ಸದನದಲ್ಲಿ ಡಿ ಕೆ ಶಿವಕುಮಾರ್ ಗಡ್ಡದ ಪ್ರಸ್ತಾಪ: ಗಡ್ಡ ಯಾವಾಗ ತೆಗೆಯುತ್ತಾರೆ ಗೊತ್ತಾ?
ಬೆಂಗಳೂರು, ಫೆಬ್ರವರಿ 22: ಈ ಹಿಂದೆ ಇಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ತಿಹಾರ್ ಜೈಲಿನಿಂದ ಹೊರ ಬಂದ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರು ತಮ್ಮ ಮೊದಲಿನ ಗೆಟ್ಟಪ್ ಬಿಟ್ಟು ಗಡ್ಡಧಾರಿಯಾಗಿ ಕಾಣಿಸಿಕೊಂಡಿದ್ರು. ಇದೀಗ ವಿಧಾನ ಪರಿಷತ್ ನಲ್ಲಿ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಯಾಕೆ ಗಡ್ಡ ಬಿಟ್ಟಿದ್ದಾರೆ ಎನ್ನುವ ಚರ್ಚೆಯಾಗಿದೆ.
ಹೌದು, ವಿಧಾನಪರಿಷತ್ ನಲ್ಲೂ ಡಿಸಿಎಂ ಡಿಕೆ ಶಿವಕುಮಾರ್ ಗಡ್ಡ ವಿಚಾರ ಸ್ವಾರಸ್ಯಕರ ಚರ್ಚೆಗೆ ಕಾರಣವಾಯಿತು. ವಿಧಾನಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ್ ಪೂಜಾರಿ ಚರ್ಚೆಯ ಸಂದರ್ಭದಲ್ಲಿ ಗಡ್ಡದ ವಿಚಾರವನ್ನು ಪ್ರಸ್ತಾಪಿಸಿ ಡಿ ಕೆ ಶಿವಕುಮಾರ್ ಅವರ ಕಾಲೆಳೆದರು. ಡಿ ಕೆ ಶಿವಕುಮಾರ್ ಅವರು ಯಾವಾಗ ಗಡ್ಡ ತೆಗೆಯುತ್ತಾರೆ ಅಂದರೆ, ಅವರು ಮುಖ್ಯಮಂತ್ರಿ ಆದಾಗ. ಅವರು ಯಾವಾಗ ಸಿಎಂ ಆಗ್ತಾರೆ ಎಂಬುದು ನಮಗೆ ಕುತೂಹಲ ಎಂದು ಹೇಳಿದ್ದಾರೆ.

ಇನ್ನೂ ಬಜೆಟ್ ಮೇಲಿನ ಚರ್ಚೆಯ ವೇಳೆ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರ ಗಡ್ಡದ ಪ್ರಸ್ತಾಪ ಮಾಡಿ, ಡಿ ಕೆ ಶಿವಕುಮಾರ್ ಅವರು ಗಡ್ಡ ಬಿಟ್ಟಿದ್ದಾರೆ. ಅದನ್ನು ಯಾವಾಗ ತೆಗೆಯುತ್ತಾರೆ ಹೇಳಲಿ. ಹಾಗೂ ಅವರು ಯಾವ ಉದ್ದೇಶಕ್ಕೆ ಗಡ್ಡ ಬಿಟ್ಟಿದ್ದಾರೆ, ಅದನ್ನು ಹೇಳಬೇಕು. ಅವರು ಗಡ್ಡ ಬಿಟ್ಟಿರುವ ವಿಚಾರ ಯಾವಾಗ ಪೂರೈಸುತ್ತೆ, ಈ ಅವಧಿಯಲ್ಲೆ ಪೂರೈಸುತ್ತೋ ಇಲ್ಲವೋ ಅನ್ನುವುದನ್ನು ಅವರು ಹೇಳಬೇಕು ಎಂದೂ ಕಿಚಾಯಿಸಿದರು.
ಈ ವೇಳೆ ಮಧ್ಯಪ್ರವೇಶ ಮಾಡಿದ ಬಿಜೆಪಿ ಸದಸ್ಯ ಎನ್ ರವಿಕುಮಾರ್, ಡಿ ಕೆ ಶಿವಕುಮಾರ್ ಅವರು ಯಾವಾಗ ಗಡ್ಡ ತೆಗಿತಾರೆ ಅಂದ್ರೆ, ಅವರು ಸಿಎಂ ಆದಾಗ, ಅವರು ಯಾವಾಗ ಸಿಎಂ ಆಗ್ತಾರೆ ಎಂಬುದು ನಮಗೆ ಕುತೂಹಲ ಎಂದರು.
ನಿಮ್ಮ ಎಲ್ಲಾ ಸಂಶಯಗಳಿಗೆ ಉತ್ತರ ಕೊಡುತ್ತೇನೆ: ಡಿ ಕೆ ಶಿವಕುಮಾರ್
ವಿಧೇಯಕದ ಬಗ್ಗೆ ವಿಪಕ್ಷಗಳ ಸದಸ್ಯರು ತಕರಾರು ವ್ಯಕ್ತಪಡಿಸಿದಾಗ "ನಿಮ್ಮ ಎಲ್ಲಾ ಸಂಶಯಗಳಿಗೆ ನಾನು ಉತ್ತರ ನೀಡುತ್ತೇನೆ. ನಿಮ್ಮ ಎಲ್ಲಾ ಸಲಹೆಗಳನ್ನು ಸ್ವೀಕರಿಸಲು ತಯಾರಿದ್ದೇನೆ. ನೀವು ಮಾಡಿದ ಕಾನೂನನ್ನೇ ಸರಳೀಕರಣ ಮಾಡಿ ಕರ್ನಾಟಕದ ಎಲ್ಲಾ ಭಾಗದ ಜನರು ಇದರ ಉಪಯೋಗ ಪಡೆಯಲಿ ಮತ್ತು ಸ್ಥಳೀಯ ಸಂಸ್ಥೆಗಳ ಆದಾಯ ಹೆಚ್ಚಾಗಲಿ ಎನ್ನುವುದಷ್ಟೇ ನಮ್ಮ ಉದ್ದೇಶ. ಬೊಮ್ಮಾಯಿ ಅವರ ಸರ್ಕಾರವೂ ಇದನ್ನು ತಿದ್ದುಪಡಿ ಮಾಡಲು ಹೊರಟಿತ್ತು" ಎಂದು ಡಿಸಿಎಂ ಶಿವಕುಮಾರ್ ಅವರು ಉತ್ತರಿಸಿದರು.
"ಈಗಾಗಲೇ ಈ ಕಾನೂನು ಇದೆ. ನಾವು ಹೊಸದಾಗಿ ತರಲು ಮುಂದಾಗಿಲ್ಲ. ಸ್ಥಳೀಯ ಸಂಸ್ಥೆಗಳು ಸಹ ಇದರ ಉಪಯೋಗ ಪಡೆದುಕೊಳ್ಳಲಿ ಎಂದು ತಿದ್ದುಪಡಿ ಮಾಡಿದ್ದೇವೆ. ಮಂಗಳೂರಿನಲ್ಲಿ ಪ್ರೀಮಿಯಂ ಎಫ್ ಎಆರ್ ಜಾರಿಯಾಗಿತ್ತು. ಇದರಿಂದಾಗಿ ಕಳೆದ 5-6 ವರ್ಷಗಳಲ್ಲಿ 2-3 ಸಾವಿರ ಕೋಟಿಯಷ್ಟು ಆದಾಯ ಬಂದಿದೆ. ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲಾ ಕಡೆ ಈ ಅವಕಾಶ ಕಲ್ಪಿಸಲು ವಿಧೇಯಕಕ್ಕೆ ತಿದ್ದುಪಡಿ ಮಾಡಲಾಗಿದೆ" ಎಂದು ಡಿಸಿಎಂ ಹೇಳಿದರು.
ಈ ಬಿಲ್ ಅನ್ನು ತಡೆ ಹಿಡಿದು, ಹೆಚ್ಚಿನ ಚರ್ಚೆ ನಡೆಸುವುದು ಉತ್ತಮ. ಎಲ್ಲರೊಟ್ಟಿಗೆ ಮತ್ತೊಂದು ಸುತ್ತಿನ ಮಾತುಕತೆ ನಡೆಸಿ ಪುನಃ ಮಂಡನೆ ಮಾಡಿ. ಇದರಿಂದ ಅಧಿಕಾರಿಗಳ ಕೈಗೆ ಎಲ್ಲಾ ಅಧಿಕಾರಗಳನ್ನುನೀಡಿದಂತಾಗುತ್ತದೆ" ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟಾ ಶ್ರೀನಿವಾಸ ಪೂಜಾರಿ ಅವರು ವಿಧೇಯಕವನ್ನು ವಿರೋಧಿಸಿ ಸಭಾತ್ಯಾಗ ಮಾಡಿದರು.












Click it and Unblock the Notifications