ಸೋನಿಯಾ ಗಾಂಧಿ 'ವಿಷಕನ್ಯೆ' ಹೇಳಿಕೆ, ಜನ ದಂಗೆ ಏಳುವ ಮೊದಲು ಯತ್ನಾಳ್ ವಜಾಮಾಡಿ: ಡಿ ಕೆ ಶಿವಕುಮಾರ್ ಆಗ್ರಹ
ಬೆಂಗಳೂರು,ಏಪ್ರಿಲ್28: ರಾಜ್ಯ ವಿಧಾನಸಭಾ ಚುನಾವಣಾ ಹೊತ್ತಲ್ಲಿ ಪ್ರಚಾರದ ಅಬ್ಬರದಲ್ಲಿ ಹಲವು ಹೇಳಿಕೆಗಳು ವಿವಾದಗಳಿಗೆ ಕಾರಣವಾಗುತ್ತಿವೆ. ಮೋದಿ ವಿಷ ಸರ್ಪ ಎಂದು ಮಲ್ಲಿಕಾರ್ಜುನ್ ಖರ್ಗೆ ಹೇಳಿಕೆ ಇದೀಗ ರಾಜ್ಯ ರಾಜಕಾರಣದಲ್ಲಿ ಸಾಕಷ್ಟು ಸುದ್ದಿಯಾಗುತ್ತಿದ್ದು,ಇದೀಗ ಯತ್ನಾಳ ಹೇಳಿಕೆಗೆ ಕಾಂಗ್ರೆಸ್ ನಾಯಕರು ಕಿಡಿಕಾರಿದ್ದಾರೆ.
ಹೌದು, ಎಐಸಿಸಿ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಕುರಿತಾಗಿ ವಿಷಕನ್ಯೆ ಎಂದು ಹೇಳಿಕೆ ಕೊಟ್ಟಿರುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ವಿರುದ್ದ ರಾಜ್ಯ ಕಾಂಗ್ರೆಸ್ ನಾಯಕರು ತೀವ್ರ ವಾಗ್ದಾಳಿ ನಡೆಸಿದ್ದು, ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಬಸವನಗೌಡ ಪಾಟೀಲ ಯತ್ನಾಳ್ ಅವರನ್ನ ವಜಾಗೊಳಿಸಿ ಎಂದು ಆಗ್ರಹಿಸಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಶುಕ್ರವಾರ ಗೀತಾ ಶಿವಕುಮಾರ್ ಸೇರಿದಂತೆ ಹಲವು ನಾಯಕರು ಕಾಂಗ್ರೆಸ್ ಸೇರ್ಪಡೆ ಕಾರ್ಯಕ್ರಮದ ಬಳಿಕ ಮಾಧ್ಯಮಗಳ ಜೊತೆಗೆ ಡಿ ಕೆ ಶಿವಕುಮಾರ್ ಮಾತನಾಡಿ, ಮೋದಿ ನಾಗರಹಾವು ಆದರೆ ಸೋನಿಯಾ ಗಾಂಧಿ ವಿಷ ಕನ್ಯ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆಗೆ ಖಂಡನಾರ್ಹ. ಗಾಂಧಿ ಕುಟುಂಬ ಈ ದೇಶಕ್ಕಾಗಿ ಸಾಕಷ್ಟು ಕೊಡುಗೆಯನ್ನ ನೀಡಿದೆ. ನಮ್ಮ ನಾಯಕಿಯಾಗಿರುವ ಸೋನಿಯಾ ಗಾಂಧಿ ಅವರು ಇಲ್ಲಿ ಹುಟ್ಟದೇ ಇದ್ದರೂ ಈ ದೇಶಕ್ಕೆ ಸಾಕಷ್ಟು ತ್ಯಾಗಗಳನ್ನ ಮಾಡಿದ್ದಾರೆ. ಪ್ರಧಾನಿ ಸ್ಥಾನದ ಅವಕಾಶ ಸಿಕ್ಕಾಗಲೂ ತ್ಯಾಗ ಮಾಡಿದ್ದಾರೆ ಎಂದರು.
ಇನ್ನೂ ಬಿಜೆಪಿಯವರು ನನ್ನ ಜೈಲಿಗೆ ಕಳುಹಿಸಿದಾಗ ನನ್ನನ್ನು ಸೋನಿಯಾ ಗಾಂಧಿ ಅವರು ನನಗೆ ಶಕ್ತಿ ನೀಡಿದ್ದರು. ದೇಶಕ್ಕಾಗಿ ಸೋನಿಯಾ ಗಾಂಧಿ ಕೊಡುಗೆ ಹಾಗೂ ತ್ಯಾಗ ಮಾಡಿದ್ದಾರೆ. ಸೋನಿಯಾ ಗಾಂಧಿ ಅವರಿಗೆ ಬಸವನಗೌಡ ಪಾಟೀಲ ಯತ್ನಾಳ್ ವಿಷ ಕನ್ಯೆ ಎಂದಿದ್ದಾರೆ. ಯತ್ನಾಳ್ ನಾಲಗೆಯನ್ನು ಯಾರು ಏನು ಮಾಡ್ತಾರೋ ಗೊತ್ತಿಲ್ಲ, ಯುವಕರು ಏನು ಮಾಡ್ತಾರೋ ಗೊತ್ತಿಲ್ಲ. ಆದರೆ ಸೋನಿಯಾ ಗಾಂಧಿಯನ್ನು ವಿಷ ಕನ್ಯೆ ಎಂದಿದ್ದು ಸಹಿಸಲು ಸಾಧ್ಯವಿಲ್ಲ. ಅವರ ಕ್ಷಮಾಪಣೆ ಅಗತ್ಯ ನಮಗೆ ಇಲ್ಲ, ಇದರ ಬದಲಾಗಿ ಪ್ರಧಾನಿ ಮೋದಿ, ಸಿಎಂ ಬಸವರಾಜ ಬೊಮ್ಮಾಯ್ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದರು.
ಮಹಿಳೆಯವರಿಗೆ ಗೌರವ ಸಿಗಬೇಕು. ಬಸವನಗೌಡ ಪಾಟೀಲ ಯತ್ನಾಳ್ ಅವರನ್ನು ಪಕ್ಷದಿಂದ ವಜಾ ಮಾಡಬೇಕು. ಹಾಗಿದ್ದರೆ ಮಹಿಳೆಯರಿಗೆ ಗೌರವ ಕೊಟ್ಟ ಹಾಗಾಗುತ್ತೆದೆ. ಗಾಂಧಿ ಕುಟುಂಬವನ್ನು ಬೈಯೋದೇ ಬಿಜೆಪಿಗೆ ದೊಡ್ಡ ಚಾಳಿಯಾಗಿದೆ ಎಂದು ಬಿಜೆಪಿ ವಿರುದ್ದ ಕಿಡಿಕಾರಿದರು.
ಮಹಿಳೆಯರನ್ನು ಅಪಮಾನ ಮಾಡುವುದು ಬಿಜೆಪಿಯವರ ಚಾಳಿ. ಅವರಿಗೆ ನೆಹರೂ ಕುಟುಂಬವನ್ನು ಟೀಕಿಸುವ ಚಾಳಿ. ಮೋದಿ ಅವರು ಸೋನಿಯಾ ಗಾಂಧಿ ಅವರನ್ನು ಜೆರ್ಸಿ ಹಸು ಎಂದು ಕರೆದಿದ್ದರು. ಇದು ನಿಮ್ಮ ಧರ್ಮ, ಸಂಸ್ಕೃತಿನಾ ಪ್ರಧಾನಮಂತ್ರಿಗಳೇ? ರಾಹುಲ್ ಗಾಂಧಿ ಅವರನ್ನು ಹೈಬ್ರೀಡ್ ಕರು ಎಂದು ಕರೆದರು. ಆದರೆ ರಾಹುಲ್ ಗಾಂಧಿ ಎಲ್ಲ ಅಧಿಕಾರ ತ್ಯಾಗ ಮಾಡಿ ಜನರ ಕಷ್ಟ ಸುಖಃ ಅರಿತು ಎಲ್ಲರನ್ನೂ ಒಂದುಗೂಡಿಸಲು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ನಡೆದಿದ್ದಾರೆ.
ಸೋನಿಯಾ ಗಾಂಧಿ ಅವರನ್ನು ಕಾಂಗ್ರೆಸ್ ವಿಧವೆ ಎಂದು ಕರೆದಿದ್ದೀರಿ, ನಮ್ಮ ತಾಯಿ, ನಿಮ್ಮ ತಾಯಿ ವಿಧವೆಯರಲ್ಲವೇ? ಇದು ಪ್ರಕೃತಿ ನಿಯಮ ಇದು. ನಮ್ಮ ಪಕ್ಷದ ಗುರುತನ್ನು ರಕ್ತದ ಕೈ ಎಂದು ಕರೆದರು. ಈ ಹಸ್ತದ ಶಕ್ತಿ ಏನು ಎಂಬುದನ್ನು ಮೇ 13ರಂದು ತಿಳಿಯಲಿದೆ.
ದೇಶದಲ್ಲಿ ಬದಲಾವಣೆ ಕರ್ನಾಟಕದಿಂದ ಆರಂಭವಾಗಲಿದೆ. ಈ ರಾಜ್ಯ ಇಂದಿರಾ ಗಾಂಧಿ ಅವರಿಗೆ ಮರುಜನ್ಮ ಕೊಟ್ಟಿದೆ, ಸೋನಿಯಾ ಗಾಂಧಿ ಅವರಿಗೆ ಶಕ್ತಿ ತುಂಬಿದೆ. ಕಾಂಗ್ರೆಸ್ ಕಾರ್ಯಕರ್ತರು ರೊಚ್ಚಿಗೇಳುವ ಮುನ್ನ ಬಿಜೆಪಿ ಪ್ರಧಾನಿ ಹಾಗೂ ಮುಖ್ಯಮಂತ್ರಿಗಳು ಕ್ಷಮೆ ಕೇಳಿ ಆತನನ್ನು ಪಕ್ಷದಿಂದ ಹೊರಹಾಕಬೇಕು.












Click it and Unblock the Notifications