ಸಿಎಂ ಬದಲಾವಣೆ ಚರ್ಚೆ; ಮಲ್ಲಿಕಾರ್ಜುನ್ ಖರ್ಗೆ ಭೇಟಿ ಮಾಡಿದ ಡಿ ಕೆ ಶಿವಕುಮಾರ್: ಡಿ ಕೆ ಸುರೇಶ್ ಹೇಳಿದ್ದೇನು?
ಬೆಂಗಳೂರು, ಅಕ್ಟೋಬರ್ 07: ಸಿಎಂ ಬದಲಾವಣೆ ಕುರಿತು ರಾಜ್ಯ ಕಾಂಗ್ರೆಸ್ ನಲ್ಲಿ ಗುಸು ಗುಸು ಚರ್ಚೆ ಶುರುವಾಗಿದೆ. ಈ ಬೆನ್ನಲ್ಲೇ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರನ್ನ ಕೆಪಿಸಿಸಿ ಅಧ್ಯಕ್ಷರಾದ ಡಿ ಕೆ ಶಿವಕುಮಾರ್ ಅವರು ಭೇಟಿ ಮಾಡಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಡಿ ಕೆ ಶಿವಕುಮಾರ್ ಅವರು ಮಲ್ಲಿಕಾರ್ಜುನ್ ಖರ್ಗೆ ಅವರನ್ನ ಭೇಟಿ ಮಾಡಿರುವ ಕುರಿತು ಮಾಧ್ಯಮ ಪ್ರತಿನಿಧಿಗಳ ಜೊತೆಗೆ ಡಿ ಕೆ ಸುರೇಶ್ ಮಾತನಾಡಿ, ಮಲ್ಲಿಕಾರ್ಜುನ್ ಖರ್ಗೆ ಅವರು ನಮ್ಮ ರಾಷ್ಟ್ರೀಯ ಅಧ್ಯಕ್ಷರು. ಅವರು ಬೆಂಗಳೂರಿಗೆ ಬಂದಾಗ ಅವರನ್ನು ಭೇಟಿ ಮಾಡಿ, ಪಕ್ಷದ ಸಂಘಟನೆ ಹಾಗೂ ವಿದ್ಯಮಾನಗಳ ಬಗ್ಗೆ ಚರ್ಚೆ ಮಾಡುವುದು ನಮ್ಮ ಕರ್ತವ್ಯ ಎಂದು ತಿಳಿಸಿದರು.

ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರ ನಿವಾಸಕ್ಕೆ ಭೇಟಿ ನೀಡಿ ಸಮಾಲೋಚನೆ ನಡೆಸಿದ ಡಿ ಕೆ ಸುರೇಶ್ ಅವರು, ನಮ್ಮ ಪಕ್ಷದ ನಾಯಕರನ್ನು ನಾವು ಭೇಟಿ ಮಾಡುವುದಕ್ಕೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.
ಪಕ್ಷದ ನಾಯಕರು ಗೌಪ್ಯ ವಾಗಿ ಸಭೆ ಮಾಡುತ್ತಿರುವ ಬಗ್ಗೆ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ನಮ್ಮ ಪಕ್ಷದ ನಾಯಕರು, ನಮ್ಮದೇ ಪಕ್ಷದ ನಾಯಕರನ್ನು ಭೇಟಿ ಮಾಡುತ್ತಿದ್ದೇವೆ. ಒಂದು ವೇಳೆ ನಾವು ಯಡಿಯೂರಪ್ಪ ಅಥವಾ ಕುಮಾರಸ್ವಾಮಿ ಅವರನ್ನು ಗೌಪ್ಯವಾಗಿ ಭೇಟಿ ಮಾಡಿ ಸಭೆ ನಡೆಸಿದರೆ ಆಗ ವಿಶೇಷ ಅರ್ಥ ಕಲ್ಪಿಸಬಹುದು. ನಾವು ಪಕ್ಷ, ಸಂಘಟನೆ, ಅಭಿವೃದ್ಧಿ ಬಗ್ಗೆ ಚರ್ಚೆ ಮಾಡುತ್ತಿದ್ದೇವೆ. ಈ ಭೇಟಿಯನ್ನು ಅನುಮಾನದಿಂದ ನೋಡುವುದು ಸರಿಯಲ್ಲ ಎಂದು ತಿಳಿಸಿದರು.
ಈ ಭೇಟಿಯಲ್ಲಿ ರಾಜಕೀಯ ಚರ್ಚೆ ಆಗಿಲ್ಲವೇ ಎಂದು ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿ, ಈ ಭೇಟಿಯಲ್ಲಿ ರಾಜಕೀಯ ಇಲ್ಲ. ಸತೀಶ್ ಜಾರಕಿಹೊಳಿ ಅವರು ಕಾಂಗ್ರೆಸ್ ಪಕ್ಷದ ಹಿರಿಯ ಹಾಗೂ ಪ್ರಭಾವಿ ಸಚಿವರು. ಕನಕಪುರ ವಿಧಾನ ಸಭಾ ಕ್ಷೇತ್ರದ ಕೆಲವು ಅಭಿವೃದ್ಧಿ ಯೋಜನೆಗಳ ಮಂಜೂರಾತಿ ಬಗ್ಗೆ ಅವರ ಜತೆ ಚರ್ಚೆ ಮಾಡಲಾಯಿತು. ಅವರು ನಮ್ಮ ಮನವಿಗೆ ಒಪ್ಪಿದ್ದು, ಮುಖ್ಯಮಂತ್ರಿಗಳು ಅನುದಾನ ಬಿಡುಗಡೆ ಮಾಡಿದ ತಕ್ಷಣ ಮಂಜೂರಾತಿ ನೀಡುವುದಾಗಿ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಇದೇ ವೇಳೆ ರಾಮನಗರ ಜಿಲ್ಲೆಯ ಅಭಿವೃದ್ಧಿ ಬಗ್ಗೆಯೂ ಚರ್ಚೆ ಮಾಡಲಾಗಿದೆ. ಇದಕ್ಕೂ ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.
ರಾಜ್ಯ ಕಾಂಗ್ರೆಸ್ ನಲ್ಲಿ ನಾಯಕತ್ವದ ಬದಲಾವಣೆ ಚರ್ಚೆ ನಡೆಯಿತೆ ಎಂದು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿ, ನಾಯಕತ್ವ ಬದಲಾವಣೆಯ ಪ್ರಶ್ನೆ ಹಾಗೂ ಚರ್ಚೆ ಎರಡೂ ಇಲ್ಲ. ಈ ಅವಧಿ ಅಂತಿಮವಾಗುವವರೆಗೂ ಸಿದ್ದರಾಮಯ್ಯ ಅವರೇ ಸಿಎಂ ಆಗಿರುತ್ತಾರೆ. ಇದನ್ನು ಈ ಹಿಂದೆಯೂ ಬಹಳಷ್ಟು ಬಾರಿ ಸ್ಪಷ್ಟಪಡಿಸಿದ್ದೇನೆ. ಮುಡಾ ಪ್ರಕರಣ ನ್ಯಾಯಾಲಯದಲ್ಲಿದ್ದು, ನ್ಯಾಯಾಲಯ ತನಿಖೆ ಆಗಬೇಕು ಎಂದು ಹೇಳಿದ್ದು, ತನಿಖೆ ನಡೆಯಲಿದೆ. ತನಿಖೆ ನಡೆಯುತ್ತಿದೆ. ತನಿಖಾ ವರದಿ ಬರುವ ತನಕ ಏಕೆ ಕಾಯುತ್ತಿಲ್ಲ? ತನಿಖೆಗೆ ಮುಕ್ತವಾದ ಸಹಕಾರ ನೀಡಲಾಗುವುದು ಎಂದು ಸಿದ್ದರಾಮಯ್ಯ ಅವರೂ ಸ್ಪಷ್ಟಪಡಿಸಿದ್ದಾರೆ. ಈ ಪ್ರಕರಣದಲ್ಲಿ ಸಿಎಂ ಹಾಗೂ ಸರ್ಕಾರ ದೋಷಮುಕ್ತವಾಗಲಿದ್ದಾರೆ ಎಂದು ತಿಳಿಸಿದರು.
ಪ್ರಕರಣದಲ್ಲಿ ಇಡಿ ಪ್ರವೇಶ ಮಾಡಿದ್ದು ಒಂದು ವೇಳೆ ಬಂಧನವಾದರೆ ಪರ್ಯಾಯ ನಾಯಕರು ಯಾರು ಎಂಬ ಪ್ರಶ್ನೆಗೆ, ನಾಳೆ ಬೆಳಗ್ಗೆ ಇಡಿ ಬಂದು ಬಂಧನ ಮಾಡಲು ಸಾಧ್ಯವಿಲ್ಲ. ಇಡಿಗೆ ತನ್ನದೇ ಆದ ಸಾಕ್ಷ್ಯಾಧಾರಗಳು ಸಿಗಬೇಕು, ಆರೋಪ ಸಾಬೀತಾಗಬೇಕು. ಇಡಿ ಪ್ರಕರಣ ದಾಖಲಿಸಿದ ಮಾತ್ರಕ್ಕೆ ಬಂಧಿಸಲು ಸಾಧ್ಯವಿಲ್ಲ. ಈ ಪ್ರಕರಣದಲ್ಲಿ ಯಾವುದೇ ರೀತಿಯ ಹಣಕಾಸಿನ ವ್ಯವಹಾರ ನಡೆದಿಲ್ಲ. ಇನ್ನು ಈ ನಿವೇಶನಗಳನ್ನು ವಾಪಸ್ ನೀಡಲಾಗಿದೆ. ಇದರಲ್ಲಿ ಲಾಭದ ವಿಚಾರ ಇಲ್ಲ. ಶೂನ್ಯ ಹಣಕಾಸಿನ ವರ್ಗಾವಣೆ. ಇಲ್ಲಿ ಏನಾದರೂ ಲೋಪಗಳು ನಡೆದಿದ್ದರೆ ಅದನ್ನು ಲೋಕಾಯುಕ್ತ ತನಿಖಾ ಸಂಸ್ಥೆ ತನಿಖೆ ಮಾಡಲಿದೆ. ಇಡಿಯವರು ಹಣಕಾಸಿನ ವ್ಯವಹಾರಗಳ ಪ್ರಕರಣ ಮಾತ್ರ ತನಿಖೆ ಮಾಡಬೇಕು ಎಂದು ತಿಳಿಸಿದರು.
ನಾವು ಈ ಸರ್ಕಾರ ಬೀಳಿಸಲ್ಲ, ಸರ್ಕಾರ ತಾನಾಗಿಯೇ ಬೀಳುತ್ತದೆ ಎಂಬ ಕುಮಾರಸ್ವಾಮಿ ಹೇಳಿಕೆ ಕುರಿತು ಮಾತನಾಡಿ, ಕುಮಾರಸ್ವಾಮಿ ಅವರು ಮೇಧಾವಿ, ತತ್ವಜ್ಞಾನಿಗಳು. ಅವರು ಬೆಳಗ್ಗೆ ಒಂದು, ರಾತ್ರಿ ಇನ್ನೊಂದು ಹೇಳುತ್ತಾರೆ. ಅವರನ್ನು ಯಾರೂ ಪ್ರಶ್ನೆ ಮಾಡುವಂತಿಲ್ಲ ಎಂದು ತಿಳಿಸಿದರು.
ನಾನು ತಂದ ಅನುದಾನಕ್ಕೆ ಕಾಂಗ್ರೆಸ್ ನವರು ಬೋರ್ಡ್ ಹಾಕಿಕೊಳ್ಳುತ್ತಿದ್ದಾರೆ ಎನ್ನುವ ಕುಮಾರಸ್ವಾಮಿ ಅವರ ಹೇಳಿಕೆ ಬಗ್ಗೆ ಕೇಳಿದಾಗ, "ಯಾರು ಎಷ್ಟು ಅನುದಾನ ತಂದಿದ್ದಾರೆ ಎಂದು ಚರ್ಚೆಗೆ ಬರಲಿ. ನಾನು ಚರ್ಚೆಗೆ ಸಿದ್ಧ. ಅವರಿಗೆ ಅನುಮಾನ ಇದ್ದರೆ, ಅವರು ಎಷ್ಟು ಅನುದಾನ ತಂದಿದ್ದಾರೆ, ಶಿವಕುಮಾರ ಅವರ ನೇತೃತ್ವದಲ್ಲಿ ನಾವು ಎಷ್ಟು ಅನುದಾನ ತಂದಿದ್ದೇವೆ ಎಂದು ಚರ್ಚೆ ಮಾಡೋಣ ಎಂದು ತಿಳಿಸಿದರು.












Click it and Unblock the Notifications