D K Shivakumar: ಡಿ.ಕೆ ಶಿವಕುಮಾರ್ ಸಿಎಂ ಆಗುವುದು ಖಚಿತ; ಸ್ವಾಮೀಜಿ ಭವಿಷ್ಯ
ಹೈಕಮಾಂಡ್ ಎಲ್ಲಾ ನಾಯಕರಿಗೂ ಖಡಕ್ ಸಂದೇಶ ರವಾನಿಸಿದ್ದು, ಕರ್ನಾಟಕ ಸಿಎಂ ಬದಲಾವಣೆ ಕೂಗು ಸದ್ಯ ಕಡಿಮೆಯಾಗಿದೆ. ಸಿದ್ದರಾಮಯ್ಯ ತಾನೇ ಐದು ವರ್ಷ ಸಿಎಂ ಎಂದು ಪದೇ ಪದೇ ಹೇಳುತ್ತಲೇ ಬಂದಿದ್ದಾರೆ. ಸಿದ್ದರಾಮಯ್ಯ ಬಳಿಕ ಡಿ.ಕೆ ಶಿವಕುಮಾರ್ ಸಿಎಂ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಆದರೆ ಈ ಅವಧಿಯಲ್ಲಿ ಅವರು ಸಿಎಂ ಆಗುವುದು ಕಷ್ಟ ಎನ್ನಲಾಗಿದ್ದು, ಈ ನಡುವೆಯೇ ಸ್ವಾಮೀಜಿಯೊಬ್ಬರ ಡಿ.ಕೆ ಶಿವಕುಮಾರ್ ಸಿಎಂ ಆಗುವುದು ಖಚಿತ ಎಂದಿದ್ದಾರೆ.
ಹುಬ್ಬಳ್ಳಿಯ ವರೂರಿನ ಗುಣಧರನಂದಿ ಸ್ವಾಮೀಜಿ, ಉಪಮುಖ್ಯಮಂತ್ರಿಯಾಗಿರುವ ಡಿ.ಕೆ ಶಿವಕುಮಾರ್ ಮುಖ್ಯಮಂತ್ರಿ ಆಗಬೇಕು ಎನ್ನುವುದು ನನ್ನ ಕನಸು, ಎಷ್ಟೇ ಅಡೆ ತಡೆಗಳು ಬಂದರೂ ಡಿ. ಕೆ ಶಿವಕುಮಾರ್ ಸಿಎಂ ಆಗುವುದು ಖಚಿತ, ಇದು ನಮ್ಮ ಭವಿಷ್ಯವಾಣೀ ಎಂದು ಹೇಳಿದ್ದಾರೆ.

ಮುಂದಿನ ಚುನಾವಣೆ ಬಳಿಕ ಡಿ. ಕೆ ಶಿವಕುಮಾರ್ ಅವರು ಸಿಎಂ ಆಗುವುದು ಖಚಿತ, ಕಾಂಗ್ರೆಸ್ ಪಕ್ಷಕ್ಕಾಗಿ ಅವರು ಕಷ್ಟಪಟ್ಟಿರುವಷ್ಟು ಇನ್ಯಾವ ರಾಜ್ಯ ನಾಯಕರು ಕಷ್ಟಪಟ್ಟಿಲ್ಲ, ಕಾಂಗ್ರೆಸ್‌ಗೆ ರಾಜ್ಯದಲ್ಲಿ ಮರುಜೀವ ಕೊಟ್ಟಿದ್ದಾರೆ. ಅವರು ಮುಖ್ಯಮಂತ್ರಿ ಆಗಬೇಕು ಎನ್ನುವುದು ನನ್ನ ಕನಸು ಎಂದು ಹೇಳಿದರು.
ನಿಗಮ ಮಂಡಳಿಗೆ ಬೇಡಿಕೆ
ನಮ್ಮ ಸಮುದಾಯಕ್ಕೆ ಕೊಡುವುದಷ್ಟೇ ಗೊತ್ತು, ಬೇಡುವುದು ಗೊತ್ತಿಲ್ಲ. ಅದರೆ ಈಗ ನಿಗಮ ಮಂಡಳಿಗಾಗಿ ಬೇಡಿಕೆ ಇಡುತ್ತಿದ್ದೇವೆ, ಇದು ಸಮಾಜದ ಬೇಡಿಕೆಯಾಗಿದೆ ಎಂದರು.
ವರೂರಿನ ನವಗ್ರಹ ತೀರ್ಥಂಕರ ಮಹಾಮಸ್ತಕಾಭಿಷೇಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್, ನಾನು ಸಿಎಂ ಆಗಲಿ ಎಂದು ಗುಣಧರನಂದಿ ಶ್ರೀಗಳು ಆಶೀರ್ವಾದ ಮಾಡಿದ್ದಾರೆ. ನೀವು ಆಶೀರ್ವಾದ ಮಾಡಿದಾಗಲೆಲ್ಲಾ ನಮಗೆ ಏಟು ಕೊಡುತ್ತಾರೆ ಎಂದು ಡಿಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.
ಜೈನ ಧರ್ಮದ ಜೊತೆ ಡಿ. ಕೆ. ಶಿವಕುಮಾರ್ ಯಾವಾಗಲೂ ಇರುತ್ತಾನೆ. ಜೈನ ಅಭಿವೃದ್ಧಿ ನಿಗಮ ಮಾಡಲು ಮನವಿ ಮಾಡಿದ್ದಾರೆ, ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಜೊತೆ ಚರ್ಚಿಸಿ, ಮುಂಬರುವ ಬಜೆಟ್‌ನಲ್ಲಿಯೇ ರಚನೆ ಮಾಡುವಂತೆ ಮನವಿ ಮಾಡುತ್ತೇನೆ ಎಂದು ಭರವಸೆ ನೀಡಿದರು.
ರಾಜ್ಯದಲ್ಲಿ ತಣ್ಣಗಾದ ಸಿಎಂ ಬದಲಾವಣೆ ಕೂಗು
ಕಾಂಗ್ರೆಸ್ ಸರ್ಕಾರ ರಚನೆಯಾದಾಗಿನಿಂದಲೂ ಆಗಾಗ್ಗೆ ಸಿಎಂ ಬದಲಾವಣೆ ಕೂಗು ಕೇಳುತ್ತಲೇ ಇತ್ತು. ಹಲವು ಹಿರಿಯ ನಾಯಕರು ಸಿಎಂ ಖುರ್ಚಿ ಮೇಲೆ ಕಣ್ಣಿಟ್ಟಿದ್ದು ಆಗಾಗ್ಗೆ ನಾನು ಸಿಎಂ ಆಕಾಂಕ್ಷಿ ಎಂದು ಹೇಳುತ್ತಿದ್ದರು. ಇದರಿಂದ ರಾಜ್ಯ ರಾಜಕೀಯದಲ್ಲಿ ಹಲವು ಊಹಾಪೋಹಗಳಿಗೆ ಕಾರಣವಾಗಿತ್ತು. ಒಂದು ಕಡೆ ದಲಿತ ಸಿಎಂ ಕೂಗು ಕೂಡ ಶುರುವಾಗಿತ್ತು, ಆದರೆ ಹೈಕಮಾಂಡ್ ಸರ್ಕಾರವನ್ನು ಅಸ್ಥಿರಗೊಳಿಸುವ ಇಂತಹ ಹೇಳಿಕೆಗಳ ವಿರುದ್ದ ಸಿಟ್ಟಾಗಿದ್ದು ಹಿರಿಯ ನಾಯಕರಿಗೆ ಎಚ್ಚರಿಕೆ ನೀಡಿದ್ದರಿಂದ ಸದ್ಯ ಸಿಎಂ ಬದಲಾವಣೆ ಕೂಗು ತಣ್ಣಗಾಗಿದೆ.












Click it and Unblock the Notifications