಗರ ಶಾಸಕ ಶಿವರಾಜ್ ಪಾಟೀಲ್ ಅವರು ಆರೋಪಿಸಿದ್ದಾರೆ. ಎಸ್‌ಪಿ ಹಾಗೂ ಐಜಿಪಿಯವರೊಂದಿಗೆ ಮಾತನಾಡುತ್ತೇನೆ. ಅಂತಹ ಘಟನೆ ಏನಾದರು ನಡೆದಿದ್ದರೆ, ಯಾಕೆ ನಡೆದಿದೆ, ಯಾವ ಕಾರಣಕ್ಕೆ ಆಗಿದೆ, ಯಾರು ಅನುಮತಿ ಕೊಟ್ಟಿದ್ದಾರೆ ಎಂದು ವಿಚಾರಿಸಿ, ಚರ್ಚಿಸಿ ಮುಂದಿನ ಕ್ರಮ ತೆಗದುಕೊಳ್ಳಲಾಗುವುದು ಎಂದು ಹೇಳಿದರು.

ಇನ್ನೂ ಕೇಂದ್ರ ಸರ್ಕಾರ ಜಾರಿಗೆ ತಂದೆ ವಕ್ಫ್ ತಿದ್ದುಪಡಿ ಮಸೂದೆ ರಾಜಕೀಯ ಕಾರಣಕ್ಕಾಗಿ ಮಾಡಿಕೊಳ್ಳಲಾಗಿದೆ ವಿನಃ ಜನರ ಹಿತಾಸಕ್ತಿಗಾಗಿ ತಂದಿಲ್ಲ ಎಂದು ಅವರು ಪುನರುಚ್ಛಿಸಿದರು. ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರ ವಿರುದ್ಧ ಮಾಡಿರುವ ನಿರಾಧಾರ ಆರೋಪಕ್ಕೆ ಸದನದಲ್ಲಿ ಅವರೇ ಸೂಕ್ತ ಉತ್ತರ ನೀಡಿದ್ದಾರೆ. ಯಾವುದಾದರು ಆಸ್ತಿ ಕಬಳಿಕೆ ಮಾಡಿದ್ದರೆ ರಾಜಕೀಯ ನೀವೃತ್ತಿ ತೆಗೆದುಕೊಳ್ಳುವುದಾಗಿ ತಿಳಿಸಿದ್ದಾರೆ.
ನನ್ನ ಪರಿಗಣಿಸುವ ಅಗತ್ಯವಿಲ್ಲ: ಪರಮೇಶ್ವರ
ವಿಧಾನ ಪರಿಷತ್‌ಗೆ ನಾಮನಿರ್ದೇಶನ ಸದಸ್ಯರ ಆಯ್ಕೆ ಮುಖ್ಯಮಂತ್ರಿಗಳು ಹಾಗೂ ಕೆಪಿಸಿಸಿ ಅಧ್ಯಕ್ಷರಿಗೆ ಬಿಟ್ಟಿರುವ ವಿಚಾರ. ನಿನ್ನೆ ಭೇಟಿ ವೇಳೆ ಎಐಸಿಸಿ ವರಿಷ್ಠರೊಂದಿಗೆ ಮಾತನಾಡಿದ್ದಾರಯೇ ಇಲ್ಲವೇ ಎಂಬುದು ನನಗೆ ಗೊತ್ತಿಲ್ಲ. ನಿಗಮ ಮಂಡಳಿ ವಿಚಾರದಲ್ಲಿ ನನ್ನ ಶಿಫಾರಸ್ಸು ಲೆಕ್ಕಕ್ಕೆ ತೆಗೆದುಕೊಂಡಿಲ್ಲ ಎಂಬುದು ಸುಳ್ಳು. ಆಯ್ಕೆ ಸಮಿತಿಯ ಅಧ್ಯಕ್ಷನನ್ನಾಗಿ ಮಾಡಿದ್ದರು. ನಾನು ಸಮಾಧಾನವಾಗಿಯೇ ಇದ್ದೇನೆ ಎಂದರು.
ನನ್ನನ್ನು ಪರಿಷತ್ ಸದಸ್ಯರ ಆಯ್ಕೆ ವಿಚಾರದಲ್ಲಿ ಪರಿಗಣಿಸುವ ಅವಶ್ಯಕತೆ ಇಲ್ಲ. ಅನೇಕ ಸಂದರ್ಭದಲ್ಲಿ ಅಧ್ಯಕ್ಷರು ತೀರ್ಮಾನ ಮಾಡುತ್ತಾರೆ. ನಾನು ಅಧ್ಯಕ್ಷನಾಗಿದ್ದಾಗ ಕೇಳುತ್ತಿರಲಿಲ್ಲ. ಕಠಿಣವಾದ ತೀರ್ಮಾನ ತೆಗೆದುಕೊಳ್ಳುವಾಗ ಕೇಳುತ್ತಿದ್ದೆವು. ಸುಲಭವಾದ ತೀರ್ಮಾನ ತೆಗೆದುಕೊಳ್ಳುವಾಗ ಕೇಳುತ್ತಿರಲಿಲ್ಲ. ನಾಲ್ಕು ಜನರ ನಾಮನಿರ್ದೇಶನ ಮಾಡಬೇಕಿದೆ. ಇದು ಚುನಾವಣೆ ಅಥವಾ ಸ್ಥಳೀಯ ಸಂಸ್ಥೆಗಳಿಂದ ಆಯ್ಕೆಯಾಗಬೇಕಿಲ್ಲ. ಸುಲಭವಾಗಿರುವುದರಿಂದ ಮುಖ್ಯಮಂತ್ರಿಗಳು ಹಾಗೂ ಕೆಪಿಸಿಸಿ ಅಧ್ಯಕ್ಷರ ವಿವೇಚನೆಗೆ ಬಿಟ್ಟದ್ದು. ವರಿಷ್ಠರ ಜೊತೆ ಚರ್ಚಿಸಿ ಅನುಮತಿ ತೆಗೆದುಕೊಂಡು ಬರುತ್ತಾರೆ ಎಂದು ಅವರು ಕೆಲವು ಆರೋಪಗಳಿಗೆ ಸ್ಪಷ್ಟನೆ ನೀಡಿದರು.
ಕೆಲವು ದಿನಗಳ ಹಿಂದೆ ನೋವಿನಲ್ಲಿದ್ದ ತಾವು, ಈಗ ಸಮಾಧಾನವಾಗಿದ್ದೀರಿ ಎಂದು ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನಾನು ಯಾವತ್ತು ನೋವಲ್ಲಿಲ್ಲ. ನಮ್ಮದೇನು ಯಾವಾಗಲು ಒಂದೇ ರೀತಿ. ಗ್ರಾಫ್‌ನಲ್ಲಿ ಏರಿಳಿತ ಇಲ್ಲ. ಒಂದೇ ರೀತಿ ಇದೆ ಎಂದು ಅವರು ಉತ್ತರಿಸಿದರು.












Click it and Unblock the Notifications