Namma Metro: 'ಆನೇಕಲ್ ಭಾಗಕ್ಕೆ ಮೆಟ್ರೋ, ಜೂನ್ ವೇಳೆಗೆ ಅಧ್ಯಯನ ವರದಿ'
ಬೆಂಗಳೂರು, ಮೇ 03: ಆನೇಕಲ್ ಭಾಗಕ್ಕೆ ಮೆಟ್ರೋ ವಿಸ್ತರಿಸಬೇಕು ಎಂದು ಮನವಿ ಮಾಡಿದ್ದೆ. ಇದಕ್ಕೆ ಸಂಬಂಧಿಸಿದಂತೆ ಜೂನ್ ವೇಳೆಗೆ ಅಧ್ಯಯನ ವರದಿ ಬರಲಿದ್ದು, ಆದಷ್ಟು ಬೇಗ ಇದನ್ನು ಜಾರಿಗೊಳಿಸಬೇಕು ಎಂದು ಮಾಜಿ ಸಂಸದ ಡಿ.ಕೆ. ಸುರೇಶ್ ಅವರು ಹೇಳಿದರು. ಗ್ರೇಟರ್ ಬೆಂಗಳೂರು ಮೂಲಕ ಆನೇಕಲ್ ತಾಲೂಕನ್ನು ಬೆಂಗಳೂರಿನ ಭಾಗವೆಂದು ಘೋಷಣೆ ಮಾಡಲಾಗಿದ್ದು, ಇಲ್ಲಿ ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸಬೇಕಾಗಿದೆ. ಈ ವಿಚಾರವಾಗಿ ಹೆಚ್ಚಿನ ಗಮನಹರಿಸಬೇಕು, ಈ ಭಾಗಕ್ಕೆ ಹೆಚ್ಚಿನ ಶಕ್ತಿ ನೀಡಬೇಕು ಎಂದು ಮನವಿ ಮಾಡಿದರು.
ಆನೇಕಲ್ ತಾಲ್ಲೂಕು ಹೆನ್ನಾಗರ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಶುಕ್ರವಾರ ನಡೆದ ವಿವಿಧ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಡಿ.ಕೆ. ಸುರೇಶ್ ಮಾತನಾಡಿ, ಗ್ರೇಟರ್ ಬೆಂಗಳೂರು ಮೂಲಕ ಬೆಂಗಳೂರು ನಗರದ ಭಾಗವಾಗುತ್ತಿರುವ ಆನೇಕಲ್ ಕ್ಷೇತ್ರದ ಮೂಲಸೌಕರ್ಯ ಅಭಿವೃದ್ಧಿಗೆ ಆದ್ಯತೆ ನೀಡಬೇಕು, ರಸ್ತೆ ಸಂಪರ್ಕ ಅಭಿವೃದ್ಧಿಗೊಳಿಸಬೇಕು" ಎಂದು ನಿಕಟಪೂರ್ವ ಸಂಸದರಾದ ಡಿ.ಕೆ. ಸುರೇಶ್ ಸರ್ಕಾರಕ್ಕೆ ಮನವಿ ಮಾಡಿದರು.

ಸಿದ್ದರಾಮಯ್ಯ ಅವರ ನೇತೃತ್ವದ ನಮ್ಮ ಸರ್ಕಾರ ಈ ಆನೇಕಲ್ ತಾಲೂಕಿನ ಅಭಿವೃದ್ಧಿಗೆ ಕಾವೇರಿ ನೀರನ್ನು ನೀಡಲು ಮುಂದಾಗಿದೆ. ಈ ಹಿಂದಿನ ಸರ್ಕಾರದಲ್ಲಿ ಈ ಭಾಗಕ್ಕೆ ಕಾವೇರಿ ನೀರು ನೀಡಬಾರದು ಎಂದು ಸಚಿವ ಸಂಪುಟದಲ್ಲಿ ತೀರ್ಮಾನ ಮಾಡಿತ್ತು. ಆದರೆ ನಮ್ಮ ಸರ್ಕಾರ ಬಂದ ನಂತರ ಇದನ್ನು ಮಾಡಲೇ ಬೇಕು ಎಂದು ಒತ್ತಡ ಹಾಕಿ, ಬೆಂಗಳೂರು ಜಲ ಮಂಡಳಿ ಮೂಲಕ ನೀರು ಪೂರೈಸಲು ಡಿಸಿಎಂ ಅವರು ಭರವಸೆ ನೀಡಿದ್ದಾರೆ. ಈ ಸರ್ಕಾರದ ಅವಧಿಯಲ್ಲೇ ಇದು ಕಾರ್ಯಗತವಾಗಬೇಕು ಎಂದು ಮನವಿ ಮಾಡುತ್ತೇವೆ ಎಂದರು.
ಇಡೀ ಪಂಚಾಯ್ತಿ ಸದಸ್ಯರು ಪಕ್ಷ, ಜಾತಿ ಭೇದ ಮರೆತು ಪಂಚಾಯ್ತಿ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಶುಕ್ರವಾರದಂದು ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಲಾಗುತ್ತಿದೆ. ಕರ್ನಾಟಕ ರಾಜ್ಯದಲ್ಲಿ ಅತ್ಯಂತ ಕ್ರಿಯಾಶೀಲವಾಗಿ ಆಡಳಿತ ಮಾಡುತ್ತಿರುವ ಗ್ರಾಮ ಪಂಚಾಯ್ತಿಗಳ ಪೈಕಿ ಹೆನ್ನಾಗರ ಗ್ರಾಮ ಪಂಚಾಯ್ತಿ ಕೂಡ ಒಂದು. ಗ್ರಾಮ ಪಂಚಾಯ್ತಿಯಲ್ಲಿ ಗಾಂಧೀಜಿ ಅವರ ಗ್ರಾಮ ಸ್ವರಾಜ್ಯದ ಕನಸನ್ನು ನನಸು ಮಾಡಲಾಗುತ್ತಿದೆ. ಪಂಚಾಯ್ತಿ ಅಧ್ಯಕ್ಷರು, ಸದಸ್ಯರು ಹಾಗೂ ಅಧಿಕಾರಿಗಳು ಈ ಕಾರ್ಯಕ್ರಮಗಳನ್ನು ಹಬ್ಬದ ರೀತಿ ಮಾಡುತ್ತಿದ್ದಾರೆ. ಅಂಬೇಡ್ಕರ್ ಅವರು ಕೊಟ್ಟಿರುವ ಸಂವಿಧಾನದ ಆಶಯದಂತೆ ಈ ಪಂಚಾಯ್ತಿ ಮೂಲಕ ಎಲ್ಲಾ ವರ್ಗದವರನ್ನು ಒಟ್ಟಾಗಿ ತೆಗೆದುಕೊಂಡು ಹೋಗಲಾಗುತ್ತಿದೆ ಎಂದು ಶ್ಲಾಘಿಸಿದರು.












Click it and Unblock the Notifications