ವಿಧಾನಸೌಧದಲ್ಲಿ ನಮಗಿಂತ ನಾಯಿಗೆ ಪವರ್ ಜಾಸ್ತಿ ಎಂದ ಸ್ಪೀಕರ್
ರಾಜ್ಯದ ಶಕ್ತಿ ಕೇಂದ್ರವಾದ ವಿಧಾನಸೌಧದಲ್ಲಿ ರಾಜಕಾರಣಿಗಳಿಗೆ ಪವರ್ ಜಾಸ್ತಿ ಎನ್ನುವ ಮಾತಿತ್ತು. ಆದರೆ, ಈಗ ರಾಜಕಾರಣಿಗಳಿಗಿಂತಲೂ ಪವರ್ ಇರುವವರ ಬಗ್ಗೆ ಚರ್ಚೆ ಶುರುವಾಗಿದೆ. ಸದ್ಯ ವಿಧಾನಸೌಧದಲ್ಲಿ ನಾಯಿಗಳಿಗೆ ಪವರ್ ಜಾಸ್ತಿ ಎಂದು ಹೇಳುವ ಮೂಲಕ ಸ್ಪೀಕರ್ ಯು.ಟಿ.ಖಾದರ್ ಹಾಸ್ಯ ಮಾಡಿದ್ದಾರೆ.
ಇಂದು ಮಾಧ್ಯಮಗಳ ಮುಂದೆ ಮಾತನಾಡಿರುವ ಖಾದರ್, ವಿಧಾನಸೌಧದಲ್ಲಿ ನಮಗಿಂತ ನಾಯಿಗೆ ಪವರ್ ಜಾಸ್ತಿ ಇದೆ. ಶಾಸಕರನ್ನು ಬೇಕಾದರೆ ವಿಧಾನಸೌಧದಿಂದ ಹೊರಹಾಕಬಹುದು. ಆದರೆ, ನಾಯಿಗಳನ್ನು ಅಲ್ಲಿಂದ ಹೊರಗೆ ಕಳಿಸುವುದೇ ದೊಡ್ಡ ಸಮಸ್ಯೆಯಾಗಿದೆ ಎಂದು ಹೇಳಿದ್ದಾರೆ. ಅಷ್ಟರಮಟ್ಟಿಗೆ ವಿಧಾನಸೌಧದಲ್ಲಿ ಬೀದಿನಾಯಿಗಳ ಹಾವಳಿ ಎದುರಾಗಿದೆ.

ವಿಧಾನಸೌಧದ ಆವರಣದಲ್ಲಿ ಬೀದಿನಾಯಿಗಳ ಉಪಟಳ ಹೆಚ್ಚಾಗಿದೆ. ಇದರಿಂದ ಅಲ್ಲಿಗೆ ಬರುವವರಿಗೂ ಸಮಸ್ಯೆಯಾಗುತ್ತಿದೆ. ಶಾಸಕರನ್ನು ಬೇಕಾದರೆ ಸುಲಭವಾಗಿ ಅಲ್ಲಿಂದ ಹೊರಗೆ ಕಳಿಸಬಹುದು. ಆದರೆ, ಈ ಬೀದಿನಾಯಿಗಳನ್ನು ಹೊರಗೆ ಕಳಿಸುವುದು ಸುಲಭದ ಮಾತಲ್ಲ. ಅಲ್ಲದೆ ಬೆಳಿಗ್ಗೆ ವೇಳೆ ವಾಕಿಂಗ್ ಬರುವವರಿಗೂ ನಾಯಿಗಳಿಂದ ಸಮಸ್ಯೆಯಾಗುತ್ತಿದೆ ಎಂದಿದ್ದಾರೆ.
ಇನ್ನು ಈ ನಾಯಿಗಳಿಂದ ಎಲ್ಲರಿಗೂ ಸಮಸ್ಯೆ ಎನ್ನುವ ಆರೋಪವಿಲ್ಲ. ಕೆಲವರು ನಾಯಿಗಳಿಗೆ ಹೆದರುತ್ತಾರೆ. ಇನ್ನೂ ಕೆಲವರು ನಾಯಿಗಳು ನಮ್ಮೊಂದಿಗೆ ಚೆನ್ನಾಗಿ ವರ್ತಿಸುತ್ತವೆ ಎನ್ನುವವರೂ ಇದ್ದಾರೆ. ಹಾಗಾಗಿ ನಾಯಿಗಳಿಗೆ ಯಾವುದೇ ತೊಂದರೆಯಾಗದಂತೆ ಅಲ್ಲಿ ಏನಾದರೂ ವ್ಯವಸ್ಥೆ ಮಾಡುವ ಚಿಂತನೆಯಲ್ಲಿದ್ದೇವೆ. ಸಾಧ್ಯವಾದರೆ ನಾಯಿಗಳನ್ನು ನೋಡಿಕೊಳ್ಳಲು ಯಾರಾದರೂ ಸಿಬ್ಬಂದಿಯನ್ನು ನಿಯೋಜಿಸುವ ಉದ್ದೇಶವೂ ಇದೆ ಎಂದು ಖಾದರ್ ಹೇಳಿದ್ದಾರೆ.

ಒಟ್ಟಾರೆ ವಿಧಾನಸೌಧದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಅವುಗಳ ನಿಯಂತ್ರಣ ಬಗ್ಗೆ ಶೀಘ್ರದಲ್ಲಿ ಉನ್ನತಮಟ್ಟದ ಸಭೆ ನಡೆಯಲಿದೆ. ವಿಧಾನಸೌಧದಲ್ಲಿ ನಾಯಿಗಳು ಬೇಕಾಬಿಟ್ಟಿಯಾಗಿ ತಿರುಗಾಡುತ್ತಿವೆ. ಈ ಬಗ್ಗೆ ನಾಯಿಗಳ ಪರ ಹಾಗೂ ವಿರೋಧದ ದೂರುಗಳು ಬಂದಿವೆ. ನನಗೆ ಶಾಸಕರನ್ನು ವಿಧಾನಸಭೆಯಿಂದ ಹೊರಗೆ ಕಳುಹಿಸುವ ಅಧಿಕಾರ ಇದೆ. ಆದ್ರೆ ಈ ಬೀದಿನಾಯಿಗಳನ್ನ ಕಳಿಸೋ ಹಾಗಿಲ್ಲ. ಯಾಕೆಂದರೆ ನಾಯಿಗಳ ಹಕ್ಕುಗಳನ್ನು ಗೌರವಿಸುವ ಮೂಲಕವೇ ಈ ಸಮಸ್ಯೆಗೆ ತುರ್ತು ಪರಿಹಾರ ಕಂಡುಕೊಳ್ಳಬೇಕು. ಹೀಗಾಗಿ ಪ್ರಾಣಿ ದಯಾ ಸಂಘದವರೊಂದಿಗೆ ಚರ್ಚಿಸಿ ಪರಿಹಾರ ಸೂಚಿಸುತ್ತೇವೆ ಎಂದಿದ್ದಾರೆ.
ಈ ಹಿಂದೆಯೂ ವಿಧಾನಸೌಧದಲ್ಲಿ ನಾಯಿಗಳ ಹಾವಳಿ ಬಗ್ಗೆ ಹಲವು ರಾಜಕಾರಣಿಗಳು ಧ್ವನಿ ಎತ್ತಿದ್ದರು. ಬೆಂಗಳೂರಿನಲ್ಲಿ ಸಾರ್ವಜನಿಕ ಪ್ರದೇಶಗಳಲ್ಲಿ ಮಾತ್ರ ಬೀದಿನಾಯಿಗಳ ಉಪಟಳವಿತ್ತು ಎನ್ನುವ ದೂರುಗಳು ಕೇಳಿಬರುತ್ತಿದ್ದವು. ಇದೀಗ ಶಕ್ತಿಕೇಂದ್ರ ವಿಧಾನಸೌಧದಲ್ಲೂ ನಾಯಿಗಳಲ್ಲೇ ಕಾರುಬಾರು ಜೋರಾಗಿದ್ದು, ರಾಜಕೀಯ ನಾಯಕರೇ ನಾಯಿಗಳಿಗೆ ಹೆದರುವಂತಾಗಿದೆ.
ವಿಧಾನಸೌಧದ ಆವರಣದಲ್ಲಿ ಫೆಬ್ರವರಿ 27ರಿಂದ ಮಾರ್ಚ್ 3ರವರೆಗೆ ಸಾಹಿತ್ಯ ಉತ್ಸವ, ಪುಸ್ತಕ ಮೇಳ, ಆಹಾರ ಮೇಳಗಳನ್ನು ನಡೆಸಲು ನಿರ್ಧರಿಸಲಾಗಿದೆ. ಸಾಹಿತಿಗಳು, ಬರಹಗಾರರು, ವಿದ್ವಾಂಸರನ್ನು ವಿಧಾನಸಭೆಗೆ ಹತ್ತಿರವಾಗಿಸುವುದು ಈ ಸಾಹಿತ್ಯ ಉತ್ಸವದ ಉದ್ದೇಶ. ಇದೇ ಕಾರ್ಯಕ್ರಮದಲ್ಲಿ ಒಬ್ಬ ಸಾಹಿತಿಗೆ ಪ್ರಶಸ್ತಿ ಪ್ರದಾನ ಕೂಡ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಎಲ್ಲ ಸಾರ್ವಜನಿಕರಿಗೆ ಮುಕ್ತ ಪ್ರವೇಶ ವ್ಯವಸ್ಥೆ ಮಾಡಿದ್ದೇವೆ. ಭದ್ರತಾ ದೃಷ್ಟಿಯಿಂದ ತಪಾಸಣೆ ವ್ಯವಸ್ಥೆ ಇರಲಿದೆ. ಈ ಸಾಹಿತ್ಯ ಉತ್ಸವವನ್ನು ಪ್ರತಿ ವರ್ಷವೂ ಆಯೋಜಿಸಬೇಕು ಎನ್ನುವುದು ನಮ್ಮ ಆಸೆ ಎಂದು ಖಾದರ್ ಹೇಳಿದ್ದಾರೆ.












Click it and Unblock the Notifications